ತಿರುವನಂತಪುರ, ( www.bengaluruwire.com) : ಈಗಾಗಲೇ ದೇಶದ ವಿವಿಧ ಭಾಗಗಳಿಂದ ತುಲಾ ಮಾಸದ ಪೂಜೆಗೆಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಲು ಸಿದ್ಧತೆ ನಡೆಸಿರುವ ಭಕ್ತಾದಿಗಳಿಗೊಂದು ಕಹಿಸುದ್ದಿ.
ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಬರಿಮಲೆಯಲ್ಲಿ ತುಲಾ ಮಾಸದ ನಿಮಿತ್ತ ಅ.19ರಿಂದ ಮೂರು ದಿನ (19, 20 ಹಾಗೂ 21) ಪೂಜೆಗೆ ಭಕ್ತರಿಗೆ ಅವಕಾಶವಿರುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (Travancore Devaswom Board) ತಿಳಿಸಿದೆ.
ರಾಜ್ಯದಲ್ಲಿ ಈಗಾಗಲೇ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಮತ್ತೆ ಸಾಕಷ್ಟು ಭಾರೀ ಮಳೆ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ಹಾಗೂ ಶಬರಿಮಲೆ ಬಳಿ ಪಂಪ ನದಿಯಲ್ಲಿ ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಶಬರಿಮಲೆ ದೇವಸ್ಥಾನ ಮಂಡಳಿಯು ಈ ತಿಂಗಳ ಅ.19 ರಿಂದ ಮೂರು ದಿನಗಳ ಕಾಲ ನಡೆಯುವ ಪೂಜೆಗೆ ಭಕ್ತರಿಗೆ ಅವಕಾಶವನ್ನು ನಿರಾಕರಿಸಿದೆ ಎಂದು ಮಂಡಳಿ ಅಧ್ಯಕ್ಷ ಎನ್.ವಾಸು ತುರ್ತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಲಾ ಮಾಸದ ಪೂಜೆ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆಂದು ದೇಶದ ನಾನಾ ರಾಜ್ಯಗಳಿಂದ ಹೊರಡಲು ಸಿದ್ಧತೆ ನಡೆಸಿರುವ ಭಕ್ತಾದಿಗಳು ವಾಪಸ್ ತಮ್ಮ ಸ್ವಸ್ಥಾನಕ್ಕೆ ತೆರಳುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಪಟ್ಟಣತಿಟ್ಟ ಹಾಗೂ ಎರವೇಲಿ ಈ ಎರಡು ಮಾರ್ಗಗಳಿಂದ ಹೋಗಬೇಕು. ಆದರೆ ಪಟ್ಟಣತಿಟ್ಟ ಜಿಲ್ಲೆಯಲ್ಲಿನ ಈ ಎರಡು ಮಾರ್ಗದಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆಯಾಗಿದೆ. ಅಲ್ಲದೆ ಸುತ್ತಮುತ್ತಲ ಪ್ರದೇಶದಲ್ಲಿನ ಕೆರೆ- ಕುಂಟುಗಳಲ್ಲಿ ನೀರು ತುಂಬಿ ಹರಿದು ಹೋಗಲು ಜಾಗವಿಲ್ಲದೆ ರಸ್ತೆಗೆ ನೀರು ನುಗ್ಗಿದೆ. ಹೀಗಾಗಿ ಈ ಭಾಗದಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ. ಈ ಎಲ್ಲ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಪೊಲೀಸ್ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯು ತುಲಾ ಮಾಸದ ಪೂಜೆಗೆ ಭಕ್ತರ ಭೇಟಿಗೆ ಅವಕಾಶ ನಿರಾಕರಿಸಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ತುಲಾ ಮಾಸದ ಪೂಜೆಗೆಂದು ಶನಿವಾರವಷ್ಟೆ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನವನ್ನು ತೆರೆಯಲಾಗಿತ್ತು. ಇದೀಗ ಭಾರೀ ಪ್ರವಾಹ ಹಾಗೂ ಮಳೆಯಿಂದಾಗಿ ಭಕ್ತರಿಗೆ ದೇವಸ್ಥಾನದ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.