ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2021-22 ನೇ ಸಾಲಿನ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮಾಡಿದ್ದು ನ.8 ರಂದು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸಲಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಪಾಲಿಕೆ ಮುಖ್ಯ ಆಯುಕ್ತ ಗೌರವಗುಪ್ತ ನೇತೃತ್ವದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಆಯುಕ್ತ ದಯಾನಂದ್ ಅವರು ಮಾತನಾಡುತ್ತಾ, ನಗರದಲ್ಲಿರುವ ಮತದಾರರು ತಮ್ಮ ಹೆಸರು, ವಿಳಾಸ ಪರಿಷ್ಕರಣೆಗೆ, ಮತದಾರರ ಪಟ್ಟಿಯಿಂದ ಹೆಸರು ರದ್ದು ಮಾಡಲು, ಹೊಸದಾಗಿ ಸೇರ್ಪಡೆ ಮಾಡಲು ಡಿ.8 ರ ತನಕ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.
ನ.7, ನ.14, ನ.21 ಹಾಗೂ ನ.28 ಈ ನಾಲ್ಕು ಭಾನುವಾರಗಳಂದು ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು, ರದ್ದು ಮಾಡಲು, ಮತ್ತಿತರ ಮಾಹಿತಿ ಪರಿಷ್ಕರಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. 13-01-2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ದಯಾನಂದ್ ತಿಳಿಸಿದ್ದಾರೆ.
ಸಾರ್ವಜನಿಕರು, ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. ಹಾಗೂ ಮತದಾರರ ಸಹಾಯವಾಣೊ ಮೊಬೈಲ್ ಅಂಡ್ರಾಯ್ಡ್ ಆಪ್, ಎನ್ ವಿಎಸ್ ಪಿ ಪೋರ್ಟಲ್ (www.nvsp.in) ವೆಬ್ ಸೈಟ್, 1950 ಮತದಾರರ ಸಹಾಯವಾಣಿ ಹಾಗೂ ಮತದಾರರ ಪೋರ್ಟಲ್ (www.voterportal.eci.gov.in) ಗಳಲ್ಲೂ ಪರಿಶೀಲಿಸಿಕೊಳ್ಳಬಹುದು. ಜೊತೆಗೆ ಆನ್ ಲೈನ್ ನಲ್ಲಿ ನಮೂನೆಗಳನ್ನು ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
2021-22 ನೇ ಸಾಲಿನ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರಥಮ ಬಾರಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮತದಾರರು ಹಾಗೂ 02-01-2002 ರಿಂದ 01-01-2003 ರಿಂದ ಜನನವಾಗಿರುವವರು ಅರ್ಜಿ ನಮೂನೆ-6 ಹಾಗೂ ವಯಸ್ಸಿನ ದೃಢೀಕರಣ ನೀಡಬೇಕು ಮತ್ತು ವಿಳಾಸ ದೃಢೀಕರಣಕ್ಕಾಗಿ ಜನನ ಪ್ರಮಾಣಪತ್ರ, 10ನೇ ತರಗತಿ ಅಂಕಪಟ್ಟಿ, ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳಲ್ಲಿ ಯಾವುದಾರು ಒಂದು ದಾಖಲೆ ನೀಡಬೆಕು. ಜೊತೆಗೆ ಎರಡು ಭಾವಚಿತ್ರಗಳನ್ನು ಸಲ್ಲಿಸಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ವಿಶೇಷ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಯಾವುದಕ್ಕೆ ಯಾವ ನಮೂನೆ ಅರ್ಜಿ ಸಲ್ಲಿಸಬೇಕು?
ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಿದ್ದರೆ ಅರ್ಜಿ ನಮೂನೆ-8, ಒಂದು ವಿಧಾನಸಭಾ ಕ್ಷೇತ್ರದ ಮನೆಯಿಂದ ಬೇರೆಡೆ ಸ್ಥಳಾಂತರವಾಗಿದ್ದರೆ ನಮೂನೆ-8ಎ, ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದರೆ ನಮೂನೆ-7, ಹೊಸದಾಗಿ ಸ್ಥಳಾಂತರಗೊಂಡ ಪ್ರದೇಶದಲ್ಲಿ ನೋಂದಾಯಿಸಲು ಅರ್ಜಿ ನಮೂನೆ-6, ತಮ್ಮ ಕುಟುಂಬ ಸದಸ್ಯರು ಮರಣವಾಗಿದ್ದಲ್ಲಿ ಅವರ ಹೆಸರು ತೆಗೆದು ಹಾಕಲು ನಮೂನೆ-7 ಮತ್ತು ಅದರೊಂದಿಗೆ ಮರಣ ಪ್ರಮಾಣಪತ್ರ ನೀಡಬಹುದು ಎಂದು ಅವರು ಹೇಳಿದ್ದಾರೆ.
ಬಿಬಿಎಂಪಿಯ ಮುಂಬರುವ ಚುನಾವಣೆಗೆ ಇದೇ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಬಳಸಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಪಡೆಯಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ, ಇಲ್ಲವಾ ಅಂತ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪರಿಶೀಲಿಸಬೇಕಿದೆ. ಪಾಲಿಕೆ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ನೀಡುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಒಂದೊಮ್ಮೆ ಚುನಾವಣೆ ನಡೆದರೆ ಅದಿಕ್ಕೆ ಸಿದ್ಧರಾಗಿದ್ದೇವೆ ಎಂದು ಗೌರವಗುಪ್ತ ತಿಳಿಸಿದ್ದಾರೆ.
