ಬೆಂಗಳೂರು, (www.bengaluruwire.com) : ನಗರದಲ್ಲಿ ನಿರಂತರವಾಗಿ ಎಡಬಿಡದೆ ಮಳೆ ಸುರಿಯುತ್ತಿರುವ ಮಧ್ಯೆ ಕಳಪೆ ಕಟ್ಟಡಗಳ ಕುಸಿತ ಪ್ರಕರಣವೂ ಮರುಕಳಿಸುತ್ತಿದೆ. ಗುರುವಾರ ಮಧ್ಯಾಹ್ನ ಬೆನ್ನಗಾನಹಳ್ಳಿ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್ ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನಡೆದಿಲ್ಲ.
ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಕಟ್ಟಡ ಕಟ್ಟಿದ್ದರಿಂದಲೇ ಈ ದುರ್ಘಟನೆ ಸಂಭವಿಸಿರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಾಗ ಮೇಲ್ನೋಟಕ್ಕೆ ಈ ಅಂಶ ಕಂಡುಬಂದಿದೆ. ಕಟ್ಟಡ ಮಾಲೀಕರ ವಿರುದ್ಧ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಖ್ಯ ಆಯುಕ್ತರು ಏನಂತಾರೆ ? :
ಕಟ್ಟಡ ಕುಸಿದು ಬಿದ್ದಿರುವ ಸ್ಥಳಕ್ಕೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಡಾಕ್ಟರ್ಸ್ ಲೇಔಟ್ ನಲ್ಲಿ ಕುಸಿತಗೊಂಡ ಕಟ್ಟಡದ ಸುತ್ತಮುತ್ತಲಿನ ಕಟ್ಟಡಗಳ ದೃಢತೆಯ ಬಗ್ಗೆ ನುರಿತ ಕಟ್ಟಡ ರಚನಾ ಅಭಯಂತರರು (structural engineering) ಒಳಗೊಂಡ ಪ್ರತಿಷ್ಠಿತ ಕನ್ಸಲ್ಟೆಂಟ್ ಮುಖಾಂತರ ಸಮೀಕ್ಷೆ ನಡೆಸಿ ವರದಿ ನೀಡಲು ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರು ರವರಿಗೆ ಸೂಚನೆ ನೀಡಿದ್ದಾಗಿ ಹೇಳಿದರು.
ಸುತ್ತಮುತ್ತಲಿನ ಕಟ್ಟಡಗಳ ಭದ್ರತೆಯ ದೃಷ್ಟಿಯಿಂದ ಮಣ್ಣಿನ ಪರೀಕ್ಷೆ(Soil test) ಮಾಡುವುದು. ಕಟ್ಟಡದ ವಾಸ ಯೋಗ್ಯದ ಬಗ್ಗೆ ಪರಿಶೀಲನೆ ಮಾಡಿ ಅದರಲ್ಲಿ ಲೋಪದೋಷಗಳಿದ್ದಲ್ಲಿ ಕಟ್ಟಡ ತೆರವುಗೊಳಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು.
ಯಾವುದಾದರು ಕಟ್ಟಡದಲ್ಲಿ ನಿಯಮ ಬಾಹಿರವಾಗಿ ಅನಧಿಕೃತ ಮಹಡಿಗಳನ್ನು ನಿರ್ಮಿಸಿಕೊಂಡಿರುವುದು ದೃಢಪಟ್ಟಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲು ಖಡಕ್ ಸೂಚನೆ ನೀಡಿದ್ದಾರೆ.
ಘಟನೆ ನಡೆದಿದ್ದು ಹೇಗೆ? :
ನೆಲ ಅಂತಸ್ತು, ನೆಲ ಮಹಡಿ ಸೇರಿದಂತೆ ನಾಲ್ಕು ಅಂತಸ್ತು ಹೊಂದಿರುವ ಈ ಕಟ್ಟಡದಲ್ಲಿ ಒಟ್ಟು ಎಂಟು ವಸತಿ ಸಮುಚ್ಛಯಗಳಿದ್ದು, ಮೂರು ಮನೆಯಲ್ಲಿ ವಾಸವಿದ್ದು, 5 ಮನೆಗಳು ಕಾಲಿಯಿದ್ದವು. ಮಧ್ಯಾಹ್ನ 2:30 ರಿಂದ 3:30ರ ಸಮಯದಲ್ಲಿ ಈ ಡಾಕ್ಟರ್ಸ್ ಲೇಔಟ್ ನಲ್ಲಿನ ಈ ನಾಲ್ಕು ಅಂತಸ್ತಿನ ಕಟ್ಟಡದ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರು.
ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ಕುಸಿತವಾಗುತ್ತಿರುವ ಮನೆಯಲ್ಲಿದ್ದವರನ್ನು ತೆರವುಗೊಳಿಸಿದರು. ಪಾಲಿಕೆ ಕಂದಾಯ ಇಲಾಖೆ ದಾಖಲೆ ಪ್ರಕಾರ 2012 ರಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆದಿದ್ದು ಅಯೇಷಾ ಬೇಗ್ ಹೆಸರಿನಲ್ಲಿ ಖಾತಾ ಇರುವುದನ್ನು ಪಾಲಿಕೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಳಿಕ ಸ್ವತ್ತಿನ ಮಾಲೀಕರು, ನಾಲ್ಕು ಫ್ಲಾಟ್ ಗಳನ್ನು ತಾವೇ ಉಳಿಸಿಕೊಂಡು, ಬಾಕಿ ಉಳಿದ ನಾಲ್ಕು ಫ್ಲಾಟ್ ಗಳನ್ನು ತನ್ವೀರ್ ಪಾಷಾ, ಡಾ.ನಾರಾಯಣಸ್ವಾಮಿ, ಮೊಹಮ್ಮದ್ ತಯಿಸುದ್ದೀನ್ ಹಾಗೂ ಜಮೀಲ್ ಬಾನು ಎಂಬುವರಿಗೆ ಮಾರಾಟ ಮಾಡಿದ್ದರು ಎಂದು ಪಾಲಿಕೆ ಅಧಿಕಾರಿಗಳು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಶಿಥಿಲ ಕಟ್ಟಡ ಸಮೀಕ್ಷೆ ಸಚಿವರು ನೀಡಿದ ಗಡುವಿನ ಒಳಗೆ ಪೂರ್ಣವಾಗದು :
ನಗರದಲ್ಲಿ ಶಿಥಿಲ ಕಟ್ಟಡಗಳ ಸಮೀಕ್ಷೆಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ವರದಿ ನೀಡಲು ಕಂದಾಯ ಸಚಿವ ಆರ್.ಅಶೋಕ್ ಸೆ.30ರಂದು ವಿಧಾನಸೌಧದಲ್ಲಿ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಗಡುವು ನೀಡಿದ್ದರು.
ಹೀಗೆ ಸಮೀಕ್ಷೆ ಮಾಡಲಾದ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ಅವುಗಳನ್ನು ನಿಯಮಾನುಸಾರ ತೆರವು ಮಾಡಲು ಸೂಚಿಸಿದ್ದರು. ಇಷ್ಟರ ಹೊರತಾಗಿಯೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಚಿವ ಅಶೋಕ್ ಸಭೆ ನಡೆಸಿದ ಐದು ದಿನದ ಬಳಿಕ ಅಂದರೆ ಅ.5ರಂದು ಶಿಥಿಲ ಕಟ್ಟಡ ಸಮೀಕ್ಷೆ ಸಂಬಂಧ ಸಮೀಕ್ಷೆ ನಡೆಸಲು ಕಚೇರಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗಾದರೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಶಿಥಿಲ ಕಟ್ಟಡಗಳನ್ನು ಗುರುತಿಸಿ, ಕಟ್ಟಡ ಸ್ಟ್ರಕ್ಚರಲ್ ಎಂಜಿನಿಯರ್ ಗಳಿಂದ ಅವುಗಳ ದೃಢತೆಯ ಬಗ್ಗೆ ಪರಿಶೀಲಿಸಿ ನಂತರವಷ್ಟೆ ಕಟ್ಟಡ ಶಿಥಿಲವೇ? ಅಲ್ಲವೇ ಎಂಬುದನ್ನು ತಿಳಿಯಬೇಕು. ಹಾಗೇ ಮಾಡದಿದ್ದಲ್ಲಿ ಪಾಲಿಕೆ ಕಾನೂನು ಹೋರಾಟದಲ್ಲಿ ಸಿಲುಕಬಹುದು. ಹಾಗಾಗಿ ಶಿಥಿಲ ಕಟ್ಟಡ ಸಮೀಕ್ಷೆ ನಡೆಸಲು ಸಾಕಷ್ಟು ಸಮಯ ಹಿಡಿಯಲಿದ್ದು, ಸಚಿವರು ನೀಡಿದ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳದು ಎಂದು ಅಧಿಕಾರಿಯೊಬ್ಬರು ವಾಸ್ತವ ಬಿಚ್ಚಿಟ್ಟಿದ್ದಾರೆ.
ಕಟ್ಟಡ ಕುಸಿತ ಪರಿಶೀಲನೆ ವೇಳೆ ಪೂರ್ವ ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಇಂಜಿನಿಯರ್ ಮೋಹನ್ ಕೃಷ್ಣ, ಕಾರ್ಯಪಾಲಕ ಇಂಜಿನಿಯರ್ ಪ್ರಭಾಕರ್, ಬಿಬಿಎಂಪಿ ಅಧಿಕಾರಿಗಳು, ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.