ಬೆಂಗಳೂರು, (www.bengaluruwire.com) : ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ದಿನಕ್ಕೊಂದು ತಿರುವುಗಳು ಪಡೆಯುತ್ತಿರುವ ಹೊತ್ತಿನಲ್ಲಿ ಅಪ್ಪು ಸಾಯುವ ಎರಡು ದಿನಗಳ ಹಿಂದೆ ಸ್ನೇಹಕೂಟಗಳಲ್ಲಿ ಭಾಗವಹಿಸಿ ಅಲ್ಲಿ ನಿಧಾನಗತಿ ವಿಷಾಹಾರ ಸೇವನೆಯಿಂದ ಅಸಹಜ ಸಾವು ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಈ ಸಂಬಂಧ ದೂರು ದಾಖಲಾಗಿದೆ.
“ನಟ ಪುನೀತ್ ರಾಜ್ ಕುಮಾರ್ ಅ.29ರಂದು ಸಂಭವಿಸಿದ ಸಾವು ಅಸಹಜ ಹಾಗೂ ಎರಡು ದಿನಗಳ ಮುನ್ನ ಬರ್ತಡೆ ಪಾರ್ಟಿ ಸೇರಿದಂತೆ ಸ್ನೇಹಕೂಟಗಳಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸೇವಿಸಿದ ಊಟ- ನೀರಿನಿಂದ Slow Poision (ನಿಧಾನಗತಿಯ ವಿಷ) ಸಂಭವಿಸಿರುವ ಕುರಿತಂತೆ ಸತ್ಯಾಸತ್ಯೆಗಳ ಬಗ್ಗೆ ತನಿಖೆ ನಡೆಸಿ ನಾಡಿನ ಜನತೆಗೆ ಸತ್ಯ ಏನೆಂಬುದನ್ನು ತಿಳಿಸಿ” ಎಂದು ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಹಾಗೂ ಕನ್ನಡ ಜನಪರ ಚಿಂತಕ ಡಾ.ಆರ್.ಎ.ಪ್ರಸಾದ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ನಾಡಜನರ ಪರವಾಗಿ ಕಾನೂನಾತ್ಮಕ ದೂರು ತುರ್ತು ದಾಖಲಿಸಿ ನಾಡಿಗೆ ನಿಜ ತಿಳಿಸುವಂತೆ ದೂರರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಪುನೀತ್ ರಾಜಕುಮಾರ್ ಅವರಿಗೆ ತುರ್ತು ಹೃದಯಾಘಾತವಾಗುವ ಸೂಚನೆ ಕಂಡರೂ ವೈದ್ಯ ಡಾ.ರಮಣರಾವ್ ವೈದ್ಯ ವೃತ್ತಿಯಲ್ಲಿ ಕರ್ತವ್ಯ ಲೋಪ ಎಸಗಿದ್ದು ಪುನೀತ್ ರಾಜಕುಮಾರ್ ಅಸಹಜ ಸಾವಿಗೆ ಕಾರಣರಾಗಿರುವ ಡಾ.ರಮಣರಾವ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಹ ದೂರಿನಲ್ಲಿ ಡಾ.ಆರ್.ಎ.ಪ್ರಸಾದ್ ತಿಳಿಸಿದ್ದಾರೆ.
ಈ ದೂರಿನ ಪ್ರತಿಯು ಬೆಂಗಳೂರು ವೈರ್ ಗೆ ಲಭಿಸಿದ್ದು, ಆ ದೂರಿನಲ್ಲಿ “ದಿನಾಂಕ 29-10-2021 ರಂದು ಬೆಳಗ್ಗೆ 11ರ ನಂತರ ಸದಾಶಿವನಗರದ 13ನೇ ಮೈನ್, ನಂ.94/H, ರಾಜಮಹಲ್ ವಿಲಾಸ ಬಡಾವಣೆ, ಅರಮನೆ ನಗರ, ಸದಾಶಿವನಗರ, ಬೆಂಗಳೂರು ಇಲ್ಲಿಗೆ ನಟ ಪುನೀತ್ ರಾಜಕುಮಾರ್, ಡಾ.ರಮಣರಾವ್ ಕ್ಲಿನಿಕ್ ಗೆ ಪ್ರಥಮವಾಗಿ ಭೇಟಿಕೊಟ್ಟಿದ್ದರು. ಅಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಕ್ಕೆ ತುರ್ತು ಆಘಾತವಾಗಿದ್ದು, ಈ ವಿಷಯ ತಿಳಿದೂ ಡಾ.ರಮಣರಾವ್ ಪ್ರತ್ಯೇಕವಾಗಿ ಹೃದಯದ ಆರೈಕೆ ಘಟಕದ ಸೌಲಭ್ಯವಿರುವ ಹತ್ತಿರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸದೆ, ಕನ್ಸಲ್ಟೆಂಟ್ ಡಾಕ್ಟರ್ ಗಳಿರುವ ಹೃದಯ ಸಂಬಂಧಿ ಆರೈಕೆಗೆ ಪ್ರತ್ಯೇಕ ವಿಭಾಗವಿರದ ವಿಕ್ರಮ್ ಆಸ್ಪತ್ರೆಗೆ ಏಕೆ ಕಳುಹಿಸಿದರು? “
“ಹೃದಯ ಸಂಬಂಧಿ ತುರ್ತು ವಿಚಾರ ಬಂದಾಗ ಹತ್ತಿರದ ಆಸಪತ್ರೆಗೆ ಕಳುಹಿಸುವ ವೈದ್ಯಕೀಯ ಪ್ರಜ್ಞೆ ಪ್ರದರ್ಶಿಸಿ ಕರ್ತವ್ಯ ನಿರ್ವಹಸಿದೆ ಡಾ.ರಮಣರಾವ್ ನಿರ್ಲಕ್ಷ್ಯ ತಾಳಿದರು. ಇದರಿಂದಾಗಿ ನಟ ಪುನೀತ್ ರಾಜಕುಮಾರ್ ಪ್ರಾಣಹೋಗಲು ಕಾರಣಕರ್ತರಾಗಿದ್ದಾರೆ.”
“ಈ ಎಲ್ಲಾ ಹಿನ್ನಲೆ ನೋಡಿದಾಗ ಪುನೀತ್ ರಾಜ್ ಕುಮಾರ್ 2 ದಿನಗಳಿಂದ ತಡರಾತ್ರಿ ಸ್ನೇಹಕೂಟಗಳಲ್ಲಿ ಭಾಗವಹಿಸಿದ್ದರು. ಅದರಲ್ಲೂ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ ಅಥವಾ ಬೇರೆಡೆ ಊಟ- ತಿಂಡಿ, ನೀರು ಕುಡಿದು ಆರೋಗ್ಯದಲ್ಲಿ ನಿಧಾನ ವಿಷಾಹಾರ (Slow Poison) ಆಗಿ ತುರ್ತು ವೈದ್ಯಕೀಯ ಘಟನೆ ಆಗಿರುವ ಸಾಧ್ಯತೆಗಳಿದೆ. ಒಟ್ಟಾರೆ ಈ ಎಲ್ಲಾ ಘಟನೆಗಳ ಸತ್ಯಾಸತ್ಯತೆ ಹೊರಬರಬೇಕಾಗಿದೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ, ನಾಡಿಗೆ ಬೇಕಾಗಿದ್ದ ಒಬ್ಬ ಹೃದಯಸ್ಪರ್ಶಿ ವ್ಯಕ್ತಿಯ ಸಾವಿನ ಬಗ್ಗೆ ರಹಸ್ಯಗಳು ಉಳಿಯಬಾರದು. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ.”
“ಈ ಹಿನ್ನಲೆಯಲ್ಲಿ ಈ ಬಗೆಗಿನ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಲು ಈ ದೂರನ್ನು ನಾಡಿನ ಜನತೆಯ ಪರವಾಗಿ ನೀಡಲಾಗಿದೆ” ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಪುನೀತ್ ಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಪೊಲೀಸ್ ರಕ್ಷಣೆ :
ಇನ್ನೊಂದೆಡೆ ಪುನೀತ್ ರಾಜ್ ಕುಮಾರ್ ಸಾಯುವ ಮುನ್ನ ವೈದ್ಯಕೀಯ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಕೇಳಿಬರುತ್ತಿರುವ ಆರೋಪ ಹಾಗೂ ಅಪ್ಪು ಅಭಿಮಾನಿಗಳ ಆಕ್ರೋಶದ ಹಿನ್ನಲೆಯಲ್ಲಿ, ಈ ವೈದ್ಯರ ನೆರವಿಗೆ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ ಸಂಘಟನೆ (ಫನಾ) ಧಾವಿಸಿದ್ದು, ಇವರುಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿದ್ದು, ಅದರಂತೆ ಬೆಂಗಳೂರು ನಗರ ಪೊಲೀಸರು ಡಾ.ರಮಣರಾವ್ ಹಾಗೂ ಪುನೀತ್ ಗೆ ಚಿಕಿತ್ಸೆ ನೀಡಿದ ಇತರ ವೈದ್ಯರಿಗೆ ಭದ್ರತೆ ಒದಗಿಸಿದ್ದಾಗಿ ತಿಳಿಸಿದ್ದಾರೆ.
