ಬೆಂಗಳೂರು, (www.bengaluruwire.com) : ಬೆಂಗಳೂರಿನಲ್ಲಿ ಬಿ- ಖಾತಾ ಸ್ವತ್ತಿನ ಮಾಲೀಕರ ಸ್ವತ್ತುಗಳನ್ನು ಸುಧಾರಣಾ ವೆಚ್ಚ ಪಾವತಿಸಿಕೊಂಡು “ಎ” ಖಾತಾ ಸ್ವತ್ತುಗಳಾಗಿ ನೋಂದಾಯಿಸಲು 15 ವರ್ಷದಿಂದ ಸಾಧ್ಯವಾಗಿಲ್ಲ. ಸರ್ಕಾರದ ಇಬ್ಬಗೆಯ ನೀತಿಯಿಂದಾಗಿ “ಬಿ” ಖಾತೆ ಸ್ವತ್ತು ಹೊಂದಿದ ನಗರದ ಆಸ್ತಿ ಮಾಲೀಕರು ಬ್ಯಾಂಕ್ ಲೋನ್ ಪಡೆಯುವುದು ಸೇರಿದಂತೆ ಮತ್ತಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಇನ್ನೊಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಅಂದಾಜು 6.90 ಲಕ್ಷ ಸ್ವತ್ತುಗಳಿಂದ ಏಳು ವರ್ಷಗಳ ಆಸ್ತಿ ತೆರಿಗೆ ಹಾಗೂ ಸುಧಾರಣಾ ವೆಚ್ಚವೂ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಆಗದೆ ಇರುವ ರೆವೆನ್ಯೂ ಬಡಾವಣೆಗಳಲ್ಲಿನ ನಿವೇಶನಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡು “ಬಿ” ವಹಿ ಖಾತಾಗಳನ್ನು “ಎ” ವಹಿಗೆ ಖಾತೆ ನೋಂದಾಯಿಸುವಂತೆ ಸೂಕ್ತ ಸರ್ಕಾರಿ ಆದೇಶ ಹೊರಡಿಸಲು ಪಾಲಿಕೆಯ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ 19 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಆ ಪೈಕಿ 6.90 ಲಕ್ಷ ಸ್ವತ್ತುಗಳ ಪೈಕಿ 5.40 ಲಕ್ಷ ಸ್ವತ್ತುಗಳು “ಬಿ” ವಹಿ ಖಾತಗಳಾಗಿದ್ದು, 1.50 ಲಕ್ಷ ಸ್ವತ್ತುಗಳು “ಬಿ” ವಹಿ ಖಾತಾಗಳನ್ನು “ಎ” ವಹಿಗೆ ಖಾತೆ ಈ ಎರಡಕ್ಕೂ ಸೇರಿಲ್ಲದ ಆಸ್ತಿಗಳಾಗಿದೆ. ಈ ಎರಡು ವರ್ಗದ ಆಸ್ತಿಗಳಿಂದ ಪಾಲಿಕೆಯು ಏಳು ವರ್ಷದ ಆಸ್ತಿ ತೆರಿಗೆ ಹಾಗೂ ಸುಧಾರಣಾ ವೆಚ್ಚವನ್ನು ಕಟ್ಟಿಸಿಕೊಂಡರೆ ಪಾಲಿಕೆಗೆ ಕನಿಷ್ಠ ಅಂದರೂ ಒಂದು ಬಾರಿಗೆ 2,000 ಕೋಟಿ ರೂಪಾಯಿ ಆದಾಯ ಹರಿದು ಬರಲಿದೆ. ಹಾಗೆಯೇ 1.50 ಲಕ್ಷ ಆಸ್ತಿಗಳು ನಿಯಮಿತವಾಗಿ ಆಸ್ತಿ ತೆರಿಗೆ ಪರಿಧಿಗೆ ಸೇರ್ಪಡೆಯಾಗಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಈ ಹಿಂದೆಯೂ ಬಿಬಿಎಂಪಿಯು 2019ರ ಜನವರಿ 29ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಸ್ವತ್ತುಗಳನ್ನು ಆಸ್ತಿತೆರಿಗೆ ಪರಿಧಿಗೆ ತಂದು “ಬಿ” ವಹಿ ಖಾತಾಗಳನ್ನು “ಎ” ವಹಿಗೆ ಖಾತೆಗೆ ದಾಖಲಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆಗಲೂ ಸರ್ಕಾರ ಇದಕ್ಕೆ ಸೊಪ್ಪು ಹಾಕಿರಲಿಲ್ಲ.
