ಚಾಮರಾಜನಗರ, (www.bengaluruwire.com) : ಗುಂಡ್ಲೇಪೇಟೆಯಿಂದ ಚಾಮರಾಜನಗರಕ್ಕೆ ಸಾಗುವ ಮಾರ್ಗ ಮಧ್ಯದ ಹುಡಿಗಾಲದಲ್ಲಿ ಶುಕ್ರವಾರ ಬೆಳಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ)ಗೆ ಸೇರಿದ ಬಸ್ ನ ಮುಂಭಾಗದ ಟೈರ್ ಸಿಡಿದು ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 65 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಬೆಂಗಳೂರು ವೈರ್ ಗೆ ಲಭ್ಯವಾದ ಸಾರಿಗೆ ಇಲಾಖೆ ದಾಖಲೆ ಪ್ರಕಾರ ಈ ಬಸ್ ನ ಇನ್ಸ್ ಶುರೆನ್ಸ್ ಅವಧಿ ಮುಗಿದು ಒಂದು ವರ್ಷ ಆಗಿದೆ…. ! ಸಾಮಾನ್ಯ ನಾಗರೀಕರು ಇನ್ ಶ್ಯುರೆನ್ಸ್ ಅವಧಿ ಮುಗಿದ ವಾಹನಗಳಿಗೆ ದಂಡ ಹಾಕುವ ಸರ್ಕಾರವೇ ತನ್ನ ಅಧೀನದ ಕೆಎಸ್ ಆರ್ ಟಿಸಿ ಬಸ್ ನ ವಿಮೆಯನ್ನು ನವೀಕರಿಸಿಕೊಳ್ಳುವ ಗೋಜಿಗೆ ಹೋಗಿಲ್ಲ ಎಂಬುದು ಬಹಿರಂಗವಾಗಿದೆ. ಈ ಪ್ರಕರಣದಿಂದಾಗಿ ಕೆಎಸ್ ಆರ್ ಟಿಸಿ ಬಸ್ ಗಳ ಸ್ಥಿತಿಗತಿ ಬಗ್ಗೆ ಸಾಕಷ್ಟು ಪ್ರಶ್ನೆ ಹಾಗೂ ಚರ್ಚೆ ಉದ್ಭವಾಗುತ್ತಿದೆ.
ಚಾಮರಾಜನಗರ ವಿಭಾಗ ಗುಂಡ್ಲುಪೇಟೆ ಡಿಪೋ ಗೆ ಸೇರಿದ ಮಾರ್ಗಸಂಖ್ಯೆ 62ಕ್ಕೆ ಸೇರಿದ ಕೆಎ-10ಎಫ್-0006 ರಿಜಿಸ್ಟ್ರೇಷನ್ ನಂಬರ್ ನ ಈ ಕೆಎಸ್ ಆರ್ ಟಿಸಿ ಬಸ್ ಅವಧಿ ಮೀರಿದ ಬಸ್ ಎಂದು ಮೂಲಗಳು ತಿಳಿಸಿದ್ದು, ಸಾರ್ವಜನಿಕರ ಪ್ರಯಾಣಕ್ಕೆ ಸೂಕ್ತವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ರಾಜಧಾನಿಯಿಂದ ದೂರವಿರುವ ಜಿಲ್ಲೆಗಳಲ್ಲಿ ಅವಧಿ ಮೀರಿದ ಡಕೋಟಾ ಬಸ್ ಗಳನ್ನು ಕೆಎಸ್ ಆರ್ ಸಿ ಈಗಲೂ ಓಡಿಸ್ತಿದೆ ಎಂಬುದಕ್ಕೆ ಇವತ್ತು ನಡೆದ ಘಟನೆಯೇ ಸಾಕ್ಷಿಯಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ 53 ಫುಲ್ ಟಿಕೆಟ್, 7 ಪಾಸ್ ಪಡೆದವರು ಹಾಗೂ ಐವರು ಹಿರಿಯ ನಾಗರೀಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಿದ್ದು, ಪ್ರಯಾಣಿಕರ ಸ್ಟೇಟಸ್ ರಿಪೋರ್ಟ್ ನಿಂದ ತಿಳಿದು ಬರುತ್ತೆ.
“ಬೆಳಗ್ಗೆ 10.15ಕ್ಕೆ ಗುಂಡ್ಲುಪೇಟೆಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಚಾಮರಾಜನಗರ ಮಾರ್ಗದ ಕಡೆ ಬರುವಾಗ 10.50ರ ಸಂದರ್ಭದಲ್ಲಿ ಹುಡಿಗಾಲ ಎಂಬಲ್ಲಿ ಬಸ್ ಟೈರ್ ಸ್ಟೋಟಗೊಂಡಿತು. ಈ ಸಂದರ್ಭದಲ್ಲಿ ಬಸ್ ನಲ್ಲಿ 65 ಜನ ಪ್ರಯಾಣಿಕರಿದ್ದರು. ಮುಖ್ಯರಸ್ತೆಯಾದ್ದರಿಂದ ಹಲವು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಏಕಾ ಏಕಿ ಬಸ್ ಮುಂಭಾಗದ ಟೈರ್ ಸ್ಪೋಟಗೊಂಡಾಗ ಕೊಂಚ ಗಾಬರಿಯಾದೆ ಆದರೂ ಯಾವುದೇ ರೀತಿ ಬಸ್ ಅಪಘಾತವಾಗದಂತೆ ಶ್ರಮ ಮೀರಿ ಎಚ್ಚರಿಕೆ ವಹಿಸಿ ಬಸ್ಸನ್ನು ನಿಲ್ಲಿಸಲು ಯಶಸ್ವಿಯಾದೆ. ಬಸ್ ನಲ್ಲಿದ್ದ ಅಷ್ಟು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಘಟನೆ ಬಳಿಕ ಬೇರೆ ಬಸ್ಸಿನಲ್ಲಿ ಅವರನ್ನು ಕಳುಹಿಸಿಕೊಡಲಾಯಿತು.”
– ಶಿವಕುಮಾರ್, ಕೆಎಸ್ ಆರ್ ಟಿಸಿ ಬಸ್ ಚಾಲಕ
ಟೈರ್ ಸ್ಪೋಟಗೊಂಡ ಬಸ್ ಫುಲ್ ರಿಪೇರಿಗೆ ಬಂದಿತ್ತಾ?
ವಿಷಯ ಗೊತ್ತಿದ್ದರೂ ಡಿಪೋ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ಯಾಕೆ?
ಕೆಎ-10ಎಫ್-0006 ಕೆಎಸ್ ಆರ್ ಟಿಸಿ ಬಸ್ ನ ಮುಂಭಾಗ ಹಾಗೂ ಹಿಂಭಾಗದ ಚಕ್ರಗಳು ಸಾಕಷ್ಟು ಸವೆದಿದ್ದು, ಅವುಗಳನ್ನು ಬದಲಿಸಿ ಹೊಸ ಟೈರ್ ಗಳನ್ನು ಹಾಕಬೇಕು. ಅದರಲ್ಲೂ ಮುಂಭಾಗದ ಚಕ್ರಗಳಿಗೆ ಎ-ದರ್ಜೆಯ ಚಕ್ರಗಳನ್ನು ಫಿಟ್ ಮಾಡುವಂತೆ ಬಸ್ ಚಾಲಕ ಶಿವಕುಮಾರ್ ಗುಂಡ್ಲುಪೇಟೆ ಘಟಕದ ಅಧಿಕಾರಿಗಳಿಗೆ ಕೋರಿದ್ದರು. ಇದಲ್ಲದೆ ಈ ಬಸ್ ನ ಸ್ಟೇರಿಂಗ್ ಸಾಕಷ್ಟು ಅಲ್ಲಾಡುತ್ತಿದ್ದು, ಬ್ರೇಕ್ ಕೂಡ ಕಮ್ಮಿಯಿತ್ತು. ಅದೇ ರೀತಿ ಬಸ್ ನ ಮುಂಭಾಗದ ಎಂಜಿನ್ ಜಾಯಿಂಟ್ ಗಳು ಸಿಕ್ಕಾಪಟ್ಟೆ ಶಬ್ದ ಬರುತ್ತಿದ್ದು, ಒಟ್ಟಾರೆ ಈ ಬಸ್ ಅನ್ನು ದುರಸ್ಥಿಪಡಿಸುವಂತೆ ಆ ಬಸ್ ನ ಚಾಲಕ, ಡಿಪೋ ಚಾರ್ಜ್ ಮೆನ್ ರಾಜಶೇಖರ್ ಹಾಗೂ ಮ್ಯಾನೇಜರ್ ಜೈಕುಮಾರ್ ಗೆ ಮೌಖಿಕವಾಗಿ 15 ದಿನಗಳ ಹಿಂದೆಯೇ ತಿಳಿಸಿ ಬಸ್ಸನ್ನು ಆ ಡಿಪೋನಲ್ಲೇ ಬಿಟ್ಟು ಬಂದಿದ್ದರಂತೆ.
