ಬೆಂಗಳೂರು, (www.bengaluruwire.com) : ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಗುಂಡಿನ ಸದ್ದು ಮೊಳಗಿದೆ. ನಟೋರಿಯಸ್ ರೌಡಿ ಪಳನಿ ಅಲಿಯಾಸ್ ಕರ್ಚೀಫ್ ಪಳನಿಗೆ ಸಿಸಿಬಿ ಪೊಲೀಸರು ಬುಧವಾರ ಮುಂಜಾನೆ ಗುಂಡು ಹೊಡೆದಿದ್ದಾರೆ.
ಅಶೋಕನಗರ ಸ್ಮಶಾನದ ಬಳಿ ತನ್ನನ್ನು ಬಂಧನ ಮಾಡಲು ಬಂದ ಪೊಲೀಸರ ಮೇಲೆ ಪಳನಿ ಹಲ್ಲೆ ನಡೆಸಲು ಮುಂದಾದಾಗ ಸಿಸಿಬಿ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ್ ಆರೋಪಿಯ ಎಡಗಾಲಿಗೆ ಪಿಸ್ತೂಲ್ ನಿಂದ ಗುಂಡು ಹೊಡೆದಿದ್ದಾರೆ.
ಶರಣಾಗುವಂತೆ ಪೊಲೀಸರು ಸೂಚನೆ ನೀಡಿದ್ರು ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಗೆ ಪಳನಿಯು ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದ. ಆಗ ಆತ್ಮ ರಕ್ಷಣೆಗಾಗಿ ಪಳನಿ ಎಡಕಾಲಿಗೆ ಎಸಿಪಿ ಗುಂಡು ಹಾರಿಸಿದರು.
ಬೆಳ್ಳಂದೂರಿನಲ್ಲಿ ದಾರಿ ಬಿಡುವ ವಿಚಾರಕ್ಕೆ ಮುನ್ನಕುಮಾರ್ ಜೊತೆ ಜಗಳವಾದಾಗ ಆತನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಪ್ರಕರಣ ಸಂಬಂಧ ಬೆಳ್ಳಂದೂರು ಹಾಗು ಸಿಸಿಬಿ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಸಿಸಿಬಿ ಎಸಿಪಿ ಪರಮೇಶ್ವರ್ ಮಾಹಿತಿ ಪಡೆದು ಅರೋಪಿ ಬಂಧನಕ್ಕೆ ಹಿಂಬಾಲಿಸಿದ್ದಾರೆ. ಅಶೋಕ್ ನಗರದ ಸ್ಮಶಾನ ಬಳಿ ಅರೋಪಿ ಬಂಧನಕ್ಕೆ ಮುಂದಾದಾಗ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಮೇಲೆ ಡ್ಯಾಗರ್ ನಿಂದ ಹಲ್ಲೆ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ ಪೊಲೀಸರು ಪಳನಿ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಆತನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಪಳನಿ 2013 ನಲ್ಲಿ ಆನೆಪಾಳ್ಯದಲ್ಲಿ ಲೋಕಿ ಎಂಬಾತನನ್ನ ಕೊಲೆಗೈದಿದ್ದ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಪಳನಿ ಎರಡು ಕೊಲೆಯತ್ನ ಪ್ರಕರಣ, ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 20 ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ರೌಡಿಶೀಟರ್ ಬಬ್ಲಿಯ ಸಹಚರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.