ರಾಮನಗರ, (www.bengaluruwire.com) : ಮಹಾಮಳೆಯಿಂದ ಬೆಂಗಳೂರು ತತ್ತರಿಸಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಸಿಎಂ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು? ಹೇಗೆ ಖರ್ಚಾಯಿತು?
ಇದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎತ್ತಿದ ಪ್ರಶ್ನೆ.
ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಕಾರ್ಯಾಗಾರದ ನಡುವೆ ಸೋಮವಾರ ಮಾಧ್ಯಮಗಳ ಜತೆ ಮಾತನಾಡುತ್ತಾ, ನಗರದಲ್ಲಿ ಭಾನುವಾರ ರಾತ್ರಿ ಸುರಿದ ಒಂದೇ ಮಳೆ ನಗರದಲ್ಲಿ ದೊಡ್ಡ ಅನಾಹುತ ಉಂಟು ಮಾಡಿದೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ನಿರ್ವಹಣೆ ಕಳಪೆಯಾಗಿದೆ. ಹಾಗಾದ್ರೆ ರಸ್ತೆಗಳಿಗೆ ತೆಗೆದಿಟ್ಟ ಹಣ ಎಲ್ಲಿ ಹೋಯಿತು? ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡರು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂರು.
ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚಲು ಸಾವಿರಾರು ಕೋಟಿ ರೂ. ಹಣ ವೆಚ್ಚ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ಕೊಟ್ಟಿದ್ದರು. ಬೆಂಗಳೂರಿನ ಯಾವ ಭಾಗದಲ್ಲಿ ಎಷ್ಟೆಲ್ಲ ಹಣ ಖರ್ಚಾಗಿದೆ ಎಂಬ ಲೆಕ್ಕದ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ ಎಂದು ಅವರು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಕೇಳಿದರು.
ಭಾನುವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿಗಳು, ಸಚಿವರು ಚಾಲನೆ ನೀಡಿದ್ದರು. ಆದರೆ ಸಂಜೆಗೆ ಆ ಭಾಗದಲ್ಲಿ ಮಳೆ ಬಂದು ಆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಬೆತ್ತಲು ಮಾಡಿತು. ಮನೆಗಳಿಗೆ ನೀರು ನುಗ್ಗಿ ಜನ ಇಡೀ ರಾತ್ರಿ ಜಾಗರಣೆ ಮಾಡಿದರು. ಮಳೆ ನೀರಿನಲ್ಲಿ ಹಸು, ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವರು ಯಾವ ರೀತಿಯ ಅಭಿವೃದ್ಧಿಯನ್ನು ಮಾಡಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಹಣ ಕರ್ಚಾದ ಬಗ್ಗೆ ತನಿಖೆಗೆ ಒತ್ತಾಯ :
ರಾಜರಾಜೇಶ್ವರಿ ನಗರ ಕ್ಷೇತ್ರ ಪ್ರಗತಿಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ನಿರಂತರವಾಗಿ ಈ ಕ್ಷೇತ್ರಕ್ಕೆ ಹರಿದ ಹಣದ ಹೊಳೆ ಎತ್ತ ಹರಿಯಿತು? ಈ ಹಣವೂ ಸೇರಿ ಗುಂಡಿ ಮುಚ್ಚಲು ಖರ್ಚಾಗಿದೆ ಎಂದು ಸಿಎಂ ಹೇಳಿದ್ದ 20 ಸಾವಿರ ಕೋಟಿ ಹಣ ಏನಾಯಿತು ಎಂಬ ಮಾಹಿತಿ ಜನರಿಗೆ ಬೇಡವೇ? ಈ ಬಗ್ಗೆ ತನಿಖೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯ ಮಾಡಿದರು.
ಬೆಂಗಳೂರಿನ ಸಭೆ ನಡೆಸಲು ಅವರ ಪರ್ಮಿಷನ್ ಬೇಕಿತ್ತು :
ತಾವು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಉಸ್ತುವಾರಿ ಕಾಂಗ್ರೆಸ್ ಪಕ್ಷದ ಕೈಲಿ ಇತ್ತು. ನಾನು ನಗರದ ಬಗ್ಗೆ ಒಂದು ಸಭೆ ಮಾಡಬೇಕಾದರೂ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕಾಗಿತ್ತು. ಆದರೆ ಅವರು ಸಭೆ ಕರೆಯಲು ಒಪ್ಪುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಷ್ಟು ದಿನ ಬೆಂಗಳೂರು ಪ್ರಗತಿ ಪರಿಶೀಲನೆ ಮಾಡುವ ಹಾಗಿರಲಿಲ್ಲ. ಇದು ಸತ್ಯ ಸಂಗತಿ ಎಂದು ಎಚ್.ಡಿ.ಕುಮಾರಸ್ವಾಮಿ
ಇದೊಂದು ಪ್ರಚಾರ ಪ್ರಿಯ ಸರ್ಕಾರ :
ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ ಸರಕಾರ ಪ್ರಚಾರದಲ್ಲಿ ಮುಳುಗಿದೆ. ಜಾಹೀರಾತುಗಳ ಮೂಲಕ ಸ್ವಯಂ ಪ್ರಶಂಸೆಯಲ್ಲಿ ತೇಲುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಬಸವರಾಜ ಬೊಮ್ಮಾಯಿ ಇಬ್ಬರೂ ನವ ಭಾರತಕ್ಕಾಗಿ ನವ ಕರ್ನಾಟಕವೆಂದು ಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಮೋದಿ ಅವರಂತೆ ಬಟ್ಟೆ ಹಾಕಿಕೊಂಡು, ಫೋಟೋ ಶೂಟ್ ಮಾಡಿಸಿ, ಬಸ್ ನಿಲ್ದಾಣಗಳ ಮೇಲೆ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ?
