ಬೆಂಗಳೂರು, (www.bengaluruwire.com) : ದೇಶಾದ್ಯಂತ ಪಟಾಕಿ ನಿಷೇಧ ಕುರಿತು ಚರ್ಚೆ ತಾರಕ್ಕೆ ಏರಿರುವಾಗಲೇ ಇಶಾ ಫೌಂಡೇಷನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ದೀಪಾವಳಿಯಂದು ಪಟಾಕಿ ನಿಷೇಧದ ವಿರುದ್ಧ ದನಿ ಎತ್ತಿದ್ದಾರೆ. ಹಾಗೂ ಅವುಗಳ ಬದಲಿಗೆ ಸರಳ ಪರ್ಯಾಯ ದಾರಿಯನ್ನು ತಿಳಿಸಿದ್ದಾರೆ.
ಬುಧವಾರ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಆಧ್ಯಾತ್ಮಕ ಚಿಂತಕ ಸದ್ಗುರು ಜಗ್ಗಿ ವಾಸುದೇವ್, “ಪಟಾಕಿಯು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆಂಬ ಕಾಳಜಿಗಾಗಿ, ಪಟಾಕಿ ಹೊಡೆಯುವುದರಿಂದ ಮಕ್ಕಳಿಗೆ ಆಗುವ ಖುಷಿಯನ್ನು ನಿಯಂತ್ರಿಸುವುದಲ್ಲ. ಮಕ್ಕಳಿಗಾಗಿ ಮೂರು ದಿನ ಕಾರು ಬಿಟ್ಟು ಕೆಲಸಕ್ಕೆ ನಡೆದುಕೊಂಡು ಹೋಗಿ. ದೊಡ್ಡವರು ಪಟಾಕಿ ಹೊಡೆಯೋದನ್ನು ತ್ಯಾಗ ಮಾಡಲಿ. ಮಕ್ಕಳು ಪಟಾಕಿ ಹೊಡೆದು ಸಂತೋಷಪಡಲಿ” ಎಂದು 45 ಸೆಕೆಂಡುಗಳ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರವಷ್ಟೆ, ಸುಪ್ರೀಂಕೋರ್ಟಿನ ವಿಶೇಷ ನ್ಯಾಯಪೀಠ, ಕೋಲ್ಕತಾ ಹೈಕೋರ್ಟ್ ಸಂಪೂರ್ಣವಾಗಿ ಪಟಾಕಿ ನಿಷೇಧಿಸುವ ಆದೇಶವನ್ನು ರದ್ದುಗೊಳಿಸಿದ್ದು, ಇದೊಂದು ತೀವ್ರವಾದ ಕ್ರಮವಾಗಿದೆ. ದೇಶಾದ್ಯಂತ ಪಟಾಕಿ ಸಂಪೂರ್ಣವಾಗಿ ನಿಷೇಧಿ ಇಲ್ಲದಿರುವಾಗ, ಪಶ್ಚಿಮ ಬಂಗಾಳ ಇದಕ್ಕೆ ಹೊರತಾಗಲು ಸಾಧ್ಯವಿಲ್ಲ. ಅಲ್ಲದೆ ವಿಷಕಾರಿ ರಾಸಾಯನಿಕ ಬಳಸಿ ಪಟಾಕಿ ತಯಾರಿಸುವುದನ್ನು ನಿಯಂತ್ರಿಸುವಲ್ಲಿ ನಮ್ಮ ಕಾರ್ಯವಿಧಾನವನ್ನು ಬಲಪಡಿಸಬೇಕು ” ಎಂದು ಅಭಿಪ್ರಾಯಪಟ್ಟಿತ್ತು.
ದೀಪಾವಳಿ ಹಬ್ಬ ಶುಭ ಸಂದರ್ಭದಲ್ಲಿ ಸದ್ಗುರು ದೇಶದ ಜನತೆಗೆ ಶುಭಾಶಯ ಕೋರಿದ್ದು, ” ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಎಲ್ಲರ ಪ್ರಜ್ಙೆ ಹೆಚ್ಚಾಗಿ ಎಲ್ಲರಲ್ಲೂ ಕತ್ತಲೆ ಆವರಿಸಿತ್ತು. ಇದೀಗ ದೀಪಾವಳಿಯ ಶುಭ ಸಂದರ್ಭದಲ್ಲಿ ಸಂತೋಷ ಮತ್ತು ಪ್ರೀತಿಯ ಬೆಳಕನ್ನು ಹಚ್ಚೋಣ. ಆ ಮೂಲಕ ಮಾನವತೆಯೆಂಬ ಬೆಳಕನ್ನು ಅತ್ಯುನ್ನತ ವೈಭವದ ಮಟ್ಟಕ್ಕೆ ಕೊಂಡೊಯ್ಯೋಣ. ಪ್ರೀತಿ ಮತ್ತು ಆಶೀರ್ವಾದದೊಂದಿಗೆ” ಎಂಬ ಸಂದೇಶ ನೀಡಿದ್ದಾರೆ.
ಪಟಾಕಿ ನಿಷೇಧ ಕುರಿತಂತೆ ಸದ್ಗುರು ಜಗ್ಗಿ ವಾಸುದೇವ್ ಮಾಡಿದ ಟ್ವಿಟರ್ ಗೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧ ಹೇಳಿಕೆಗಳು ವ್ಯಕ್ತವಾಗಿದೆ.