ಮೈಸೂರು, (www.bengaluruwire.com ) :
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಬೆಳಗ್ಗೆ 8:15 ರಿಂದ 8:45 ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿ ಹಲವರು ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರೋನಾ ನಿರ್ಬಂಧದ ಹಿನ್ನೆಲೆಯಲ್ಲಿ ಕೇವಲ 100 ಮಂದಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾಗಿ ಚಾಮುಂಡಿಬೆಟ್ಟಕ್ಕೆ ಭಕ್ತರು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು.
ತಾವರೆಕಟ್ಟೆ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಚಾಮುಂಡಿಬೆಟ್ಟದ ನಿವಾಸಿಗಳು, ಉದ್ಘಾಟನಾ ಕಾರ್ಯಕ್ರಮದ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಕೆ.ಆರ್ ಠಾಣಾ ಪೊಲೀಸರು ಸಾರ್ವಜನಿಕರ ವಾಹನ ತಪಾಸಣೆ ಕೈಗೊಂಡು ಕಾರ್ಯಕ್ರಮಕ್ಕೆ ಆಹ್ವಾನವಿದ್ದವರಿಗೆ ಚಾಮುಂಡಿಬೆಟ್ಟದ ಮೇಲೆ ತೆರಳಲು ಅವಕಾಶ ಕಲ್ಪಿಸಿದ್ದರು.
ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಂಬೂ ಸವಾರಿ ಕಾರ್ಯಕ್ರಮ ವೆಬ್‌ಸೈಟ್ , ಫೇಸ್‌ಬುಕ್, ಯೂಟ್ಯೂಬ್ ನಲ್ಲಿ ನೇರಪ್ರಸಾರವಾಗಲಿವೆ.
ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈ ಮುಂದಿನ ವೆಬ್‌ಸೈಟ್ www.mysoredasara.gov.in ನಲ್ಲಿ ಪ್ರಕಟಿಸಲಾಗಿದೆ.
ಒಂದೆಡೆ ನಾಡ ಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಕ್ಕಿದರೆ. ಇತ್ತ ಬೆಳಗ್ಗೆಯೇ ಅಂಬಾ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಿದೆ. ಗತ ಕಾಲದ ವೈಭವ ಮರುಕಳಿಸಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೋಹಣ ಮಾಡಿ ದರ್ಬಾರ್ ನಡೆಸುವ ಕಾರ್ಯಕ್ರಮ ನಡೆಯುತ್ತಿದೆ.
ಅಕ್ಟೋಬರ್ 7 ರಿಂದ 15 ರ ವರೆಗೆ 2021ನೇ ಸಾಲಿನ ವಿಶ್ವವಿಖ್ಯಾತಿ ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗರಿಷ್ಠ 500 ಜನರಿಗೆ ಅನುಮತಿ ನೀಡಲಾಗಿದೆ. ಅಲ್ಲದೆ ಅ.15ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿಯಲ್ಲಿ 500 ಜನರಿಗೆ ಮಾತ್ರ ಪ್ರವೇಶ ಅವಕಾಶವಿದೆ.
ದಸರಾ ಆಚರಣೆಯಲ್ಲಿ ಭಾಗವಹಿಸುವವರು ಅ.4 ರ ನಂತರ ಕೋವಿಡ್ ತಪಾಸಣೆಗೆ (ಆರ್ ಟಿಪಿಆರ್) ಒಳಪಟ್ಟು, ಕರೋನಾ ಸೋಂಕು ಇರದ ಬಗ್ಗೆ ಪ್ರಮಾಣಪತ್ರ ಪಡೆದಿರಬೇಕು. ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸಿದೆ.
ದಸರೆಯ ಮುಖ್ಯ ಆಕರ್ಷಣೆ ಜಂಬೂ ಸವಾರಿ ಅಕ್ಟೋಬರ್ 15 ರಂದು ಜರುಗಲಿದ್ದು, ಅಂದು ಸಂಜೆ 4:36 ರಿಂದ 4:44 ರವರೆಗೆ ನಂದಿ ಧ್ವಜ ಪೂಜೆ ನೆರವೇರಲಿದೆ. ಬಳಿಕ ಸಂಜೆ 5 ರಿಂದ 5:30 ರ ವರೆಗೆ ಜಂಬೂ ಸವಾರಿ ನಡೆಯಲಿದೆ. ಕೊರೊನಾ ಹಿನ್ನೆಲೆ ಕಳೆದ ವರ್ಷದಿಂದ ದಸರಾ ಮಹೋತ್ಸವ ಸರಳವಾಗಿ ಆಚರಿಸಲಾಗ್ತಿದ್ದು, ಈ ವರ್ಷವೂ ಜಂಬೂ ಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಅರಮನೆ ಆವರಣದಲ್ಲಿ ಆಚರಿಸಲಾಗುತ್ತಿದೆ.