ಅನಧಿಕೃತವಾಗಿ ಪುತ್ಥಳಿ ನಿರ್ಮಾಣ ತೆರವು ಸಂಬಂಧ ಉಚ್ಛನ್ಯಾಯಾಲಯ ನೀಡುವ ತೀರ್ಪಿನಂತೆ ಕ್ರಮ ಕೈಗೊಳ್ಳುತ್ತೇವೆ. ದಿವಂಗತ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣದ ಬಗ್ಗೆ ಅಧಿಕೃತವಾಗಿ ಕಾನೂನಿನ ಅವಕಾಶ ನೋಡಿಕೊಂಡು ರಾಜ್ಯ ಸರ್ಕಾರ ತೀರ್ಮಾನದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ನ.8ರಿಂದ ಅಂಗನವಾಡಿ, ಪ್ರಿ ಪ್ರೈಮರಿ ಶಾಲೆಗಳು ಆರಂಭಕ್ಕೆ ಸೂಕ್ತ ಕ್ರಮ :
ನ.8 ರಿಂದ ಅಂಗನವಾಡಿ, ಪ್ರಿ ಪ್ರೈಮರಿ ಶಾಲೆಗಳು ಆರಂಭವಾಗುತ್ತಿದೆ. ಸರ್ಕಾರದ ಕೆಲ ನಿಯಮಾವಳಿಗಳನ್ನು ನೀಡಿದೆ. ಅದೇ ನಿಯಮಗಳನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲನೆ ಮಾಡಿ ಈ ಅಂಗನವಾಡಿ, ಪ್ರೀ ಪ್ರೈಮರಿ ಶಾಲೆಗಳನ್ನು ಆರಂಭಮಾಡುತ್ತೇವೆ. ಅಲ್ಲದೆ ಮಕ್ಕಳ ಸುರಕ್ಷತೆ ಆದ್ಯ ಗಮನಹರಿಸುತ್ತೇವೆ ಎಂದರು.
ಕೋವಿಡ್ ಡೆತ್ ಆಡಿಟ್ ರಿಪೋರ್ಟ್ ಬಗ್ಗೆ ಆಯುಕ್ತರ ಹಾರಿಕೆ ಉತ್ತರ :
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಕೋವಿಡ್ ಸೋಂಕು ಹರಡುವಿಕೆ, ಕೋವಿಡ್ ರೂಪಾಂತರ ಕುರಿತಂತೆ ಕೊಳಚೆ ನೀರಿನ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪಾಲಿಕೆ ಆರೋಗ್ಯ ಇಲಾಖೆಯಿಂದ ಕೋವಿಡ್ ಪೀಡಿತರಿಂದ ರಕ್ತ ಮಾದರಿ ಪಡೆದು ಕೋವಿಡ್ ಜಿನೊಮಿಕ್ ಸೀಕ್ವೆನ್ಸ್ ಪರೀಕ್ಷೆ ಮಾಡಲಾಗುತ್ತಿದೆ ಎಂದ ಚೀಫ್ ಕಮಿಷನರ್ ಗೌರವ ಗುಪ್ತಾ, ಕಳೆದ ಒಂದೂವರೆ ವರ್ಷದಲ್ಲಿ ನಗರದಲ್ಲಿ ಕೋವಿಡ್ ಸೋಂಕು ಮರಣ ಲೆಕ್ಕಪರಿಶೋಧನೆ ಸಂಬಂಧ ವರದಿಯನ್ನು ಪ್ರಕಟಿಸಲ್ಲ ಯಾಕೆ ಎಂಬ ಪ್ರಶ್ನೆಗೆ ಸೂಕ್ತ ರೀತಿ ಉತ್ತರ ನೀಡಲಿಲ್ಲ.
ನಗರದಲ್ಲಿ ಸದ್ಯ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಬೆಂಗಳೂರಿನ ಮಧ್ಯಭಾಗದಲ್ಲಿ ರಾಜಕಾಲುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಎಲ್ಲೆಲ್ಲಿ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸ್ಥಳಗಳಲ್ಲಿ ಸಮಸ್ಯೆ ನಿವಾರಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಸೂಕ್ಷ್ಮ ಪ್ರದೇಶದಲ್ಲಿ ಆದ್ಯತೆ ಮೇರೆಗೆ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಜಲಮಂಡಳಿ ಅಧಿಕಾರಿಗಳು ಕಚೇರಿಯಲ್ಲಿ ಕೂತು ಸಮಸ್ಯೆ ಬಗೆಹರಿಸಲಾಗದು :
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ
ಜಲಮಂಡಳಿ ಅಧಿಕಾರಿಗಳು ಕಚೇರಿಯಲ್ಲಿಯೇ ಕೂತು ಕೆಲಸ ಮಾಡಿದರೆ ಆಗದು. ನಮ್ಮಂತೆ ಅವರೂ ರಸ್ತೆಗಿಳಿದು ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
ಜಲಮಂಡಳಿ, ಬಿಬಿಎಂಪಿ ಸಹಯೋಗದೊಂದಿಗೆ ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಕೆಲಸ ಮಾಡಬೇಕಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಚಾರದ ಬಗ್ಗೆ
ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.