ಬೆಂಗಳೂರು, (www.bengaluruwire.com) : ವರನಟ ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ಇಡೀ ಕರುನಾಡನ್ನೇ ಅಷ್ಟೇ ಏಕೆ ದೇಶವಿದೇಶಗಳ ಸಾವಿರಾರು ಕನ್ನಡಿಗರು, ಅಭಿಮಾನಿಗಳಿಗೆ ಶಾಕ್ ನೀಡಿದ್ದಂತೂ ಸತ್ಯ. ಗೂಗಲ್ ಸರ್ಚ್ ಎಂಜಿನ್ ನಲ್ಲಿನ ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರಿನಲ್ಲಿ ಕೋಟ್ಯಾಂತರ ನೆಟ್ಟಿಗರು ತಮ್ಮ ನೆಚ್ಚಿನ ನಟನ ಕುರಿತಾಗಿ ಸರ್ಚ್ ಮಾಡಿದ್ದಾರೆ. ಭಾರತದಲ್ಲಿ ಅ.29ರಂದು ಕೇವಲ ಒಂದೇ ದಿನದಲ್ಲಿ ಟಾಪ್ -1 ಸರ್ಚ್ ನಲ್ಲಿ ಪುನೀತ್ ರಾಜ್ ಕುಮಾರ್ ವಿಷಯ ಸ್ಥಾನ ಪಡೆದಿತ್ತು.
ಅಂದರೆ ನೀವೇ ಲೆಕ್ಕಹಾಕಿ ಕರುನಾಡಿನ ಅಪ್ಪಟ ಯುವರತ್ನನ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಪಸರಿಸಿ ಇಡೀ ದೇಶದ ಜನರ ಮನಸ್ಸನ್ನು ಕಲಕಿರುವುದು ಇದರಿಂದ ಸಾಬೀತಾಗಿದೆ. 10 ಮಿಲಿಯನ್ ಗೂ ಹೆಚ್ಚಿನ ಜನರು (ಅಂದರೆ ಒಂದು ಕೋಟಿಗೂ ಹೆಚ್ಚಿನ ಜನರು) ಪುನೀತ್ ರಾಜ್ ಕುಮಾರ್ ಆರೋಗ್ಯದ ಬಗ್ಗೆ ಪ್ರಾರಂಭದಲ್ಲಿ ಆನಂತರ ಅವರ ಸಾವಿನ ಸುದ್ದಿ ವಿಷಯವಾಗಿ ಅಂದು ದೇಶದಲ್ಲಿ ಸರ್ಚ್ ಮಾಡಿರುವುದು ಗೂಗಲ್ ಟ್ರೆಂಡ್ಸ್ (Google trends seacrching) ಸರ್ಚಿಂಗ್ ನಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೆ ಅಮೆರಿಕ, ಬ್ರಿಟನ್, ಸಿಂಗಾಪುರ, ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಲ್ಲಿ ಸಾವಿರಾರು ಜನರು ಅ.29ರಂದು ಅಪ್ಪುವಿನ ಸುದ್ದಿಗಾಗಿ, ಮಾಹಿತಿಗಾಗಿ ಇಂಟರ್ ನೆಟ್ ನಲ್ಲಿ ಜಾಲಾಡಿದ್ದಾರೆ.
ಮತ್ತು ಅದೇ ದಿನ ಪುನಿತ್ ರಾಜ್ ಕುಮಾರ್ (Punith Rajkumar) ಹೆಸರಿನಲ್ಲಿ 2 ಲಕ್ಷಕ್ಕೂ ಮಿಕ್ಕ ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದು, ದೇಶದಲ್ಲಿ ಆ ದಿನ ವಿವಿಧ ವಿಷಯಗಳಲ್ಲಿ ಸರ್ಚ್ ಮಾಡಿದ ಟಾಪ್-20 ಟ್ರೆಂಡಿಂಗ್ ನಲ್ಲಿ 12ನೇ ಅತಿಹೆಚ್ಚು ಸರ್ಚ್ ಮಾಡಿದ ವಿಷಯವಾಗಿತ್ತು ಎಂಬುದು ಗೂಗಲ್ ಟ್ರೆಂಡ್ಸ್ ಸರ್ಚಿಂಗ್ ನಲ್ಲಿ ದಾಖಲಾಗಿದೆ. ಇನ್ನು ಅಪ್ಪುವಿನ ಪಾರ್ಥೀವ ಶರೀರಕ್ಕೆ ರಾಜ್ಯ ಸರ್ಕಾರದಿಂದ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡುವ ದಿನವಾದ ಅಕ್ಟೋಬರ್ 31ರಂದು ದೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸರ್ಚ್ ಗಳು ಪುನೀತ್ ರಾಜ್ ಕುಮಾರ್ ಆಕ್ಟರ್ (Puneeth Rajkumar Actor) ಹೆಸರಿನಲ್ಲಿ ಹುಡುಕಾಡಲ್ಪಟ್ಟಿತ್ತು. ಇಲ್ಲೂ ಸಹ ಆ ದಿನ ಟಾಪ್-19 ಟ್ರೆಂಡಿಂಗ್ ವಿಷಯಗಳಲ್ಲಿ ಅತ್ಯಧಿಕ ಸರ್ಚ್ ಮಾಡಿದ 12ನೇ ವಿಷಯವಾಗಿತ್ತು.