ನಾಡಹಬ್ಬ ದಸರಾ ಅಂದರೆ ಅಲ್ಲಿ ವೈಭವಕ್ಕೇನು ಕಮ್ಮಿ ಇಲ್ಲ. ಅದು ಸರಳವಾಗಿರಲೀ ಅಥವಾ ಅದ್ಧೂರಿಯಾಗಿರಲಿ ದಸರಾ ಅಂದರೆ ಇಡೀ ನಾಡಿಗೆ ಹರುಷ ತರುವ ಹಬ್ಬ. 9 ದಿನಗಳ ಕಾಲ ನಡೆಯುವ ಈ ನವರಾತ್ರಿ ಉತ್ಸವದಲ್ಲಿ ಮೈಸೂರು ಸಿಂಗಾರಗೊಳ್ಳುವುದನ್ನು ನೋಡುವುದೇ ಕಣ್ಣುಗಳಿಗೆ ಸಂಭ್ರಮ. ಮನೆಮನೆಗಳಲ್ಲಿ ಬೊಂಬೆ ಕೂರಿಸುವುದು, ದುರ್ಗಾ ಪೂಜೆ, ಆಯುಧ ಪೂಜೆ, ಸರಸ್ವತಿ ಪೂಜೆಗಳನ್ನು ಕೈಗೊಳ್ಳುವುದು ಈ ಹಬ್ಬದ ವಿಶೇಷತೆ.
ನಾಡಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕ ಸರ್ಕಾರ ನಡೆಸುತ್ತಿರುವ ಅತಿ ದೊಡ್ಡ ಹಾಗೂ ಪ್ರಮುಖ ಉತ್ಸವವಾಗಿದೆ. ಈ ದಸರಾ ಮಹೋತ್ಸವಕ್ಕೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ.
ಮೈಸೂರು ಅರಸರಾದ ಶ್ರೀ ರಾಜ ಒಡೆಯರ್ ಅವರು ಕ್ರಿ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಿಸಿದರು. ಆದರೆ ಕ್ರಿ.ಶ 1336ರಲ್ಲಿಯೇ ವಿಜಯನಗರ ಸಾಮ್ರಾಜ್ಯದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತಿತ್ತು ಎಂಬುದಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರು ದಾಖಲಿಸಿದ ಮಾಹಿತಿಯಿಂದ ತಿಳಿಯುತ್ತದೆ. ದಸರಾ ಮಹೋತ್ಸವಕ್ಕೆ ವೈಭವದ ಇತಿಹಾಸ ಇರುವುದಂತು ಸತ್ಯ. ಈ ದಸರಾ ಉತ್ಸವ ಸಾಂಸ್ಕೃತಿಕ ಸಂಕೇತವಾಗಿ ಕಂಡು ಬರುತ್ತದೆ.
ಈ ಬಾರಿ ಅಕ್ಟೋಬರ್ 15 ರಂದು ವಿಜಯದಶಮಿ ಪ್ರಯುಕ್ತ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆಯು ನಾಡದೇವಿ ತಾಯಿ ಚಾಮುಂಡಿಯ ಚಿನ್ನದ ಉತ್ಸವ ಮೂರ್ತಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲಿದ್ದಾನೆ. ಇದಕ್ಕಾಗಿ ದಸರೆ ಆನೆಗಳಿಗೂ ತಾಲೀಮು ನೀಡಲಾಗಿದೆ. ಫಿರಂಗಿ ತಾಲೀಮು ಕೂಡ ಕೈಗೊಳ್ಳಲಾಗಿತ್ತು.
ಕೊರೊನಾ ಕಾರಣದಿಂದ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಪ್ರವೇಶಾವಕಾಶ ಇಲ್ಲ. ಹೀಗಾಗಿ ದಸರಾ ವೈಭವವನ್ನು ಜನರು ತಾವು ಇರುವಲ್ಲಿಯೇ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ.