ಬೆಂಗಳೂರು, (www.bengaluruwire.com) :
ವರನಟ ಡಾ.ರಾಜಕುಮಾರ್ ಸುಪುತ್ರ, ಖ್ಯಾತ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜನಪ್ರಿಯ ಮೇರು ನಟ, ಯುವಜನತೆಯ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ಪುನೀತ್ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ, ವಿಧಿಯ ಕ್ರೂರ ಆಟ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
“ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ. ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ.”
“ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಯಮದಿಂದ ವರ್ತಿಸಿ – ಅಭಿಮಾನಿಗಳಿಗೆ ಸಿಎಂ ಮನವಿ
ಈ ದುಃಖಕರ ಸನ್ನಿವೇಶದಲ್ಲಿ, ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ, ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿಗಳು ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ
ಪ್ರಧಾನಮಂತ್ರಿ ನರೇಂದ್ರ ಮೋದಿ ಕನ್ನಡದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ ಟ್ವಿಟರ್ ಮಾಡಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಅಭಿಮಾನಿಗಳು, ಸಾರ್ವಜನಿಕರು, ಗಣ್ಯರು ಹಾಗೂ ನಟನ ಕುಟುಂಬದವರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ವಿಠ್ಠಲ್ ಮಲ್ಯ ರಸ್ತೆಯಿಂದ ಕಂಠೀರವ ಮೈದಾನಕ್ಕೆ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ. ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ಬಂದು ಮೃತದೇಹದ ದರ್ಶನ ಮಾಡಲು ಅನುವಾಗುವಂತೆ ಪ್ಲಾಟ್ ಫಾರಮ್ ಸಿದ್ಧಪಡಿಸಲಾಗಿದೆ. ಒಟ್ಟಾರೆ ಬಿಎಂಪಿ ಹಾಗೂ ನಗರ ಜಿಲ್ಲಾಡಳಿತದಿಂದ ವ್ಯವಸ್ಥೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಗಣ್ಯರು ಬಂದು ಹೋಗಲು ಪ್ರತ್ಯೇಕ ವ್ಯವಸ್ಥೆ. ಹಾಗೆಯೇ ಕುಟುಂಬ ವರ್ಗದವರು, ಅತಿಗಣ್ಯ ವ್ಯಕ್ತಿಗಳು ಆಗಮಿಸಿದಾಗ ಮೃತದೇಹದ ಬಲಭಾಗದಲ್ಲಿ ಸ್ಥಳಾವಕಾಶ ಮಾಡಲಾಗಿದೆ. ಮಾಧ್ಯಮದವರಿಗೂ ಅವಕಾಶ ಮಾಡಲಾಗಿದೆ. ಭದ್ರತೆಗೆ ಕ್ರೀಡಾಂಗಣದಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಅಂತ್ಯ ಸಂಸ್ಕಾರ ಬೆಂಗಳೂರಿನಲ್ಲಿಯೇ ಮಾಡುತ್ತಾರಾ ಅಥವಾ ಬೇರೆಡೆ ಮಾಡುತ್ತಾರೆಯೇ ಎಂಬ ಬಗ್ಗೆ ಅವರ ಮನೆಯವರು ಇನ್ನೂ ನಿರ್ಧರಿಸಿಲ್ಲ. ಅವರ ತೀರ್ಮಾನದಂತೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಶನಿವಾರ ಇಡೀ ದಿನ ಪುನೀತ್ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಾನುವಾರ ಅಂತಿಮ ವಿಧಿ ವಿಧಾನಗಳು ನಡೆಯುವ ಸಾಧ್ಯತೆಯಿದೆ. ಮುಂಜಾಗ್ರತೆ ದೃಷ್ಟಿಯಿಂದ ಬೆಂಗಳೂರಿನಲ್ಲಿ ಶುಕ್ರವಾರದಿಂದ ಮೂರು ದಿನ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ.