ಬೆಂಗಳೂರು, ( www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಆಗಾಗ್ಗೆ ಸಂಭವಿಸುವ ಪ್ರವಾಹ ಪರಿಸ್ಥಿತಿ, ರಸ್ತೆಯಲ್ಲಿ ನೀರು ನಿಲ್ಲುವಿಕೆಯಿಂದ ಸೃಷ್ಟಿಯಾಗುವ ಸಮಸ್ಯೆಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬೃಹತ್ ನೀರುಗಾಲುವೆ ವಿಭಾಗದ ಅವೈಜ್ಞಾನಿಕ ಕಾರ್ಯನಿರ್ವಹಣೆ, ದೋಷಪೂರಿತ ಯೋಜನೆ ಅನುಷ್ಠಾನವೇ ಪ್ರಮುಖ ಕಾರಣವಾಗಿದೆ.
ಇದನ್ನು ನಾವು ಹೇಳುತ್ತಿಲ್ಲ ಬದಲಿಗೆ ಸರ್ಕಾರದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2021ರ ವರದಿಯಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 2013-14ನೇ ಸಾಲಿನಿಂದ 2017-18ನೇ ಅವಧಿವರೆಗೆ ಬೆಂಗಳೂರು ಮಹಾನಗರ ಪ್ರದೇಶದ ಮಳೆನೀರು ನಿರ್ವಹಣೆ ಕುರಿತ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗೆಂದು ವೃಷಭಾವತಿ ಹಾಗೂ ಕೋರಮಂಗಲ ಕಣಿವೆಗಳಲ್ಲಿ 70 ರಾಜಕಾಲುವೆಗಳ ವ್ಯಾಪ್ತಿಯ 6 ವಲಯಗಳಲ್ಲಿ ಪಾಲಿಕೆ ಹಾಗೂ ಲೆಕ್ಕಪರಿಶೋಧಕರ ಜಂಟಿ ಭೌತಕ ತಪಾಸಣೆ ನಡೆಸಿದಾಗ ಬಿಬಿಎಂಪಿಯ ಬೃಹತ್ ನೀರುಗಾಲುವೆ ವಿಭಾಗದಲ್ಲಿನ ಅಕ್ರಮಗಳು, ಅವೈಜ್ಞಾನಿಕ ಯೋಜನೆಗಳ ಅನುಷ್ಠಾನ, ಕಾರ್ಯನಿರ್ವಹಣೆಯ ದೋಷಗಳನ್ನು ಲೆಕ್ಕಪರಿಶೋಧಕರು ಎತ್ತಿ ತೋರಿಸಿದ್ದಾರೆ.
ನಗರದಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಇಡೀ ಬೆಂಗಳೂರಿನ ಜನತೆ ಸಾಕಷ್ಟು ಪರದಾಡಿದ್ದರು. 600ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ನೂರಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ಹಾಳಾಗಿದ್ದವು, ಬಿಬಿಎಂಪಿಯ ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯಗಳಲ್ಲಿ ಸಾಕಷ್ಟು ಹಾನಿಯಾಗಿತ್ತು. ಹಲವು ಕಡೆಗಳಲ್ಲಿ ರಾಜಕಾಲುವೆ ಉಕ್ಕಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಇದಕ್ಕೆಲ್ಲ ರಾಜಕಾಲುವೆ, ಹಾಗೂ ತೃತೀಯ ಹಂತದ ಮಳೆ ನೀರು ಕಾಲುವೆ ನಿರ್ಮಾಣ, ನಿರ್ವಹಣೆಯಲ್ಲಿ ಪಾಲಿಕೆ ಎಡವಿರುವುದನ್ನು ಸಿಎಜಿ ವರದಿಯನ್ನು ಗಮನಿಸಿದಾಗ ತಿಳಿದು ಬರುತ್ತಿದೆ.
