ಬೆಂಗಳೂರು, (www.bengaluruwire.com) : ದಿನಸಿ ಪದಾರ್ಥ, ಎಲ್ ಪಿಜಿ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಊಟ, ತಿಂಡಿ, ಕಾಫಿ-ಟೀದರ ಶೇ.8 ರಿಂದ 15ರ ತನಕ ಹೆಚ್ಚಳವಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಹೋಟೆಲ್ ಗಳಲ್ಲಿ ಸೋಮವಾರದಿಂದಲೇ ನೂತನ ದರ ಏರಿಕೆ ಜಾರಿಗೆ ತಂದಿದ್ದಾರೆ. ಕೆಲವು ಹೋಟೆಲ್ ಮಾಲೀಕರು ನ.15, ಇನ್ನು ಕೆಲವರು ಹೋಟೆಲ್ ನವರು ಡಿಸೆಂಬರ್ ನಿಂದ ಹೊಸ ಊಟ- ತಿಂಡಿ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ಹೋಟೆಲ್ ನವರು ಬೆಲೆ ಏರಿಕೆ ಮಾಡದೆ ಕಾದು ನೋಡಿ ಮುಂದೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಪ್ರತಿ ಆಹಾರ, ತಿಂಡಿ, ಕಾಫಿ- ಟೀ ದರವು ಆಯಾ ಹೋಟೆಲ್ ನವರು ಬೀಳುವ ವೆಚ್ಚದ ಹೊರೆಯ ಮೇಲೆ ಆಧಾರಿತವಾಗಿರಲಿದೆ. ಸರಾಸರಿ ಶೇ.10ರಷ್ಟು ಹೋಟೆಲ್ ಆಹಾರದ ದರ ಏರಿಕೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ “ಬೆಂಗಳೂರು ವೈರ್” ಗೆ ತಿಳಿಸಿದ್ದಾರೆ.
“ಕೋವಿಡ್ ನಿಂದಾಗಿ ಹೋಟೆಲ್ ಉದ್ಯಮ ಇನ್ನೂ ಚೇತರಿಕೆಯ ಮಟ್ಟ ತಲುಪಿಲ್ಲ. ಎಷ್ಟೋ ಜನರು ನಷ್ಟ ತಾಳಲಾರದೆ ಹೋಟೆಲ್ ಬಂದ್ ಮಾಡಿದ್ದಾರೆ. ಸಾರ್ವಜನಿಕರ ಕಷ್ಟ ಮನಗಂಡು ಇಷ್ಟರ ತನಕ ಹೋಟೆಲ್ ಆಹಾರ ದರ ಏರಿಕೆ ಮಾಡಿರಲಿಲ್ಲ. ಈಗ ಅಗತ್ಯ ವಸ್ತುಗಳ ಬೆಲೆ, ಎಲ್ ಪಿಜಿ ಗ್ಯಾಸ್ ಬೆಲೆ ಹೆಚ್ಚಾಗಿ ದರ ಏರಿಕೆ ಮಾಡುವುದು ಬಿಟ್ಟು ಅನ್ಯ ಮಾರ್ಗವಿರಲಿಲ್ಲ.”
– ಚಂದ್ರಶೇಖರ ಹೆಬ್ಬಾರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ
ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘ ಹೋಟೆಲುಗಳ ಮಾಲೀಕರಿಗೆ ಸಲಹೆಯನ್ನಷ್ಟೇ ನೀಡಬಹುದು. ಅದರ ಮಾಲೀಕರು ಪರಿಸ್ಥಿತಿ ನೋಡಿಕೊಂಡು ದರ ಏರಿಕೆ ಮಾಡಲಿದ್ದಾರೆ. ಕೆಲವು ಹೋಟೆಲ್ ನವರು ಈಗಾಗಲೇ ಕೆಲವು ಆಹಾರಗಳ ದರ ಏರಿಕೆ ಮಾಡಿದ್ದಾರೆ. ಏಕಾ ಏಕಿ ಎಲ್ಲಾ ಆಹಾರಗಳ ದರ ಏರಿಕೆ ಮಾಡಿದರೆ ಗ್ರಾಹಕರಿಗೂ ಹೊರೆಯಾಗಲಿದೆ. ಬೆಂಗಳೂರಿನಲ್ಲಿ 24 ಸಾವಿರ ಹೋಟೆಲ್ ಸೇರಿದಂತೆ ರಾಜ್ಯಾದ್ಯಂತ 60 ಸಾವಿರ ಹೋಟೆಲ್ ಗಳಿವೆ ಎಂದು ಸಂಘ ತಿಳಿಸಿದೆ.
