ಬೆಂಗಳೂರು, (www.bengaluruwire.com) : ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಎಂಜನಿಯರಿಂಗ್ ಮೂರು ತಂಡಗಳಲ್ಲಿ ಪ್ರಮುಖ ವಿಂಗ್ ಆಗಿರುವ ಹಾಗೂ ದೇಶದ ಅತಿಹಳೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಸ್ಥಾಪನೆಯಾಗಿ ಇದೇ ಗುರುವಾರಕ್ಕೆ (ಸೆ.30) 241 ವರ್ಷಗಳು ಸಂದಲಿದೆ.
ಈ ಹಿನ್ನಲೆಯಲ್ಲಿ ಎಂಇಜಿ ಗ್ರೂಪ್ ನ ಬೆಂಗಳೂರಿನಲ್ಲಿರುವ ಕೇಂದ್ರಕ್ಕೆ ಮಾಧ್ಯಮದವರನ್ನು ಕರೆದೊಯ್ದು ಎಂಇಜಿ ಕಾರ್ಯವಿಧಾನದ ಬಗ್ಗೆ ತಿಳಿಸಲಾಯಿತು. ಇದೇ ವೇಳೆ ಎಂಇಜಿ ಕೇಂದ್ರದ ಕುರಿತಂತೆ ಮಾತನಾಡಿದ ಬ್ರಿಗೇಡಿಯರ್ ಟಿ.ಪಿ.ಎಸ್.ವಾಧವಾ, ಭಾರತೀಯ ಸೇನೆಯಲ್ಲೇ ಅತಿ ಹಳೆಯದಾದ ರೆಜಿಮೆಂಟ್ ಅಂದರೆ ಅದು ಮದ್ರಾಸ್ ಸ್ಯಾಪರ್ಸ್ ಆಗಿದೆ. 241 ವರ್ಷಗಳ ಹಿಂದೆ ಸ್ಥಾಪನೆಯಾಗಿ ಮೊದಲ ಹಾಗೂ ಎರಡನೆಯ ವಿಶ್ವಯುದ್ಧ ಹಾಗೂ ಕಾರ್ಗಿಲ್ ಸಮರದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿದೆ. ಸೆ.30ಕ್ಕೆ ಎಂಇಜಿ ಗ್ರೂಪ್ ಸ್ಥಾಪನೆಯಾಗಿ 241 ವರ್ಷವಾಗಲಿದ್ದು, ಸರಳ ರೀತಿಯಲ್ಲಿ ಸಂಸ್ಥಾಪನಾ ದಿನವನ್ನು ಕೋವಿಡ್ ನಿಯಮಗಳನ್ನು ಪಾಲಿಸಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಂಇಜಿ ಕೇಂದ್ರದಲ್ಲಿ 2 ವರ್ಷಗಳ ಕಠಿಣ ತರಬೇತಿ ನೀಡಿ ಪೂರ್ಣರೂಪದ ಯೋಧರನ್ನಾಗಿ ತಯಾರು ಮಾಡಲಾಗುತ್ತದೆ. ಪ್ರಾಥಮಿಕ ಮಿಲಿಟರಿ ತರಬೇತಿ, ಸುಧಾರಿತ ತಾಂತ್ರಿಕ ತರಬೇತಿ ಹಾಗೂ ಟ್ರೇಡ್ ಟ್ರೈನಿಂಗ್ ಎಂಬ ಮೂರು ವಿಭಾಗದಲ್ಲಿ ಯೋಧರಿಗೆ 14 ಬಗೆಯ ವಿವಿಧ ಕಾರ್ಯಾಗಾರಗಳನ್ನು ನೀಡಲಾಗುತ್ತದೆ. ಅದರಲ್ಲಿ ಯುದ್ಧ ಸಂದರ್ಭವನ್ನು ಎದುರಿಸುವ ಎಂಜನಿಯರಿಂಗ್ ತರಬೇತಿ ಹಾಗೂ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಸಿ ಯುದ್ಧ ಹಾಗೂ ಶಾಂತಿ ಕಾಲ ಎರಡು ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ರೀತಿಯಲ್ಲಿ ಸಶಕ್ತಗೊಳಿಸಲಾಗುತ್ತದೆ ಎಂದು ಬ್ರಿಗೇಡಿಯರ್ ವಾಧವಾ ತಿಳಿಸಿದರು.
