ಬೆಂಗಳೂರು, (www.bengaluruwire.com) : ದಲ್ಲಾಳಿಗಳು, ಭೂಮಾಫಿಯಾದ ಕೊಂಪೆಯಂತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮೇಲೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ACB) ದ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಪಡಿಸಿಕೊಂಡು ಅಧಿಕಾರಿ, ನೌಕರರ ವಿಚಾರಣೆ ನಡೆಸಿದ್ದಾರೆ.
ಬಿಡಿಎನ ಭೂ ಸ್ವಾಧೀನ ವಿಭಾಗ, ಕಾರ್ಯದರ್ಶಿಗಳ ಕಚೇರಿ, ಉಪಕಾರ್ಯದರ್ಶಿ-1, 2, 3 ಹಾಗೂ 4 ಕಚೇರಿಗಳ ಮೇಲೆ 50 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ನಾಲ್ಕು ತಂಡದಲ್ಲಿ ದಾಳಿ ನಡೆಸಿದ್ದಾರೆ. ಎಸಿಬಿ ಎಸ್ ಪಿ ಗಳಾದ ಅಬ್ದುಲ್ ಅಹದ್, ಉಮಾ ಪ್ರಶಾಂತ್, ಯತೀಶ್ ಚಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇತ್ತಿಚೆಗೆ ಬದಲಿ ಸೈಟ್ ಹಂಚಿಕೆ, ಮೂಲೆ ನಿವೇಶನ ಕಟಿಂಗ್ ಕುರಿತ ಖಚಿತ ಅಳತೆ ವರದಿ (CD Report) ನೀಡುವಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆಂದು ದೂರುಗಳು ಬಂದಿದ್ದವು. ಅಲ್ಲದೆ ಭೂ ಸ್ವಾಧೀನ ವಿಭಾಗದಲ್ಲಿ ಸ್ವಾಧೀನ ಜಾಗಕ್ಕೆ ಪರಿಹಾರ, ಸೈಟ್ ನೀಡುವಲ್ಲಿ ಅಕ್ರಮ, ಪರಿಹಾರದ ಹಣ ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.
ಎಸಿಬಿ ಪೊಲೀಸರು ದಾಳಿಯ ವೇಳೆ ನಗದು ಹಣವನ್ನು ವಶಕ್ಕೆ ಪಡೆದು, ದಾಖಲೆಗಳ ಪರಿಶೀಲನೆ ನಡೆಸಿದರು. ಆ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿ ಹೊರ ಹೋಗದಂತೆ ಗೇಟ್ ಬಳಿ ಎಸಿಬಿ ಸಿಬ್ಬಂದಿ ಕಾವಲಿಗಿಟ್ಟು ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಬಿಡಿಎ ಕಚೇರಿಗೆ ಸಂಜೆ 4 ಗಂಟೆಗೆ ಏಕಾ ಏಕಿ ಸಾಮಾನ್ಯ ಧಿರಿಸಿನಲ್ಲಿ ಆಗಮಿಸಿದ ಎಸಿಬಿ ಪೊಲೀಸರು ಬಹಳ ವ್ಯವಸ್ಥಿತವಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಡಿಎ ಡೆಪ್ಯೂಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿಯಲ್ಲಿ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಡಿಎ ಕೇಂದ್ರ ಕಚೇರಿಯ 50 ಕ್ಕೂ ಹೆಚ್ಚು ಕೊಠಡಿಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬಿಡಿಎ ಕಚೇರಿ ಆವರಣದಲ್ಲಿರುವ ಏಜೆಂಟ್ ಗಳ ಬ್ಯಾಗ್, ಬ್ರೀಫ್ ಕೇಸ್ ಗಳನ್ನು ಎಸಿಬಿ ಪೊಲೀಸರು ಜಾಲಡಿದ್ದಾರೆ.
ಎಸಿಬಿ ಅಧಿಕಾರಿಗಳುನಡೆಸಿದ ರೈಡ್ ಗೆ ಬಿಡಿಎ ನೌಕರರು ಶಾಕ್ ಗೆ ಒಳಗಾಗಿದ್ದರು. ದಾಳಿ ನಡೆಸಿದ ಬೆನ್ನಲ್ಲೇ ಬಿಡಿಎ ಅಧಿಕಾರಿಗಳ, ಸಿಬ್ಬಂದಿ ಬಳಿಯಿದ್ದ ಮೊಬೈಲ್ ಮತ್ತು ವ್ಯಾಲೆಟ್ ಗಳನ್ನು ಎಸಿಬಿ ವಶಪಡಿಸಿಕೊಂಡಿತು. ನಂತರ ಆ ಮೊಬೈಲ್ ಗಳನ್ನು ಸ್ವಿಚ್ ಅಫ್ ಮಾಡಿಸಿದರು. ಬಳಿಕ ಕಚೇರಿಯ ಒಳಗಿದ್ದ ಎಲ್ಲಾ ಕಡತಗಳನ್ನ ಒಂದು ಕಡೆ ಇಟ್ಟು ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಪ್ರಸ್ತುತ ಬಿಡಿಎನಲ್ಲಿ ಡಾ.ಮಧು ಉಪಕಾರ್ಯದರ್ಶಿ-1, 2005 ರ ಬ್ಯಾಚ್ ನ ಕೆಎಎಸ್ ಅಧಿಕಾರಿ ನವೀನ್ ಜೋಸೆಫ್ ಉಪಕಾರ್ಯದರ್ಶಿ-2 ಹಾಗೂ 3 ಮತ್ತು 2010 ರ ಬ್ಯಾಚ್ ನ ಕೆಎಎಸ್ ಅಧಿಕಾರಿ ಗೀತಾ ಹುಡೇದ್ ಉಪಕಾರ್ಯದರ್ಶಿ-4 ಆಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಎಸಿಬಿ ಅಧಿಕಾರಿಗಳು ಬಿಡಿಎ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿ ತಮ್ಮ ಕೆಲಸಕ್ಕೆಂದು ಬಂದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಬಿಡಿಎ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸಿದ್ದರೆ ಒಂದಿಷ್ಟು ನಾಗರೀಕರಿಗೆ ಎಸಿಬಿ ಕಾರ್ಯಾಚರಣೆಯಿಂದ ಅನುಕೂಲವಾಗುತ್ತಿತ್ತು.”
– ಶಿವಕುಮಾರ್, ಸಾಮಾಜಿಕ ಕಾರ್ಯಕರ್ತ ಹಾಗೂ ಜೆಪಿ ವಿಚಾರ ವೇದಿಕೆ ಸಂಸ್ಥಾಪಕರು