ಆದರೆ ಒಂದು ವಾರಗಳ ಕಾಲ ಈ ಡಕೋಟಾ ಬಸ್ಸನ್ನು ರಿಪೇರಿಯೂ ಮಾಡದೆ ಬೇರೆ ಬಸ್ ಕೊಟ್ಟು, ಆನಂತ್ರ ಡಿಪೋನಲ್ಲಿ ಬಸ್ ಗಳ ಕೊರತೆ ಬಂದಾಗ ಮತ್ತದೇ ಬಸ್ಸನ್ನು ರಿಪೇರಿ ಮಾಡದೆ ರಸ್ತೆಗೆ ಇಳಿಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.
“ಬೆಳಗ್ಗೆಯಿಂದ ಸದನದ ಕಾರ್ಯಕಲಾಪದಲ್ಲಿ ಪಾಲ್ಗೊಂಡಿದ್ದ ಕಾರಣ ಶುಕ್ರವಾರ ಬೆಳಗ್ಗೆ ಹುಡಿಗಾಲದಲ್ಲಿ ಕೆಎಸ್ ಆರ್ ಟಿಸಿ ಬಸ್ ಚಕ್ರ ಸ್ಪೋಟ ವಿಚಾರದ ಕುರಿತ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸಂಬಂಧ ಹಾಗೂ ಸುಸ್ಥಿತಿಯಲ್ಲಿಲ್ಲದ ಬಸ್ ಸರಿಪಡಿಸುವ ಬಗ್ಗೆ ಡಿಪೋ ಮ್ಯಾನೇಜರ್ ಗೆ ಮಾಹಿತಿ ಇದ್ದೂ ಅದನ್ನು ಸರಪಡಿಸಿಲ್ಲ ಏಕೆ? ಎಂಬ ಬಗ್ಗೆ ಗುಂಡ್ಲುಪೇಟೆ ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ವಿಚಾರಣೆ ನಡೆಸುತ್ತೇನೆ. ಹಾಗೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಡಿಪೋ ವ್ಯಾಪ್ತಿಯಲ್ಲಿ ಅವಧಿ ಮೀರಿದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಕುರಿತಂತೆ ಸಾರಿಗೆ ಸಚಿವರ ಜೊತೆ ಮಾತನಾಡುತ್ತೇನೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ.”
– ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು
ಪ್ರತಿದಿನ ಸರಾಸರಿ 292 ಕಿ.ಮೀ ಸಂಚರಿಸುತ್ತೆ ಡಕೋಟ ಬಸ್….!
ಪ್ರತಿದಿನ ಸರಾಸರಿ 292 ಕಿ.ಮೀ ನಷ್ಟು ರಸ್ತೆಯಲ್ಲಿ ಓಡಾಡುವ ಈ ಡಕೋಟಾ ಬಸ್ ನಲ್ಲಿ ಪ್ರಯಾಣಿಕರು ಜೀವ ಪಣಕ್ಕಿಟ್ಟುಕೊಂಡೇ ಓಡಾಡುವ ಪರಿಸ್ಥಿತಿಯಿದೆ. ಪ್ರತಿದಿನ ಗುಂಡ್ಲುಪೇಟೆ ಮತ್ತು ಚಾಮರಾಜನಗರ ನಡುವೆ 66 ಕಿಮೀ ಒಂದು ಟ್ರಿಪ್ ನಂತೆ 4 ಟ್ರಿಪ್ ಹಾಗೂ ತೆರಕನಾಂಬಿಯಿಂದ ಗುಂಡ್ಲುಪೇಟೆ ನಡುವೆ ಶಾಲಾ ಮಕ್ಕಳನ್ನು ಬೆಳಗ್ಗೆ 7.15ರಿಂದ 9.30ರ ತನಕ ಕರೆದೊಯ್ಯಲಾಗುತ್ತೆ. ವಿಮಾ ಅವಧಿ, ವಾಹನದ ಕಾರ್ಯಕ್ಷಮತಾ ಮಟ್ಟವೂ ಮೀರಿದ್ದರೂ ಪ್ರಯಾಣಿಕರು ಅದರಲ್ಲೂ ಶಾಲಾ ಮಕ್ಕಳು ಅಪಾಯದ ಪರಿಸ್ಥಿತಿಯಲ್ಲೇ ಓಡಾಡ ಬೇಕಾದ ಅನಿವಾರ್ಯತೆಯಿದೆ.
