ಬೆಂಗಳೂರು, (www.bengaluruwire.com) :
ನಗರದಲ್ಲಿರುವ ಬಿಲ್ಡರ್ ಗಳ ಮಾಫಿಯಾ ಜೊತೆ ಶಾಮೀಲಾಗಿ ಪಾಲಿಕೆ ಮುಖ್ಯ ಆಯುಕ್ತರು ಬಿಬಿಎಂಪಿಗೆ ಎರಡನೇ ಅತೀ ದೊಡ್ಡ ಆದಾಯದ ಮೂಲವಾಗಿರುವ ನಕ್ಷೆ ಮಂಜೂರಾತಿ ಶುಲ್ಕವನ್ನು ಶೇ. 78% ರಷ್ಟು ಕಡಿತಗೊಳಿಸಿ ಪಾಲಿಕೆಗೆ ಮಹಾ ವಂಚನೆಯ ಪ್ರಯತ್ನದ ಹುನ್ನಾರ ಮಾಡಿದ್ದಾರೆ ಎಂದು
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ
ರಮೇಶ್ ಅವರು, ಸೀಮಿತ ವಾರ್ಷಿಕ ಆದಾಯವನ್ನು ಹೊಂದಿರುವ ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಹೊರಟಿರುವ ಆಯುಕ್ತರು ದಿನಾಂಕ ನಮೂದಿಸಿದೇ ಬಿಲ್ಡರ್ ಗಳ ಪರವಾಗಿ ಬಿಬಿಎಂಪಿ ವಿರೋಧೀ ನಿರ್ಣಯ ಕೈಗೊಂಡಿದ್ದಾಗಿ ಹೇಳಿದ್ದಾರೆ.
ಅಧಿಕಾರ ದುರುಪಯೋಗದ ಮೇಲೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ನಗರ ಯೋಜನೆಯ ಜಂಟಿ ನಿರ್ದೇಶಕ (ಉತ್ತರ) ಮಂಜೇಶ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ACB) ಮತ್ತು ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್ ಫೋರ್ಸ್ (BMTF) ಗಳಲ್ಲಿ ದೂರುಗಳನ್ನು ದಾಖಲಿಸಿದ್ದಾಗಿ ತಿಳಿಸಿದರು.
ಪ್ರಸ್ತುತ ಬೃಹತ್ ಕಟ್ಟಡಗಳ ನಕ್ಷೆ ಮಂಜೂರಾತಿ ಶುಲ್ಕದ ರೂಪದಲ್ಲಿ ಪಾಲಿಕೆಗೆ ಪ್ರತೀ ವರ್ಷ ಸರಾಸರಿ 600 ಕೋಟಿ ಆದಾಯ ಬರುತ್ತದೆ. ಉಚ್ಛ ನ್ಯಾಯಾಲಯದ ಆದೇಶ ನೆಪವಾಗಿಟ್ಟುಕೊಂಡು ಬಿಲ್ಡರ್ ಮಾಫಿಯಾದೊಂದಿಗೆ ಸೇರಿಕೊಂಡು ಮಹಾಸಂಚು ಮಾಡಿದ್ದಾಗಿ ಎನ್.ಆರ್.ರಮೇಶ್ ದೂರಿದ್ದಾರೆ.
ಪಾಲಿಕೆಯ ಮುಖ್ಯ ಆಯುಕ್ತರು ಮಂಜೇಶ್ ರವರೊಂದಿಗೆ ಶಾಮೀಲಾಗಿ ಪ್ರತಿಷ್ಟಿತ ಬಿಲ್ಡರ್ ಗಳಿಂದ ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದು, 2008 ಕ್ಕೂ ಮೊದಲು ಇದ್ದಂತಹ ನಕ್ಷೆ ಮಂಜೂರಾತಿ ಶುಲ್ಕದ ಪದ್ಧತಿಯಂತೆ ಶುಲ್ಕ ವಸೂಲಿ ಮಾಡುವ ನಿರ್ಧಾರವನ್ನು ತೆಗೆದುಕೊಂಡು, ಈ ಸಂಬಂಧ ಆದೇಶವನ್ನೂ ಸಹ ಹೊರಡಿಸಿರುತ್ತಾರೆ.
