ಬೆಂಗಳೂರು, (www.bengaluruwire.com) :
ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರು ಬೆಂಗಳೂರಿನ 198 ವಾರ್ಡ್ ನಲ್ಲಿನ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಅರ್ಜಿ ಸಲ್ಲಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಗಧಿತ ಅರ್ಜಿ ನಮೂನೆ ಹಾಗೂ ನಿಗಧಿತ ದಾಖಲೆ ನೀಡುವ ಬಗ್ಗೆ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರವು ಘೋಷಿಸಿರುವಂತೆ ಕೋವಿಡ್ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬದ ಒಬ್ಬ ಕಾನೂನುಬದ್ಧ ವಾರಸುದಾರರಿಗೆ ‘ಸಂಧ್ಯಾ ಸುರಕ್ಷಾ ಯೋಜನೆ’ ಅಡಿ 1.00 ಲಕ್ಷ ರೂ. ಗಳನ್ನು ಬಿಬಿಎಂಪಿಯು ಪಾವತಿಸಲಿದೆ ಎಂದು ಪಾಲಿಕೆ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ರಂದೀಪ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್ಡಿಆರ್ಎಫ್) ಯಿಂದ 50,000 ರೂ. ಗಳು ಸೇರಿದಂತೆ ಒಟ್ಟು 1.50 ಲಕ್ಷ ರೂ.ಗಳನ್ನು ಪಾವತಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಅದೇ ರೀತಿ ಕೋವಿಡ್ನಿಂದ ಮೃತಪಟ್ಟ ಇತರೆ ಎಲ್ಲಾ ಪ್ರಕರಣಗಳಲ್ಲಿ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 50,000 ರೂ.ಗಳ ಪರಿಹಾರ ಮೊತ್ತವನ್ನು ‘ರಾಜ್ಯ ವಿಪತ್ತು ಪರಿಹಾರ ನಿಧಿ’ (ಎಸ್ಡಿಆರ್ಎಫ್) ಯಡಿ ನೇರ ನಗದು ವರ್ಗಾವಣೆ ವ್ಯವಸ್ಥೆ (ಡಿಬಿಟಿ) ಮೂಲಕ ಪಾವತಿಸಲು ಅನುಮತಿ ನೀಡಲಾಗಿದೆ.
ಈ ಸಂಬಂಧ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ಧನವನ್ನು ನೀಡುವ ಸಂಬಂಧ ದಿನಾಂಕ: 30-09-2021 ರಂದು ಕಛೇರಿ ಆದೇಶ ಹೊರಡಿಸಿತ್ತು. ಇದರ ಅನ್ವಯ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರು ಈ ಕೆಳಕಂಡಂತೆ ತಿಳಿಸಿರುವ ಕಛೇರಿ ಹಾಗೂ ದಾಖಲೆಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದೆಂದು ಬಿಬಿಎಂಪಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
- ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳಲ್ಲಿ ಇರುವ ಕಂದಾಯ ಅಧಿಕಾರಿಗಳ ಕಛೇರಿ(ಕಂದಾಯ ವಾರ್ಡ್ ಕಛೇರಿ)ಗಳಲ್ಲಿ ಕಾನೂನುಬದ್ಧ ವಾರಸುದಾರರು ಅರ್ಜಿಗಳನ್ನು ಸಲ್ಲಿಸುವುದು.
- ಅರ್ಜಿದಾರರು ನಿಗಧಿಪಡಿಸಿದ ನಮೂನೆ-1(ಫಾರಂ-1)ರಲ್ಲಿ ಮೃತ ವ್ಯಕ್ತಿ ಮತ್ತು ಅರ್ಜಿದಾರರ ವಿವರಗಳು ಮತ್ತು ಈ ಕೆಳಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು :
• ಕೋವಿಡ್-19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ-BU Number.
• ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ(ಫಾರಂ-4/4ಎ).
• ಮೃತ ವ್ಯಕ್ತಿಯ ಆಧಾರ್ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು.
• ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ).
• ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
• ಬ್ಯಾಂಕ್ ಪಾಸ್ ಬುಕ್ ಪ್ರತಿ.
• ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ (ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ).
• ಅರ್ಜಿದಾರರ ಬ್ಯಾಂಕ್/ಅಂಚೆ ಖಾತೆ ಪುಸ್ತಕ ಪ್ರತಿ.
• ಅರ್ಜಿದಾರರ ಸ್ವಯಂ ಘೋಷಣಾ ಪತ್ರ(ಫಾರಂ-2).
• ಮೃತ ವ್ಯಕ್ತಿಯ ಪತಿ/ಪತ್ನಿಯನ್ನು ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.