ಗುಂಡ್ಲುಪೇಟೆ ಡಿಪೋ ಗುಜುರಿ ಬಸ್ ಗಳು ಈಗಲೂ ಸಂಚಾರ?
ಗುಂಡ್ಲುಪೇಟೆ ಡಿಪೋನಲ್ಲಿ ಒಟ್ಟು 115 ರಿಂದ 120 ಕೆಎಸ್ ಆರ್ ಟಿಸಿ ಬಸ್ ಗಳಿವೆ. 10 ಲಕ್ಷ ಕಿ.ಮೀ ಮೀರಿದ ಬಸ್ ಗಳನ್ನು ಸ್ಕ್ರಾಪ್ ಅಥವಾ ಗುಜರಿಗೆ ಹಾಕ್ತೀವಿ ಅಂತ ಹೇಳೋ ಡಿಪೋ ಅಧಿಕಾರಿಗಳು ಬಹುತೇಕ ಬಸ್ ಗಳು 15 ಲಕ್ಷ ಕಿ.ಮೀ ಸಂಚರಿಸಿದ್ದರೂ ಅವುಗಳನ್ನು ಗುಜುರಿಗೆ ಹಾಕದೆ ರಸ್ತೆ ಮೇಲೆ ಓಡಾಟಕ್ಕೆ ಬಿಟ್ಟಿದ್ದಾರೆ. ಬಸ್ ನಲ್ಲಿ ವಾಹನಗಳ ಓಡಾಡಿದಾಗ ಕಿ.ಲೋ ಮೀಟರ್ ದಾಖಲಾಗುತ್ತದೆಂದು ಡ್ಯಾಷ್ ಬೋರ್ಡ್ ನಲ್ಲಿನ ಮೀಟರ್ ಬಾಕ್ಸ್ ಓಡದಂತೆ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಬಸ್ ಸುಸ್ಥಿತಿಯಲ್ಲಿದ್ದಿದ್ದರೆ ಟೈರ್ ಸ್ಪೋಟ ಏಕೆ ಆಗುತ್ತಿತ್ತು?
“ಕೆಎ-10ಎಫ್- 006 ಕೆಎಸ್ ಆರ್ ಟಿಸಿ ಬಸ್ ಎಲ್ಲ ರೀತಿಯಲ್ಲೂ ಕಂಡೀಷನ್ ಚೆನ್ನಾಗಿದೆ. ಈ ಬಸ್ಸಿನ ಬ್ರೇಕ್ ಮತ್ತು ಎಂಜಿನ್ ಚೆನ್ನಾಗಿದೆ. ಕೆಎಸ್ ಆರ್ ಟಿಸಿ ಈ ಬಸ್ ಗಳಿಗೆ ನಾವು ಇನ್ಶುರೆನ್ಸ್ ಮಾಡಿಸೋದಿಲ್ಲ. ಸಾರಿಗೆ ನಿಗಮದಲ್ಲಿ ಆಂತರಿಕವಾಗಿ ಪರಿಹಾರ ನೀಡುವ ವ್ಯವಸ್ಥೆಯಿದೆ. ಈ ಬಸ್ ನ ಇನ್ ಶ್ಯುರೆನ್ಸ್ ಅವಧಿ ಜುಲೈ 2020ರಲ್ಲಿ ಮುಗಿದಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಬಸ್ ಚಕ್ರ ಸ್ಪೋಟವಾಗಿ 30 ಮೀಟರ್ ತನಕ ಮುಂದೆ ಚಲಿಸಿದೆ. ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಪೋಟದ ಬಗ್ಗೆ ತಾಂತ್ರಿಕ ಪರಿಣಿತರಿಗೆ ವರದಿ ನೀಡುವಂತೆ ತಿಳಿಸಲಾಗಿದೆ.”
– ಬಿ.ಶ್ರೀನಿವಾಸ್, ವಿಭಾಗೀಯ ನಿಯಂತ್ರಕರು, ಚಾಮರಾಜನಗರ
ಚಾಮರಾಜನಗರ ವಿಭಾಗೀಯ ನಿಯಂತ್ರಕ ಬಿ.ಶ್ರೀನಿವಾಸ್ ಖುದ್ದಾಗಿ ಘಟನೆ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಬಸ್ ನ ಸ್ಥಿತಿಗತಿಯನ್ನು ನೋಡಿ ಈ ಮಾತು ಹೇಳಿದ್ದಾರೆ. ಆದರೆ ಬಸ್ ಉತ್ತಮ ಕಂಡೀಷನ್ ಇದ್ದಿದ್ದೇ ಆದರೆ ಬಸ್ ಟೈರ್ ಸ್ಪೋಟವಾಗುವ ಪ್ರಮೇಯ ಬರುತ್ತಿರಲಿಲ್ಲ. ಬ್ರೇಕ್ ಸುಸ್ಥಿತಿಯಲ್ಲಿದ್ದರೆ ಚಾಲಕ ಬ್ರೇಕ್ ಹಿಡಿದ ಕೂಡಲೇ ಬ್ರೇಕ್ ಆ ರೀತಿ ಕಿತ್ತುಬಂದಿರುತ್ತಿರಲಿಲ್ಲ ಅಲ್ಲವೇ? ಪೂರ್ತಿಯಾಗಿ ಸವೆದು ಟೈರ್ ಬಾಲ್ಡ್ ಆಗಿದ್ದರಿಂದಲೇ ಬಸ್ ಟೈರ್ ಸ್ಪೋಟವಾಗಿದೆ ಎಂದು ತಿಳಿದು ಬಂದಿದೆ.
ಕೆಎ- 10ಎಫ್ – 0006 ಬಸ್ ಕುರಿತ ಮಾಹಿತಿ :
ಬಸ್ ತಯಾರಿಕೆ ವರ್ಷ ಮತ್ತು ಅದರ ಚಾಸಿಸ್ ನಂ. : 2010 / ಎಂಎಟಿ412076ಎಒಎಫ್11591
ಬಸ್ ತಯಾರಿಕ ಕಂಪನಿ ಹಾಗೂ ಮಾಡೆಲ್ : ಟಾಟಾ ಮೋಟಾರ್ಸ್ ಲಿ. / 53ಸಿ ಯೂರೋ- III
ಕೆಎಸ್ ಆರ್ ಟಿಸಿ ಬಸ್ ಖರೀದಿಸಿದ ದಿನಾಂಕ : 23- 06- 2020
ಬಸ್ ಚಾಲನಾ ಫಿಟ್ ನೆಸ್ ಅವಧಿ : 27- 07- 2022
ಬಸ್ ವಿಮೆ ಅವಧಿ : 25-07-22019 ರಿಂದ 24-07-2020
ಪಾಲಿಸಿ ನಂಬರ್ : 3523431ಕೆಎ10ಎಫ್0006
ವಿಮಾ ಕಂಪನಿ : ಕರ್ನಾಟಕ ಸರ್ಕಾರಿ ವಿಮಾ
ಈ ಭಾಗದಲ್ಲಿ ಸೂಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರದ ಕಾರಣ ಹಿಂದುಳಿದ ಜಿಲ್ಲೆ ಚಾಮರಾಜನಗರದಲ್ಲಿ ಅನಿವಾರ್ಯವಾಗಿ ಬಡ ಪ್ರಯಾಣಿಕರು ಮತ್ತು ಸಾಮಾನ್ಯ ಜನರು ಕೆಎಸ್ ಆರ್ ಟಿಸಿ ಸಾಮಾನ್ಯ ಬಸ್ ಗಳನ್ನೇ ತಮ್ಮ ದಿನನಿತ್ಯದ ಓಡಾಟಕ್ಕೆ ಬಳಸುತ್ತಾರೆ. ಹೀಗಾಗಿ ಸಾರಿಗೆ ಇಲಾಖೆ ಈ ಭಾಗದಲ್ಲಿ ಸುಸ್ಥಿತಿಯಲ್ಲಿರುವ ಹಾಗೂ ಕಾರ್ಯಕ್ಷಮತೆ ಹೊಂದಿದ ಬಸ್ ಗಳನ್ನು ಕಾರ್ಯಾಚರಣೆಗೆ ಬಿಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರೀಕರ ಆಗ್ರಹವಾಗಿದೆ.