ಬೆಂಗಳೂರು, (www.bengaluruwire.com) : ಕನ್ನಡದ ವರನಟ ಡಾ.ರಾಜ್ ಕುಮಾರ್ ಪುತ್ರ ಪ್ರೀತಿಯ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಕ್ರಮ್ ಆಸ್ಪತ್ರೆ ವೈದ್ಯರು ಅಧಿಕೃತ ಹೇಳಿಕೆಯಷ್ಟೆ ಬಾಕಿಯಿದೆ.
ಶುಕ್ರವಾರ ಬೆಳಗ್ಗೆಯಷ್ಟೆ ಡಾ.ರಾಜ್ ಕುಮಾರ್ ಹುಟ್ಟೂರು ಗಾಜನೂರಿಗೆ ತೆರಳಬೇಕೆಂಬ ಬಯಕೆಯನ್ನು ತಮ್ಮ ಕುಟುಂಬದವರಿಗೆ ತಿಳಿಸಿದ್ದರಂತೆ. ಇದಾಗಿ ಕೆಲವೇ ಹೊತ್ತಿನಲ್ಲಿ ತೀವ್ರ ಹೃದಯಾಘಾತದಿಂದ ಪುನೀತ್ ಇಹಲೋಕ ತ್ಯಜಿಸಿದ್ದಾರೆ.
17 ಮಾರ್ಚ್ 1975 ಇಸವಿಯಲ್ಲಿ ಹುಟ್ಟಿದ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಡಾ.ರಾಜ್ ಕುಮಾರ್ ಜೊತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಚಿತ್ರಪ್ರೇಮಿಗಳ ಮನಗೆದ್ದಿದ್ದರು. ಕೇವಲ 46ನೇ ವರ್ಷಕ್ಕೆ ಇಹಲೋಕ ತ್ಯಜಿಸಿರುವುದನ್ನು ಅವರ ಅಭಿಮಾನಿಗಳು ಇನ್ನೂ ಅರಿಗಿಸಿಕೊಳ್ಳಲು ಆಗುತ್ತಿಲ್ಲ. ಈತನಕ 46 ಕನ್ನಡ ಚಿತ್ರದಲ್ಲಿ ನಟಿಸಿದ್ದರು.
14 ಚಿತ್ರಗಳಲ್ಲಿ ಬಾಲನಟನಾಗಿ, 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ಪುನೀತ್ ಅಭಿನಯಿಸಿದ್ದರು. ಅಪ್ಪು ಇವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರವಾಗಿತ್ತು.
ಅಭಿಮಾನಿಗಳ ಪಾಲಿಗೆ ಅಪ್ಪು ಎಂದೇ ಕರೆಯಲ್ಪಡುತ್ತಿದ್ದ ಪುನೀತ್ ರಾಜ್ ಕುಮಾರ್ ಬಾಲನಟನಾಗಿದ್ದಾಗ ಬೆಟ್ಟದ ಹೂ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಸಾವಿನಲ್ಲೂ ಪುನೀತ್ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಈ ಮೂಲಕ ತಮ್ಮ ತಂದೆಯ ಹಾದಿಯನ್ನು ಹಿಡಿದಂತಾಗಿದೆ.
ಒಂದೊಂಡೆ ವಿಕ್ರಮ್ ಆಸ್ಪತ್ರೆ ವೈದ್ಯರು ಪುನೀತ್ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ಏನು ಹೇಳಲು ಆಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಇನ್ನೊಂದೆಡೆ ಕಂಠೀರವ ಸ್ಟೇಡಿಯಮ್‌ನಲ್ಲಿ ಪೊಲೀಸ್ ಬಂದೋಬಸ್ತ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಆರಂಭಿಸಿದ್ದಾರೆ. ಕಂಠೀರವ ಸ್ಟೇಡಿಯಮ್ ನಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲು ತೆರೆಮರೆಯ ಕಾರ್ಯಗಳು ಆರಂಭವಾಗಿದೆ.
ಒಮ್ಮೆಗೆ 10 ಸಾವಿರ ಜನರಿಗೆ ಅಂತಿಮ ದರ್ಶನ ಪಡೆಯಬಹುದಾದಷ್ಟು ವ್ಯವಸ್ಥೆಯನ್ನು ಬಿಬಿಎಂಪಿ, ಪೋಲೀಸ್ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಕಲ್ಪಿಸಲಿದೆ.
ಅಭಿಮಾನಿಗಳ ಪ್ರೀತಿಯ ಅಪ್ಪು ಎನಿಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಸಾಮಾಜಿಕ ಕೆಲಸಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿದ್ದರು. 26 ಅನಾಥಾಶ್ರಮ, 45 ಉಚಿತ ಶಾಲೆ, 16 ಗೋಶಾಲೆ, 1,800 ಮಕ್ಕಳ ಸಂಪೂರ್ಣ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದರು ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಮೆರಿಕದಲ್ಲಿರುವ ಪುನೀತ್ ಪುತ್ರಿ ಧೃತಿ ಇಲ್ಲಿಗೆ ಆಗಮಿಸಿದ ಬಳಿಕವಷ್ಟೆ ಅಂತಿಮ ವಿಧಿ ವಿಧಾನಗಳು ನೆರವೇರಿಸುವ ಸಾಧ್ಯತೆಯಿದೆ.