ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನ ಗುಂಡಿಮಯ ರಸ್ತೆ ಮುಚ್ಚಲು ಖುದ್ದು ಕಂದಾಯ ಸಚಿವ ಆರ್.ಅಶೋಕ್ ಸೆ.30 ರ ತನಕ ನೀಡಿದ್ದ ಗಡುವು ಮುಗಿದರೂ ನಗರದಲ್ಲಿನ ರಸ್ತೆಗುಂಡಿಗೆ ಡಾಂಬರ್ ಹಾಕಿ ಸರಿಪಡಿಸುವ ಕಾರ್ಯ ಪೂರ್ಣಗೊಂಡಿಲ್ಲ. ಆ ಮೂಲಕ ಅಧಿಕಾರಿಗಳು ಮಾತಿಗೆ ತಪ್ಪಿದ್ದಾರೆ.
ಅಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸುವ ಭರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಕಾಸಸೌಧದಲ್ಲಿ ಗುರುವಾರ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ ರಸ್ತೆಗುಂಡಿ ಮುಚ್ಚಲು ನೀಡಿದ ಗಡುವು ವಿಸ್ತರಿಸಿದ್ದಾರೆ. ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಎಂಜಿನಿಯರ್ ಹಾಗೂ ಇತರೆ ಪಾಲಿಕೆ ವಲಯದ ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಗುಂಡು ಮುಚ್ಚಲು ಸಾಧ್ಯವಾಗದಿರುವುದಕ್ಕೆ ಸತತ ಮಳೆ ಸುರಿದ ಕಾರಣ ನೀಡಿ ಸುಮ್ಮನಾಗಿದ್ದಾರೆ.
ಹೀಗಾಗಿ ಅಕ್ಟೋಬರ್ 10ರೊಳಗೆ ಪ್ರಮುಖ ರಸ್ತೆಗಳು ಹಾಗೂ ಅಕ್ಟೋಬರ್ 20 ರಿಂದ 25 ರೊಳಗಾಗಿ ವಾರ್ಡ್ ರಸ್ತೆಗಳನ್ನು ಮುಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಅಶೋಕ್ ಹೇಳಿದ್ದಾರೆ.
ರಸ್ತೆಗುಂಡಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಪಾಲಿಕೆಯ ಹಾಟ್ ಮಿಕ್ಸ್ ಪ್ಲಾಂಟ್ ನಿಂದ 16 ಲೋಡ್ ಡಾಂಬರನ್ನು ನೀಡುತ್ತಿದ್ದು, ಸುಮಾರು 12 ದಿನಗಳ ಕಾಲ ನಿರಂತರವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಪ್ಲಾಂಟ್ ನಲ್ಲಿ ಬಿಟಮಿನ್ ಮಿಕ್ಸ್(ಜೆಲ್ಲಿ) ಉತ್ಪಾದಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಸ್ತೆ ಗುಂಡಿಗಳನ್ನು ನಿಗಧಿತ ಸಮದಲ್ಲಿ ಮುಚ್ಚಲು ಆಗಿಲ್ಲ. ಉಳಿದ ದಿನಗಳಲ್ಲಿ ಸಕ್ರಿಯವಾಗಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ನಗರದ ರಸ್ತೆಗಳ ಪರಿಸ್ಥಿತಿ ಹೀಗಿದೆಯಂತೆ…..!
ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ಸೇರಿದಂತೆ ಒಟ್ಟು 13,874 ಕಿ.ಮೀ ಉದ್ದದ ರಸ್ತೆಗಳಿವೆ. ಈ ಪೈಕಿ ವಾಹನ ಸಂಚಾರ ದಟ್ಟಣೆಯಿರುವ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳು 1,344 ಕಿ.ಮೀ ಉದ್ದವಿದ್ದು, 895 ಕಿ.ಮೀ ಉದ್ದದ ರಸ್ತೆ ಸುಸ್ಥಿತಿಯಲ್ಲಿದೆ. ಇನ್ನುಳಿದ 449 ಕಿ.ಮೀ ಉದ್ದದ ರಸ್ತೆ ಹಾಳಾಗಿದೆ. ಈಗಾಗಲೇ 246 ಕಿ.ಮೀ ಉದ್ದದ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ 203 ಕಿ.ಮೀ ಉದ್ದದ ರಸ್ತೆಗಳನ್ನು ಮುಚ್ಚಬೇಕಿದೆ. ಅಕ್ಟೋಬರ್ 10ರೊಳಗಾಗಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿರುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಇದುವರೆಗೆ 585 ಲೋಡ್ ಡಾಂಬರನ್ನು ಬಳಸಲಾಗಿದೆ. ಇನ್ನು ಹೊರ ವಲಯ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯಿಂದ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಲು ಹಾಗೂ ಬೆಸ್ಕಾಂ ಸಂಸ್ಥೆಯು ನೆಲದಡಿ ಕೇಬಲ್ ಅಳವಡಿಕೆಯಿಂದ ರಸ್ತೆಗಳು ಹಾಳಾಗಿವೆ. ಅದಕ್ಕಾಗಿ ರಾಜ್ಯ ಸರ್ಕಾರ 1,000 ಕೋಟಿ ರೂ. ಬಿಡುಗಡೆ ಮಾಡುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ 20 ರಿಂದ 30 ದಿನಗಳಲ್ಲಿ ಸಂಪೂರ್ಣ ರಸ್ತೆಗಳನ್ನು ಡಾಂಬರೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಳಾಗುವುದು ಎಂದು ತಿಳಿಸಿದರು.
