ನವದೆಹಲಿ, (www.bengaluruwire.com) : ನಕಲಿ ಕಂಪನಿ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ(GST) ಬೋಗಸ್ ಬಿಲ್ ಸೃಷ್ಟಿಸುವ ಮೂಲಕ ಅಂದಾಜು 34 ಕೋಟಿ ರೂ. ಮೊತ್ತದ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ (Input Tax Credit) ಪಡೆಯಲು ಯತ್ನಿಸುತ್ತಿದ್ದ ಪ್ರಕರಣವನ್ನು ನವದೆಹಲಿ ಪೂರ್ವದಲ್ಲಿನ ಕೇಂದ್ರೀಯ ಜಿಎಸ್ ಟಿ (CGST)ಯ ತೆರಿಗೆ ವಂಚನೆ ನಿಗ್ರಹ ಶಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ರಿಷಬ್ ಜೈನ್ ಎಂಬ ಮಾಸ್ಟರ್ ಮೈಂಡ್ ಇದರ ಹಿಂದೆ ಇದ್ದು, ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಲು 7 ನಕಲಿ ಕಂಪನಿಗಳನ್ನು ಸೃಷ್ಟಿಸಿ ಅದರಲ್ಲಿ ಸರಕುಗಳಿಲ್ಲದ 220 ಕೋಟಿ ರೂ. ಮೊತ್ತದ ಇನ್ ವಾಯ್ಸ್ ಸೃಷ್ಟಿಸುವ ಹಾಗೂ ಮಾರುವ ಕಾರ್ಯದಲ್ಲಿ ತೊಡಗಿದ್ದ ಎಂದು ಜಿಎಸ್ ಟಿ ತೆರಿಗೆ ವಂಚನೆ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಅಂದಾಜು 34 ಕೋಟಿ ರೂ. ಮೊತ್ತದ ಐಟಿಸಿಯನ್ನು ಆ ಏಳು ಕಂಪನಿಗಳಿಗೆ ವರ್ಗಾಯಿಸಲು ಪ್ರಯತ್ನಿಸಲಾಗಿತ್ತು.
ಬ್ಲೋ ಓಷನ್, ಹೈಜಾಕ್ ಮಾರ್ಕೆಟಿಂಗ್, ಕನ್ಹ ಎಂಟರ್ ಪ್ರೈಸಸ್, ಎಸ್.ಎಸ್.ಟ್ರೇಡರ್ಸ್, ಎವರ್ ನೆಸ್ಟ್ ಎಂಟರ್ ಪ್ರೈಸಸ್, ಗ್ಯಾನ್ ಓವರ್ ಸೀಸ್ ಹಾಗೂ ವಿಹಾರ್ಷ್ ಎಕ್ಸ್ ಪೋರ್ಟ್ಸ್ ಎಂಬ ಏಳು ಬೋಗಸ್ ಕಂಪನಿಗಳ ಹೆಸರಿನಲ್ಲಿ ಇನ್ ವಾಯ್ಸ್ ಸೃಷ್ಟಿಸಿ ಐಟಿಸಿ ಕ್ರೆಡಿಟ್ ಪಡೆಯುವ ಹುನ್ನಾರ ಮಾಡಲಾಗುತ್ತಿತ್ತು.
ಈ ರಾಕೇಟ್ ನ ಸೂತ್ರಧಾರನಾದ ರಿಷಬ್ ಜೈನ್ ತನ್ನ ಸ್ವಯಂಪ್ರೇರಣೆ ಹೇಳಿಕೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಓವರ್ ಡ್ರಾಫ್ಟ್ ಖಾತೆಗೆ ಹಣ ಕಟ್ಟದ ಕಾರಣ ಈತನ ಕಚೇರಿಗೆ ಬೀಗಮುದ್ರೆ ಹಾಕಲಾಗಿತ್ತು. ಇದಾದ ಬಳಿಕ ಈತ ಸರಕುಗಳನ್ನು ಪೂರೈಸದಿದ್ದರೂ ನಕಲಿ ಜಿಎಸ್ ಟಿ ಇನ್ ವಾಯ್ಸ್ ಗಳನ್ನು ಪೂರೈಸಲು ಆರಂಭಿಸಿದ್ದ ಎಂದು ಸಿಜಿಎಸ್ ಟಿ ಅಧಿಕಾರಿಗಳು ಹೇಳಿದ್ದಾರೆ.
ರಿಷಬ್ ಜೈನ್ ಅನ್ನು ಸಿಜಿಎಸ್ ಟಿ ಕಾಯ್ದೆ ರ 132 ಅಧಿನಿಯಮದಡಿ ಶುಕ್ರವಾರ ಬಂಧಿಸಲಾಗಿದೆ. ಆತನ ವಿರುದ್ಧ ಜಿಎಸ್ ಟಿಯ ವಿವಿಧ ಕಲಂ ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ನ.26 ರ ತನಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.