ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಅತಿಹೆಚ್ಚು ಮಳೆಯಾಗುವ ತಿಂಗಳು ಸೆಪ್ಟೆಂಬರ್. ಆದರೆ ಈ ಬಾರಿ ಸೆಪ್ಟೆಂಬರ್ ಇಡೀ ತಿಂಗಳಲ್ಲಿ ಸಾಮಾನ್ಯ ಮಳೆ ವಾಡಿಕೆ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ 1ನೇ ತಾರೀಖಿನಿಂದ 8ನೇ ತಾರೀಖಿನವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 8 ವಲಯಗಳಲ್ಲಿ ಯಲಹಂಕ ಹೊರತುಪಡಿಸಿ ಉಳಿದ ಜೋನ್ ಗಳಲ್ಲಿ ಹೆಚ್ಚಿಗಿಂತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್ ಡಿಎಮ್ ಸಿ) ನೀಡಿರುವ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಕಳೆದ ಎಂಟು ದಿನದಲ್ಲಿ ಬೆಂಗಳೂರು ಪಶ್ಚಿಮ ವಲಯದಲ್ಲಿ ಅಕ್ಟೋಬರ್ ನಲ್ಲಿ ಸಾಮಾನ್ಯವಾಗಿ 53 ಮಿಲಿ ಮೀಟರ್ ಮಳೆಯಾದರೆ ಈ ಅವಧಿಯಲ್ಲಿ 107 ಮಿ.ಮೀ ಮಳೆಯಾಗಿ ಶೇ.104ರಷ್ಟು ಅತಿಹೆಚ್ಚು ಮಳೆಯಾಗಿರುವುದು ದಾಖಲಾಗಿದೆ. ಯಾವ ಯಾವ ಬಿಬಿಎಂಪಿ ವಲಯದಲ್ಲಿ ಕಳೆದ 8 ದಿನದಲ್ಲಿ ಎಷ್ಟೆಷ್ಟು ಪ್ರಮಾಣದ ಮಳೆಯಾಗಿದೆ ಎಂಬುದನ್ನು ಈ ಕೆಳಕಂಡಂತೆ ನೀಡಲಾಗಿದೆ.
ಬಿಬಿಎಂಪಿ ವಲಯ | ವಾಡಿಕೆ ಮಳೆ (ಮಿ.ಮೀ ಗಳಲ್ಲಿ) | ವಾಸ್ತವವಾಗಿ ಮಳೆಯಾದ ಪ್ರಮಾಣ | % ಶೇಕಡವಾರು ಹೆಚ್ಚು ಮಳೆಯಾದ ಪ್ರಮಾಣ | ಮಳೆಯಾದ ಪ್ರಮಾಣದ ವರ್ಗ |
ಪಶ್ಚಿಮ | 53 | 107 | 104 | ಅತಿ ಹೆಚ್ಚು |
ರಾಜರಾಜೇಶ್ವರಿ ನಗರ | 58 | 111 | 90 | ಅತಿ ಹೆಚ್ಚು |
ಬೆಂಗಳೂರು ದಕ್ಷಿಣ | 58 | 97 | 66 | ಅತಿ ಹೆಚ್ಚು |
ದಾಸರಹಳ್ಳಿ | 53 | 86 | 63 | ಅತಿ ಹೆಚ್ಚು |
ಪೂರ್ವ | 57 | 76 | 33 | ಹೆಚ್ಚು |
ಮಹದೇವಪುರ | 60 | 74 | 24 | ಹೆಚ್ಚು |
ಬೊಮ್ಮನಹಳ್ಳಿ | 45 | 57 | 27 | ಹೆಚ್ಚು |
ಯಲಹಂಕ | 50 | 52 | 6 | ಸಾಮಾನ್ಯ |
ಕೇವಲ ಎಂಟು ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಸರಾಸರಿಯಾಗಿ 113.4 ಮಿ.ಮೀನಷ್ಟು ಮಳೆಯಾಗಿದೆ. ಈ ಅವಧಿಯಲ್ಲಿ ವರುಣನ ಆರ್ಭಟ ಹೆಚ್ಚಾದ ಕಾರಣ ಬೆಂಗಳೂರಿನ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವ, ಹಲವು ರಸ್ತೆಗಳಲ್ಲಿ ನೀರು ನಿಂತು ಸರಾಗ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುವ ಸಾರ್ವಜನಿಕರಂತೂ ಸಾಕಷ್ಟು ಪರದಾಡಿರುವುದನ್ನು ಕಾಣಬಹುದಿತ್ತು.