ವಿಶೇಷವೆಂದರೆ ಪಾಲಿಕೆಯ ಮುಖ್ಯ ಆಯುಕ್ತರು ಬಹಳ ಗೌಪ್ಯವಾಗಿ ಹೊರಡಿಸಿರುವ ಈ ಆದೇಶದ ಪ್ರತಿಯಲ್ಲಿ ದಿನಾಂಕವನ್ನು ನಮೂದಿಸಿಲ್ಲ. ಹಾಗೂ ರವಾನೆ ಸಂಖ್ಯೆ (Dispatch Number)ಯನ್ನೂ ಸಹ ನಮೂದಿಸದೇ ಆದೇಶವನ್ನು ಹೊರಡಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.
2008ರ ಅವಧಿಯಲ್ಲಿದ್ದಂತೆ ಶುಲ್ಕ ಸಂಗ್ರಹ :
ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ 2008 ಕ್ಕೂ ಹಿಂದಿನ ನಕ್ಷೆ ಮಂಜೂರಾತಿ ಶುಲ್ಕವನ್ನು ಸಂಗ್ರಹಿಸಲು ಪಾಲಿಕೆ ಮುಂದಾಗುತ್ತಿರುವ ಪರಿಣಾಮದಿಂದ ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಶುಲ್ಕವನ್ನು ಮಾತ್ರವೇ ಪಾಲಿಕೆಯು ಸಂಗ್ರಹಿಸಬೇಕಾಗಿರುತ್ತದೆ. ಉದಾಹರಣೆಗೆ ಪ್ರಸ್ತುತ ಯಾವುದೇ ಒಂದು ಕಟ್ಟಡದ ನಕ್ಷೆ ಮಂಜೂರಾತಿಗೆ 01 ಲಕ್ಷ ರೂಪಾಯಿ ಸಂಗ್ರಹವಾಗುತ್ತಿದ್ದರೆ, 2008 ಕ್ಕೂ ಹಿಂದಿನ ಪದ್ಧತಿಯಂತೆ ಕೇವಲ 22 ಸಾವಿರ ರೂಪಾಯಿಗಳಷ್ಟು ಮಾತ್ರ ಶುಲ್ಕವನ್ನು ವಸೂಲಿ ಮಾಡಬಹುದಾಗಿರುತ್ತದೆ.
ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ ಸಂಬಂಧಪಟ್ಟ ಬಿಲ್ಡರ್ ಗಳು ಪಾಲಿಕೆಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕಿದ್ದು, ಸದರಿ ಮುಚ್ಚಳಿಕೆ ಪತ್ರದಲ್ಲಿ ಮುಂದೆ ನ್ಯಾಯಾಲಯವು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ, ಅವರುಗಳು 2008 ಕ್ಕೂ ಹಿಂದಿನ ಪದ್ಧತಿಯಂತೆ ಶುಲ್ಕವನ್ನು ಪಾವತಿಸುವುದಾಗಿ ಬರೆದುಕೊಡಬೇಕಿರುತ್ತದೆ.
ಈ ರೀತಿ ಬರೆದುಕೊಟ್ಟ ಬಿಲ್ಡರ್ ಗಳು ತಮ್ಮ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಗ್ರಾಹಕರಿಗೆ ವಾಣಿಜ್ಯ ಮಳಿಗೆಗಳನ್ನು ಅಥವಾ ವಸತಿ ಸಮುಚ್ಛಯಗಳನ್ನು ಮಾರಾಟ ಮಾಡಿರುತ್ತಾರಲ್ಲದೇ, ಅಂತಹ ಬಿಲ್ಡರ್ಗಳಿಂದ ಬಾಕಿ ಶುಲ್ಕವನ್ನು ಸಂಗ್ರಹಿಸುವುದು ನಿಜಕ್ಕೂ ಅಸಾಧ್ಯವಾದಂತಹ ಕೆಲಸವಾಗಿರುತ್ತದೆ.
