ಹೊಸಪೇಟೆ, (www.bengaluruwire.com ) : ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಕರ್ನಾಟಕದ 31 ನೇ ಜಿಲ್ಲೆಯಾಗಿ ವಿಜಯನಗರ ಶನಿವಾರ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಆ ಮೂಲಕ ವಿಜಯನಗರ ಜಿಲ್ಲೆ ರಚನೆಗಾಗಿ ನಡೆದ ಒಂದೂವರೆ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ.
ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ರಾಜ್ಯದ 31ನೇ ಜಿಲ್ಲೆ ವಿಜಯನಗರದಲ್ಲಿ ರೂ.464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದರ ಮೂಲಕ ರಾಜ್ಯ ಸರಕಾರ ಮುನ್ನುಡಿ ಬರೆದಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರಣ್ಯ ವೇದಿಕೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಉದ್ಘಾಟಿಸಿದರು. ಇದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಪ್ರದೇಶಗಳ ಮೇಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.
ಈ ಸಂಭ್ರಮದ ಕ್ಷಣಕ್ಕೆ ನಾಡಿನ ಮಠಾಧೀಶರು, ಸಚಿವರು,ಶಾಸಕರು,ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು ಮತ್ತು ಅಸಂಖ್ಯಾತ ಜನರು ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.
ಹೊಸಪೇಟೆಯ ಕಾರ್ಯಕ್ರಮ ನಡೆದ ಜಿಲ್ಲಾ ಕ್ರೀಡಾಂಗಣ ಹಂಪಿಯ ಪ್ರತಿರೂಪದಂತೆ ಕಂಗೊಳಿಸುತ್ತಿತ್ತು. ಹಂಪಿಯ ಪ್ರದೇಶದಲ್ಲಿರುವ ಬೆಟ್ಟ-ಗುಡ್ಡ, ವಿರೂಪಾಕ್ಷ ದೇವಸ್ಥಾನ, ಸಾಲುಮಂಟಪ, ಉಗ್ರ ನರಸಿಂಹ, ಸಪ್ತಸ್ವರ ಮಂಟವನ್ನು ನಿರ್ಮಿಸಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಮನಸೂರೆಗೊಳಿಸಿತ್ತು.
ಪ್ರವೇಶದ್ವಾರದ ಮುಂಭಾಗ 40 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ಫೈಬರ್ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೆ ನೂತನ ಜಿಲ್ಲೆ ಉದ್ಘಾಟನೆ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಜಾನಪದ ಕಲಾತಂಡಗಳ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜಯನಗರ ಜಿಲ್ಲೆ ಉದ್ಘಟನಾ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.
ವಿಜಯನಗರ ಜಿಲ್ಲೆಯ ತಾಲೂಕುಗಳು ಹೀಗಿವೆ :
ಐತಿಹಾಸಿಕ ನಗರ ಬಳ್ಳಾರಿಯನ್ನು ವಿಭಜಿಸಿ ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ 5 ತಾಲೂಕು ಹಾಗೂ ಬೇರ್ಪಡೆಯಾದ ವಿಜಯನಗರ ಜಿಲ್ಲೆಗೆ ಒಟ್ಟು 6 ತಾಲೂಕುಗಳನ್ನು ಸೇರಿಸಿ ಇದೇ ವರ್ಷದ ಫೆ.8ರಂದು ಅಂತಿಮ ಅಧಿಸೂಚನೆ ಹೊರಡಿಸಿತು.
ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ತಾಲೂಕು (ಜಿಲ್ಲಾ ಕೇಂದ್ರ), ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಸೇರಿಸಲಾಗಿದೆ. ಬಳ್ಳಾರಿ, ಸಂಡೂರು, ಸಿರಗುಪ್ಪ, ಕುರುಗೋಡು, ಕಂಪ್ಲಿ ತಾಲೂಕುಗಳನ್ನು ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿಸಲಾಗಿದೆ.
ನೂತನ ಜಿಲ್ಲೆ ರಚನೆಯ ಹೋರಾಟ ಒಂದೂವರೆ ದಶಕದ್ದು :
ವಿಜಯನಗರ ಜಿಲ್ಲೆ ರಚನೆಯ ಪ್ರತ್ಯೇಕತೆಯ ಕೂಗು ಆರಂಭವಾಗಿದ್ದು 2006-7ರಲ್ಲಿ. ಅದೇ ವರ್ಷ ಪ್ರತ್ಯೇಕ ಜಿಲ್ಲೆ ರಚನೆಗಾಗಿ ಸತತ ಮೂರು ತಿಂಗಳು ಹೋರಾಟ ಹಮ್ಮಿಕೊಳ್ಳಲಾಗಿತ್ತು. ಈ ಭಾಗದ ನಾಗರೀಕರು ವಿಜಯನಗರ ಜಿಲ್ಲಾ ಹೋರಾಟ ಸಮತಿ ರಚಿಸಿಕೊಂಡು ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟದ ಹಾದಿ ಹಿಡಿದಿದ್ದರು. ಆನಂತರ ಪ್ರತ್ಯೇಕ ಜಿಲ್ಲಾ ರಚನೆಯ ಬೇಡಿಕೆ ಈಡೇರಿಕೆಗಾಗಿ ಹಲವು ಮನವಿ ಸಲ್ಲಿಸಿದರೂ ಅದು ಕೇವಲ ಭರವಸೆಯಾಗಿಯೇ ಉಳಿದುಕೊಂಡಿತ್ತು.
2019ರಲ್ಲಿ ವಿಜಯನಗರ ನೂತನ ಜಿಲ್ಲೆ ಸ್ಥಾಪನೆಯ ವಿಷಯ ಮುನ್ನೆಲೆಗೆ ಬಂದಿತ್ತು. ಈಗಿನ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಹೊಸ ಜಿಲ್ಲೆ ರಚನೆಗಾಗಿ ಪಟ್ಟು ಹಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆನಂತರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ನಿರಂತರ ಒತ್ತಡ ತಂದು ಒಂದೂವರೆ ದಶಕಗಳ ಹೋರಾಟದ ಯಶಸ್ವಿಯಾಗಿ ವಿಜಯನಗರ ಹೊಸ ಜಿಲ್ಲೆಯ ಉದಯಕ್ಕೆ ಕಾರಣೀಕರ್ತರಲ್ಲಿ ಒಬ್ಬರಾದರು.
ಹೊಸ ಜಿಲ್ಲೆಯ ಹೋರಾಟಕ್ಕೆ ಕಾರಣವಾದ ಅಂಶವೇನು?
ಅಖಂಡ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ವಿಶಾಲವಾಗಿರುವುದರಿಂದ ಈ ಹಿಂದೆ 11ತಾಲೂಕುಗಳನ್ನು ಒಳಗೊಂಡಿತ್ತು. ಬಳ್ಳಾರಿ ಜಿಲ್ಲೆಯ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳ ಹಳ್ಳಿಗಳು ಕಿ.ಮೀ ಗೂ ಹೆಚ್ಚಿನ ಅಂತರದಲ್ಲಿದ್ದವು. ಈ ಭಾಗದ ಜನರು ಸರ್ಕಾರಿ ಕಚೇರಿ ಸೇರಿದಂತೆ ದೈನಂದಿನ ಕೆಲಸ ಕಾರ್ಯಗಳಿಗೆ ಬಳ್ಳಾರಿ ಜಿಲ್ಲಾ ಕೇದ್ರಕ್ಕೆ ಹೋಗಿ ಬರಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು.
ವಿಶಾಲವಾದ ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ರಚಿಸಿ, ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ತಾಲೂಕುಗಳನ್ನು ಇದರ ವ್ಯಾಪ್ತಿಗೆ ಸೇರಿಸಿ ನೂತನ ಜಿಲ್ಲೆ ರಚಿಸಿದರೆ ಅಷ್ಟರಮಟ್ಟಿಗೆ ಈ ಭಾಗದ ಜನರಿಗೆ ಸಾಕಷ್ಟು ಉಪಯೋಗವಾಗುತ್ತದೆ. ಹಾಗೂ ಆಡಳಿತ ದೃಷ್ಟಿಯಿಂದಲೂ ಒಳಿತಾಗುತ್ತದೆ ಎಂಬ ಲೆಕ್ಕಾಚಾರವೂ ಹೊಸ ಜಿಲ್ಲೆ ರಚನೆಯ ಹೋರಾಟಕ್ಕೆ ಪುಷ್ಟಿ ನೀಡಿತ್ತು.
ಶನಿವಾರದ ನೂತನ ಜಿಲ್ಲೆ ಉದ್ಘಟನಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದಸಿಂಗ್, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು,ಸಿ.ಸಿ.ಪಾಟೀಲ್,ಡಾ.ಅಶ್ವತ್ ನಾರಾಯಣ, ವಿ.ಸುನೀಲಕುಮಾರ, ಎನ್.ಮುನಿರತ್ನ, ಭೈರತಿ ಬಸವರಾಜ, ಸಂಸದರು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.