ತರಬೇತಿ ಅವಧಿಯಲ್ಲಿ ತರಬೇತಿಗೆ ಆಯ್ಕೆಯಾದ ಯುವಕರ ದೇಹವನ್ನು ಹುರಿಗೊಳಿಸುವ ವ್ಯಾಯಾಮ, ಡ್ರಿಲ್, ಶೂಟಿಂಗ್, ಶತ್ರುಗಳನ್ನು ಮಣಿಸುವ ತಂತ್ರಗಳು, ಸಮರಾಂಗಣದಲ್ಲಿ ಎಂಜಿನಿಯರಿಂಗ್ ಕಾರ್ಯನಿರ್ವಹಣೆ, ಕದನದಲ್ಲಿ ಒಂದೊಮ್ಮೆ ಶತ್ರುಗಳನ್ನು ಎದುರಿಸುವಾಗ ಬದಕುಳಿಯುವ ಕೌಶಲ್ಯಗಳು ಸೇರಿದಂತೆ ಹಲವು ವಿಧದಲ್ಲಿ ಯುವಕರನ್ನು ಯೋಧರನ್ನಾಗಿ ತಯಾರು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಂಇಜಿ ಕೇಂದ್ರದಲ್ಲಿ ತರಬೇತಿ ಪೂರ್ತಿಗೊಳಿಸಿದ 240 ಯೋಧರು ಗೋವಿಂದಸ್ವಾಮಿ ಡ್ರಿಲ್ ಸ್ಕ್ವೇರ್ ಮೈದಾನದಲ್ಲಿ ಬುಧವಾರ ನಿರ್ಗಮನ ಪಥಸಂಚಲನ ನಡೆಸಿದರು. ಹೀಗೆ ತರಬೇತಿ ಮುಗಿಸಿದ ಯೋಧರು ಭಾರತೀಯ ಸೇನೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಳ್ಳಲಿದ್ದಾರೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ 9 ಬಾರಿ ಪ್ರಶಸ್ತಿ ಪಡೆದ ಎಂಇಜಿ ಪಡೆ :
ಎಂಇಜಿ ಗ್ರೂಪ್ ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ 9 ಬಾರಿ ಪ್ರಶಸ್ತಿಗೆ ಪಾತ್ರವಾಗಿದೆ. ಇದು ಎಂಇಜಿ ಕೇಂದ್ರದಲ್ಲಿ ಡ್ರಿಲ್ ಗೆ ನೀಡಿರುವ ಮಹತ್ವ ಹಾಗೂ ಪಥಸಂಚಲನದ ಕರಾರುವಕ್ಕಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೇಂದ್ರದಲ್ಲಿ ಸೇನಾ ತರಬೇತಿಯ ಭಾಗವಾಗಿರುವ ಪಥಸಂಚಲನಕ್ಕೆ ಡ್ರಿಲ್ ಇನ್ ಸ್ಟ್ರಕ್ಟರ್ ಆಗಿರುವ ಸುಬೇದಾರ ಅಖಿಲೇಶ್ ಕಾರ್ಯತತ್ಪರತೆ ಹಾಗೂ ಕೊಡುಗೆ ಎದ್ದು ಕಾಣುತ್ತೆ.
“ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಯೋಧರಿಗೆ 6 ತಿಂಗಳು ರಾಜಸ್ತಾನದಲ್ಲಿ ಹಾಗೂ 4 ತಿಂಗಳು ಬೆಂಗಳೂರಿನ ಎಂಇಜಿ ಕೇಂದ್ರದಲ್ಲಿ ಪಥಸಂಚಲನ ಕುರಿತ ಕಠಿಣ ತರಬೇತಿ ನೀಡಲಾಗುತ್ತದೆ. ಗ್ರೂಪ್ ಪರೇಡ್ ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಯೋಧನು ಡ್ರಿಲ್ ನಲ್ಲಿ ನೀಡುವ ಕಮಾಂಡ್ ಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪಥಸಂಚಲನದಲ್ಲಿ ಹೆಜ್ಜೆಯಿಡಬೇಕು. ಅಷ್ಟು ಕರಾರುವಕ್ಕುತನ ಇದ್ದರಷ್ಟೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯ” ಎಂದು ಹೇಳುತ್ತಾರೆ ಡ್ರಿಲ್ ಇನ್ ಸ್ಟ್ರಕ್ಟರ್ ಸುಬೇದಾರ ಅಖಿಲೇಶ್.
ಮುಂಬೈನ ತಾಜ್ ಹೋಟೆಲ್ ನಲ್ಲಿ ಉಗ್ರಗಾಮಿಗಳ ದಾಳಿ ಹಿಮ್ಮೆಟ್ಟಿಸಿದ ಕ್ಷಣ….!
“1994ರಲ್ಲಿ ಭಾರತೀಯ ಸೇನೆಗೆ ಸೇರಿದ ನಂತರ ಡ್ರಿಲ್ ಕೋರ್ಸ್ ವಿಷಯದಲ್ಲಿ ತರಬೇತಿ ಪಡೆದೆ. ಆನಂತರ ಹಲವು ಅಭ್ಯರ್ಥಿಗಳಿಗೆ ಸೇನೆಯಲ್ಲಿ ಡ್ರಿಲ್ ತರಬೇತಿ ನೀಡಿದೆ. ತಮ್ಮ ಸೇವೆಯಲ್ಲಿ 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ)ಯ ತಂಡದಲ್ಲಿ ಮೇಜರ್ ಸಂದೀಪ್ ಉನ್ನೀಕೃಷ್ಣನ್ ನೇತೃತ್ವದಲ್ಲಿನ ಕಮಾಂಡೋ ಆಪರೇಷನ್ ನಡೆದಾಗ ತಾವೂ ಕೂಡ ಪಾಲ್ಕೊಂಡಿದ್ದೆ. ಸತತ ಮೂರು ದಿನಗಳ ಕಾಲ ತಾಜ್ ಹೋಟೆಲ್ ಒಳಗೆ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿ ಉಗ್ರಗಾಮಿಗಳನ್ನು ಹೊಡೆದುರುಳಿಸಿ ಹೋಟೆಲ್ ನಿಂದ ಹೊರಬಂದೆವು. ಇದೊಂದು ಮಹತ್ವದ ಘಟನೆಯಾಗಿದೆ” ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಅಖಿಲೇಶ್ ಆ ಸನ್ನಿವೇಶವನ್ನು ಸ್ಮರಿಸಿದರು.
ದೇಶದ ಕ್ರೀಡಾ ಕ್ಷೇತ್ರದ ಪವರ್ ಹಬ್ – ಎಂಇಜಿ :
ಮದ್ರಾಸ್ ಸ್ಯಾಪರ್ಸ್ ರೆಜಿಮೆಂಟ್ ಭಾರತೀಯ ಸೇನೆಗೆ ಉತ್ತಮ ಸೈನಿಕರನ್ನು ನೀಡಿದ್ದಲ್ಲದೆ ಕ್ರೀಡಾ ಕ್ಷೇತ್ರಕ್ಕೆ ಹಲವು ಕ್ರೀಡಾಪಟುಗಳನ್ನು ರೂಪಿಸಿದೆ. 5 ದ್ರೋಣಾಚಾರ್ಯ ಪ್ರಶಸ್ತಿ, 10 ಅರ್ಜುನ ಪ್ರಶಸ್ತಿ, ಒಂದು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ 14 ಒಲಂಪಿಯನ್ ಗಳು ಮದ್ರಾಸ್ ಸ್ಯಾಪರ್ಸ್ ಸೇನಾಪಡೆಗೆ ಸೇರಿದವರಾಗಿದ್ದಾರೆ. ಇದರಿಂದಲೇ ದೇಶದ ಕ್ರೀಡಾ ಕ್ಷೇತ್ರದ ಪವರ್ ಹಬ್ ಆಗಿ ಎಂಇಜಿ ಸೆಂಟರ್ ಹೊರಹೊಮ್ಮಿದೆ.