ಟಾಪ್ ಟ್ರೆಂಡಿಂಗ್ ಸರ್ಚ್ ಮಾಡಿದ ದೇಶಗಳ ವಿವರ :
ಭಾರತ ಹೊರತುಪಡಿಸಿದರೆ, ಅಮೆರಿಕದಲ್ಲಿ (USA) ಅ.29ರಂದು 2 ಲಕ್ಷಕ್ಕೂ ಹೆಚ್ಚು ಜನರು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸರ್ಚ್ ಮಾಡಿದ್ದು ಆ ದೇಶದಲ್ಲಿನ ಟಾಪ್-19 ಸರ್ಚ್ ಮಾಡಿದ ಟ್ರೆಂಡಿಂಗ್ ವಿಷಯದಲ್ಲಿ ಟಾಪ್-5 ಆಗಿರುವುದು ದಾಖಲಾಗಿದೆ. ಬ್ರಿಟನ್ (United Kingdom) ನಲ್ಲಿ ಅ.29ರಂದು 50 ಸಾವಿರಕ್ಕೂ ಅಧಿಕ ಜನರು ಪುನೀತ್ ರಾಜಕುಮಾರ್ ವಿಷಯವಾಗಿ ಸರ್ಚ್ ಮಾಡಿದ್ದು, ಟಾಪ್- 20 ಟ್ರೆಂಡಿಂಗ್ ವಿಷಯದಲ್ಲಿ ಪುನೀತ್ ವಿಷಯವಾಗಿ 9ನೇ ಸ್ಥಾನ ಪಡೆದಿತ್ತು. ಇದೇ ರೀತಿ ಆಸ್ಟ್ರೇಲಿಯಾದ ಟಾಪ್-20 ವಿಷಯದಲ್ಲಿ ಟಾಪ್-4 ಸ್ಥಾನಪಡೆದಿತ್ತು. ಇಲ್ಲೂ ಸಹ 50 ಸಾವಿರಕ್ಕೂ ಹೆಚ್ಚು ಜನರು ಆ ದಿನ ಸರ್ಚ್ ಮಾಡಿದ್ದಾರೆ. ಸಿಂಗಾಪುರದಲ್ಲಿ 20 ಸಾವಿರ ಜನರು ಪುನೀತ್ ರಾಜ್ ಕುಮಾರ್ ಕುರಿತಾಗಿ ಸರ್ಚ್ ಮಾಡಿದ್ದು, ಅಲ್ಲಿನ ಟಾಪ್-12 ಟ್ರೆಂಡಿಂಗ್ ವಿಷಯದಲ್ಲಿ 2ನೇ ವಿಷಯವಾಗಿ ಸ್ಥಾನ ಪಡೆದಿತ್ತು.