ನಗರದಲ್ಲಿ 2013 ರಿಂದ 2019ರ ಅವಧಿಯಲ್ಲಿ ಸರಾಸರಿ 969 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ 2015 ರಿಂದ 2018ರ ಅವಧಿಯಲ್ಲಿ ಬೆಂಗಳೂರು ಪದೇ ಪದೇ ಪ್ರವಾಹ ಸಂದರ್ಭಗಳನ್ನು ಎದುರಿಸಿತ್ತು. ಆದ್ದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಪ್ರಕಾರ ನಗರದ ರಸ್ತೆ ಹಾಗೂ ಚರಂಡಿಗಳನ್ನು ವಿನ್ಯಾಗೊಳಿಸುವಾಗ ಕರ್ನಾಟಕ ವಿಪತ್ತು ನಿರ್ವಹಣಾ ಸಂಸ್ಥೆ (ಕೆಎಸ್ ಎನ್ ಡಿಎಂಸಿ) ಬಳಿಯಿರುವ ಲಭ್ಯ ಮಳೆಯ ದತ್ತಾಂಶ ಮಾದರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಆದರೆ ಬಿಬಿಎಂಪಿಯು ಅಸ್ಥಿತ್ವದಲ್ಲಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಯಲ್ಲಿ ಬೆಂಗಳೂರಿನ ಮಳೆಯ ನೈಜ ದತ್ತಾಂಶವನ್ನು ಪಡೆದು ಅಳವಡಿಸಿಕೊಂಡ ಬಗ್ಗೆ ದಾಖಲೆಗಳಿಲ್ಲ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದೋಷಪೂರಿತ ಮಳೆ ನೀರಿನ ಚರಂಡಿಗಳ ವಿನ್ಯಾಸಗಳಿಂದ ನಗರದ ಜನತೆ ತೊಂದರೆ ಅನುಭವಿಸುವಂತಾಗಿದೆ.
ಪಾಲಿಕೆ ಬೃಹತ್ ನೀರುಗಾಲುವೆ ವಿಭಾಗದ ಬಳಿ ರಸ್ತೆ ಬದಿ ಚರಂಡಿಯ ವಿವರವೇ ಇಲ್ಲವಂತೆ :
ಬೆಂಗಳೂರು ಮಹಾನಗರದ ಪ್ರಸ್ತುತ ಮಾನ್ಯವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಯಾರಿಸಿರುವ 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್ ಎಂಪಿ) ನಲ್ಲಿ ರಾಜಕಾಲುವೆಯನ್ನು ಕಾಯ್ದಿಟ್ಟ ವಲಯದ ಮಾನದಂಡಗಳಿಗೆ ಅನುಗುಣವಾಗಿ ವರ್ಗೀಕರಣ ಮಾಡಿಲ್ಲ. ಅಲ್ಲದೆ ಬಿಬಿಎಂಪಿ ಸಿದ್ದಪಡಿಸಿದ ರಾಜಕಾಲುವೆಗಳ ಮಾಸ್ಟರ್ ಪ್ಲಾನ್ ನಲ್ಲಿ ಗುರ್ತಿಸಲಾಗಿದ್ದ ಅನೇಕ ರಾಜಕಾಲುವೆಗಳು ಮತ್ತು ಕೆರೆಗಳನ್ನು ಆರ್ ಎಂಪಿಯಲ್ಲಿ ತೋರಿಸಿಯೇ ಇಲ್ಲವಂತೆ….!
ಅಲ್ಲದೆ ಬಿಬಿಎಂಪಿಯ ಬಳಿ ಪ್ರಥಮ ಮತ್ತು ದ್ವಿತೀಯ ಹಂತದ ರಾಜಕಾಲುವೆಗಳ ದತ್ತಾಂಶವಿದೆಯೇ ಹೊರತು ನಮ್ಮ- ನಿಮ್ಮ ಮನೆ ಮುಂದೆಯ ರಸ್ತೆ ಬದಿಯಲ್ಲಿರುವ ಮಳೆನೀರು ಚರಂಡಿ ಎಂದು ಕರೆಯುವ ತೃತೀಯ ಮಾದರಿ ರಾಜಕಾಲುವೆ ದತ್ತಾಂಶವನ್ನೇ ಹೊಂದಿಲ್ಲ. ಪ್ರತಿ ರಸ್ತೆಯು ಮಳೆ ನೀರನ್ನು ಸಂಗ್ರಹಿಸಲು ಎರಡೂ ಬದಿ ಚರಂಡಿಗಳನ್ನು ಹೊಂದಿರಬೇಕು. ಅದು ಅಂತಿಮವಾಗಿ ಪ್ರಾಥಮಿಕ ಅಥವಾ ದ್ವಿತೀಯ ಮಾದರಿಯ ರಾಜಕಾಲುವೆಗಳಿಗೆ ಹರಿಯಲು ಅನುವು ಮಾಡಿಕೊಡುತ್ತದೆ. ಹೀಗಾಗಿ ತೃತೀಯ ಅಥವಾ ರಸ್ತೆ ಬದಿಯ ಚರಂಡಿಗಳು ನಗರದ ಚರಂಡಿ ನೀರಿನ ಹರಿವಿಗೆ ಪ್ರಮುಖ ಅಂಶವಾಗಿದೆ. ಇದರ ದತ್ತಾಂಶವನ್ನೇ ಹೊಂದಿಲ್ಲ ಎಂದಾದರೆ ಆಯಾ ವಾರ್ಡಿನಲ್ಲಿನ ಚರಂಡಿ ನಿರ್ವಹಣೆ ಮಾಡೋದಾದರೂ ಹೇಗೆ ಸಾಧ್ಯ? ಹೀಗಾಗಿ ನಗರದಲ್ಲಿನ ಹಲವು ರಸ್ತೆಗಳಲ್ಲಿ ಜೋರು ಮಳೆ ಬಂದಾಗ ನೀರು ಸರಾಗ ಹರಿಯದೆ ನೀರು ನಿಂತು ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಾಗಲು ತೊಂದರೆಯಾಗುತ್ತಿದೆ.
ರಾಜಕಾಲುವೆ, ಮಳೆ ನೀರು ಚರಂಡಿಗಳ ಕಾಂಕ್ರೀಟೀಕರಣ ಪ್ರವಾಹಕ್ಕೆ ಕಾರಣ :
ಬೆಂಗಳೂರು ಮಹಾನಗರದಲ್ಲಿ ಮಳೆ ನೀರು ಚರಂಡಿ ಹರಿವಿನಲ್ಲಿ ತಳಪಾಯ ಕಾಂಕ್ರೀಟ್ ಮಾಡಿರೋದು ರಾಜಕಾಲುವೆಗಳ ನೀರಿನ ಹರಿವಿನ ವೇಗದ ಮೇಲೆ ಪರಿಣಾಮ ಬೀರುತ್ತಿದೆ. ಅಂತರ್ಜಲ ಮರುಪೂರಣಕ್ಕೆ ತೊಂದರೆ ಉಂಟುಮಾಡಿದೆ ಹಾಗೂ ರಾಜಕಾಲುವೆ ಸಂಪೂರ್ಣ ಕಾಂಕ್ರೀಟ್ ಮಯ ಮಾಡಿರುವುದರಿಂದ ನಗರದಲ್ಲಿ ಆಗಾಗ ಪ್ರವಾಹಕ್ಕೆ ಗುರಿಯಾಗುವ ಸಾಧ್ಯತೆಯ ಬಗ್ಗೆ ಸಿಎಜಿ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.
ಆರ್ ಎಂಪಿ- 2007 ಹಾಗೂ ಆರ್ ಎಂಪಿ-2015ರ ದೋಷಪೂರ್ಣ…! :
ಬೆಂಗಳೂರಿನ ನಾಗರೀಕರ ದುರದೃಷ್ಟವೋ ಅಥವಾ ನಗರ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ, 1995ರಲ್ಲಿ ಅನುಮೋದಿಸಲಾದ ಮತ್ತು ಜೂನ್ 2007ರ ತನಕ ಮಾನ್ಯವಾಗಿದ್ದ ಪರಿಷ್ಕೃತ ಮಹಾಯೋಜನೆಯಲ್ಲಿ ಜಲಮೂಲಗಳನ್ನೇ ತಪ್ಪಾಗಿ ನಿರೂಪಿಸಲಾಗಿದೆ. ಬೆಂಗಳೂರಿನ ಕೆರೆ, ಉದ್ಯಾನವನ, ರಾಜಕಾಲುವೆ (ಜಲಮಾರ್ಗ)ಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿಲ್ಲ. ಆದರೆ ಆರ್ ಎಂಪಿ- 2015ರಲ್ಲಿ ರಾಜಕಾಲುವೆಗಳಿಗೆ ಮೀಸಲಿಟ್ಟ ವಲಯಗಳನ್ನು ಗುರುತಿಸಿದ್ದರೂ ಸಹ ರಾಜಕಾಲುವೆಗಳ ಅಗತ್ಯಕ್ಕೆ ತಕ್ಕಂತೆ ವರ್ಗೀಕರಿಸಿರಲಿಲ್ಲ. ರಾಜಕಾಲುವೆಗಳ ಉದ್ದಕ್ಕೂ ಎರಡೂ ಬದಿಯಲ್ಲಿ ಬಫರ್ ಜೋನ್ (ಅಭಿವೃದ್ಧಿ ಹೊರತಾದ ಪ್ರದೇಶ ಅಥವಾ ಕಾಯ್ದಿಟ್ಟ ಪ್ರದೇಶ) ಎಂದು ಅಧಿಸೂಚಿಸಲಿಲ್ಲ. ಇದರಿಂದಾಗಿ ಕೆರೆ ಹಾಗೂ ಜಲಮಾರ್ಗಗಳ ಸುತ್ತಲೂ ಅಗತ್ಯವಿರುವ ಕಾಯ್ದಿಟ್ಟ ವಲಯಗಳನ್ನು ಗುರ್ತಿಸಿಲ್ಲ. ಹಾಗೂ ಅದನ್ನು ನಿರ್ವಹಿಸಲೂ ಇಲ್ಲ.
ಪರಿಷ್ಕೃತ ಮಾಸ್ಟರ್ ಪ್ಲಾನ್- 2015ರಲ್ಲಿ ರಾಜಕಾಲುವೆಗಳನ್ನು ಮ್ಯಾಪ್ ಮಾಡಲಾಗಿದ್ದರೂ, ನಗರದಲ್ಲಿ ವಾಸ್ತವದಲ್ಲಿ ಅಸ್ಥಿತ್ವದಲ್ಲಿರುವ ಅನೇಕ ರಾಜಕಾಲುವೆಗಳು ಮತ್ತು ಕೆರೆಗಳನ್ನು ಬಿಬಿಎಂಪಿಯು ಸಿದ್ಧಪಡಿಸಿದ ರಾಜಕಾಲುವೆಗಳ ಮಾಸ್ಟರ್ ಪ್ಲಾನ್ ಅನ್ವಯ ಪ್ರಕಟಿಸಿದ ನಕ್ಷೆಗಳಲ್ಲಿ ತೋರಿಸಿರಲಿಲ್ಲ. ಈ ನ್ಯೂನ್ಯತೆಗಳಿಂದಾಗಿ ನಗರದಲ್ಲಿ ರಾಜಕಾಲುವೆಗಳ ಉದ್ದಕ್ಕೂ ಕಾಯ್ದಿಟ್ಟ ವಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಮಳೆನೀರು ಚರಂಡಿ ಹಾಗೂ ರಾಜಕಾಲುವೆ ವಿನ್ಯಾಸದಲ್ಲಿ ನ್ಯೂನ್ಯತೆ…!
ಮಾಸ್ಟರ್ ಪ್ಲಾನ್ ತಯಾರಿಸಿದ ಉದ್ದೇಶವೇ ವಿಫಲ…!
ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ 842 ಕಿಲೋ ಮೀಟರ್ ಉದ್ದದ ರಾಜಕಾಲುವೆಯಿದ್ದು ಒಟ್ಟು 633 ಪ್ರಾಥಮಿಕ ಹಾಗೂ ದ್ವೀತಿಯ ಹಂತದ ರಾಜಕಾಲುವೆಗಳಿವೆ. 2017-18ನೇ ಇಸವಿ ತನಕ ಬಿಬಿಎಂಪಿಯು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ವಂತ ಸಂಪನ್ಮೂಲಗಳಿಂದ 332.02 ಕಿ.ಮೀ ಉದ್ದ ರಾಜಕಾಲುವೆಗಳನ್ನು ನವೀಕರಣ ಮಾಡಿದೆ. ಅದೇ ರೀತಿ 308.02 ಕಿ.ಮೀ ಉದ್ದದ ರಾಜಕಾಲುವೆಯನ್ನು ನಿರ್ವಹಣೆ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಆದರೆ ರಾಜಕಾಲುವೆಗಳಿಂದ ಬೆಂಗಳೂರು ಜಲಮಂಡಳಿಯ ಕೊಳಚೆ ನೀರು ವ್ಯವಸ್ಥೆಯನ್ನು ಬೇರ್ಪಡಿಸುವಿಕೆ, ರಾಜಕಾಲುವೆ ನೀರು ಹರಿಯಲು ಇರುವ ಅಡೆತಡೆ ನಿವಾರಣೆಯಂತಹ ಕ್ರಮಗಳನ್ನು ಕೈಗೊಂಡಿಲ್ಲ. ಮಳೆನೀರು ಚರಂಡಿಯಲ್ಲಿ ಜಲಮರುಪೂರಣ ರಚನೆಗಳು, ಪ್ರವಾಹ ಪ್ರತಿಬಂಧಕ ಚರಂಡಿಗಳು, ಪ್ರವಾಹದ ನೀರು ಹಿಡಿದಿಡಲು ಅನುವಾಗುವಂತೆ ಕೆರೆಗಳು ಹಾಗೂ ರಾಜಕಾಲುವೆಗಳ ಪರಸ್ಪರ ಸಂಪರ್ಕ ಕಲ್ಪಿಸುವುದೂ ಸೇರಿದಂತೆ ಹಲವು ಕಾರ್ಯಗಳನ್ನು ಪರಿಷ್ಕೃತ ಮಾಸ್ಟರ್ ಪ್ಲಾನ್ ನಲ್ಲಿ ಪ್ರಸ್ತಾಪ ಮಾಡಿದ್ದರೂ ಬಿಬಿಎಂಪಿ ಮಾತ್ರ ರಾಜಕಾಲುವೆಯಲ್ಲಿ ಕಾಂಕ್ರೀಟ್ ಗೋಡೆ ಹಾಗೂ ಸೇತುವೆ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿತ್ತು. ಇದು ಮಾಸ್ಟರ್ ಪ್ಲಾನ್ ತಯಾರಿಸಿದ ಉದ್ದೇಶವೇ ವಿಫಲ ಮಾಡಿದಂತೆ. ಇದೊಂದು ಗುರುತರ ಲೋಪ ಎಂಬುದನ್ನು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.
ನಗರದ ಕೆಲವು ಸ್ಥಳಗಳಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರು, ವಿದ್ಯುತ್ ಮತ್ತಿತರ ಯುಟಿಲಿಟಿ ಲೈನ್ ಗಳನ್ನು ಸ್ಥಳಾಂತರ ಮಾಡಿಲ್ಲ. ಹೀಗಾಗಿ ಇಂತಹ ರಸ್ತೆಗಳಲ್ಲಿ ಮಳೆನೀರುಗಾಲುವೆ ವ್ಯವಸ್ಥೆ ದೋಷಪೂರ್ಣವಾಗಿರುವುದನ್ನು ಜಂಟಿ ಭೌತಿಕ ತಪಾಸಣೆ ವೇಳೆ ಲೆಕ್ಕಪರಿಶೋಧಕರ ತಂಡ ಗಮನಿಸಿದೆ.
ನಗರದ ಕೆರೆ ಒಣಗಲು ಪಾಲಿಕೆ ಕಾರಣ :
ನಗರದಲ್ಲಿ ಪ್ರಸ್ತುತ 210 ಕೆರೆಗಳಿದ್ದು, ಅವುಗಳ ಪೈಕಿ 89 ಅಭಿವೃದ್ಧಿ ಹೊಂದಿದ, 37 ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಹಾಗೂ 66 ಕೆರೆಗಳಲ್ಲಿ ಅಭಿವೃದ್ಧಿಪಡಿಸಬೇಕಿದೆ. ಇನ್ನು 18 ಕರೆಗಳು ನೀರಿಲ್ಲದೆ ಒಣಗಿದ್ದು, ಈ 18 ಕರೆಗಳ ಒಟ್ಟು ವಿಸ್ತೀರ್ಣ 254.17 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಗಳ ಜೊತೆ ರಾಜಕಾಲುವೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದ್ದರಿಂತ ಬೆಂಗಳೂರು ನಗರದಲ್ಲಿ ಕೆರೆಗಳು ಒಣಗಲು ಕಾರಣವಾಯಿತು. ಹಾಗೂ ಈ ಕೆರೆಗಳು ಇತರ ಉದ್ದೇಶಗಳಿಗೆ ಪರಿವರ್ತಿಸುವುದಕ್ಕೆ ಅನುವು ಮಾಡಿಕೊಟ್ಟಂತಾಯಿತು ಎಂದು ತಿಳಿಸಲಾಗಿದೆ.