ಅದೂ ಅಲ್ಲದೆ ಇದೇ ಅಕ್ಟೋಬರ್ 4ರ ಸೋಮವಾರದಂದು ನಾಗರಬಾವಿಯಲ್ಲಿ 117 ಮಿ.ಮೀನಷ್ಟು ಮಳೆಯಾಗಿದ್ದು, 2021ರ ವರ್ಷದಲ್ಲಿ ರಾಜಧಾನಿಯಲ್ಲಿ ಅತಿಹೆಚ್ಚು ಮಳೆ ಬಿದ್ದ ಸ್ಥಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 986 ಮಿ.ಮೀ ಆಗಿದೆ. ಸೆಪ್ಟೆಂಬರ್ ತಿಂಗಳು ಅತಿಹೆಚ್ಚು ಒದ್ದೆಯ ತಿಂಗಳು (ಸರಾಸರಿ 211.5 ಮಿ.ಮೀ) ಅಂದರೆ ಮಳೆಯಾಗುವ ಅವಧಿಯಾದರೆ, ಜನವರಿ ತಿಂಗಳು ಶುಷ್ಕ ವಾತಾವರಣವಿರುವ ಕಾಲ (ಸರಾಸರಿ 2.00 ಮಿ.ಮೀ) ಎಂದು ಹವಾಮಾನ ಇಲಾಖೆ ಪರಿಗಣಿಸಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಯಲಹಂಕ ಹೊರತುಪಡಿಸಿದರೆ ಉಳಿದ ಬಿಬಿಎಂಪಿಯ ಏಳು ವಲಯ ವ್ಯಾಪ್ತಿಯಲ್ಲಿ 211.5 ಮಿ.ಮೀನಷ್ಟು ವಾಡಿಕೆ ಮಳೆಗಿಂತ ಅತಿ ಕಡಿಮೆ ಮಳೆಯಾಗಿರುವುದನ್ನು ಕೆಎಸ್ ಎನ್ ಡಿಎಮ್ ಸಿ ಖಚಿತಪಡಿಸಿದೆ.
ಮುಂದಿನ ಮೂರ್ನಾಲ್ಕು ದಿನದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ :
“ಇತ್ತೀಚೆಗೆ ತಮಿಳುನಾಡಿನ ಕರಾವಳಿ ಪ್ರದೇಶದ ಬಳಿ ಬಂಗಾಳಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದು, ಅದರ ಪರಿಣಾಮದಿಂದಾಗಿ ಬೆಂಗಳೂರಿನಲ್ಲೂ ಉತ್ತಮ ಮಳೆಯಾಗಿದೆ. ಮುಂದಿನ 3- 4 ದಿನದಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಅಕ್ಟೋಬರ್ 10 ಹಾಗೂ 12ನೇ ತಾರೀಖು ನಗರದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.”
