ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಮುಖ್ಯ ಆಯುಕ್ತರು ಹಾಗೂ ವಿಶೇಷ ಹಣಕಾಸು ಆಯುಕ್ತರ ಹುದ್ದೆಯೂ ಸೇರಿದಂತೆ ಅಧಿಕಾರಿಗಳ ಭರಪೂರ ವರ್ಗಾವಣೆಯಾಗುವ ಸುದ್ದಿ ಹೊರಬಿದ್ದಿದೆ.
ಕಳೆದ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದು, ಈ ವರ್ಷದ ಏಪ್ರಿಲ್, ಮೇ ನಲ್ಲಿ ತೀವ್ರವಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಮೇಜರ್ ಸರ್ಜರಿಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯಿತ್ತು. ಹಾಗಾಗಿ ಬೆಂಗಳೂರು ಸಚಿವರು, ಶಾಸಕರು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದರೂ ಅದಿಕ್ಕೆ ಅವರು ಸೊಪ್ಪು ಹಾಕಿರಲಿಲ್ಲ.
ಆದರೆ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಶಾಸಕರು ಹಾಗೂ ಸಚಿವರು ಅಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿದಿದ್ದು, ಕೆಲವು ದಿನಗಳ ಒಳಗಾಗಿ ಅಧಿಕಾರಿಗಳ ವರ್ಗಾವಣೆ ಪಟ್ಟಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯಿಂದ ಪ್ರಕಟವಾಗಲಿದೆ ಎಂದು ಗೊತ್ತಾಗಿದೆ.
ಕನಿಷ್ಠ ಎರಡು- ಮೂರು ಐಎಎಸ್ ಅಧಿಕಾರಿಗಳು, ದಾಸರಹಳ್ಳಿ, ಪಶ್ಚಿಮ ಹಾಗೂ ಮಹದೇವಪುರ ವಲಯ ಜಂಟಿ ಆಯುಕ್ತರ ಹುದ್ದೆ ಹೊರತುಪಡಿಸಿ, ಪೂರ್ವ ವಲಯ, ದಕ್ಷಿಣ ವಲಯ, ರಾಜರಾಜೇಶ್ವರಿ ನಗರ ವಲಯ, ಯಲಹಂಕ ಹಾಗೂ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರ ಹುದ್ದೆಯಲ್ಲಿದ್ದವರನ್ನು ಬದಲಾಯಿಸಿ ಬೇರೆ ಅಧಿಕಾರಿಗಳನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.
ಪ್ರಭಾವೀ ಹಾಗೂ ಆಯಕಟ್ಟಿನ ಹುದ್ದೆಗೆ ಪ್ರಬಲ ಲಾಭಿ
ಕೌನ್ಸಿಲರ್ ಗಳಿಲ್ಲದೆ ಆಡಳಿತಾಧಿಕಾರಿ ಅವಧಿ ಬಂದು ಒಂದು ವರ್ಷ ಆದ ಹಿನ್ನಲೆ ಹಾಗೂ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾದ ಕಾರಣ ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗೆ ನೇಮಿಸಲು ಬೆಂಗಳೂರಿನ ಸಚಿವರು ಹಾಗೂ ಶಾಸಕರು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಅಲ್ಲದೆ ಹೆಚ್ಚು “ಅನುಕೂಲ” ಹಾಗೂ ಪ್ರಭಾವ ಹೊಂದಿದ ಅಧಿಕಾರ ಸ್ಥಾನ ಪಡೆದುಕೊಳ್ಳಲು ಬೇರೆ ಇಲಾಖೆಗಳಲ್ಲಿನ ಅಧಿಕಾರಿಗಳು ಲಾಭಿ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯ ಆಯುಕ್ತರ ಹುದ್ದೆಗೆ ಮೂವರ ಹೆಸರು ಕೇಳಿಬರುತ್ತಿದೆ :
