ನವದೆಹಲಿ, (www.bengaluruwire.com) : ಅಕ್ಟೋಬರ್ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ ಆದಾಯ (GOODS AND SERVICE TAX INCOME) 1.30 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಮೂಲಕ 2017ರಲ್ಲಿ ಜಿಎಸ್ ಟಿ ಅನುಷ್ಠಾನವಾದ ಬಳಿಕ ಎರಡನೆಯ ಬಾರಿ ಅತಿಹೆಚ್ಚು ಆದಾಯ ಸಂಗ್ರಹ ಏರಿಕೆಯಾದಂತಾಗಿದೆ. ಇದು ಕೋವಿಡ್-19 ಸಾಂಕ್ರಾಮಿಕ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನಲೆಯಲ್ಲಿ ಆರ್ಥಿಕ ಚೇತರಿಕೆಯಾಗುತ್ತಿರುವುದರ ಲಕ್ಷಣ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಎಸ್ ಟಿ (GST) ನೂತನ ತೆರಿಗೆ ಪದ್ಧತಿ ಜಾರಿಗೆಯಾದ ನಂತರ ಇದೇ ವರ್ಷದ ಏಪ್ರಿಲ್ ನಲ್ಲಿ 1.41 ಲಕ್ಷ ಕೋಟಿ ರೂ. ತೆರಿಗೆ ಆದಾಯ ಸಂಗ್ರಹವಾಗಿದ್ದೇ ಅತಿಹೆಚ್ಚು ಎನ್ನುತ್ತಿದೆ ಹಣಕಾಸು ಸಚಿವಾಲಯ. ಎರಡನೇ ಅಲೆಯ ನಂತರ ಪ್ರತಿ ತಿಂಗಳು ಸೃಜನೆಯಾಗುತ್ತಿರುವ ಇ-ವೇ ಬಿಲ್ ಗಳಲ್ಲಿನ ಪ್ರವೃತ್ತಿಯಿಂದ ಇದು ಸ್ಪಷ್ಟವಾಗಿದೆ. ಸೆಮಿ ಕಂಡಕ್ಟರ್ ಗಳ ಪೂರೈಕೆಯಲ್ಲಿ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಾಗಿರುತ್ತಿತ್ತು. 1 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಸರಣಿಯಲ್ಲಿ ನಾಲ್ಕನೆಯ ಬಾರಿ ಜಿಎಸ್ ಟಿ ತೆರಿಗೆ ಸಂಗ್ರಹ ದಾಖಲೆ ಬರೆದಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹ 1.17 ಲಕ್ಷ ಕೋಟಿ ರೂ. ಗಳಾಗಿತ್ತು.
ಅಕ್ಟೋಬರ್ 2021ರ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ ಟಿ ಆದಾಯವು 1,30,127 ಕೋಟಿ ರೂಗಳಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲಿನ (CGST) 23,861 ಕೋಟಿ ರೂ., ರಾಜ್ಯ ಸರ್ಕಾರಗಳ ಪಾಲಿನ (SGST) 30,421 ಕೋಟಿ ರೂ., ಐಜಿಎಸ್ ಟಿ (IGST) 67,361 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಲಾದ 32,998 ಕೋಟಿ ರೂ. ಸೇರಿದಂತೆ), ಉಪಕರ (CESS) 8,484 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಲಾದ 699 ಕೋಟಿ ರೂ. ಸೇರಿದಂತೆ) ಆಗಿದೆ.
ರಾಜ್ಯಗಳ ಪಾಲಿನ ಎಸ್ ಜಿಎಸ್ ಟಿ ಈತನಕ 52,815 ಕೋಟಿ ರೂ. ಪಾವತಿ :
ಕೇಂದ್ರ ಸರ್ಕಾರದ ಐಜಿಎಸ್ ಟಿಯು ಈ ತನಕ 27,310 ಕೋಟಿ ರೂ. ಸಿಜಿಎಸ್ ಟಿ ಹಾಗೂ 22,394 ಕೋಟಿ ರೂ. ಎಸ್ ಜಿಎಸ್ ಟಿಯನ್ನು ಪಾವತಿಸಿದೆ. ಅಕ್ಟೋಬರ್ 2021ರ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿಗೆ 51,171 ಕೋಟಿ ರೂ. ಮತ್ತು ಎಸ್ ಜಿಎಸ್ ಟಿ ಗೆ 52,815 ಕೋಟಿ ರೂ. ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 2021ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್ ಟಿ ಆದಾಯಕ್ಕಿಂತ ಶೇ.24 ರಷ್ಟು ಹೆಚ್ಚಾಗಿದೆ ಮತ್ತು 2019-20 ಕ್ಕಿಂತ ಶೇ.36ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ.39ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯಕ್ಕಿಂತ ಶೇ.19 ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕರ್ನಾಟಕದ ಎಸ್ ಜಿಎಸ್ ಟಿ ಆದಾಯ ಶೇ.18ರಷ್ಟು ಏರಿಕೆ :
ಸರಕು ಮತ್ತು ಸೇವಾ ತೆರಿಗೆಗಳಿಂದ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರುವ ರಾಜ್ಯಗಳ ಪಾಲಿನ ಆದಾಯವು ಕಳೆದ ವರ್ಷ 6,998 ಕೋಟಿ ರೂ. ಆಗಿದ್ದರೆ, ಈ ವರ್ಷದ ಅಕ್ಟೋಬರ್ ನಲ್ಲಿ 8,259 ಕೋಟಿ ರೂ. ಜಿಎಸ್ ಟಿ ತೆರಿಗೆ ಆದಾಯದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಆದಾಯ ವೃದ್ಧಿಯಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ಹೇಳಿದೆ.