ವೈದ್ಯರ ನೆರವಿಗೆ ಧಾವಿಸಿದ ಫನಾ – ಮುಖ್ಯಮಂತ್ರಿಗಳಿಗೆ ಪತ್ರ :
ಫನಾ ಸಂಘಟನೆಯ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನ.6ರಂದು ಪತ್ರ ಬರೆದಿದ್ದು, ಪುನೀತ್ ರಾಜ್ ಕುಮಾರ್ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಸಾರ್ವಜನಿಕರು, ದೃಶ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುತ್ತಿರುವ ಆರೋಪಗಳು ಸಮಾಜದಲ್ಲಿ ವೈದ್ಯರ ಮೇಲೆ ಅಪನಂಬಿಕೆ ಮೂಡಲು ಕಾರಣವಾಗುತ್ತಿದೆ. ಅಲ್ಲದೆ ಪುನೀತ್ ಗೆ ಚಿಕಿತ್ಸೆ ನೀಡಿದ ವೈದ್ಯರ ಜೀವಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ನಟ ಪುನೀತ್ ಅಭಿಮಾನಿಗಳು ಹಾಗೂ ಹಿತೈಷಿಗಳು ಪುನೀತ್ ಆರೋಗ್ಯದ ಬಗ್ಗೆ ನಡೆಸುತ್ತಿರುವ ಚರ್ಚೆಗಳು ವೈದ್ಯಕೀಯ ಆರೈಕೆ ಕುರಿತಂತೆ ವೈಯುಕ್ತಿಕ ವ್ಯಕ್ತಿ ಅಥವಾ ಆತನ ಕುಟುಂಬದ ಖಾಸಗಿತನದ ಉಲ್ಲಂಘನೆ ಮಾಡಿದಂತಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಪುನೀತ್ ಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆಸ್ಪತ್ರೆಯ ಮೇಲೆ ಎಫ್ ಐಆರ್ ಅಥವಾ ದೂರು ದಾಖಲಿಸುವ ಪ್ರಯತ್ನಗಳು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಹಾಗೂ ಕಾನೂನು ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅಪ್ಪು ಅಭಿಮಾನಿಗಳು ಹಾಗೂ ಅಥವಾ ಅವರ ಕುಟುಂಬದವರು ಕಾನೂನು ಪಾಲಿಸುವ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಅಥವಾ ಸಾರ್ವಜನಿಕ ಅಶಾಂತಿ ಮೂಡಿಸುವ ವಿಚಾರದಲ್ಲಿ ನೀವು ಮಧ್ಯಸ್ಥಿಕೆ ವಹಿಸಬೇಕು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಪುನೀತ್ ಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಅದರಲ್ಲೂ ತಮ್ಮ ಕೈಲಾದ ಮಟ್ಟಿಗೆ ಚಿಕಿತ್ಸೆ ನೀಡಿದ ಡಾ.ರಮಣರಾವ್ ಮೇಲೆ ಆರೋಪ ಮಾಡುತ್ತಿರುವುದನ್ನು ಫನಾ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತದೆ” ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
“ವೈದ್ಯಕೀಯ ವೃತ್ತಿಯಲ್ಲೂ ಕೆಲವೊಂದು ಮಿತಿಗಳಿವೆ ಹಾಗೂ ಯಾವಾಗಲೂ ಜೀವವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಯಾವಾಗಲೂ ಜೀವ ಉಳಿಸಲು ಸಾಧ್ಯವಾಗಿದ್ದರೆ ಯಾರೂ ಸಾಯುತ್ತಿರಲಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ತಾವು ಸಾರ್ವಜನಿಕವಾಗಿ ಹೇಳಿಕೆ ನೀಡಿದರೆ ವೈದ್ಯ ಸಮೂಹದ ನೈತಿಕತೆ ಹೆಚ್ಚಾಗಲಿದೆ.” ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.