ಬೆಂಗಳೂರು, (www.bengaluruwire.com) : ಕೆ.ಆರ್.ಪುರದಿಂದ ಅಂತರಾಷ್ಟ್ರೀಯ ವಿಮಾನನಿಲ್ದಾಣದ ವರೆಗಿನ 37 ಕಿ.ಮೀ ಉದ್ದದ ನಮ್ಮ ಮೆಟ್ರೊ 2ಬಿ ಮಾರ್ಗದ ನಿರ್ಮಾಣ ಕಾಮಗಾರಿಯ 3 ಪ್ಯಾಕೇಜ್ ಟೆಂಡರ್ ನಲ್ಲಿ ಎನ್ ಸಿಸಿ ಅತ್ಯಂತ ಕಡಿಮೆ ಬಿಡ್ ಮಾಡಿದ ಸಂಸ್ಥೆಯಾಗಿ ಹೊರಹೊಮ್ಮಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ನಿಂದ ಕೆ.ಆರ್.ಪುರದ ವರೆಗಿನ 37 ಕಿ.ಮೀ ಮೆಟ್ರೋ ಎತ್ತರಿಸಿದ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೆಂದು ಮೂರು ಪ್ಯಾಕೇಜ್ ನಲ್ಲಿ ಅಂದಾಜು 1,906.13 ಕೋಟಿ ರೂ. ಮೊತ್ತದ ಕಾಮಗಾರಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು.
ಎನ್ ಸಿಸಿ, ಎಸ್ ಎನ್ ಸಿ- ಸಿವಿಸಿಸಿ ಜೆವಿ, ಎಎಫ್ ಸಿಒಎನ್ ಎಸ್, ಜಿಆರ್ ಇನ್ ಫ್ರಾ ಹಾಗೂ ಐಟಿಡಿ ಸಿಇಎಮ್ ಸಂಸ್ಥೆಗಳು ಮೂರು ಪ್ಯಾಕೇಜ್ ಗಳಲ್ಲಿ ಪಾಲ್ಗೊಂಡಿದ್ದವು. ಆ ಪೈಕಿ ತಾಂತ್ರಿಕ ಬಿಡ್ ಆದ ಬಳಿಕ ಅದರಲ್ಲಿ ಅರ್ಹರಾದ ಕಂಪನಿಗಳು ಆರ್ಥಿಕ ಬಿಡ್ ನಲ್ಲಿ ಪಾಲ್ಗೊಂಡು ಭಾಗವಹಿಸಿದ್ದವು. ಆಲಾದರಲ್ಲಿ ಎನ್ ಸಿಸಿ ಸಂಸ್ಥೆಯು ಯೋಜನೆಗೆ ಉಳಿದ ಸಂಸ್ಥೆಗಳಿಗಿಂತ ಕಡಿಮೆ ದರ ಬಿಡ್ ಮಾಡಿದೆ.
ಕೆಲವೇ ದಿನದಲ್ಲಿ ಈ ವಿಚಾರ ಬಿಎಂಆರ್ ಸಿಎಲ್ ಆರ್ತಿಕ ಮೌಲ್ಯಮಾಪನ ಸಮಿತಿ ಪರಿಶೀಲನೆ ನಡೆಸಿ, ಅಲ್ಲಿಂದ ಮೆಟ್ರೋ ಕಾಮಗಾರಿಗೆ ಸಾಲ ನೀಡಿರುವ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಒಪ್ಪಿಗೆ ಪಡೆದು ಎನ್ ಸಿಸಿ ಸಂಸ್ಥೆಗೆ ಟೆಂಡರ್ ನೀಡುವ ಬಗ್ಗೆ ತೀರ್ಮಾನವಾಗಲಿದೆ.
ಎಲ್-1 ಆಗಿರೋ ಎನ್ ಸಿಸಿ ಕಾರ್ಯಾದೇಶ ಪಡೆದ ನಂತರ 24 ರಿಂದ 27 ತಿಂಗಳ ಅವಧಿಯಲ್ಲಿ 2ಬಿ ಮಾರ್ಗದ 17 ಮೆಟ್ರೋ ಸ್ಟೇಷನ್ ಪೈಕಿ 15 ಮೆಟ್ರೊ ನಿಲ್ದಾಣಗಳನ್ನೂ ಕೂಡ ನಿರ್ಮಿಸಲಿದೆ.
” ನಮ್ಮ ಮೆಟ್ರೊ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ 2ಬಿ ಮಾರ್ಗದ ಮೂರು ಪ್ಯಾಕೇಜ್ ಟೆಂಡರ್ ನಲ್ಲಿ ಎನ್ ಸಿಸಿ ಕಡಿಮೆ ದರ ಬಿಡ್ ಮಾಡಿ ಎಲ್-1 ಆಗಿದೆ. ಕಮಿಟಿ ಈ ಬಗ್ಗೆ ಪರಿಶೀಲಿಸಿ, ಎಡಿಬಿ ಗೆ ಕಳಿಸಿ ಒಪ್ಪಿಗೆ ಪಡೆದ ಬಳಿಕ ಯೋಜಿತ ಕಾಮಗಾರಿ ಆರಂಭವಾಗಲಿದೆ. ಕೆಆರ್ ಪುರದಿಂದ ಹೆಬ್ಬಾಳದ ವರೆಗಿನ ಮಾರ್ಗದಲ್ಲಿ ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಹೆಬ್ಬಾಳದಿಂದ ಏರ್ ಪೋರ್ಟ್ ಯೋಜಿತ ಮಾರ್ಗದಲ್ಲಿ ಶೇ.95 ರಿಂದ 98ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಮೆಟ್ರೋ ಮಾರ್ಗದ ಎಲ್ಲ ಕಾಮಗಾರಿ ನಿಗಧಿತ ಅವಧಿಯಲ್ಲಿ ಪೂರ್ಣವಾಗಲಿದೆ.”
– ಅಂಜುಮ್ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ನಮ್ಮ ಮೆಟ್ರೊ
ಫೇಸ್ -1 & ಫೇಸ್-2 ನಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ :
ಮೆಟ್ರೋ ಫೇಸ್-1 ರಲ್ಲಿ ಸ್ಥಳಾವಕಾಶ ಇದ್ದ ಕಡೆ ಹಾಗೂ ಫೇಸ್-2 ನಲ್ಲಿ 25 ರಿಂದ 30 ಕಡೆಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಕಾರುಗಳ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಬೆಸ್ಕಾಂ ಜೊತೆ ನಮ್ಮ ಮೆಟ್ರೊ ಮಾತುಕತೆ ನಡೆಸಿದೆ. ಬೆಸ್ಕಾಂ ಈ ಮಾರ್ಗಗಳಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಮ್ಮ ಮೆಟ್ರೊ ಎಂಡಿ ಅಂಜುಂ ಪರ್ವೇಜ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
2ಬಿ ನೀಲಿ ಮಾರ್ಗದ ನಿರ್ಮಾಣಕ್ಕೆ ಹೊಸ ವಿಧಾನ ಅಳವಡಿಸಿ ಸಮಯ ಉಳಿತಾಯ :
2ಬಿ ಏರ್ ಪೋರ್ಟ್ ಬ್ಲೂ ಲೈನ್ ಎಲಿವೇಟೆಡ್ ಮಾರ್ಗದ ನಿರ್ಮಾಣ ಸಮಯ ಉಳಿತಾಯಕ್ಕೆ ಎರಡು ವಯಾಡೆಕ್ಟ್ ಜೋಡಿಸಿದ ಪ್ರೀಕ್ಯಾಸ್ಟ್ (ಮೊದಲೇ ಸಿದ್ದಪಡಿಸಿದ) ಅನ್ನು ಎರಡು ಪಿಲ್ಲರ್ ಗಳ ಮಧ್ಯೆ ಜೋಡಿಸಲು ಯೋಜನೆ ಸಿದ್ಧವಾಗಿದೆ. ಎರಡು ಪಿಲ್ಲರ್ ಗಳ ಮಧ್ಯೆ ಫುಲ್ ಸ್ಪಾನ್ ಒಂದೇ ಸೆಗ್ಮೆಂಟ್ ಹಾಕಲು ಮೆಟ್ರೋ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ಒಟ್ಟಾರೆ 2ಬಿ ನೀಲಿ ಮೆಟ್ರೋ ಮಾರ್ಗದಲ್ಲಿ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ಮೆಟ್ರೊ ಮೂಲಗಳು ತಿಳಿಸಿದೆ.
ಒಟ್ಟು 37 ಕಿ.ಮೀ ಮಾರ್ಗದಲ್ಲಿ ಎರಡು ಪಿಲ್ಲರ್ ಗಳ ಮಧ್ಯೆ 25 ಮೀಟರ್ ಅಂತರ ಲೆಕ್ಕ ಹಾಕಿದರೂ ಈ ಬ್ಲೂ ಲೈನ್ ಎಲಿವೇಟೆಡ್ ರೂಟ್ ನಲ್ಲಿ 1,480 ಪಿಲ್ಲರ್ ಗಳು ತಲೆ ಎತ್ತಲಿದೆ ಎಂದು ಮೆಟ್ರೊ ಅಧಿಕಾರಿಯೊಬ್ಬರು ಹೇಳಿದ್ದಾರೆ.