ಬೆಂಗಳೂರು, (www.bengaluruwire.com) : ಭೂ ಒತ್ತುವರಿದಾರರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುವಾರ ಮತ್ತೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಎರಡು ಸ್ಥಳಗಳಲ್ಲಿ ಒಟ್ಟು 40.57 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ಮರಳಿ ಪಡೆದುಕೊಂಡಿತು.
ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 156/2 ರಲ್ಲಿನ 1 ಎಕರೆ 12 ಗುಂಟೆ ಮತ್ತು ಸರ್ವೆ ಸಂಖ್ಯೆ 156/3 ರಲ್ಲಿನ 1 ಎಕರೆ 28 ಗುಂಟೆ ಪ್ರದೇಶವನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಈ ಬಗ್ಗೆ ಭೂಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಿಡಿಎ ಪರವಾಗಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಕಾರ್ಯಕಾರಿ ಎಂಜಿನಿಯರ್ ಸುಷ್ಮಾ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಗುರುವಾರ ಈ ಜಾಗದಲ್ಲಿ ನಿರ್ಮಾಣವಾಗಿದ್ದ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಿ ಬಿಡಿಎ ಈ ಜಾಗವನ್ನು ತನ್ನ ಸ್ವಾಧೀನಕ್ಕೆ ಪಡೆಯಿತು.
ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ದರ 34.52 ಕೋಟಿ ರೂಪಾಯಿಗಳಾಗಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ 6 ನೇ ಬ್ಲಾಕ್ ನಲ್ಲಿ ನಿವೇಶನ ರಚನೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 202 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 30×40 ಅಳತೆಯ 7 ನಿವೇಶನಗಳಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಈ ಶೆಡ್ ಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಬಿಡಿಎ ವಶಕ್ಕೆ ಪಡೆದುಕೊಂಡರು. ಈ ನಿವೇಶನಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 6.05 ಕೋಟಿ ರೂ. ಗಳಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಅಪಾರ ಮೌಲ್ಯದ ಸೇರಿದ ಸ್ವತ್ತುಗಳು ಒತ್ತುವರಿಯಾಗಿವೆ. ಗಣೇಶ ಹಬ್ಬಕ್ಕೆ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಕ್ರಮವಾಗಿ ಕಬಳಿಸಿರುವ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಬಾಲಕೃಷ್ಣ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ್ ಮತ್ತು ಲಕ್ಷ್ಮಯ್ಯ, ಎಂಜಿನಿಯರ್ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.