ಬೆಂಗಳೂರು, (www.bengaluruwire.com) : ಕೃಷಿಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಮ್) ಸೆ.27 ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಇದಕ್ಕೆ ರಾಜ್ಯದ ರೈತ ಸಂಘಟನೆ, ಕಾರ್ಮಿಕ ಸಂಘಗಳು ಸೇರಿದಂತೆ ವಿವಧ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್ ಯಶಸ್ವಿಗೊಳಿಸಲು ನಿರ್ಧರಿಸಿವೆ.
ಭಾರತ್ ಬಂದ್ ನಿಂದಾಗಿ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ನೀಡಲಿವೆ. ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಆಚರಿಸಲು ರೈತ ಸಂಘಟನೆಗಳ ತೀರ್ಮಾನಿಸಿದೆ.
ಕರ್ನಾಟಕ ಬಂದ್ಗೆ ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಟೊರಿಕ್ಷಾ ಚಾಲಕರ ಸಂಘ, ಸೆಂಟರ್ ಫಾರ್ ಆಲ್ ಇಂಡಿಯಾ ಟ್ರೇಡ್ ಯೂನಿಯನ್ (ಸಿಐಟಿಯು) ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ. ಬಂದ್ ಇದ್ದರೂ ಕರ್ನಾಟಕದಲ್ಲಿ ಬಹುತೇಕ ಕಡೆ ಜನಜೀವನ ಯಥಾಸ್ಥಿತಿ ಇರುವ ಸಾಧ್ಯತೆ ಇದೆ.
ರೈತಸಂಘಗಳು ಸಾಕಷ್ಟು ಪ್ರಭಾವ ಹೊಂದಿರುವ ತಾಲ್ಲೂಕು, ಜಿಲ್ಲೆ ಅಥವಾ ನಗರ ಪ್ರದೇಶಗಳಲ್ಲಿ ದೈನಂದಿನ ವ್ಯಾಪಾರ – ವಹಿವಾಟುಗಳಿಗೆ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುವ ನಿರೀಕ್ಷೆಯಿದೆ.
“ನಾಳೆ ಬೆಳಗ್ಗೆ 8 ಗಂಟೆಗೆ ನೂರಾರು ಸಂಘಟನೆಗಳ ಕಾರ್ಯಕರ್ತರು, ರೈತರು ವಿವಿಧ ರ್ಯಾಲಿಗಳಲ್ಲಿ ಆಗಮಿಸಿ ಟೌನ್ ಹಾಲ್ ಮುಂಭಾಗ ಬಂದು ಸೇರುತ್ತಾರೆ. ಬೆಳಗ್ಗೆ 11 ಗಂಟೆಗೆ ಎಲ್ಲಾ ಸಂಘಟನೆಗಳು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ಬಳಿಕ ಕೃಷಿ ಕಾಯ್ದೆ ತಿದ್ದುಪಡಿ ವಾಪಾಸಾತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿಪತ್ರ ನೀಡಲು ಯೋಜಿಸಲಾಗಿದೆ. ಕರ್ನಾಟಕದ ಎಲ್ಲ ಜಿಲ್ಲಾ, ತಾಲ್ಲೂಕುಗಳಲ್ಲಿ ಹೆದ್ದಾರಿ ತಡೆ ನಡೆಸಿ ಕೇಂದ್ರದ ನೀತಿ ವಿರುದ್ಧ ಪ್ರತಿಭಟಿಸಲಾಗುತ್ತದೆ. ಪ್ರತಿಭಟನಾಕಾರರು ಶಾಂತಿ- ಶಿಸ್ತು ಹಾಗೂ ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ.”
– ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ
ಯಾರು ಯಾರು ನೈತಿಕ ಬೆಂಬಲ ಕೊಡುತ್ತಿದ್ದಾರೆ?
ಸಾರಿಗೆ ಸಂಸ್ಥೆಗಳ ನೌಕರರ ಕೂಟ, ಲಾರಿ ಮಾಲೀಕರ ಸಂಘಗಳ ಒಕ್ಕೂಟ, ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ, ಮಾರುಕಟ್ಟೆ ವರ್ತಕರ ಸಂಘ, ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟ (ಕ್ಯಾಮ್ಸ್), ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್ಗೆ ನೈತಿಕ ಬೆಂಬಲ ನೀಡಲಿವೆ. ಆದರೆ ತಮ್ಮ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವುದಿಲ್ಲ ಎಂದು ತಿಳಿಸಿವೆ.
“ಕರ್ನಾಟಕ ರಕ್ಷಣಾ ವೇದಿಕೆ ಮೊದಲಿಂದಲೂ ರೈತ ಹೋರಾಟ, ಚಳುವಳಿಯನ್ನು ಬೆಂಬಲಿಸುತ್ತಾ ಬಂದಿದೆ. ಕರೋನಾದಂತಹ ಸಂಕಷ್ಟ ಕಾಲದಲ್ಲಿ ಭಾರತ್ ಬಂದ್ ಗೆ ನಮ್ಮ ನೈತಿಕ ಬೆಂಬಲವಿರಲಿದೆ. ಬಂದ್ ನಲ್ಲಿ ಕರವೇ ಪಾಲ್ಗೊಳ್ಳದು. ಆದರೆ ರೈತರನ್ನು ಬೆಂಬಲಿಸಿ ಪ್ರತ್ಯೇಕವಾಗಿ ಸಮಯ ನೋಡಿ ರ್ಯಾಲಿ ಮಾಡಬೇಕು ಎಂದುಕೊಂಡಿದ್ದೇವೆ. ಈ ಬಗ್ಗೆ ಕರವೇ ಪದಾಧಿಕಾರಿಗಳ ಸಭೆ ಸೇರಿ ನಿರ್ಧರಿಸುತ್ತೇವೆ.”