ಈ ಹಿಂದೆ ಬಿಬಿಎಂಪಿಯಲ್ಲಿ ಮೇಯರ್ ಅವಧಿ ಮುಗಿದ ಬಳಿಕ ಆಡಳಿತಾಧಿಕಾರಿ ಹುದ್ದೆಗೇರಿದ್ದ ಗೌರವಗುಪ್ತಾ, ಬಿಬಿಎಂಪಿ ಕಾಯ್ದೆ-2020 ರ ಜಾರಿಗೆ ಬಂದ ನಂತರ ಸೃಷ್ಟಿಯಾದ ಪಾಲಿಕೆ ಮುಖ್ಯ ಆಯುಕ್ತರ ಹುದ್ದೆಯನ್ನು ಇದೇ ವರ್ಷದ ಏಪ್ರಿಲ್ ಒಂದರಂದು ವಹಿಸಿಕೊಂಡಿದ್ದರು. ಕೋವಿಡ್ ಸೋಂಕು ಏಪ್ರಿಲ್ – ಮೇ ತಿಂಗಳಲ್ಲಿ ತೀವ್ರಗತಿಯಲ್ಲಿ ಏರಿಕೆಯಾದಾಗ ಅಧಿಕಾರಿಗಳನ್ನು ಬಳಸಿಕೊಂಡು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಆದರೂ, ನಗರದಲ್ಲಿ ಸೋಂಕು ಹೆಚ್ಚಿರುವ ಕಡೆ, ಆಸ್ಪತ್ರೆಗಳಿಗೆ ನಿರಂತರ ಭೇಟಿ ನೀಡದೆ ಎಸಿ ರೂಮ್ ನಲ್ಲಿ ಬೆಳಗ್ಗೆ – ರಾತ್ರಿ ಸಭೆ ನಡೆಸಲು ಮಾತ್ರ ಸೀಮಿತರಾಗಿದ್ದರು ಎಂಬ ದೂರುಗಳು ಕೇಳಿಬಂದಿತ್ತು. ಇದೀಗ ಮುಖ್ಯ ಆಯುಕ್ತರ ಹುದ್ದೆ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸ್ಥಾನಕ್ಕೆ, ಈ ಹಿಂದೆ ಪಾಲಿಕೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಹಿರಿಯ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಹಾಗೂ ಟಫ್ ಆಫೀಸರ್ ಮೇಜರ್ ಮಣಿವಣ್ಣನ್ , ಕಪಿಲ್ ಮೋಹನ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಹುದ್ದೆ ನೀಡುವ ಬಗ್ಗೆ ಮಾತುಕತೆ ನಡೆಸಿದ್ದು, ಇದಕ್ಕೆ ಅನಿಲ್ ಕುಮಾರ್ ಸುತಾರಾಮ್ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.
ಹಣಕಾಸು ವಿಭಾಗದ ವಿಶೇಷ ಆಯುಕ್ತರ ಎತ್ತಂಗಡಿಗೆ ಮುಹೂರ್ತ ಫಿಕ್ಸ್?
ಇನ್ನೊಂದೆಡೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿ ಬಂದ ತುಳಸಿ ಮದ್ದಿನೇನಿ ತಮಗೆ ಸಂಬಂಧಪಡದ ಆಡಳಿತ ವಿಚಾರದಲ್ಲಿ ಪ್ರತಿಯೊಂದಕ್ಕೂ ಮೂಗುತೂರಿಸುತ್ತಾರೆ ಎಂಬ ಆರೋಪಗಳಿವೆ. ಪಾಲಿಕೆಯ ಎಲ್ಲ ವಿಭಾಗಗಳ ಹಣಕಾಸು ವೆಚ್ಚಕ್ಕೆ ಕೊಕ್ಕೆ ಹಾಕುವ ತುಳಸಿ ಮದ್ದಿನೇನಿ ತಮ್ಮ ಕಚೇರಿಯ ಕೊಠಡಿಗೆ ಮಾತ್ರ ಐಷಾರಾಮಿ ಒಳವಿನ್ಯಾಸ ಹಾಗೂ ಎಸಿ ಅಳವಡಿಸಿಕೊಂಡು ದುಂದುವೆಚ್ಚ ಮಾಡಿದ್ದರು ಎಂದು ಪಾಲಿಕೆ ಸಿಬ್ಬಂದಿ ಹೇಳುತ್ತಾರೆ.
ಅಲ್ಲದೆ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ಸತಾಯಿಸುತ್ತಾ ಬಂದಿದ್ದರು. ಇದು ಪಾಲಿಕೆಯಲ್ಲಿ ಗುತ್ತಿಗೆ ಪಡೆದವರು ಹಾಗೂ ಸಚಿವರು, ಶಾಸಕರ ಹಿಂಬಾಲಕರಾದ ಕಾಂಟ್ರಾಕ್ಟರ್ ಗಳ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಅವರ ಬದಲಾವಣೆಗೂ ಬಹಳ ಕಾಲದಿಂದ ಪ್ರಯತ್ನಗಳು ನಡೆದರೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ “ಕೃಪಾಕಟಾಕ್ಷ”ದಿಂದ ಪಾಲಿಕೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬದಲಾವಣೆಗೆ ಕಾಲ ಕೂಡಿಬಂದಿರಲಿಲ್ಲ.