ಸರ್ಕಾರದ ಇಬ್ಬಗೆ ನೀತಿಯೇನು?
ಇದರಿಂದ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯೇನು?
ರಾಜ್ಯ ಸರ್ಕಾರವು 11-12-2006ರಂದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 95ರ ಅನ್ವಯ ಭೂಪರಿವರ್ತನೆಗೊಂಡು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ವಿಭಜನೆಗೊಳಗಾದ ಸ್ವತ್ತುಗಳಿಗೆ ಖಾತೆ ನೋಂದಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಈ ಹಿನ್ನಲೆಯಲ್ಲಿ 02-01-2007ರಿಂದ ಬೆಂಗಳೂರಿನಲ್ಲಿ ರೆವಿನ್ಯೂ ನಿವೇಶನಗಳಿಗೆ ಖಾತೆ ನೋಂದಾಯಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಕರ್ನಾಟಕ ಮುನಿಸಿಪಲ್ ಕಾಯ್ದೆ (ಕೆಎಂಸಿ) 1976ರ ಪ್ರಕರಣ 108ಕ್ಕೆ ತಿದ್ದುಪಡಿ ತಂದು ಹೊಸದಾಗಿ 102ಎ ಎಂಬುದನ್ನು ಜಾರಿಗೆ ತಂದು ರೆವೆನ್ಯೂ ನಿವೇಶನ ಅಥವಾ ಸ್ವತ್ತುಗಳ ವಿವರವನ್ನು “ಬಿ” ವಹಿ ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸಿಕೊಂಡು ಆಸ್ತಿ ತೆರಿಗೆ ಮಾತ್ರ ವಸೂಲು ಮಾಡಲಾಗುತ್ತಿದೆ. ಆದರೆ ಪಾಲಿಕೆಯು ಇಂತಹ ಸ್ವತ್ತುಗಳಿಗೆ ಖಾತೆ ಮಾಡುತ್ತಿಲ್ಲ.
ಇನ್ನೊಂದೆಡೆ ಬಿಬಿಎಂಪಿಯು 2019ರ ಜನವರಿ 24ರಂದು “ಬಿ” ವಹಿ ರಿಜಿಸ್ಟರ್ ನಲ್ಲಿರುವ ಸ್ವತ್ತುಗಳನ್ನು “ಎ” ವಹಿಗೆ ನಮೂದಿಸಿ ಖಾತೆಗೆ ಮಾಡಿಕೊಡಲು ಅನುವಾಗುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರವು 12-07-2019ರಂದು ಬಿ- ವಹಿಯನ್ನು ಎ- ರಿಜಿಸ್ಟರ್ ಗೆ ಬದಲಾಯಿಸಿ ಖಾತೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಆದೇಶಿಸಿತ್ತು.