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
“ಸೆ.27ರಂದು ರೈತ ಸಂಘಟನೆಗಳು ಕರೆದಿರುವ ಭಾರತ್ ಬಂದ್ ಗೆ ನಮ್ಮ ಸಂಘಟನೆಯ ಬೆಂಬಲವಿಲ್ಲ. ಕರೋನಾ ಸಂಕಷ್ಠ ಸಂದರ್ಭದಲ್ಲಿ ಹೋಟೆಲ್ ಉದ್ಯಮ ಸಾಕಷ್ಟು ತೊಂದರೆ ಅನುಭವಿಸಿತ್ತು. ಯಾವ ಸರ್ಕಾರಗಳು ನಮಗೆ ಬೆಂಬಲ ಕೊಡಲಿಲ್ಲ. ಹೋಟೆಲ್ ಉದ್ಯಮ ನಷ್ಟ ಅನುಭವಿಸಿದೆ. ಹಾಗಾಗಿ ಈ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ.”
– ಬಿ.ಚಂದ್ರಶೇಖರ ಹೆಬ್ಬಾರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘ
ಬಸ್, ಮೆಟ್ರೋ ರೈಲು ಹಾಗೂ ನಿಲ್ದಾಣಗಳಿಗೆ ಭದ್ರತೆಗೆ ಕೋರಿಕೆ :
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಆಯಾ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಬಂದ್ ಸಂದರ್ಭದಲ್ಲಿ ಬಸ್, ಮೆಟ್ರೊ ಮತ್ತು ಸಂಸ್ಥೆಗಳ ಆಸ್ತಿಪಾಸ್ತಿಗೆ ಮತ್ತು ಸಿಬ್ಬಂದಿಗೆ ಹಾನಿಯಾಗದಂತೆ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿವೆ.
ಸೋಮವಾರ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಭಾರತ್ ಬಂದ್ ಗೆ
ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ, ರಾಜ್ಯ ಪ್ರಾಂತ ರೈತ ಸಂಘ, ರೈತ ಕಾರ್ಮಿಕರ ಸಂಘ, ಅಖಿಲ ಭಾರತ್ ಕಿಸಾನ್ ಸಭಾ, ಆಟೋ ಮಾಲೀಕರು, ಕ್ಯಾಬ್ ಚಾಲಕರ ಸಂಘ, ಬ್ಯಾಂಕ್ ಒಕ್ಕೂಟ ಸೇರಿದಂತೆ ನಾನಾ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.
ಸೋಮವಾರ ಹೆದ್ದಾರಿ ತಡೆ ಹಿನ್ನಲೆ –
ಪ್ರಮುಖ ಯಾವೆಲ್ಲಾ ರಸ್ತೆಗಳು ಬಂದ್..!?
-ಹಳೆ ಮದ್ರಾಸ್ ರೋಡ್ ಲಾಕ್
-ಬೆಂಗಳೂರು ಟೂ ಮೈಸೂರು ರೋಡ್. ಬಿಡದಿ ಮತ್ತು ಮಂಡ್ಯ ಬಳಿ ರಸ್ತೆ ತಡೆಗೆ ನಿರ್ಧಾರ.
-ಬೆಂಗಳೂರು – ಗೋವಾ ( ರಾಷ್ಟ್ರೀಯ ಹೆದ್ದಾರಿ)
-ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ
-ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿ
-ಬೆಂಗಳೂರು – ಮೈಸೂರು ರೋಡ್( ರಾಜ್ಯ ಹೆದ್ದಾರಿ)
-ಬೆಂಗಳೂರು – ಚಾಮರಾಜನಗರ( ರಾಜ್ಯ ಹೆದ್ದಾರಿ)
-ಬೆಂಗಳೂರು – ಮಾಗಡಿ ರೋಡ್ ( ರಾಜ್ಯ ಹೆದ್ದಾರಿ)
-ಬೆಂಗಳೂರು – ಶಿವಮೊಗ್ಗ ( ರಾಜ್ಯ ಹೆದ್ದಾರಿ)
-ಬೆಂಗಳೂರು – ದೊಡ್ಡಬಳ್ಳಾಪುರ ( ರಾಜ್ಯ ಹೆದ್ದಾರಿ)
ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಸಾಧ್ಯತೆ
ಆ ಭಾಗದ ರೈತರನ್ನ ಒಟ್ಟಿಗೆ ಸೇರಿಸಿ ಬಂದ್ ಮಾಡುವ ಸಾಧ್ಯತೆಯಿದೆ.