ಬೆಂಗಳೂರು, (www.bengaluruwire.com) :
ಕರ್ನಾಟಕ ಲೋಕಸೇವಾ ಆಯೋಗ 2017-18 ನೇ ಸಾಲಿನ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹುದ್ದೆಗಾಗಿ ಮುಖ್ಯ ಪರೀಕ್ಷೆ ನಡೆಸಿ 8-9 ತಿಂಗಳಾದರೂ ಇನ್ನೂ ಫಲಿತಾಂಶ ಪ್ರಕಟಿಸಿಲ್ಲ. ಇದು ಸಾವಿರಾರು ಕೆಎಎಸ್ ಆಕಾಂಕ್ಷಿಗಳಲ್ಲಿ ಆತಂಕ ಉಂಟು ಮಾಡಿದೆ.
ಈ ಹಿನ್ನಲೆಯಲ್ಲಿ ಕೆಪಿಎಸ್ಸಿ ಕೂಡಲೇ ಮೇನ್ಸ್ ಪರೀಕ್ಷೆಯ ಫಲಿತಾಂಶವನ್ನು ಶೀಘ್ರ ಪ್ರಕಟಿಸಿ ಕೆಎಎಸ್ ಹುದ್ದೆಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೆಎಎಸ್ ಸ್ಪರ್ಧಾರ್ಥಿಗಳು ಶುಕ್ರವಾರ ಸಂಜೆಯಿಂದ ಟ್ವಿಟರ್ ಅಭಿಯಾನ ಆರಂಭಿಸಲು ನಿರ್ಧರಿಸಿದ್ದಾರೆ.
ಕೆಪಿಎಸ್ಸಿ (KPSC) ಜ. 31 ರಂದು ಕೆಎಎಸ್ (KAS) ಪರೀಕ್ಷೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. 2020 ಆಗಸ್ಟ್ 24ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಿ, ನಂತರ 2021 ಫೆಬ್ರವರಿ 13 ರಿಂದ 16ರವರೆಗೆ ಮುಖ್ಯ ಪರೀಕ್ಷೆಯನ್ನು ಕೈಗೊಂಡಿತ್ತು.
ಆದರೆ ಪರೀಕ್ಷೆ ನಡೆದು ಎಂಟು- ಒಂಭತ್ತು ತಿಂಗಳುಗಳು ಕಳೆದರೂ ಸಹ ಪಲಿತಾಂಶ ಪ್ರಕಟಗೊಂಡಿಲ್ಲ. ಇದರ ಜೊತೆ 2020ಡಿಸೆಂಬರ್ ನಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರು, 2021ರ ಜನವರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶವನ್ನು ಕೂಡ ಬಿಡುಗಡೆಗೊಳಿಸಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಪಿಎಸ್ಸಿ ಕಚೇರಿಗೆ ಕರೆ ಮಾಡಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಹೇಳುತ್ತಾರೆ ಕೆಎಎಸ್ ಅಭ್ಯರ್ಥಿಯೊಬ್ಬರು.
ಈ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಅಭ್ಯರ್ಥಿಗಳು ಮಿಂಚಂಚೆ ಕಳುಹಿಸಿದರೆ ಮೊದಮೊದಲು “ಪರೀಕ್ಷೊತ್ತರ ಕಾರ್ಯಗಳು ಪ್ರಗತಿಯಲ್ಲಿವೆ” ಎಂಬ ಸಿದ್ಧ ಉತ್ತರವನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳ ಯಾವ ಪ್ರಶ್ನೆಗಳಿಗೂ ಕೆಪಿಎಸ್ಸಿ ಸ್ಪಂದಿಸುತ್ತಿಲ್ಲ. ಇದರ ಜೊತೆಗೆ ಮೌಲ್ಯಮಾಪನವೇ ಶುರುವಾಗಿಲ್ಲವೆಂಬ ಮಾಹಿತಿ ಆಕಾಂಕ್ಷಿಗಳ ವಲಯದಲ್ಲಿ ಹರಿದಾಡುತ್ತಿದ್ದು ಇದು ಹೆಚ್ಚಿನ ಆತಂಕ ಮತ್ತು ಬೇಸರಕ್ಕೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸ್ಪರ್ಧಾರ್ಥಿಗಳು ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಅತ್ಯಂತ ಉತ್ಸುಕತೆಯಿಂದ ದಕ್ಷ ಅಧಿಕಾರಿಗಳು ಆಗಬೇಕೆಂಬ ಕನಸಿನೊಂದಿಗೆ ತಯಾರಿ ಆರಂಭಿಸಿದ್ದ ಆಕಾಂಕ್ಷಿಗಳು ಕೆಪಿಎಸ್ಸಿಯ ಈ ಧೋರಣೆಯಿಂದ ನಿರುತ್ಸಾಹಿಗಳಾಗಿದ್ದಾರೆ ಎಂದು ಕೆಎಎಸ್ ಆಕಾಂಕ್ಷಿಯೊಬ್ಬರು ಬೇಸರದಿಂದ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಲ್ಪಾವಧಿಯ ಬೇಡಿಕೆಗಳು-
- ಒಂದು ತಿಂಗಳ ಒಳಗಾಗಿ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಬಿಡುವುದು.
- ಸಂದರ್ಶನ ಪ್ರಕ್ರಿಯೆಯನ್ನು ಮುಗಿಸಿ 3-4 ತಿಂಗಳೊಳಗಾಗಿ ಅಂತಿಮ ಫಲಿತಾಂಶವನ್ನು ಪ್ರಕಟಿಸುವುದು .
- ಅತಿಶೀಘ್ರದಲ್ಲೇ ಕೆ.ಎ.ಎಸ್. ಮುಂದಿನ ಅಧಿಸೂಚನೆಯನ್ನು ಘೋಷಿಸುವುದು
ದೀರ್ಘಾವಧಿಯ ಬೇಡಿಕೆಗಳು-
1.ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಅಧಿಸೂಚನೆ ಹೊರಡಿಸಿದ ದಿನದಿಂದ ಒಂದು ವರ್ಷದ ಒಳಗಾಗಿ (ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ) ಮುಗಿಸುವುದು
2.ಪರೀಕ್ಷೆಯ ಪ್ರತಿ ಹಂತದಲ್ಲಿಯೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು
ಆರೋಪ ಮುಕ್ತ ಮತ್ತು ಪ್ರಾಮಾಣಿಕ ಅಧ್ಯಕ್ಷರು ಹಾಗು ಸದಸ್ಯರ ನೇಮಕ ಮಾಡಿಕೊಳ್ಳುವುದು.
ಹೋಟ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಕೆಪಿಎಸ್ಸಿ ಸಿಬ್ಬಂದಿಯ ಬದಲಾವಣೆ ಮಾಡುವುದು .
ಯುಪಿಎಸ್ಸಿ ಮಾದರಿಯಂತೆ ಕೆಪಿಎಸ್ಸಿ ಸಂದರ್ಶನದಲ್ಲಿ ಆಯ್ಕೆಯಾಗಿ ಅಂತಿಮ ಆಯ್ಕೆ ಪಟ್ಟಿಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ಬೇರೆ ಉದ್ಯೋಗ ಅವಕಾಶ ಕಲ್ಪಿಸುವುದು.