ಮದ್ರಾಸ್ ಸ್ಯಾಪರ್ಸ್ ಮ್ಯೂಸಿಯಂನಲ್ಲಿದೆ ಅಪರೂಪದ ವಸ್ತು ಸಂಗ್ರಹ :
ಎಂಇಜಿ ಕೇಂದ್ರದಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಮದ್ರಾಸ್ ಸ್ಯಾಪರ್ಸ್ ಮ್ಯೂಸಿಯಂ ಕೂಡ ಒಂದು. ಈ ಮ್ಯೂಸಿಯಮ್ ನಲ್ಲಿ ಎಂಇಜಿ 1780 ರಿಂದ 84 ಅವಧಿಯಲ್ಲಿ ಶೊಲಿಂಗೂರ್ ಯುದ್ಧದಲ್ಲಿ ಪಾಲ್ಗೊಂಡ ಮಾಹಿತಿಯಿಂದ ಹಿಡಿದು 1991ರಲ್ಲಿ ಬಸಂತಾರ್ ನದಿ ಪ್ರದೇಶದಲ್ಲಿ ನಡೆದ ಸಮರದಲ್ಲಿ ಪಾಲ್ಗೊಂಡ ಮಾಹಿತಿಯನ್ನು ಪ್ರದರ್ಶಿಸಲಾಗಿದೆ. ಇದಲ್ಲದೆ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ವಿವಿಧ ಕಾಲಘಟ್ಟದಲ್ಲಿ ಹಲವು ರೀತಿಯ ರೆಜಿಮೆಂಟ್ ಗಳು ಹೊಂದಿದ ಧ್ವಜ, ಸೇನಾಧಿಕಾರಿಗಳು, ಸೈನಿಕರ ಧರಿಸುವ ಮಿಲಿಟರ್ ಡ್ರೆಸ್, ಮೆಡಲ್ ಗಳನ್ನು ಇಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ.
ಅಲ್ಲದೆ ಸೇನೆಯಲ್ಲಿ ಬಳಸುವ ಯುದ್ಧೋಪಕರಣಗಳು, ಕದನ ಸಂದರ್ಭದಲ್ಲಿ ಸೇನಾ ತುಕುಡಿಗಳು, ಯುದ್ಧದ ಟ್ಯಾಂಕರ್ ಗಳು ಸಾಗಲು ಅನುಕೂಲವಾಗುವಂತೆ ನದಿ ಅಥವಾ ತೊರೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಮಾದರಿಗಳನ್ನು ಇಡಲಾಗಿದೆ. ಜೊತೆಗೆ ಯುದ್ಧಗಳಲ್ಲಿ ವೀರಮರಣವನ್ನಪ್ಪಿದ, ಹುತಾತ್ಮ ಯೋಧರು, ಕೆಚ್ಚೆಧೆಯ ಧೀರೋದಾತ್ತ ಕಲಿಗಳ ಚಿತ್ರಗಳು ಅವರು ಸೇನೆಗೆ ನೀಡಿದ ಕೊಡುಗೆಯು ಇದೇ ಮ್ಯೂಸಿಯಮ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಒಟ್ಟಾರೆ ಎಂಇಜಿ 241 ವರ್ಷಗಳ ಅವಧಿಯಲ್ಲಿ ವಿಶ್ವಾದ್ಯಂತ ಕೈಗೊಂಡ ಪ್ರಮುಖ ಸಾಧನೆಯ ಹಾದಿಯನ್ನು ಈ ಮ್ಯೂಸಿಯಮ್ ನ ಒಳಹೊಕ್ಕರೆ ಕಣ್ತುಂಬಿಕೊಳ್ಳಬಹುದು. ಅಷ್ಟು ಅಚ್ಚುಕಟ್ಟಾಗಿ ಸಂಗ್ರಹಾಲಯವು ಸುಸಜ್ಜಿತವಾಗಿದೆ.
ಈ ಸೆಂಟರ್ ನಲ್ಲಿದೆ ಹುತಾತ್ಮರ ತ್ಯಾಗ- ಬಲಿದಾನ ನೆನಪಿಸುವ ಯುದ್ಧ ಸ್ಮಾರಕ :
ಸುಧೀರ್ಘ 241 ವರ್ಷಗಳ ಇತಿಹಾಸ ಹೊಂದಿರುವ ಮದ್ರಾಸ್ ಸ್ಯಾಪರ್ಸ್ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಸ್ವಾತಂತ್ರ್ಯಾನಂತರ ಭಾರತ- ಪಾಕಿಸ್ತಾನ ಕದನ, ಭಾರತ- ಚೀನಾ ಸಮರ, ಕಾರ್ಗಿಲ್ ಯುದ್ಧ ಸೇರಿದಂತೆ ಶತ್ರುಗಳ ವಿರುದ್ಧ ನಡೆದ ಯುದ್ಧದಲ್ಲಿ ಹಲವು ವೀರ ಯೋಧರು ಹುತಾತ್ಮರಾಗಿದ್ದಾರೆ. ಅಂತಹ ವೀರ ಸೈನಿಕರ ನೆನಪಿಗಾಗಿ ಎಂಇಜಿ ಕೇಂದ್ರದಲ್ಲಿ ಯುದ್ಧ ಸ್ಮಾರಕವನ್ನುಹಲವು ದಶಕಗಳ ಹಿಂದೆಯೇ ಸ್ಥಾಪಿಸಲಾಗಿದೆ.
MEG ಯೋಧರಿಗೆ ಅಲಸೂರು ಕೆರೆಯೆಂಬ ಪಾಠಶಾಲೆ :
ಎಂಇಜಿ ಸೈನಿಕರಿಗೆ ನೀಡುವ ಹಲವು ವಿಧದ ಯುದ್ಧ ತರಬೇತಿಯಲ್ಲಿ ಸಮರಾಂಗಣ ನಡೆಯುವ ಸಂದರ್ಭದಲ್ಲಿ ನದಿ, ಕಾಲುವೆ ಅಥವಾ ಮತ್ತಿತರ ಸ್ಥಳಗಳಲ್ಲಿ ಕಡಿಮೆ ಅವಧಿಯಲ್ಲಿ ತೇಲುವ ಸೇತುವೆ ನಿರ್ಮಿಸುವ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯುದ್ಧ ಸಾಮಗ್ರಿಗಳನ್ನು, ಯುದ್ಧ ಟ್ಯಾಂಕರ್ ಸಾಗಲು ಅನುವಾಗುವಂತೆ ರಸ್ತೆ, ದಾರಿ ನಿರ್ಮಿಸಿ ಮೂಲಸೌಕರ್ಯವನ್ನು ಕಲ್ಪಿಸುವ ತರಬೇತಿಯನ್ನು ಹಲಸೂರಿನ ಕೆರೆ ಪ್ರದೇಶದಲ್ಲಿ ನೀಡಲಾಗುತ್ತದೆ. ಇದಲ್ಲದೆ ಸೇನೆಯಲ್ಲಿರುವ ಕ್ರೀಡಾಪಟುಗಳಿಗೆ ಜಲಕ್ರೀಡೆಗಳ ತರಬೇತಿಯನ್ನು ಇದೇ ಕೇಂದ್ರದಲ್ಲಿ ನೀಡಲಾಗುತ್ತದೆ. ಬೋಟ್ ರೈಡ್, ರಾಫ್ಟಿಂಗ್, ಸೈಲಿಂಗ್, ಈಜುವಿಕೆ ಸೇರಿದಂತೆ ವಿವಿಧ ರೀತಿಯ ಜಲಕ್ರೀಡೆ ಕುರಿತು ನುರಿತ ಅಧಿಕಾರಿಗಳು ತಮ್ಮ ಅನುಭವನ್ನು ಇಲ್ಲಿ ಧಾರೆ ಎರೆದು ಸಶಕ್ತ ಕ್ರೀಡಾಪಟು ಹಾಗೂ ಯೋಧರನ್ನು ರೂಪಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಮದ್ರಾಸ್ ಸ್ಯಾಪರ್ಸ್ ಇತಿಹಾಸ ಹೀಗಿದೆ :
