ಬೆಂಗಳೂರು, (www.bengaluruwire.com) :
ಬೆಂಗಳೂರು-ಕನಕಪುರ ರಸ್ತೆಯಲ್ಲಿರುವ ಹಾರೋಹಳ್ಳಿ ಬಳಿಯ ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ನಲ್ಲಿ ಇಂದಿನಿಂದ ನ.8ರ ತನಕ ಪಿರಮಿಡ್ ಮೆಡಿಟೇಶನ್ ಮ್ಯೂಸಿಕ್ ಅಕಾಡೆಮಿ ವತಿಯಿಂದ ನಾಲ್ಕುದಿನಗಳ ಕಾಲ “ಧ್ಯಾನ ಸಂಗೀತ ಹಬ್ಬ” ಆರಂಭವಾಗಿದೆ.
4 ದಿನಗಳ ಈ ಸಂಗೀತ ಉತ್ಸವವು ಪ್ರತಿದಿನ ಸಂಗೀತ ಧ್ಯಾನದೊಂದಿಗೆ ಪ್ರಾರಂಭವಾಗಲಿದ್ದು, ಖ್ಯಾತ ಸಂಗೀತಗಾರರಾದ ಕಲೈಮಾಮಣಿ ಪರೂರ್ ಎಂ.ಎ. ಕೃಷ್ಣ ಸ್ವಾಮಿ, ಪ್ರೊ ಟಿ.ಎಸ್. ಸತ್ಯವತಿ, ಕರ್ನಾಟಕ ಕಲಾಶ್ರೀ ಅನೂರ್ ಅನಂತಕೃಷ್ಣ ಶರ್ಮಾ ಅವರ ಸಂಗೀತ ಕಚೇರಿಗಳು ನಡೆಯಲಿವೆ.
ವಿದ್ವಾನ್ ವಿನಯ್ ಶರ್ಮ, ಕಾಂಚನ ಸಹೋದರಿಯರು, ವಿದುಷಿ ಶ್ರೀ ರಂಜನಿ ಮತ್ತು ವಿದುಷಿ ಶ್ರುತಿ ರಂಜನಿ, ಪಂಡಿತ್ ಸಿದ್ದಾರ್ಥ್ ಬೆಳ್ಮಣ್ಣು, ಪಂಡಿತ್ ವಿಪುಲ್ ರಿಕಿ ಮತ್ತು ಪಂಡಿತ್ ಕ್ಯುಸಾಯಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಿರಮಿಡ್ ಮೆಡಿಟೇಶನ್ ಮ್ಯೂಸಿಕ್ ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಧ್ಯಾನ ಸಂಗೀತಹಬ್ಬದ ವಿಶೇಷ :
“ಅಖಂಡ ಧ್ಯಾನ” (ತಡೆರಹಿತ/ ನಿರಂತರ ಧ್ಯಾನ) ಎಂಬುದು ಸುಮಧುರ ಶಾಸ್ತ್ರೀಯ ಸಂಗೀತ' ಮತ್ತು
ಧ್ಯಾನ’ ಇವುಗಳ ಅತ್ಯುತ್ತಮ ಸಂಗಮವಾಗಿದೆ. ಅಖಂಡ ಧ್ಯಾನ ಕಾರ್ಯಕ್ರಮಗಳಲ್ಲಿ ಬ್ರಹ್ಮರ್ಷಿ ಪಿತಾಮಹ ಡಾ.ಸುಭಾಷ್ ಪತ್ರೀಜಿಯವರ ನೇತೃತ್ವದಲ್ಲಿ ನುಡಿಸಲ್ಪಡುತ್ತಿರುವ ವಾದ್ಯಸಂಗೀತದ ಮಾಧುರ್ಯವು ಆಳವಾದ ಧ್ಯಾನಕ್ಕೆ ಪ್ರೇರಕ ಶಕ್ತಿಯಾಗಿದೆ.