ಪಾಲಿಕೆಯ ಹಾಟ್ ಮಿಕ್ಸ್ ಪ್ಲಾಂಟ್ ನಿಂದ ಪ್ರತಿನಿತ್ಯ 30 ಲೋಡ್ ಡಾಂಬರನ್ನು ಹಾಗೂ ಆಯಾ ವಾರ್ಡ್ ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು 20 ಲಕ್ಷ ರೂ. ಮೀಸಲಿಟ್ಟಿದ್ದು, ಅದರಿಂದ ಡಾಂಬರು ಹಾಕುವ ಸ್ಥಳೀಯ ಗುತ್ತಿಗೆದಾರರನ್ನು ನಿಯೋಜನೆ ಮಾಡಿಕೊಂಡು ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಿಥಿಲಗೊಂಡ ಕಟ್ಟಡಗಳ ಸಮೀಕ್ಷೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಲ್ಲಿ 185 ಶಿಥಿಲಗೊಂಡ ಕಟ್ಟಡಗಳನ್ನು ಸಮೀಕ್ಷೆ ಮಾಡಲಾಗಿರುತ್ತದೆ. ಅದರಲ್ಲಿ 10 ಕಟ್ಟಡಗಳನ್ನು ನೆಲಸಮ ಮಾಡಿದ್ದು, ಬಾಕಿ 175 ಕಟ್ಟಡಗಳನ್ನು ನೆಲಸಮ ಮಾಡುವ ಸಲುವಾಗಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ಆ ಬಳಿಕ ಬೆಸ್ಕಾಂಗೆ ವಿದ್ಯುತ್ ತೆಗೆಯಲು ಪತ್ರ ನೀಡಬೇಕು. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಕಟ್ಟಡವನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು.
ನಗರದಲ್ಲಿ ಶಿಥಲಗೊಂಡಿರುವ ಕಟ್ಟಡಗಳನ್ನು ಮುಂದಿನ 15 ದಿನಗಳಲ್ಲಿ ಸಮೀಕ್ಷೆ ಮಾಡಿ ವರದಿ ನೀಡಬೇಕು. ಆ ಬಳಿಕ ಶಿಥಿಲಗೊಂಡ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ನಿಯಮಾನುಸಾರ ಕಟ್ಟಡಗಳನ್ನು ನೆಲಸಮ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಪಾಲಿಕೆಯಿಂದಲೇ ಕಟ್ಟಡಗಳನ್ನು ನೆಲಸಮ ಮಾಡಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರ ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಬೇಕು ಎಂದು ಹೇಳಿದರು.
ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 15,000 ಕೋವಿಡ್ ನಿಂದ ಮೃತಪಟ್ಟಿರುವ ಮಾಹಿತಿ ಇದೆ. ಈ ಸಂಬಂಧ ಆಯಾ ವಾರ್ಡ್ ಕಛೇರಿಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ ರೋಗಿಯ ಸಂಖ್ಯೆಗೆ ಅನುಗುಣವಾಗಿ ಮುಂದಿನ 15 ದಿನದಲ್ಲಿ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಬೇಕು. ಕೋವಿಡ್ ನಿಂದ ಮೃತಪಟ್ಟವರಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ 1.50 ಲಕ್ಷ, ಸಾಮಾನ್ಯ ಜನರಿಗೆ 50,000 ನೀಡಲಾಗುತ್ತೆ. ಎಲ್ಲರಿಗೂ ತ್ವರಿತವಾಗಿ ಪರಿಹಾರ ನೀಡುವ ಸಲುವಾಗಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿ ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.
ಪಾಲಿಕೆ ಹೆಲ್ಪ್ ಲೈನ್ ಗೆ ರಸ್ತೆಗುಂಡಿ ದೂರುಗಳೇ ಹೆಚ್ಚು :
ಸೆ.17 ರಿಂದ ನಗರದಲ್ಲಿ ಕೋವಿಡೇತರ ನಾಗರೀಕ ಸಮಸ್ಯೆಗಳಾದ ರಸ್ತೆಗುಂಡಿ, ಬೀದಿ ದೀಪ, ನಾಯಿ ಹಾವಳಿ ಮೊದಲಾದ ಸಮಸ್ಯೆ ಇತ್ಯರ್ಥಕ್ಕೆಂದು ನಾಗರೀಕರಿಗಾಗಿ ಬಿಬಿಎಂಪಿಯು 1533 ಎಂಬ ಸಹಾಯವಾಣಿ ಆರಂಬಿಸಿದೆ. ಈ ಹೆಲ್ಪ್ ಲೈನ್ ಆರಂಭವಾದ ದಿನದಿಂದ ಸೆ.30ರ 14 ದಿನದಲ್ಲಿ ಒಟ್ಟು 329 ದೂರುಗಳು ದಾಖಲಾಗಿದ್ದು ಆ ಪೈಕಿ 130 ದೂರುಗಳು ರಸ್ತೆಗುಂಡಿ, ಮಳೆನೀರು ಮೋರಿ, ರಸ್ತೆ ನಿರ್ವಹಣೆಗೆ ಸಂಬಂಧಿಸಿದ್ದಾಗಿದೆ. ಬೀದಿ ದೀಪ ಸಮಸ್ಯೆ ಕುರಿತಂತೆ 95 ದೂರುಗಳು ಪ್ರತ್ಯೇಕವಾಗಿ ದಾಖಲಾಗಿದೆ.
ಸಚಿವರು ಕರೆದಿದ್ದ ಸಭೆಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ, ವಲಯ ವಿಶೇಷ ಆಯುಕ್ತರು, ಪ್ರಧಾನ ಮುಖ್ಯ ಅಭಿಯಂತರರಾದ ಪ್ರಭಾಕರ್, ವಲಯ ಜಂಟಿ ಆಯುಕ್ತರು, ಸೇರಿದಂತೆ ಮತ್ತಿತರರ ಅಧಿಕಾರಿಗಳು ಪಾಲ್ಗೊಂಡಿದ್ದರು.