ಕಾರವಾರ, (www.bengaluruwire.com) :
ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಕಾಣಿಸಿಕೊಂಡ ಬೋಟ್ ನಲ್ಲಿ ಸಿಲುಕಿದ್ದ ಏಳು ಮಂದಿಯನ್ನು ಭಾರತೀಯ ನೌಕಾಪಡೆಯ ಯೋಧರು ರಕ್ಷಣೆ ಮಾಡಿದ್ದಾರೆ.
ಕಾರವಾರ ತೀರದಿಂದ 10 ನಾಟಿಕಲ್ ಮೈಲ್ ದೂರದಲ್ಲಿದ್ದ ಐಎಫ್ ಬಿ ವರದ ವಿನಾಯಕ-1 ಬೋಟ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ರಾತ್ರಿ 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಈ ವಿಚಾರ ನೌಕಾಪಡೆ ರಕ್ಷಣಾ ಉಪಕೇಂದ್ರ (ಎಂಆರ್ ಎಸ್ ಸಿ)ಕ್ಕೆ ಮಾಹಿತಿ ದೊರೆತ ಕೂಡಲೇ ಸಿ-155 ಬೋಟ್ ಮೂಲಕ ಸ್ಥಳಕ್ಕೆ ತೆರಳಿದ ನೌಕಾಪಡೆಯ ಯೋಧರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸಿದರು. ಬೋಟ್ ನಲ್ಲಿದ್ದ ಏಳು ಮೀನುಗಾರರನ್ನು ಐಎಫ್ ಬಿ ವಜ್ರ ಬೋಟಿಗೆ ಸ್ಥಳಾಂತರಿಸಿದರು.
ಹೀಗೆ ರಕ್ಷಣೆ ಮಾಡಿದ ಮೀನುಗಾರರನ್ನು ನಂತರ ಕಾರವಾರ ಕಡಲು ತೀರಕ್ಕೆ ಕರೆತಂದರು. ಸಂರಕ್ಷಣೆ ಮಾಡಲಾದ ಮೀನುಗಾರರು ಆರೋಗ್ಯವಾಗಿದ್ದಾರೆ. ಸಿ-155 ಬೋಟ್ ಅಗ್ನಿ ಅವಘಡಕ್ಕೆ ತುತ್ತಾದ ಐಎಫ್ ಬಿ ವರದ ವಿನಾಯಕ-1 ಬೋಟ್ ಅನ್ನು ಐಎಫ್ ಬಿ ವಜ್ರ ಬೋಟಿನೊಂದಿಗೆ ಕಾರವಾರ ಬಂದರಿಗೆ ಕರೆತರಲು ಸೂಕ್ತನೆರವು ನೀಡಿತು. ಆನಂತರ ವರದ ವಿನಾಯಕ-1 ದೋಣಿಯನ್ನು ನ.6ರ ಮುಂಜಾನೆ 4 ಗಂಟೆ ವೇಳೆಗೆ ಕರಾವಳಿ ಭದ್ರತಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ದುರ್ಘಟನೆ ಕುರಿತಂತೆ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಎಂದು ಕರಾವಳಿ ಭದ್ರತಾಪಡೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.