ಬೆಂಗಳೂರು ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಮತ್ತಿತರರು ಪಾಲಿಕೆ ದಕ್ಷಿಣ ವಲಯ ಕಚೇರಿಯ ಕೋವಿಡ್ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು, ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದರು. ಬಳಿಕ ಈ ವಿಷಯದ ಬಗ್ಗೆ ಪೊಲೀಸ್ ತನಿಖೆ ಕೂಡ ನಡೆಯಿತು.
ಬೆಡ್ ಬ್ಲಾಕಿಂಗ್ ದಂಧೆ ಮತ್ತು ಕೋವಿಡ್ ಸೋಂಕು ನಿರ್ವಹಣೆ ಬಗ್ಗೆ ಆಕ್ಷೇಪ…!
ಬಿಬಿಎಂಪಿ ಕೋವಿಡ್ ವಾರ್ ರೂಮ್ ಒಂದರ ಸಾಂದರ್ಭಿಕ ಚಿತ್ರ
ಕೋವಿಡ್ ತೀವ್ರಗತಿ ಏರಿಕೆ ಸಂದರ್ಭದಲ್ಲಿ ದಕ್ಷಿಣ ವಲಯ ಆಯುಕ್ತರಾಗಿದ್ದ ತುಳಸಿ ಮದ್ದಿನೇನಿ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 2021-22ನೇ ಸಾಲಿನ ಬಜೆಟ್ ಮಂಡಿಸಿದ್ದರೂ ಅದರ ಅನುಷ್ಠಾನಕ್ಕೆ ಸೂಕ್ತ ಗಮನಹರಿಸಿರಲಿಲ್ಲ ಎಂಬ ಕುರಿತೂ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಆಗಲೂ ತುಳಸಿ ಅವರ ವರ್ಗಾವಣೆಗೆ ಸಾಕಷ್ಟು ಒತ್ತಡ ಬಂದಿದ್ದರೂ ಮೇಲಿನವರ ಕೃಪೆಯಿಂದ ಹುದ್ದೆ ಬದಲಾವಣೆಯಾಗಿರಲಿಲ್ಲ. ಈ ಐಎಎಸ್ ಅಧಿಕಾರಿ ಬೇರೆಡೆ ಎತ್ತಂಗಡಿ ಮಾಡಲು ನಗರದ ಬಹುತೇಕ ಸಚಿವರು, ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ವಿಧಾನಸಭೆ ಅಧಿವೇಶನದ ಬಳಿಕ ವರ್ಗಾವಣೆ ಮಾಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಅಧಿವೇಶನವನ್ನು ಹಗುರವಾಗಿ ಪರಿಗಣಿಸಿದ್ದ ಪಾಲಿಕೆ ಅಧಿಕಾರಿಗಳು….!
ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಪಾಲಿಕೆ ಅಧಿಕಾರಿಗಳು ಸೂಕ್ತ ಅವಧಿಯಲ್ಲಿ ಉತ್ತರ ನೀಡಿದೆ ಸರ್ಕಾರಕ್ಕೆ ಇರುಸು ಮುರಿಸು ಉಂಟಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಯಲ್ಲಿ ಆಡಳಿತ ದೃಷ್ಟಿಯಿಂದ ಅಧಿಕಾರಿಗಳ ಬದಲಾವಣೆಯ ಸೂಚನೆ ನೀಡಿದ್ದರು. ಇದಲ್ಲದೆ ಸರ್ಕಾರದ ಆದೇಶದಂತೆ ವಾರ್ಡ್ ಮರು ವಿಂಗಡಣೆ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕಿದೆ. ಬಹಳ ಕಾಲದಿಂದ ಒಂದೆಡೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಮೇಲೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ವಾರ್ಡ್ ಗಡಿ ಗುರುತು ಸಂದರ್ಭದಲ್ಲಿ ಪ್ರಭಾವ ಬೀರುವ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಬದಲಾಯಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಹೊರಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.