– ಗೀತಾ ಅಗ್ನಿಹೋತ್ರಿ, ಉಸ್ತುವಾರಿ ನಿರ್ದೇಶಕಿ, ಬೆಂಗಳೂರು ಹವಾಮಾನ ಇಲಾಖೆ
ಒಂಭತ್ತು ವರ್ಷಗಳಲ್ಲಿ (2013 ರಿಂದ 2021 ಅ.8ರ ತನಕ) ವಾರ್ಷಿಕವಾಗಿ ಅತಿಹೆಚ್ಚು ಮಳೆಯಾದ ಸ್ಥಳದ ವಿವರಗಳು ಈ ಕೆಳಕಂಡಂತಿದೆ :
ವರ್ಷ | ಮಳೆಯಾದ ದಿನ& ತಿಂಗಳು | ಅತಿ ಹೆಚ್ಚು ಮಳೆ (ಮಿ.ಮೀಗಳಲ್ಲಿ) | ಸ್ಥಳ |
2013 | 25ನೇ ನವೆಂಬರ್ | 147 | ಸಂಪಂಗಿರಾಮನಗರ |
2014 | 9ನೇ ಅಕ್ಟೋಬರ್ | 141 | ಹಂಪಿನಗರ |
2015 | 17ನೇ ಆಗಸ್ಟ್ | 198 | ಬೇಗೂರು |
2016 | 2ನೇ ಜೂನ್ | 111 | ಬೆಳ್ಳಂದೂರು |
2017 | 15ನೇ ಆಗಸ್ಟ್ | 182 | ಬಿಟಿಎಮ್ ಲೇಔಟ್ |
2018 | 24ನೇ ಸೆಪ್ಟೆಂಬರ್ | 206 | ಹೆಮ್ಮಿಗೆಪುರ |
2019 | 8ನೇ ಮೇ | 186 | ದೊಡ್ಡಬಿದರಕಲ್ಲು |
2020 | 26ನೇ ಜೂನ್ | 186 | ಕೆಂಗೇರಿ |
2021 | 4ನೇ ಅಕ್ಟೋಬರ್ | 117 | ನಾಗರಬಾವಿ |
ಕಳೆದ 9 ವರ್ಷದಲ್ಲಿ ಒಂದೇ ದಿನ ಅತಿಹೆಚ್ಚು ಮಳೆಯಾದ ಸ್ಥಳ ಹೆಮ್ಮಿಗೆಪುರ :
ಬೆಂಗಳೂರಿನಲ್ಲಿ 2013ರಿಂದ 2021ರ ಒಂಭತ್ತು ವರ್ಷಗಳಲ್ಲಿ ಆಯಾ ವರ್ಷದಲ್ಲಿ ಅತಿಹೆಚ್ಚು ಮಳೆ ಬಿದ್ದ ಸ್ಥಳವನ್ನು ಗಮನಿಸುವುದಾದರೆ 2018ರಲ್ಲಿ ರಾಜರಾಜೇಶ್ವರಿನಗರ ವಲಯದ ಹೆಮ್ಮಿಗೆಪುರದಲ್ಲಿ 24ನೇ ಸೆಪ್ಟೆಂಬರ್ ರಂದು ಬರೋಬ್ಬರಿ 206 ಮಿ.ಮೀ ಮಳೆಯಾಗಿದ್ದು ಆ ವರ್ಷದಲ್ಲಿ ಅತಿಹೆಚ್ಚು ಮಳೆ ಬಿದ್ದ ದಿನವಾಗಿದೆ. ಅಲ್ಲದೆ ಒಂಭತ್ತು ವರ್ಷದಲ್ಲೇ ಅತಿಹೆಚ್ಚು ಮಳೆ ಬಿದ್ದ ದಿನ ಹಾಗೂ ಸ್ಥಳವಾಗಿದೆ. ಇನ್ನು ಹಂಪಿನಗರದಲ್ಲಿ ಈ 9 ವರ್ಷಗಳಲ್ಲಿ ಆಯಾ ವರ್ಷದಲ್ಲಿ ಅತಿಹೆಚ್ಚು ಮಳೆಯಾದ ಪ್ರಮಾಣದಲ್ಲಿ ಒಂದೇ ದಿನ ಅತಿ ಕಡಿಮೆ ಮಳೆಯಾಗಿದ್ದು 2014ರ ಅಕ್ಟೋಬರ್ 9ರಂದು ಎಂದು ಕೆಎಸ್ ಎನ್ ಡಿಎಮ್ ಸಿಯ ವರದಿಯಲ್ಲಿ ತಿಳಿಸಿದೆ.
ಈ ವರ್ಷದಲ್ಲೇ ಒಂದು ದಿನದಲ್ಲಿ ಅತಿಹೆಚ್ಚು ಮಳೆ ಸುರಿದಿದ್ದು 4ನೇ ಅಕ್ಟೋಬರ್ ರಂದು ನಾಗರಬಾವಿ (117 ಮಿ.ಮೀ)ಯಲ್ಲಿ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಾರೆ ಇನ್ನು ಮೂರ್ನಾಲ್ಕು ನಗರದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬೆಂಗಳೂರಿನ ನಾಗರೀಕರು ಈ ಬಗ್ಗೆ ಜಾಗೃತೆವಹಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.