ಹೈಕೋರ್ಟ್ ಗೆ ವಾಸ್ತವ ಸಂಗತಿ ತಿಳಿಸುವಲ್ಲಿ ಬಿಬಿಎಂಪಿ ವಿಫಲ :
“ನಕ್ಷೆ ಮಂಜೂರಾತಿ ಶುಲ್ಕ ವಸೂಲು ಮಾಡಲು ಪಾಲಿಕೆಗೆ ಅವಕಾಶ ನೀಡಬಾರದೆಂದು ಹತ್ತಕ್ಕೂ ಹೆಚ್ಚು ಪ್ರತಿಷ್ಟಿತ ಬಿಲ್ಡರ್ ಗಳಿಂದ ಉಚ್ಛ ನ್ಯಾಯಾಲಯದಲ್ಲಿ 10 ಕ್ಕೂ ಹೆಚ್ಚು PIL ಗಳು ಸಲ್ಲಿಕೆಯಾಗಿತ್ತು. ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಗಳನ್ನು ಒಂದುಗೂಡಿಸಿ (WP # 4601/2020) ನ್ಯಾಯಾಲಯದ ವಿಚಾರಣೆ ನಡೆಸಿ ತೀರ್ಪು ನೀಡಿತ್ತು.”
“ಹೈಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಕಾನೂನು ಕೋಶದ ಅತ್ಯಂತ ದುರ್ಬಲ ವಕೀಲರು ಸೂಕ್ತ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸದೆ ಮತ್ತು ಅಂಕಿ ಅಂಶಗಳ ಸಹಿತ ವಾಸ್ತವ ಸಂಗತಿಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದರು.”
“ಪಾಲಿಕೆಯ ವಕೀಲರ ಉದಾಸೀನ ಮತ್ತು ವಸ್ತು ಸ್ಥಿತಿಯ ವಾಸ್ತವ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸದೇ ಇರುವ ಕಾರಣ ಉಚ್ಛ ನ್ಯಾಯಾಲಯದಲ್ಲಿ ಪಾಲಿಕೆಗೆ ತೀವ್ರ ಹಿನ್ನಡೆಯಾಗಿತ್ತು” ಎಂದು ಅವರು ಹೇಳಿದ್ದಾರೆ
“ಆಗಸ್ಟ್ 4ರಂದು “ನ್ಯಾಯಾಲಯದ ಮುಂದಿನ ಆದೇಶದವರೆಗೆ ಪಾಲಿಕೆಯು ಬಿಲ್ಡರ್ ಗಳಿಂದ ನಕ್ಷೆ ಮಂಜೂರಾತಿ ಶುಲ್ಕ ವಸೂಲಿ ಮಾಡುವಂತಿಲ್ಲ” ಎಂದು ನ್ಯಾಯಾಲಯದ ಆದೇಶ ನೀಡಿತ್ತು.”
“ಉಚ್ಛ ನ್ಯಾಯಾಲಯದ ಆದೇಶದಿಂದ ಪಾಲಿಕೆಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಅಂಶ ಅರಿವಿದ್ದರೂ ಸಹ ಮುಖ್ಯ ಆಯುಕ್ತರಾದ ಗೌರವಗುಪ್ತಾ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಮುಖ್ಯ ಆಯುಕ್ತರ ಬದಲಾವಣೆಗೆ ಸಿಎಂ ಗೆ ಆಗ್ರಹ :
ನಿರಂತರವಾಗಿ ಹಲವಾರು ಆರೋಪಗಳಿಗೆ ಗುರಿಯಾಗುತ್ತಿರುವ ಗೌರವ್ ಗುಪ್ತಾರನ್ನು ಕೂಡಲೇ ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಬದಲಿಸಲು ಮುಖ್ಯಮಂತ್ರಿಗಳನ್ನು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬೆಂಗಳೂರು ವೈರ್ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ಹೈಕೋರ್ಟ್ ನಲ್ಲಿ ತೀರ್ಪು ಪ್ರಶ್ನಿಸಲು ಅಥವಾ ತಡೆಯಾಜ್ಞೆ ತೆಗೆದುಕೊಳ್ಳಲು ಎಸಿಎಸ್ ಗೆ ಆಗ್ರಹ :
ವಿಭಾಗೀಯ ಪೀಠದಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅಥವಾ ಅದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳಲು ಹತ್ತಾರು ಅವಕಾಶಗಳಿದ್ದರೂ ಸಹ ಪಾಲಿಕೆಯ ಆರ್ಥಿಕ ಹಿತಾಸಕ್ತಿಯನ್ನು ಚೀಫ್ ಕಮಿಷನರ್ ಮರೆತಿದ್ದಾರೆ. ಹಿರಿಯ ಅನುಭವೀ ವಕೀಲರನ್ನು ಕೂಡಲೇ ಈ ಪ್ರಕರಣದಲ್ಲಿ ನಿಯೋಜಿಸಿ ಪಾಲಿಕೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.