ಸ್ವಾತಂತ್ರ್ಯ ಪೂರ್ವದಲ್ಲಿ 30-09-1780ರಲ್ಲಿ ಆಗಿನ ಬ್ರಿಟೀಷ್ ಆಳ್ವಿಕೆಯಲ್ಲಿ ಮದ್ರಾಸ್ ಸರ್ಕಾರ ಎರಡು ಪಡೆಗಳನ್ನು ನೇಮಿಸಿ ಅದಕ್ಕೆ ಕಂಪನೀಸ್ ಆಫ್ ಪಯೋನೀರ್ಸ್ ಎಂದು ಹೆಸರಿಟ್ಟಿತ್ತು. ತದನಂತರ 1831ರಲ್ಲಿ ಕಾರ್ಪ್ಸ್ ಆಫ್ ಮದ್ರಾಸ್ ಸ್ಯಾಪರ್ಸ್ ಎಂಡ್ ಮೈನರ್ಸ್ ಅಂತ ಹೆಸರಿಟ್ಟು ಮದ್ರಾಸ್ ಪ್ರದೇಶದಲ್ಲಿದ್ದ ಈ ಎಂಇಜಿ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. 1780ರಿಂದಲೂ ವಿಶ್ವಾದ್ಯಂತ ನಡೆದ ಹಲವು ಯುದ್ಧಗಳಲ್ಲಿ ಮದ್ರಾಸ್ ಸ್ಯಾಪರ್ಸ್ ಆಗ ಅಸ್ಥಿತ್ವದಲ್ಲಿದ್ದ ಬ್ರಿಟೀಷ್ ಸೇರಿದಂತೆ ವಿವಿಧ ಸರ್ಕಾರಕ್ಕೆ ಹಾಗೂ ಸ್ವಾತಂತ್ರ್ಯನಂತರ ಭಾರತ ಎದುರಿಸಿದ ಕದನದಲ್ಲಿ ಭಾರತೀಯ ಸೇನೆಗೆ ಮಹತ್ವದ ಬಲ ತಂದುಕೊಟ್ಟಿದ್ದು ಇದೇ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆಗಿದೆ.
ಮದ್ರಾಸ್ ಸ್ಯಾಪರ್ಸ್ ಅಂತಲೇ ಪ್ರಸಿದ್ಧಿಯಾಗಿರುವ ಎಂಇಜಿಯು ತನ್ನದೇ ಆದ ವಿಶಿಷ್ಠ ಪರಂಪರೆಯನ್ನು ಹೊಂದಿದೆ. 241 ವರ್ಷಗಳ ಸುಧೀರ್ಘ ಪಯಣದಲ್ಲಿ ಸಾವಿರಾರು ಮಹನೀಯ ಯೋಧರನ್ನು, ಕ್ರೀಡಾಪಟುಗಳನ್ನು ದೇಶಕ್ಕೆ ಧಾರೆ ಎರೆದಿದೆ. ಆ ಮೂಲಕ ದೇಶದ ಹೆಮ್ಮೆಯ ಸೇನಾಪಡೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಂತಹ ಯೋಧರಿಗೆ ನಮ್ಮ- ನಿಮ್ಮೆಲ್ಲರ ಸೆಲ್ಯೂಟ್ ಇರಲಿ.