ಬೆಂಗಳೂರು, (www.bengaluruwire.com) :
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಅಸ್ವಸ್ಥರಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿ ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ.
48 ವರ್ಷದ ಪುನೀತ್ ರಾಜ್ ಕುಮಾರ್ ಜಿಮ್ ನಲ್ಲಿ ಕಸರತ್ತು ನಡೆಸುವಾಗ ಕುಸಿದು ಬಿದ್ದರು. ಕೂಡಲೇ ಜಿಮ್ ನಲ್ಲಿದ್ದವರು ಪುನೀತ್ ರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಆಸ್ಪತ್ರೆ ಮುಂಭಾಗಕ್ಕೆ ವಿಷಯ ತಿಳಿದು ಅವರ ಸಹೋದರ ಶಿವರಾಜ್ ಕುಮಾರ, ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬದ ಸದಸ್ಯರು ಆತಂಕದಿಂದ ಆಸ್ಪತ್ರೆಗೆ ಧಾವಿಸಿದರು.
ಭಜರಂಗಿ – 2 ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಚಿತ್ರಮಂದಿರಕ್ಕೆ ತೆರಳಿದ್ದರು.
ವಿಷಯ ತಿಳಿದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿದ್ದಾರೆ. ಪುನೀತ್ ರಾಜ್ ಕುಮಾರ್ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಮುಂದೆ ಬ್ಯಾರಿಕೇಡ್ ಹಾಕಿ ಅಭಿಮಾನಿಗಳನ್ನು ನಿಯಂತ್ರಿಸಲಾಗುತ್ತಿದೆ. ಆಸ್ಪತ್ರೆ ಬಳಿ ಪೋಲಿಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕೆ ಆಗಮಿಸಿ, ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು.
ನಿನ್ನೆ ರಾತ್ರಿಯಿಂದಲೂ ಪುನೀತ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸದ್ಯ ಐಸಿಯುನಲ್ಲಿ ಪವರ್ ಸ್ಟಾರ್ ಗೆ ಇಸಿಜಿ ಸೇರಿದಂತೆ ಹಲವು ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಪುನೀತ್ ರಾಜ್ ಕುಮಾರ್ ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಏನು ಹೇಳಲು ಆಗುತ್ತಿಲ್ಲ ಎಂದು ವಿಕ್ರಮ್ ಆಸ್ಪತ್ರೆ ವೈದ್ಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆಯೇ ರಮಣ ರಾವ್ ಕ್ಲಿನಿಕ್ ಗೆ ಪುನೀತ್ ಅವರನ್ನು ಕರೆದುಕೊಂಡು ಹೋಗಿ ಇಸಿಜಿ ಮತ್ತಿತರ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗ್ಗೆವ11:30ಕ್ಕೆ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.