ಆರ್ಥಿಕ ಚಟುವಟಿಕೆಗಳ ಚೇತರಿಕೆ ಸ್ಪಷ್ಟ ಸೂಚನೆ :
ಅಕ್ಟೋಬರ್ ತಿಂಗಳಲ್ಲಿ ಉತ್ಪತ್ತಿಯಾದ ಇ-ವೇ ಬಿಲ್ ಗಳ ಸಂಖ್ಯೆಯ ಹೆಚ್ಚಳದ ಪ್ರವೃತ್ತಿ ಮತ್ತು ಆರ್ಥಿಕ ಚಟುವಟಿಕೆಯಲ್ಲಿನ ಚೇತರಿಕೆಯಾಗುತ್ತಿರುವುದರ ಸ್ಪಷ್ಟ ಸೂಚನೆ ಇದಾಗಿದೆ. ರಾಜ್ಯ ಮತ್ತು ಕೇಂದ್ರ ತೆರಿಗೆ ಆಡಳಿತದ ಪ್ರಯತ್ನಗಳು ಆದಾಯ ಹೆಚ್ಚಳಕ್ಕೆ ಸಹಾಯ ಮಾಡಿದ್ದು, ಇದರ ಪರಿಣಾಮವಾಗಿ ಹಿಂದಿನ ತಿಂಗಳುಗಳಿಗಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ವೈಯಕ್ತಿಕ ತೆರಿಗೆ ವಂಚಕರ ವಿರುದ್ಧ ಕೈಗೊಂಡ ಕ್ರಮದ ಜೊತೆಗೆ, ಜಿಎಸ್ ಟಿ ಕೌನ್ಸಿಲ್ ಅನುಸರಿಸಿದ ಬಹುಹಂತದ ಕ್ರಮಗಳು ಈಗೀಗ ಫಲಿತಾಂಶ ನೀಡುತ್ತಿರುವುದು ಕಂಡು ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ಕಡೆ, ಎಸ್.ಎಂಎಸ್ ಮೂಲಕ ನಿಲ್ ಫೈಲಿಂಗ್ ನಂತಹ ಅನುಸರಣೆಯನ್ನು ಸುಲಭಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇದು ತ್ರೈಮಾಸಿಕ ರಿಟರ್ನ್ ಗಳ ಮಾಸಿಕ ಪಾವತಿ (QRMP) ವ್ಯವಸ್ಥೆ ಮತ್ತು ಆಟೋ- ಪಾಪ್ಯುಲೇಷನ್ ರಿಟರ್ನ್ ಗೆ ಅವಕಾಶ ಕಲ್ಪಿಸಿದೆ. ಕಳೆದ ಒಂದು ವರ್ಷದಲ್ಲಿ, ಜಿಎಸ್ಟಿಎನ್ ಬಳಕೆದಾರರ ಅನುಭವವನ್ನು ಸುಧಾರಿಸಲು ಸಿಸ್ಟಂ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.
ಜಿಎಸ್ ಟಿ ತೆರಿಗೆ ತಪ್ಪಿಸಿದರೆ ಕಾದಿದೆ ಆಪತ್ತು :
ಜಿಎಸ್ ಟಿ ತೆರಿಗೆ ಪದ್ಧತಿಯನ್ನು ಅನುಸರಿಸದೇ ಅಡ್ಡದಾರಿ ಹಿಡಿಯುವುದಕ್ಕೆ ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಜಿಎಸ್ ಟಿ ಮಂಡಳಿ ಕೈಗೊಂಡಿದೆ. ಉದಾಹರಣೆಗೆ ರಿಟರ್ನ್ಸ್ ಸಲ್ಲಿಸದ ಇ-ವೇ ಬಿಲ್ (E-WAY BILL) ಗಳನ್ನು ನಿರ್ಬಂಧಿಸುವುದು, ಸತತವಾಗಿ ಆರು ರಿಟರ್ನ್ಸ್ ಸಲ್ಲಿಸಲು ವಿಫಲವಾದ ತೆರಿಗೆದಾರರ ನೋಂದಣಿಯನ್ನು ಸಿಸ್ಟಮ್ ಆಧಾರಿತವಾಗಿ ಅಮಾನತುಗೊಳಿಸುವುದು ಮತ್ತು ರಿಟರ್ನ್ ಸಲ್ಲಿಸದರವರುಗಳಿಗೆ ಸಾಲವನ್ನು ನಿರ್ಬಂಧಿಸುವುದು. ಮುಂದಿನ ತಿಂಗಳ ಅಂತ್ಯದ ವೇಳೆಗೆ ಪ್ರತಿ ತಿಂಗಳು/ತ್ರೈಮಾಸಿಕದ ರಿಟರ್ನ್ಸ್ (GSTR-3B) ಸಂಖ್ಯೆಯು ಉತ್ತಮ ನಿಯತಾಂಕವಾಗಿದ್ದು, ಇದು ರಿಟರ್ನ್ಸ್ ಸಕಾಲದಲ್ಲಿ ಪಾವತಿ ಮಾಡುವುದನ್ನು ಮತ್ತು ರಿಟರ್ನ್ಸ್ ಫೈಲ್ (RETURN FILE) ಮಾಡುವುದನ್ನು ಸೂಚಿಸುತ್ತದೆ.
ಜಿಎಸ್ ಟಿಎನ್ ಬಿಗಿಯಾದ ಸುಧಾರಣಾ ಕ್ರಮದ ಪರಿಣಾಮ :
ಕಳೆದ ಒಂದು ವರ್ಷದಲ್ಲಿ ಜಿಎಸ್ ಟಿಎನ್ ಕೈಗೊಂಡ ಸಮಗ್ರ ಕ್ರಮಗಳಿಂದಾಗಿ ಜಿಎಸ್ ಟಿ ತೆರಿಗೆದಾರರು ಜಿಎಸ್ ಟಿ ಕಟ್ಟುವ ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಪ್ರತಿ ತಿಂಗಳು ಜಿಎಸ್ ಟಿ ಫೈಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಹಳೆಯ ಬಾಕಿ ತೆರಿಗೆಗಳನ್ನು ಯಾವುದೇ ತಿಂಗಳಲ್ಲಿ ಕಟ್ಟಲು ಅವಕಾಶ ಕಲ್ಪಿಸಿರುವುದರಿಂದ ಆ ಸೌಲಭ್ಯವನ್ನು ಬಳಸುವವರ ಪ್ರಮಾಣವೂ ಹೆಚ್ಚಿದೆ. ಕೋವಿಡ್ ನಿಂದಾಗಿ ನೀಡಲಾದ ಸಡಿಲಿಕೆಯ ಲಾಭವನ್ನು ಪಡೆದು ತೆರಿಗೆದಾರರು ಕಳೆದ ತಿಂಗಳುಗಳ ರಿಟರ್ನ್ಸ್ ಸಲ್ಲಿಸಿದ್ದರಿಂದ ಜುಲೈ 2021ರ ತಿಂಗಳಲ್ಲಿ 1.5 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ.
ಜಿಎಸ್ ಟಿ ತೆರಿಗೆ ಸಲ್ಲಿಕೆಯಲ್ಲಿ ಜಿಎಸ್ ಟಿ ಮಂಡಳಿಯು ನಿರಂತರವಾಗಿ ಕೈಗೊಳ್ಳುತ್ತಿರುವ ಸಕಾಲಿಕ ಕ್ರಮಗಳಿಂದಾಗಿ ಬಳಕೆದಾರರು ಇನ್ ಪುಟ್ ಕ್ರೆಡಿಟ್ ಪಡೆಯಲು ಅನುಕೂಲವಾಗುವಂತೆ ಸಮಯಕ್ಕೆ ಸರಿಯಾಗಿ ಜಿಎಸ್ ಟಿಆರ್ -1 (GSTR-1) ಅನ್ನು ಪ್ರತಿ ತಿಂಗಳು ಫೈಲ್ ಮಾಡುವುದರ ಬಗ್ಗೆ ಜಿಎಸ್ ಟಿ ಮಂಡಳಿ ತನ್ನ ಗಮನವನ್ನು ಕೇಂದ್ರಕರಿಸಿದೆ. ಜಿಎಸ್ ಟಿಆರ್ -1 ಎಂದರೆ ಸರಕು- ಸೇವೆಗಳ ಇನ್ವಾಯಿಸ್ ಮಾಹಿತಿ ನೀಡಬೇಕಾದ ಫಾರಮ್ ಆಗಿದೆ. ಒಟ್ಟಾರೆ ದೇಶದಲ್ಲಿ ದಿನೇ ದಿನೇ ಜಿಎಸ್ ಟಿ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿರುವವರ ಪ್ರಮಾಣ ಒಂದೆಡೆ ಹೆಚ್ಚಾದರೆ, ಮತ್ತೊಂದೆಡೆ ಜಿಎಸ್ ಟಿ ತೆರಿಗೆ ವಿವರ ಸಲ್ಲಿಕೆ ಕಟ್ಟುವಲ್ಲಿ ಇರುವ ಗೊಂದಲಗಳು ಮಾತ್ರ ನಿವಾರಣೆಯಾಗದೆ ಗ್ರಾಹಕರು ಪರದಾಡುವುದು ಮಾತ್ರ ತಪ್ಪುತ್ತಿಲ್ಲ. ಈ ಬಗ್ಗೆ ಜಿಎಸ್ ಟಿ ಮಂಡಳಿಯೂ ಸೂಕ್ತ ಗಮನಹರಿಸಬೇಕಿದೆ.