“ಎಲ್ಲಾ ರೀತಿಯ ತರಕಾರಿ ದರ ಕನಿಷ್ಠ 50 ರೂ. ಮೇಲಿದೆ. ದಕ್ಷಿಣ ಭಾರತದಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿ ತರಕಾರಿ ದರ ಏರಿಕೆಯಾಗಿದೆ. ಖಾದ್ಯ ತೈಲ ಈ ಹಿಂದೆ ಲೀಟರ್ ಗೆ 85-90 ಆಸುಪಾಸಿನಲ್ಲಿದ್ದರೆ ಈಗ 155 ರೂ. ಆಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಹಕ ಸೂಚ್ಯಂಕದ ಹಣದುಬ್ಬರ ದರ ಶೇ.37.10 ರಷ್ಟು ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಣ್ಣ ಹೋಟೆಲ್ ನವರಿಗೆ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಬೆಲೆ ತೀವ್ರಗತಿಯಲ್ಲಿ ಏರಿಕೆ ಸಾಕಷ್ಟು ಹೊಡೆತ ಕೊಟ್ಟಿದೆ. ಮೇ 2020 ರಲ್ಲಿ 19 ಕೆ.ಜಿ ತೂಕದ ಕಮರ್ಷಿಯಲ್ ಎಲ್ ಪಿಜಿ ಸಿಲೆಂಡರ್ ಬೆಲೆ 1,100 ರೂ. ಇತ್ತು. ಆದರೀಗ 2,060 ರೂ.ಗಳಿಗೆ ಬೆಲೆ ಏರಿಕೆಯಾಗಿದೆ. ಹೀಗಾಗಿ ಸಣ್ಣ ಹೋಟೆಲ್ ಮಾಲೀಕರು ಸಾಕಷ್ಟು ನಷ್ಟ ಹೊಂದಿದ್ದಾರೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ”
– ಪಿ.ಸಿ.ರಾವ್, ಅಧ್ಯಕ್ಷ, ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ (BBHA)
ಊಟ- ತಿಂಡಿ, ಕಾಫಿ-ಟೀ ರೇಟ್ ಎಷ್ಟು ಹೆಚ್ಚಳ?
• ಕಾಫಿ, ಟೀ, ಹಾಲು – 2 ರೂ.
• ಇಡ್ಲಿ, ವಡೆ, ದೋಸೆ, ಪೂರಿ, ರೈಸ್ ಬಾತ್, ಚಿತ್ರಾನ್ನ, ಚೌಚೌಬಾತ್, ಚಾಟ್ಸ್ – 5ರೂ.
• ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಶೈಲಿ ಊಟ – 10 ರೂ.
ಈಗಾಗಲೇ ಕಮರ್ಷಿಯಲ್ ಎಲ್ ಪಿಜಿ ದರವನ್ನು ಗೃಹಬಳಕೆ ಸಿಲಿಂಡರ್ ಗೆ ವಿಧಿಸುವ ರೀತಿ ಜಿಎಸ್ ಟಿ ದರ ವಿಧಿಸಿದರೆ ಪ್ರತಿ ಸಿಲೆಂಡರ್ ಗೆ ಅಂದಾಜು 250 ರೂ. ಕಡಿಮೆಯಾಗಲಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಮನವಿ ಮಾಡಲಾಗಿದೆ ಎಂದು ಪಿ.ಸಿ.ರಾವ್ ಹೇಳಿದ್ದಾರೆ.
ಹೋಟೆಲಿನವರು ಏನಂತಾರೆ?
“ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ, ಕರೋನಾ ಸಂಕಷ್ಟದಿಂದ ನಮಗೆ ಸಾಕಷ್ಟು ನಷ್ಟ ಆಗಿದೆ. ಹಾಗಂತ ನಾವು ಕೂಡಲೇ ಎಲ್ಲಾ ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ. ಆದ್ದರಿಂದ ಸದ್ಯದ ಮಟ್ಟಿಗೆ ನಮ್ಮಲ್ಲಿ ಊಟ, ತಿಂಡಿ, ಕಾಫಿ- ಟೀ ಮತ್ತಿತರ ಆಹಾರದ ಬೆಲೆ ಏರಿಕೆ ಮಾಡವುದಿಲ್ಲ.”
– ಗೋಪಾಲಕೃಷ್ಣ, ಮಾಲೀಕರು, ಶ್ರೀ ಗುರು ರೆಸಿಡೆನ್ಸಿ, ಮೈಸೂರು
“ಕರೋನಾದಿಂದ ಲಾಕ್ ಡೌನ್ ಆಗಿತ್ತು. ಆಗಲೂ ಹೋಟೆಲ್ ನಲ್ಲಿ ವ್ಯಾಪಾರ ಕಮ್ಮಿ ಇದ್ದರೂ ಕೆಲಸದವರಿಗೆ ಊಟ-ತಿಂಡಿ, ಅವರಿಗೆ ಸಂಬಳ ಕೊಟ್ಟಿದ್ದೇವೆ. ಹೋಟೆಲ್ ಬಾಡಿಗೆ ಕಟ್ಟಿದೆ. ಅಲ್ಲದೆ ಗ್ಯಾಸ್ ಸಿಲಿಂಡೆರ್ ರೇಟ್, ಹೋಟೆಲ್ ಬಾಡಿಗೆ ಜಾಸ್ತಿಯಾಗಿದೆ. ಬೇರೆ ವಿಧಿಯಿಲ್ಲ ಜನವರಿ ಪ್ರಾರಂಭದಿಂದ ಅನಿವಾರ್ಯವಾಗಿ ಮಾಡಲಿದ್ದೇವೆ.”
– ಪ್ರಶಾಂತ ಛಾತ್ರ, ಪಾಲುದಾರರು, ಬ್ರಾಹ್ಮಿನ್ಸ್ ಮನೆ ತಿಂಡಿ, ಬೆಂಗಳೂರು