ಈ ಮಧ್ಯೆ 04-09-2021ರಂದು ರಾಜ್ಯ ಸರ್ಕಾರವೇ ಬಿಬಿಎಂಪಿ ಕಾಯ್ದೆ 2020ರ ಪ್ರಕರಣ 144(20)ರಂತೆ “ಪಾಲಿಕೆಯು ಸ್ವತ್ತು ತೆರಿಗೆಯನ್ನು ಪಾವತಿಸುವ ಪ್ರತಿಯೊಬ್ಬ ವ್ಯಕ್ತಿಗೆ ಅಂತ ತೆರಿಗೆ ಪಾವತಿಗಾಗಿ ಸ್ವೀಕೃತಿ ಅಥವಾ ಖಾತಾವನ್ನು ನೀಡತಕ್ಕದ್ದು. ಮತ್ತು ಹಾಗೆ ನೀಡಲಾದ ಅಂಥ ಸ್ವೀಕೃತಿ ಅಥವಾ ಖಾತಾವು ಕಾನೂನುಬದ್ಧ ಮತ್ತು ಕಾನೂನು ಬದ್ಧವಲ್ಲದ ಕಟ್ಟಡಗಳಿಗೆ ಅಥವಾ ಖಾಲಿ ಭೂಮಿಗೆ ವಿಭಿನ್ನವಾಗಿರತಕ್ಕದ್ದು. ಹಾಗೆಯೇ ಅಂಥಹ ಸ್ವೀಕೃತಿ ಅಥವಾ ಖಾತಾದ ನಮೂನೆಯು ನಿಯಮಗಳ ಅಡಿಯಲ್ಲಿ ಕಾಲಕಾಲಕ್ಕೆ ನಿಯಮಿಸಬಹುದಾದಂತೆ ಇರತಕ್ಕದ್ದು” ಎಂದು ತಿಳಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಮತ್ತು ಈ ವಿಷಯದಲ್ಲಿ ಸರ್ಕಾರವು ಪಾಲಿಕೆಗೆ ಯಾವುದೇ ನಿರ್ದೇಶನ ನೀಡಬೇಕಾಗಿಲ್ಲ. ಬಿಬಿಎಂಪಿಯು ಇದನ್ನು ಅನುಷ್ಠಾನಗೊಳಿಸಬೇಕೆಂದು ತಿಳಿಸಿದೆ.
ಒಂದೆಡೆ ರೆವೆನ್ಯೂ ಬಡಾವಣೆಗಳಲ್ಲಿನ ಬಿ ವಹಿ ಸ್ವತ್ತುಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡು ಎ- ಖಾತಾ ನೋಂದಾಯಿಸಲು ಕೆಎಂಸಿ 1976ರ ಕಾಯ್ದೆಯಲ್ಲಾಗಲಿ ಹಾಗೂ ಬಿಬಿಎಂಪಿ 2020ರ ಕಾಯ್ದೆಯಲ್ಲಾಗಲಿ ಅವಕಾಶವಿಲ್ಲ. ಹಾಗಾಗಿ ಸರ್ಕಾರ ಸೂಚಿಸಿರುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸರ್ಕಾರದ ಸಮಿತಿ ರಚಿಸಿ ನಿಯಮಾವಳಿ ರಚಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರದಿಂದ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಬಿಬಿಎಂಪಿ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆಯ ಅಸಹಾಯಕ ಪರಿಸ್ಥಿತಿಯನ್ನು ಪತ್ರ ಬರೆದು ಸರ್ಕಾರಕ್ಕೆ ಕೋರಿದ್ದಾರೆ.
“ಬೆಂಗಳೂರು ನಗರ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಸಂದರ್ಭದಲ್ಲಿ ಇಲ್ಲಿನ ಜಮೀನುಗಳ ಭೂಪರಿವರ್ತನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಿರುವಾಗ ಈ ಹಿಂದೆ 2006ರಲ್ಲಿ ರಾಜ್ಯ ಸರ್ಕಾರ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 97ರ ಅನ್ವಯ ತಂದಿದ್ದ ಸುಗ್ರೀವಾಜ್ಞೆಯನ್ನು ರದ್ದುಪಡಿಸಿ, ಬಿ- ವಹಿಯಲ್ಲಿ ದಾಖಲಿಸಿದ ಸ್ವತ್ತುಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡು ಎ- ವಹಿಯಲ್ಲಿ ನಮೂದಿಸಿ ಖಾತಾ ನೋಂದಾಯಿಸಿದರೆ ಬೆಂಗಳೂರಿನ ಲಕ್ಷಾಂತರ ಸ್ವತ್ತಿನ ಮಾಲೀಕರಿಗೆ ಅನುಕೂಲವಾಗುತ್ತದೆ. ಈ ಹಿಂದೆಯೂ ಪಾಲಿಕೆಯಲ್ಲಿ ಈ ರೀತಿ ಮಾಡಿದ ನಿದರ್ಶನಗಳಿವೆ.”
– ರಾಮಲಿಂಗಾರೆಡ್ಡಿ, ಮಾಜಿ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು
ಈಗ ಸರ್ಕಾರದಿಂದ ಆಗಬೇಕಿರುವ ಕೆಲಸವೇನು?