ಮಾನವನ ಭಾವನೆಗಳು ಗಟ್ಟಿಗೊಳ್ಳುವಂತೆ ಆತನ ಮಾನಸಿಕತೆ ಮತ್ತಷ್ಟು ಸದೃಢಗೊಳ್ಳುವಂತೆ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡುವಂತೆ ಶಾಸ್ತ್ರೀಯ ಸಂಗೀತವನ್ನು ಇಲ್ಲಿ ವಿನ್ಯಾಸಗೊಳಿಸಲಾಗಿದೆ. ಶಾಸ್ತ್ರೀಯ ಸಂಗೀತದಲ್ಲಿನ ಶಬ್ದಸ್ತರಗಳು, ಸ್ವರಗಳ ಏರಿಳಿತಗಳು, ಸ್ಪಷ್ಟೋಚ್ಛಾರಗಳು, ಸೂಕ್ಷ್ಮದನಿಗಳು ಮತ್ತು ಮಧುರವಾದ ಲಯ ಇವುಗಳು ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತದೆ.
ಆಲಿಸಿದ ಕ್ಷಣಮಾತ್ರದಲ್ಲಿ ಅವರು ತಮ್ಮನ್ನು ತಾವು ಮರೆಯುವಂತೆ ಮಾಡುತ್ತದೆ. ಖಿನ್ನತೆ ಮತ್ತು ಒತ್ತಡಗಳಿಂದ ಹೊರಬರಲು ಅಗತ್ಯವಿರುವ ಎಲ್ಲವನ್ನೂ ಸಹ ಈ ಶಾಸ್ತ್ರೀಯ ವಾದ್ಯಸಂಗೀತವು ತನ್ನ ಒಳಗೆ ಇರಿಸಿಕೊಂಡಿದೆ. ನಾವು ಖಿನ್ನತೆ ಅಥವಾ ಸಂಕಟದಲ್ಲಿ ಸಿಲುಕುವುದರಿಂದ ನಮ್ಮ ಶಕ್ತಿಚೈತನ್ಯ ಕೇಂದ್ರಗಳಲ್ಲಿ (ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ `ಚಕ್ರಗಳು’ ಎಂದು ಹೇಳಲಾಗಿದೆ) ನಕಾರಾತ್ಮಕ ಶಕ್ತಿ ನೆಲೆಗೊಳ್ಳುತ್ತದೆ. ಶಾಸ್ತ್ರೀಯ ಸಂಗೀತವು ಇಂತಹ ಅಡೆತಡೆಗಳನ್ನು ನಿವಾರಿಸಿ ಧನಾತ್ಮಕ ಶಕ್ತಿಚೈತನ್ಯಗಳನ್ನು ವೃದ್ಧಿಸಲು ಸಹಕಾರಿಯಾಗಿದೆ.
ಸಂಗೀತವು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ, ಉಸಿರಾಟವನ್ನು ನಿಧಾನಗೊಳಿಸುತ್ತದೆ ಮತ್ತು ಧ್ಯಾನವು ಸಂಭವಿಸುವುದರಲ್ಲಿ ಸಹಾಯಕವಾಗಿದೆ.
ಧ್ಯಾನಾಸ್ಥಕರಿಗೆ ಸಂಗೀತ ಚಿಕಿತ್ಸೆ ಮತ್ತು ಮನರಂಜನಾ ಅಂಶದ ವಿಶಿಷ್ಟ ಶೈಲಿಯ ಅಖಂಡ ಧ್ಯಾನ :
ದಿವಂಗತ ಪದ್ಮಭೂಷಣ ಡಾ.ಶ್ರೀಪಾದ ಪಿನಾಕಪಾಣಿ ಅವರ ಶಿಷ್ಯರಾಗಿ ಹಲವಾರು ವರ್ಷಗಳ ಕಠಿಣ ಅಭ್ಯಾಸದಿಂದ, ಪತ್ರೀಜಿಯವರು ಸಂಗೀತದ ಪ್ರತಿಯೊಂದು ಅಂಶ ಮತ್ತು ಗುಣಲಕ್ಷಣಗಳನ್ನು ಗ್ರಹಿಸಬಲ್ಲವರಾಗಿದ್ದಾರೆ. ಧ್ಯಾನಿಗಳಿಗೆ ಸಂಗೀತದ ಚಿಕಿತ್ಸಕ ಮತ್ತು ಮನರಂಜನಾ ಅಂಶಗಳೆರಡನ್ನೂ ಪೂರೈಸಲು ಪತ್ರೀಜಿ ಒಂದು ವಿಶಿಷ್ಟ ಶೈಲಿಯನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಪ್ರತಿ ಅಖಂಡ ಧ್ಯಾನ ಕಾರ್ಯಕ್ರಮದಲ್ಲಿ ಇದು ಎಲ್ಲರ ಅನುಭವಕ್ಕೆ ಬಂದಿದೆ.
ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಉದ್ದೇಶ :
ಆಧ್ಯಾತ್ಮಿಕ ಸತ್ಯಗಳು ಮತ್ತು ಆಧ್ಯಾತ್ಮಿಕ ವಿಜ್ಞಾನದ ಮೂಲಭೂತ ಅಂಶಗಳನ್ನು ಜಗತ್ತಿನ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಬ್ರಹ್ಮರ್ಷಿ ಪಿತಾಮಹ ಡಾ.ಸುಭಾಷ್ ಪತ್ರೀಜಿ, ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಅನ್ನು ಸ್ಥಾಪಿಸಿದ್ದಾರೆ.
ನಾಲ್ಕು ಸರಳ ಸೂತ್ರಗಳ ಮೂಲಕ ನಮ್ಮೊಳಗಿನ ಅಸ್ತಿತ್ವವಾಗಿರುವ ದೇವರನ್ನು ನಾವೇ ಅರಿತುಕೊಳ್ಳುವುದು ಪಿರಮಿಡ್ ಆಧ್ಯಾತ್ಮಿಕ ಧ್ಯಾನಾಂದೋಲನದ ಗುರಿಯಾಗಿದೆ. ಇದರಲ್ಲಿ ಪ್ರಮುಖವಾದುದು ಎಂದರೆ, ಉಸಿರಾಟವನ್ನು ಗಮನಿಸುವ ಒಂದು ಸರಳ ಧ್ಯಾನ ವಿಧಾನ'. ಅದೇ
ಅನಾಪಾನಸತಿ’ ಧ್ಯಾನ ವಿಧಾನ. ಇದು ಮೂಲತಃ ಗೌತಮ ಬುದ್ಧರು ತಾವೇ ಆವಿಷ್ಕರಿಸಿ ಅಳವಡಿಸಿಕೊಂಡ ಧ್ಯಾನ ವಿಧಾನ.
ಇಲ್ಲಿ ವ್ಯಕ್ತಿಯೊಬ್ಬ ತನ್ನ ಉಸಿರಾಟವನ್ನು ತಾನೇ ನಿರಂತರವಾಗಿ ಗಮನಿಸುತ್ತಾ ಇರುವುದು, ಅಷ್ಟೇ. ಅಂದರೆ, ಉಸಿರು ಒಳಬರುವುದು ಹಾಗೂ ಹೊರ ಹೋಗುವುದನ್ನು ನಿರಂತರವಾಗಿ ಗಮನಿಸುತ್ತಾ ಇರುವುದೇ `ಆನಾಪಾನಸತಿ’ ಧ್ಯಾನ.
ಹಿರಿಯ ಪತ್ರಕರ್ತ ಡಾ.ಈಶ್ವರ ದೈತೋಟಾಗೆ ಸನ್ಮಾನ :
ಹಿರಿಯ ಪತ್ರಕರ್ತ ಡಾ.ಈಶ್ವರ ದೈತೋಟ, ಹಿರಿಯ ಕಲಾ ವಿಮರ್ಶಕ ಡಾ.ಎಂ ಸೂರ್ಯಪ್ರಸಾದ್ ಮತ್ತು ಹಿರಿಯ ಸಂಗೀತಗಾರರಾದ ಸಂಗೀತ ವಿದ್ವಾನ್ ಡಿ.ವಿ. ನಾಗರಾಜ್, ಸಂಗೀತ ವಿದ್ವಾನ್ ಎ.ಪಿ. ರಾವ್, ಸಂಗೀತ ವಿದ್ವಾನ್ ಎಸ್.ಕೆ.ಪದ್ಮನಾಭ ಆಚಾರ್ಯ, ಮೃದಂಗ ವಿದ್ವಾನ್ ಆರ್.ಸತ್ಯಕುಮಾರ್ ಇವರನ್ನು ಸನ್ಮಾನಿಸಲಾಗುತ್ತಿದೆ.
ಉತ್ಸವದ ಪ್ರತಿ ದಿನವು ಪ್ರಸಿದ್ಧ ಕಲಾವಿದರಿಂದ ಭವ್ಯವಾದ ಸಂಗೀತ ಕಚೇರಿ ನಡೆಯಲಿದೆ ಮತ್ತು ಅವರಿಗೆ ಕಲಾಭಿನಂದನಾ ಸನ್ಮಾನವನ್ನು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.