ನವ ಕರ್ನಾಟಕ ಏನು ಅನ್ನೋದು ನನಗೆ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂದರು. ಉತ್ತರ ಪ್ರದೇಶ (Uttarpradesh)ದಲ್ಲಿ ಹಲವು ತಿಂಗಳಿನಿಂದ ರೈತರು ಪ್ರತಿಭಟನೆ (Former Protest) ನಡೆಸುತ್ತಿದ್ದಾರೆ. ಮಳೆ ಪ್ರವಾಹದಲ್ಲಿ ಜನರ ಬದುಕು ಕೊಚ್ಚಿ ಹೋಗುತ್ತಿದೆ. ನವ ಭಾರತ ಎಂದರೆ ಇದೇನಾ? ಎಂದು ಅವರು ಕಟುವಾಗಿ ಪ್ರಶ್ನೆ ಮಾಡಿದರು.
ಉತ್ತರ ಪ್ರದೇಶ ಘಟನೆ ಅಕ್ಷಮ್ಯ:
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರದ ಮಂತ್ರಿಯ ಪುತ್ರ ವಾಹನ ಹತ್ತಿಸಿದ್ದಾರೆ. ಇದು ಹೇಯ ಮತ್ತು ಅಕ್ಷಮ್ಯ. ನಂತರ ನಡೆದ ಪ್ರತಿಭಟನೆಯಲ್ಲಿ ಇನ್ನಷ್ಟು ರೈತರು ಸಾವನ್ನಪ್ಪಿದ್ದಾರೆ. ಇದೇನಾ ನವ ಭಾರತ? ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ನವಭಾರತ ಕಟ್ಟುತ್ತಿರುವುದು ಹೀಗೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಪ್ರತಿನಿಧಿಗಳ ಸಭೆ :
ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಪ್ರತಿನಿಧಿಗಳ ಸಭೆಗೆ ಮುನ್ನ ದ್ವಜಾರೋಹಣ ಹಾಗೂ ಉದ್ಘಾಟನಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕ ಅನ್ನದಾನಿ, ಮಾಜಿ ಶಾಸಕ ಸುಧಾಕರ ಲಾಲ್, ಸುರೇಶ್ ಬಾಬು, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮುಂತಾದವರು ಉಪಸ್ಥಿತರಿದ್ದರು.
ಸಮಗ್ರ ಬೆಂಗಳೂರಿನ ಕಾಮಗಾರಿಗೆ 20 ಸಾವಿರ ಕೋಟಿ ರೂ. – ಎಸ್.ಟಿ.ಸೋಮಶೇಖರ್ ಸ್ಪಷ್ಟನೆ
ಭಾನುವಾರ ತೀವ್ರ ಮಳೆ ಬಿದ್ದ ಕಾರಣ ಕೆಲವೆಡೆ ಸ್ವಲ್ಪ ಸಮಸ್ಯೆ ಆಗಿದೆ. ಆ ಸಮಸ್ಯೆ ಬಗ್ಗೆ ಮಧ್ಯರಾತ್ರಿ ತಿಳಿದು ಸಂಬಂಧಿತ ಎಂಜಿನಿಯರ್ ಗಳಿಗೆ ತಿಳಿಸಿದ್ದು, ತಕ್ಷಣ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ 20 ಸಾವಿರ ಕೋಟಿ ಹಣದಲ್ಲಿ ವಿವಿಧೆಡೆ ವೈಟ್ ಟಾಪಿಂಗ್, ಡಾಂಬರೀಕರಣ ನಡೆಯುತ್ತಿಲ್ಲವೇ? ಯಡಿಯೂರಪ್ಪ ಅವರಿದ್ದ ಸಂದರ್ಭದಲ್ಲಿ ದೊಡ್ಡ ರಸ್ತೆಗಳ ಕಾಂಕ್ರಿಟೀಕರಣ, ಡಾಂಬರೀಕರಣಕ್ಕೆ ಟೆಂಡರ್ ಕೂಡ ಆಗಿದೆ. ಸಮಗ್ರ ಬೆಂಗಳೂರಿಗೆ ಸಂಬಂಧಿಸಿದ ಕಾಮಗಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ 20 ಸಾವಿರ ಕೋಟಿ ಮೊತ್ತದ ವಿಚಾರ ಹೇಳಿದ್ದಾರೆ. ಕೇವಲ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಲ್ಲ.
– ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು