ಬೆಂಗಳೂರು, (www.bengaluruwire.com) : ಕಣ್ಣೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ 07390 ಎಕ್ಸ್ ಪ್ರೆಸ್ (Kannur – Bengaluru Express Rail) ರೈಲಿನ ಮೇಲೆ ತೊಪ್ಪೂರು- ಸಿವಡಿ ಎಂಬ ಸ್ಥಳದಲ್ಲಿ ಬಂಡೆ ಕಲ್ಲುಗಳು ಉರುಳಿಬಿದ್ದ ಪರಿಣಾಮ ರೈಲಿನ 7 ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶುಕ್ರವಾರ ಮುಂಜಾನೆ 3.50 ರ ಸುಮಾರಿಗೆ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ನ 7 ಬೋಗಿಗಳು ಹಳಿ ಅವಘಡ ಸಂಭವಿಸಿದೆ. ರೈಲಿನಲ್ಲಿಪ್ರಯಾಣಿಸುತ್ತಿದ್ದ ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಘಟನೆ ತಿಳಿದ ಕೂಡಲೇ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮ್ಯಾನೇಜರ್ (DRM) ಶ್ಯಾಮ್ ಸಿಂಗ್ ತಮ್ಮ ವಿಭಾಗೀಯ ತಂಡದೊಂದಿಗೆ ಘಟನಾ ಸ್ಥಳಕ್ಕೆ ಅಪಘಾತ ಪರಿಹಾರ ರೈಲಿ (ART) ನಲ್ಲಿ ಕೂಡಲೇ ತೆರಳಿದರು. ಬೆಳಗಿನ ಜಾವ 4:45 ರ ಸಂದರ್ಭದಲ್ಲಿ ವೈದ್ಯಕೀಯ ಪರಿಕರಗಳೊಂದಿಗೆ ವ್ಯಾನ್ ಕೂಡ ಸ್ಥಳಕ್ಕೆ ಧಾವಿಸಿತ್ತು. ಮತ್ತೊಂದೆಡೆ ಈರೋಡ್ ನಿಂದ ಸೇಲಮ್ ನ ಡಿಆರ್ ಎಮ್ ಅಧಿಕಾರಿ ತಮ್ಮ ತಂಡದೊಂದಿಗೆ 5:30ಕ್ಕೆ ಹೊರಟು ಘಟನಾ ಸ್ಥಳಕ್ಕೆ ಬಂದರು.
ರೈಲಿನಲ್ಲಿದ್ದ 2,348 ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನೈರುತ್ಯ ರೈಲ್ವೆಯು ದುರ್ಘಟನಾ ಸ್ಥಳಕ್ಕೆ 5 ಬಸ್ ಹಾಗೂ ರೈಲ್ವೇ ಪ್ರಯಾಣಿಕರ ಅನುಕೂಲಕ್ಕೆ ತೊಪ್ಪೂರಿನಲ್ಲಿ 15 ಬಸ್ ನಿಯೋಜಿಸಿತ್ತು.
ಸುಸ್ಥಿಯಲ್ಲಿದ್ದ ಉಳಿದ ಬೋಗಿಗಳ ಸ್ಥಳಾಂತರ :
ರೈಲ್ವೆ ಹಳಿ ತಪ್ಪಿದ 7 ಬೋಗಿಗಳನ್ನು ಹೊರತುಪಡಿಸಿ ಸುಸ್ಥಿತಿಯಲ್ಲಿರುವ ಉಳಿದ 4 ಬೋಗಿಗಳನ್ನು ತೊಪ್ಪೂರು ರೈಲ್ವೆ ನಿಲ್ದಾಣಕ್ಕೆ ಕೊಂಡೊಯ್ಯಲಾಗಿದೆ. ಹಳಿಯ ಮೇಲೆ ಮಣ್ಣು ಹಾಗೂ ಕಲ್ಲು ಬಂಡೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಿಕೋಪ ನಿರ್ವಹಣಾ ತಂಡ ಘಟನೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ.
ಮೂರು ರೈಲುಗಳ ಮಾರ್ಗ / ಸಮಯ ಬದಲಾವಣೆ :
ಇನ್ನೊಂದೆಡೆ ತೊಪ್ಪೂರು- ಸಿವಡಿ ರೈಲ್ವೆ ಮಾರ್ಗದಲ್ಲಿ ಸಂಚರಿಸಬೇಕಿದ್ದ ಕೆಎಸ್ ಆರ್ ಬೆಂಗಳೂರಿನಿಂದ ಬೆಳಗ್ಗೆ 6:30ಕ್ಕೆ ಎರ್ನಾಕುಲಮ್ ಕಡೆಗೆ ತೆರಳಬೇಕಿದ್ದ ಸೂಪರ್ ಫಾಸ್ಟ್ ವಿಶೇಷ ರೈಲನ್ನು(ರೈಲು ಸಂಖ್ಯೆ : 02677) ಭೈಯ್ಯಪನಹಳ್ಳಿ, ಬಂಗಾರಪೇಟೆ ಹಾಗೂ ತಿಪಟೂರು ಕಡೆಗೆ ಮಾರ್ಗ ಬದಲಾವಣೆ ಮಾಡಲಾಯಿತು.
ನಾಗರಕೊಯಿಲ್ ಜಂಕ್ಷನ್ ನಿಂದ ಕೆಎಸ್ ಆರ್ ಬೆಂಗಳೂರು ಕಡೆಗೆ ಬೆಳಗ್ಗೆ 9:10ಕ್ಕೆ ಬರಬೇಕಿದ್ದ ಹಬ್ಬದ ವಿಶೇಷ ಶೆಡ್ಯೂಲ್ ರೈಲನ್ನು (ರೈಲು ಸಂಖ್ಯೆ : 07236) ಸೇಲಮ್, ತಿಪಟೂರು, ಬಂಗಾರಪೇಟೆ ಹಾಗೂ ಕೆಎಸ್ ಆರ್ ಬೆಂಗಳೂರು ಮಾರ್ಗದ ಕಡೆಗೆ ಮಾರ್ಗ ಬದಲಾವಣೆ ಮಾಡಲಾಯಿತು.
ಇನ್ನು 07316 ಸೇಲಮ್- ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ಶೆಡ್ಯೂಲ್ ರೈಲು ಬೆಳಗ್ಗೆ 5:30ಕ್ಕೆ ಸೇಲಮ್ ಬಿಡಬೇಕಿದ್ದ ರೈಲಿನ ಅವಧಿಯನ್ನು 3 ಗಂಟೆಗೆ ಬದಲಾಯಿಸಲಾಯಿತು.
ಸಹಾಯ ಕೇಂದ್ರದ ದೂರವಾಣಿ ವಿವರ :
ರೈಲು ಹಳಿತಪ್ಪಿದ ದುರ್ಘಟನೆಯ ಹಿನ್ನಲೆಯಲ್ಲಿ ಸಹಾಯಕೇಂದ್ರವನ್ನು ತೆರೆಯಲಾಗಿದೆ. ಸಹಾಯಕೇಂದ್ರದ ದೂರವಾಣಿ ವಿವರ ಹೀಗಿದೆ : ಹೊಸೂರು -04344-222603, ಬೆಂಗಳೂರು – 080-22156554, ಧರ್ಮಪುರಿ – 04342-232111 ಆಗಿದೆ.