ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನ ಸಂಸ್ಕೃತಿಯ ಪ್ರತೀಕವಾದ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಕರೋನಾ ನಿಯಮಗಳಿಗೆ ಒಳಪಟ್ಟು ಅನುಮತಿ ನೀಡಲಾಗುವುದು ಎಂದು ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಹಬ್ಬ ,ಜಾತ್ರೆ ನಡೆಸಲು ಅವಕಾಶ ನಿರ್ಬಂಧ ಹಾಕಲಾಗಿತ್ತು. ಈಗ ಕರೋನಾ ಪ್ರಕರಣಗಳು ಕಡಿಮೆಯಾಗಿದೆ. ಹಾಗಾಗಿ ಕೊರೋನಾ ನಿಯಮಗಳ ಒಳಪಟ್ಟು ಜಾತ್ರೆ , ಕಡಲೆ ಕಾಯಿ ಪರಿಷೆ ನಡೆಸಲು ಅವಕಾಶ ಕೊಡಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿ ಕೊನೆಯ ಕಾರ್ತಿಕ ಸೋಮವಾರದಂದು (ನ.29 ರಿಂದ 30ರ ವರೆಗೆ) ಪರಿಷೆ ನಡೆಯಲಿದ್ದು, ಬಿಬಿಎಂಪಿಯು ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದೆ. ಜಾತ್ರೆ ಹೇಗೆ ನಡೆಸಬೇಕೆಂಬ ಬಗ್ಗೆ ರೂಪರೇಷೆಯನ್ನು ಬಸವನಗುಡಿ ದೇವಸ್ಥಾನದವರು ಪ್ರಸ್ತಾವನೆ ಸಲ್ಲಿಸಬೇಕಾಗಿದೆ.
ಬಸವನಗುಡಿ ಕಡಲೆಕಾಯಿ ಪರಿಷೆಗೆ ಬೆಂಗಳೂರು, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ ತಮಗಿಷ್ಟವಾದ ವಿಧ ವಿಧವಾದ ಕಡಲೆಕಾಯಿಗಳನ್ನು ಕೊಂಡು ದೇವರ ದರ್ಶನ ಮಾಡಿ ತೆರಳುತ್ತಾರೆ.