ಕುಸಿತವಾಗಿದೆ ಎರಡು ಕಣಿವೆಗಳ ಕೆರೆಗಳು ಹಾಗೂ ರಾಜಕಾಲುವೆ ಮಾರ್ಗ :
ಸಿಎಜಿಯು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಪ್ರಾದೇಶಿಕ ರಿಮೋಟ್ ಸೆನ್ಸಿಂಗ್ ದಕ್ಷಿಣ ಕೇಂದ್ರ (ಆರ್ ಆರ್ ಎಸ್ ಸಿ) ದ ತಾಂತ್ರಿಕ ಸಹಾಯದೊಂದಿಗೆ ಬೆಂಗಳೂರು ನಗರದ ಭೂ ಬಳಕೆಯ ಮಾದರಿಯ ದೀರ್ಘಕಾಲೀನ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಿದಾಗ ನಗರೀಕರಣದಿಂದಾಗಿ ಕೆರೆಗಳ ಸಂಖ್ಯೆ ಹಾಗೂ ರಾಜಕಾಲುವೆಗಳ ಉದ್ದವು ಕುಸಿತಕ್ಕೆ ಕಾರಣವಾಗಿರುವುದನ್ನು ಲೆಕ್ಕಪರಿಶೋಧಕರ ಸ್ವತಂತ್ರ ಅಧ್ಯಯನದಿಂದ ತಿಳಿದು ಬಂತು. ಕಂದಾಯ ಇಲಾಖೆಯ ಕ್ಯಾಡಸ್ಟ್ರಲ್ ನಕ್ಷೆಯಂತೆ 1900 ದಶಕದ ಆರಂಭದಲ್ಲಿ ಕೋರಮಂಗಲ ಹಾಗೂ ವೃಷಭಾವತಿ ಕಣಿವೆಗಳಲ್ಲಿ ಕ್ರಮವಾಗಿ 41 ಹಾಗೂ 51 ಕೆರೆಗಳಿತ್ತು. ಆದರೆ 2008ರಲ್ಲಿ ಆ ಕೆರೆಗಳ ಸಂಖ್ಯೆಯು 8 ಹಾಗೂ 13ಕ್ಕೆ ಇಳಿಕೆಯಾಗಿದೆ ಎಂದು ಸಿಎಜಿ ಉಲ್ಲೇಖಿಸಿದೆ.
ಇನ್ನು 1900 ಇಸವಿಯ ಆರಂಭದಲ್ಲಿ 113.24 ಕಿ.ಮೀ ಉದ್ದವಿದ್ದ ಕೋರಮಂಗಲ ಕಣಿವೆಯಲ್ಲಿನ ರಾಜಕಾಲುವೆ ಮಾರ್ಗದ ಉದ್ದ 2016-17ನೇ ಸಾಲಿನಲ್ಲಿ ಕೇವಲ 62.84 ಕಿ.ಮೀಗೆ ಕ್ರಮೇಣವಾಗಿ ಕಡಿಯೆಯಾಗಿದೆ. ವೃಷಭಾವತಿ ಕಣಿವೆಯಲ್ಲಿ 226.29 ಕಿ.ಮೀ ಉದ್ದವಿದ್ದ ರಾಜಕಾಲುವೆ ಮಾರ್ಗವು 111.72 ( ಅಂದರೆ ಅರ್ಧಕ್ಕರ್ಧ ಕಡಿಮೆ) ಕಿ.ಮೀನಷ್ಟು ಇಳಿಕೆಯಾಗಿದೆ.
