ಬೆಂಗಳೂರು, (www.bengaluruwire.com) :
ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 29 ಲಕ್ಷ ಕೋವಿಡ್ ಲಸಿಕೆ ನೀಡಿದ್ದು, ಇನ್ನೂ 1.68 ಲಕ್ಷ ದಾಖಲು ಮಾಡಬೇಕಿದೆ. ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ.11 ರಷ್ಟು ರಾಜ್ಯದಲ್ಲಿ ನೀಡಲಾಗಿದೆ. ಈ ಮೂಲಕ ಕರ್ನಾಟಕ ಹೊಸ ಸಾಧನೆ ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಲಸಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿತ್ತು.
ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರೋತ್ಸಾಹ ನೀಡಿದರು. ಒಂದು ದಿನದಲ್ಲಿ 30 ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಂಡಿದ್ದು, ಶನಿವಾರ ಬೆಳಗ್ಗೆ 8.30 ವೇಳೆಗೆ 29,50,093 ಲಸಿಕೆ ನೀಡಿರುವುದು ಕೋವಿಡ್ ಪೋರ್ಟಲ್ ನಲ್ಲಿ ದಾಖಲಾಗಿದೆ.
ಇನ್ನೂ 1.68 ಲಕ್ಷ ಡೋಸ್ ಲಸಿಕೆ ನೀಡಿರುವುದನ್ನು ದಾಖಲು ಮಾಡಬೇಕಿದೆ. ಇದರಿಂದಾಗಿ 31 ಲಕ್ಷ ಲಸಿಕೆ ನೀಡಿದಂತಾಗುತ್ತದೆ. ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ.11 ರಷ್ಟು ರಾಜ್ಯದಲ್ಲಿ ನೀಡಲಾಗಿದೆ ಎಂದು ವಿವರಿಸಿದರು.
ಪ್ರತಿ ಅರ್ಹ ಹತ್ತು ಲಕ್ಷ ಜನಸಂಖ್ಯೆ ಪೈಕಿ 62,003 ಜನರಿಗೆ ಲಸಿಕೆ ನೀಡುವ ಮೂಲಕ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. 14,401 ಲಸಿಕೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು, ಒಂದೊಂದು ಸ್ಥಳದಲ್ಲಿ ಸರಾಸರಿ 205 ಲಸಿಕೆ ನೀಡಲಾಗಿದೆ. 14 ಜಿಲ್ಲೆಗಳು ಗುರಿಗಿಂತ ಅಧಿಕ ಸಾಧನೆ ಮಾಡಿವೆ. 4 ಜಿಲ್ಲೆಗಳು ಮಾತ್ರ ಗುರಿಗಿಂತ 75% ನಷ್ಟು ಸಾಧನೆ ಮಾಡಿವೆ ಎಂದರು.
ದೇಶದ ಮಹಾನಗರಗಳಲ್ಲಿ ಬೆಂಗಳೂರು ಮುಂದು…!
ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆಯನ್ನು ನೀಡಿದ ಮಹಾನಗರಗಳಲ್ಲಿ ಬಿಬಿಎಂಪಿ ಮುಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಒಂದೇ ದಿನದಲ್ಲಿ 4.09 ಲಕ್ಷ ಡೊಸೇಜ್ ನೀಡಲಾಗಿದೆ. ಬೆಳಗಾವಿಯಲ್ಲಿ 2.57 ಲಕ್ಷ ಲಸಿಕೆ ನೀಡಲಾಗಿದೆ. ಜಿಲ್ಲಾಮಟ್ಟದ ಸಾಧನೆಯಲ್ಲಿ ಎರಡು ಸ್ಥಾನಗಳು ರಾಜ್ಯಕ್ಕೆ ಬಂದಿವೆ. ರಾಜ್ಯದಲ್ಲಿ ಒಟ್ಟು 14.96 ಲಕ್ಷ ಲಸಿಕೆಗಳನ್ನು ಮಹಿಳೆಯರು ಪಡೆದಿದ್ದು, 14.53 ಲಕ್ಷ ಲಸಿಕೆಗಳನ್ನು ಪುರುಷರು ಪಡೆದಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದರು.
ರಾಜ್ಯದಲ್ಲಿ ಈತನಕ 5 ಕೋಟಿ ಲಸಿಕೆ ಹಾಕಲಾಗಿದೆ :
ಈವರೆಗೆ ಕರ್ನಾಟಕದಲ್ಲಿ ಒಟ್ಟು 5 ಕೋಟಿ ಲಸಿಕೆ ನೀಡಿದ್ದು, ಕಳೆದ 20 ದಿನಗಳಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. 1 ಕೋಟಿ ಜನರಿಗೆ ಎರಡೂ ಡೋಸ್ ನೀಡಲಾಗಿದೆ ಎಂಬ ಹೆಗ್ಗಳಿಕೆ ಬಂದಿದೆ. ಕಲಬುರ್ಗಿಯಲ್ಲಿ 41%, ಕೊಪ್ಪಳದಲ್ಲಿ 62%, ಉಡುಪಿಯಲ್ಲಿ 63% ನಿಗಧಿತ ಗುರಿಗಿಂತ ಕಡಿಮೆ ಸಾಧನೆ ಆಗಿದೆ. ಬೆಂಗಳೂರು ನಗರದಲ್ಲಿ 143%, ಶಿವಮೊಗ್ಗದಲ್ಲಿ 134%, ಧಾರವಾಡ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ 120% ಉತ್ತಮ ಸಾಧನೆ ಮಾಡಿವೆ ಎಂದರು.
ಸೆ.17 ರಂದು 5,201 ಯೂನಿಟ್ ರಕ್ತ ಸಂಗ್ರಹ :
ಇದೇ ದಿನ ರಾಜ್ಯದಲ್ಲಿ ರಕ್ತದಾನ ಶಿಬಿರ ನಡೆದಿದ್ದು, ಒಟ್ಟು 5,201 ಯುನಿಟ್ ರಕ್ತ ಸಂಗ್ರಹವಾಗಿದೆ. ಬಿಬಿಎಂಪಿಯಲ್ಲಿ 1,240 ಯುನಿಟ್, ಬಳ್ಳಾರಿಯಲ್ಲಿ 298, ದಕ್ಷಿಣ ಕನ್ನಡದಲ್ಲಿ 295 ಯುನಿಟ್ ಸಂಗ್ರಹವಾಗಿದೆ. ಎರಡು ವಾರಗಳಲ್ಲಿ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸಬೇಕೆಂಬ ಗುರಿ ಇದ್ದು, ಇದಕ್ಕಾಗಿ ಸೂಚನೆ ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ಜನರಿಗೆ ರಕ್ತ ಬೇಕಿದೆ ಎಂದರು.
ಜಿಲ್ಲಾಸ್ಪತ್ರೆ- ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ದಾನ ವಿಭಾಗ :
ಅಂಗಾಂಗ ಕಸಿಗೂ ದಾನ ಹೆಚ್ಚಬೇಕಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ದಾನ ವಿಭಾಗ ಆರಂಭಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿಗಳಿಂದ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಿ ಜಾಗೃತಿ ಮೂಡಿಸಿ ಇಡೀ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಜೊತೆಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಎರಡೂವರೆ ಕೋಟಿ ಕುಟುಂಬಕ್ಕೆ ನೀಡುವ ಗುರಿ ಇದೆ ಎಂದರು.