ಬೆಂಗಳೂರು, (www.bengaluruwire.com) : ಕರ್ನಾಟಕದ ಯುವರತ್ನ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರದಿಂದ ಮರಣೋತ್ತರ “ಕರ್ನಾಟಕ ರತ್ನ ಪ್ರಶಸ್ತಿ” ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.
ಇದಲ್ಲದೆ ಬೆಂಗಳೂರಿನ ಲಗ್ಗೆರೆಯ ರಿಂಗ್ ರಸ್ತೆಯಲ್ಲಿರುವ ಶ್ರೀ ಕಂಠೀರವ ಸ್ಟುಡಿಯೋದ ಪುನೀತ್ ರಾಜ್ ಕುಮಾರ್ ಸಮಾಧಿಯನ್ನು ಡಾ.ರಾಜ್ ಕುಮಾರ್ ಅವರ ಸಮಾಧಿಯಂತೆ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಂಡ ಕಲಾವಿದರಲ್ಲಿ ಪುನೀತ್ ರಾಜಕುಮಾರ್ ಅವರು ಡಾ.ರಾಜ್ ಕುಮಾರ್ ಅವರ ಆದರ್ಶಗಳನ್ನ ಚಾಚೂ ತಪ್ಪದೆ ಪಾಲಿಸಿ ಎಲ್ಲರನ್ನು ಅವರು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಪುನೀತ್ ಅವರ ಅಗಲಿಕೆಯ ನಂತರ ಎರಡು ದಿನಗಳಲ್ಲಿ ಹರಿದು ಬಂದ ಅಭಿಮಾನಿಗಳ ಜನಸಾಗರವನ್ನು ನಾನು ವರ್ಣಿಸಲು ಅಸಾಧ್ಯವಾಗಿದೆ.
ಅಂದು ನಾನು ಪ್ರೀತಿಯ ಅಪ್ಪು ಕೆನ್ನೆಗೆ ಮುತ್ತಿಟ್ಟಾಗ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಅದು ನನ್ನ ಹೃದಯದಿಂದ ಬಂದದ್ದು. ರಾಜ್ಯದ ಜನತೆಯ ಪರವಾಗಿ ಅಪ್ಪು ವಿಗೆ ಮುತ್ತುಕೊಟ್ಟಿದೆ. ಅವರ ಹೆಸರನ್ನು ಕನ್ನಡ ನಾಡಿನಲ್ಲಿ ಚಿರಸ್ಥಾಯಿಯಾಗಿಸುವ ದೃಷ್ಟಿಯಿಂದ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಕೇವಲ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನಷ್ಟೇ ನೀಡದೆ, ಕೇಂದ್ರ ಸರ್ಕಾರಕ್ಕೂ ಪ್ರಶಸ್ತಿ ನೀಡುವಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಗಲಿದ ಕಲಾವಿದ ಪುನೀತ್ ಗೆ ‘ಪುನೀತ್ ನಮನ” ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ಸಂತಾಪ ಸೂಚಿಸಿದರು. ಇದಕ್ಕೂ ಮುನ್ನ ಪುನೀತ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡ ಇದೇ ಸಂದರ್ಭದಲ್ಲಿ ಮಾತನಾಡಿ, ಪುನೀತ್ ರಾಜ್ ಕುಮಾರ್ ಸಿನಿಪಯಣದಲ್ಲಿ ಮಾಡಿದ ಸಾಧನಾ ಕಾರ್ಯವನ್ನು ನೆನಪಿಸಿಕೊಂಡರು. ಅಪ್ಪುವಿನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಬೇಡುತ್ತೇನೆ ಎಂದರು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಪುನೀತ್ ರಾಜ್ ಕುಮಾರ್ ಅವರ ಸಮಾಜ ಸೇವಾ ಕಾರ್ಯಗಳ ಬಗ್ಗೆ ಗುಣಗಾನ ಮಾಡಿದರು. ಇಷ್ಟು ಚಿಕ್ಕ ವಯಸ್ಸಿಗೆ ಪುನೀತ್ ನಮ್ಮನ್ನೆಲ್ಲಾ ಅಗಲಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಅಗಲಿದ ಪುನೀತ್ ಅವರನ್ನು ನೆನೆದು ಭಾವುಕರಾಗಿದ್ದರು.
ದಕ್ಷಿಣ ಭಾರತದ ಅನೇಕ ಹಿರಿಯ – ಕಿರಿಯ ಸುಪ್ರಸಿದ್ಧ ಸಿನಿ ಕಲಾವಿದರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹಲವು ಸಚಿವರು ಮತ್ತು ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.