ಮಳೆಗಾಲದಲ್ಲಿ ರಾಜಕಾಲುವೆ ಹೂಳೆತ್ತುವ ಭೂಪರು :
ಬಿಬಿಎಂಪಿಯಲ್ಲಿ 2013 ರಿಂದ 2017ರ ಅವಧಿಯಲ್ಲಿ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ 17.56 ಕೋಟಿ ರೂ. ವೆಚ್ಚದ 14 ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಪರಿಶೀಲನೆಗಾಗಿ ಲೆಕ್ಕಪರಿಶೋಧನಗೆ ಒಳಪಡಿಸಿದಾಗ, ಬಿಬಿಎಂಪಿಯು ಜುಲೈ ಮತ್ತು ನವೆಂಬರ್ ನಡುವೆ ಗುತ್ತಿಗೆದಾರರಿಗೆ ರಾಜಕಾಲುವೆ ಹೂಳೆತ್ತುವ ಕಾಮಗಾರಿಗಳನ್ನು ವಹಿಸಲಾಗಿತ್ತು. ಮಳೆಗಾಲದಲ್ಲಿಯೇ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮಳೆಗಾಲ ಆರಂಭವಾಗುವ ಮುನ್ನವೇ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಮುಗಿಸಬೇಕೆಂದು ಭಾರತೀಯ ರೋಡ್ ಕಾಂಗ್ರೆಸ್ ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಆದರೂ ಆ ಮಾರ್ಗಸೂಚಿಗಳನ್ನು ಪಾಲಿಕೆ ಉಲ್ಲಂಘಿಸಿದ್ದಾಗಿ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ರಾಜಕಾಲುವೆ ಒತ್ತುವರಿ ಪ್ರಕರಣದ ಅಂಕಿಸಂಖ್ಯೆ ಬಗ್ಗೆಯೇ ಅನುಮಾನ :
ಬಿಬಿಎಂಪಿಯ ಬೃಹತ್ ನೀರುಗಾಲುವೆ ವಿಭಾಗ ವಿವಿಧ ವಲಯಗಳಲ್ಲಿ 2,626 ರಾಜಕಾಲುವೆ ಒತ್ತುವರಿ ಪ್ರಕರಗಣಗಳನ್ನು ಗುರುತಿಸಿದ್ದು, ಆ ಪೈಕಿ 714 ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಿಲ್ಲ ಎಂದು ತಿಳಿಸಿತ್ತು. ಆದರೆ ಲೆಕ್ಕಪರಿಶೋಧನೆ ನಡೆಸಿದಾಗ ಗಮನಾರ್ಹವಾದ 23 ಒತ್ತುವರಿಗಳ ಪ್ರಕರಣಗಳನ್ನು ಗಮನಿಸಿತು. ಅವುಗಳಲ್ಲಿ 16 ಪ್ರಕರಣಗಳು ಬಿಬಿಎಂಪಿ ಒದಗಿಸಿದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ನೀಡಿದ ಮಾಹಿತಿಯು ಸಂಪೂರ್ಣವಾಗಿ ಅನುಮಾನಾಸ್ಪದವಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಗಂಭೀರ ಆಕ್ಷೇಪವೆತ್ತಲಾಗಿದೆ.
ಹೀಗೆ ನಗರದಲ್ಲಿ ಬೃಹತ್ ನೀರಗಾಲುವೆ ನಿರ್ವಹಣೆಯಲ್ಲಿನ ದೋಷಗಳು, ತಪ್ಪುಗಳನ್ನು ಎತ್ತಿತೋರಿಸಿರುವ ಮಹಾಲೆಕ್ಕಪರಿಶೋಧಕರು, ನಗರದಲ್ಲಿನ ಎಲ್ಲಾ ರಾಜಕಾಲುವೆಗಳ ನಿಯತಕಾಲಿಕವಾಗಿ ಪರಿಶೀಲನೆ ನಡೆಸಿ, ನಿರ್ವಹಣೆ ಮಾಡಿ, ಅವುಗಳ ಬಗ್ಗೆ ಸಮರ್ಪಕ ರೀತಿಯಲ್ಲಿ ದಾಖಲಿಸುವ ವ್ಯವಸ್ಥೆ ರೂಪಿಸಬೇಕು. ಅಲ್ಲದೆ ರಾಜಕಾಲುವೆಗಳ ಸಮಗ್ರ ದತ್ತಾಂಶವನ್ನು ತಯಾರಿಸಬೇಕು. ಕೆರೆಗಳು ಹಾಗೂ ನೈಸರ್ಗಿಕ ಚರಂಡಿಗಳು ಮತ್ತಷ್ಟು ಕ್ಷೀಣಿಸುವುದನ್ನು ತಡೆದು, ಪರಿಸರ ಹಾಗೂ ಅಂತರ್ಜಲ ಸರಂಕ್ಷಣೆಗೆ ಕೆರೆಗಳ ಅಂತರ್ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವು ಸಲಹೆ ಮತ್ತು ಶಿಫಾರಸ್ಸುಗಳನ್ನು ಬಿಬಿಎಂಪಿಗೆ ನೀಡಿದೆ.