ಪ್ರಸ್ತುತ 2010ರಲ್ಲಿ ಕೆಎಂಸಿ ಕಾಯ್ದೆ 1976ರ ಪ್ರಕರಣ 466 ಮತ್ತು 466 (ಬಿ) ಕ್ಕೆ ಹೊಸದಾಗಿ ನಿಯಮಗಳನ್ನು ರಚಿಸಿ, ಭೂಪರಿವರ್ತನೆಯಾಗಿ ವಿಭಜನೆ ಮಾಡಿರದ ಏಕ ನಿವೇಶನಗಳಿಗೆ ಮಾತ್ರ ಸುಧಾರಣಾ ವೆಚ್ಚ ಪಾವತಿಸಿಕೊಂಡು ಖಾತೆ ರಿಜಿಸ್ಟರ್ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ ಭೂಪರಿವರ್ತನೆಯಾಗಿ ವಿಭಜನೆಯಾದ ನಿವೇಶನಗಳಿಗೆ ಸುಧಾರಣಾ ವೆಚ್ಚ ಕಟ್ಟಿಸಿಕೊಂಡು ಎ-ಖಾತೆಯಾಗಿ ನೋಂದಾಯಿಸಲು ಅವಕಾಶವಿಲ್ಲ. ಒಂದು ಬಾರಿ ಬೆಂಗಳೂರು ನಗರ ಅಥವಾ ನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ನಂತರ ಕೃಷಿಭೂಮಿ ಅಥವಾ ಜಮೀನಿನ ಭೂಪರಿವರ್ತನೆ ಎಂಬ ವಿಚಾರ ತರ್ಕಹೀನವಾಗಿರುತ್ತೆ. ಆದ್ದರಿಂದ ಸರ್ಕಾರದ ಕಂದಾಯ ಇಲಾಖೆ 11-12-2006ರಂದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 95ರ ಅನ್ವಯ ಭೂಪರಿವರ್ತನೆಗೊಂಡು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ವಿಭಜನೆಗೊಳಗಾದ ಸ್ವತ್ತುಗಳಿಗೆ ಖಾತೆ ನೋಂದಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು ಹಿಂಪಡೆದೋ ಅಥವಾ ಸೂಕ್ತ ತಿದ್ದುಪಡಿ ತಂದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ “ಬಿ” ರಿಜಿಸ್ಟರ್ ನಲ್ಲಿ ದಾಖಲಿಸಿದ ಆಸ್ತಿಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡು “ಎ” ವಹಿನಲ್ಲಿ ನಮೂದಿಸಿ, ಖಾತೆ ನೋಂದಾಯಿಸಲು ಅನುಕೂಲವಾಗುತ್ತದೆ. ಇದನ್ನು ಬಹಳ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ಮುಖ್ಯ ಆಯುಕ್ತರು ತಮ್ಮ ಪತ್ರದಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.
ಒಂದೊಮ್ಮೆ ಇದು ಹೀಗೆ ಮುಂದುವರೆದರೆ ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ನರಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವರ್ಷಂಪ್ರತಿ ಸಾವಿರಾರು ಕೋಟಿ ರೂಪಾಯಿ ಹಣ ಕರ್ಚು ಮಾಡುತ್ತಿದೆ. ಆದರೂ ಕಂದಾಯ ಇಲಾಖೆ ಭೂ ಕಂದಾಯ ಕಾಯ್ದೆ ತಿದ್ದುಪಡಿಯಿಂದ ಪಾಲಿಕೆಗೆ ಆಸ್ತಿ ತೆರಿಗೆ ಹಾಗೂ ಸುಧಾರಣಾ ವೆಚ್ಚದ ವರಮಾನ ಇಲ್ಲದೆ 15 ವರ್ಷಗಳಿಂದ ವರಮಾನ ಸ್ಥಗಿತಗೊಂಡಿದೆ. ಈ ಗೊಂದಲಕ್ಕೆ ಸರ್ಕಾರ ತೆರೆ ಎಳೆದು ಬಿ- ರಿಜಿಸ್ಟರ್ ನಲ್ಲಿ ದಾಖಲಿಸಿರುವ ಸ್ವತ್ತಿನ ಮಾಲೀಕರು ಹಾಗೂ ಬಿಬಿಎಂಪಿಗೆ ಬಿಗ್ ರಿಲೀಫ್ ನೀಡಬೇಕಾಗಿದೆ.