18 ದೇಶಗಳಲ್ಲಿ ಅಪ್ಪುವಿನ ವಿಷಯವಾಗಿ ಅತ್ಯಧಿಕವಾಗಿ ಸರ್ಚ್ ಮಾಡಿದ್ದರು :
ವಿಶ್ವಾದ್ಯಂತ ಜನರ ಗಮನ ಸೆಳೆದ ವಿಷಯಗಳಲ್ಲಿ ಅ.29ರಂದು 18 ದೇಶಗಳಲ್ಲಿ ವರನಟನ ಪುತ್ರನ ವಿಷಯದ ಸುದ್ದಿಯ ಹುಡುಕಾಟ ಅತ್ಯಧಿಕವಾಗಿತ್ತು. 100ರ ವಾಲ್ಯೂಮ್ ಗಳಲ್ಲಿ ಪುನೀತ್ ರಾಜಕುಮಾರ್ ವಿಷಯವಾಗಿ ಅಂತರ್ಜಾಲದಲ್ಲಿ ಆಸಕ್ತಿ ತೋರಿ ಸಮಯ ಕಳೆದ (Intrest over time) ದೇಶಗಳ ಪೈಕಿ ಮೊದಲ ಸ್ಥಾನದಲ್ಲಿ ಭಾರತವಿದ್ದರೆ, ನಂತರದ ಸ್ಥಾನ ಸೌದಿ ಅರೇಬಿಯಾ (United Arab Emirates), ನೇಪಾಳ (Nepal), ಕಥಾರ್ (Qatar), ಓಮನ್ (Oman), ಶ್ರೀಲಂಕಾ (Sri lanka), ಕುವೈತ್ (Kuwait), ಸಿಂಗಾಪುರ (Singapore), ಬಾಂಗ್ಲಾದೇಶ (Bangladesh), ಪಾಕಿಸ್ತಾನ (Pakistan) ಟಾಪ್-10 ರಾಷ್ಟ್ರಗಳಲ್ಲಿ ಸ್ಥಾನಪಡೆದಿದ್ದವು.
ಇಂಡಿಯಾ ಇನ್ ಮಂಡ್ಯಾ :
ಅಕ್ಟೋಬರ್ 26ರಿಂದ ನವೆಂಬರ್ 1ರ ತನಕದ 7 ದಿನಗಳ ಅವಧಿಯ ಪೈಕಿ ನಟ ಪುನೀತ್ ರಾಜಕುಮಾರ್ ಆಸ್ಪತ್ರೆಗೆ ದಾಖಲಾಗಿ ಅವರು ವಿಧಿವಶರಾದ ಸುದ್ದಿ ವಿಶ್ವಾದ್ಯಂತ ಪಸರಿಸಿತ್ತು. ಇದೇ ಸಂದರ್ಭದಲ್ಲಿ ವಿಶ್ವದ ಟಾಪ್-19 ನಗರಗಳ ಪೈಕಿ ಮಂಡ್ಯದ ಜನತೆ ಅತ್ಯಧಿಕವಾಗಿ ಗೂಗಲ್ ಸರ್ಚ್ ನಲ್ಲಿ ಪುನೀತ್ ರಾಜ್ ಕುಮಾರ್ ಆರೋಗ್ಯ, ಅವರ ನಿಧನದ ಸುದ್ದಿ, ಪುನೀತ್ ಕುಟುಂಬ ಮತ್ತಿತರ ವಿಷಯವಾಗಿ ಹುಡುಕಾಟ ನಡೆಸಿದ್ದರು. ಟಾಪ್-19 ಹುಡುಕಾಟ ನಡೆಸಿದ 19 ನಗರಗಳು ಕರ್ನಾಟಕದಲ್ಲಿನ ನಗರಗಳೇ ಆಗಿವೆ. ಟಾಪ್-1 ಮಂಡ್ಯವಾದರೆ, ನಂತರದಲ್ಲಿ ತುಮಕೂರು, ಹಾಸನ, ಶಿವಮೊಗ್ಗ, ಉಡುಪಿ, ಹೊಸಪೇಟೆ, ಬೆಂಗಳೂರು, ದಾವಣಗೆರೆ, ಭೈರಪ್ಪನಹಳ್ಳಿ, ಹುಬ್ಬಳ್ಳಿ- ಧಾರವಾಡಗಳು ಕ್ರಮವಾಗಿ ಟಾಪ್-10ರಲ್ಲಿ ಸ್ಥಾನಪಡೆದಿವೆ.
ಅತಿ ಚಿಕ್ಕವಯಸ್ಸಿನಲ್ಲೇ ಕಾಣದಂತೆ ಮಾಯವಾಗಿ ಅಪಾರ ಅಭಿಮಾನಿಗಳನ್ನು ತೊರೆದು ಇಹಲೋಕ ತ್ಯಜಿಸಿದ ಎಲ್ಲರ ಪ್ರೀತಿಯ ಅಪ್ಪು ಅಭಿಮಾನಿಗಳು, ತನ್ನನ್ನು ಪ್ರೀತಿಸಿದ ಮನಸ್ಸುಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಇದಕ್ಕೆ ಗೂಗಲ್ ಟ್ರೆಂಡ್ ಸರ್ಚ್ ಎಂಜಿನ್ ಒಂದು ಸಾಕ್ಷಿಯಷ್ಟೇ.