ಬೆಂಗಳೂರು, ಸೆ.19 (www.bengaluruwire.com) : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ ಕೇಂದ್ರ ಸಚಿವ ಸದಾನಂದಗೌಡ ಅವರ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮೇಗೌಡ ಎನ್ನುವವರು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.
ಈ ದೂರಿನಲ್ಲಿ, ತಮ್ಮೇಗೌಡರು, ಸೆ.19 ರಂದು ಭಾನುವಾರ ಸಂಸದ ಸದಾನಂದಗೌಡರ ಹೆಸರಿನಲ್ಲಿ ದುಷ್ಕರ್ಮಿಗಳು ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ ಫೇಸ್ ಬುಕ್, ವಾಟ್ಸಪ್ ಹಾಗೂ ಇತರೆ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಸದಾನಂದಗೌಡರ ತೇಜೋವಧೆ ಮಾಡಲು ಹಾಗೂ ರಾಜಕೀಯ ಪ್ರೇರಿತ ಪಿತೂರಿ ನಡೆಸುವ ಹುನ್ನಾರವಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಸಂಸದ ಸದಾನಂದಗೌಡ ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ….”ನನ್ನ ರಾಜಕೀಯ ಜೀವನ ಹಾಗೂ ನನ್ನ ಏಳಿಗೆಯನ್ನು ಸಹಿಸದ ದುಷ್ಕರ್ಮಿಗಳು ನನ್ನ ತೇಜೋವಧೆ ಮಾಡಲು ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ನೋವು ತಂದಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.” ಎಂದು ಬರೆದುಕೊಂಡಿದ್ದಾರೆ.
“ನನ್ನನ್ನು ಮಾರ್ಫ್ ಮಾಡಿದ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಈ ಅಶ್ಲೀಲ ವಿಡಿಯೋ ಅಥವಾ ಇದರ ಯಾವುದೇ ಭಾಗವನ್ನು ಫಾರ್ವಡ್ ಮಾಡುವುದಾಗಲಿ, ಅದರ ಭಾಗಗಳನ್ನು ಅಪಲೋಡ್ ಮಾಡಿದರೆ ಕಾನೂನು ರೀತಿ ಶಿಕ್ಷೆಗೆ ಗುರಿಯಾಗುತ್ತಾರೆ. ಈ ವಿಷಯದ ಬಗ್ಗೆ ನ್ಯಾಯಾಲಯದ ತಡೆಯಾಜ್ಞೆ ತರಲಾಗಿದೆ. ಒಂದು ವೇಳೆ ಯಾರಾದರೂ ಇಂತಹ ವಿಡಿಯೋಗಳನ್ನು ಅಪಲೋಡ್ ಮಾಡಿದವರ ಬಗ್ಗೆ ಮಾಹಿತಿ ತಿಳಿದಿದ್ದರೆ ತಮಗೆ ಇನ್ ಬಾಕ್ಸ್ ಮಾಡಿ” ಎಂದು ಸರಣಿ ಟ್ವಿಟ್ ಮಾಡಿ ಮನವಿ ಮಾಡಿದ್ದಾರೆ.