ಬೆಂಗಳೂರು, (www.bengaluruwire.com) : ಕೇಂದ್ರ ಸರ್ಕಾರ ಸರ್ಕಾರವು ಸೆ.14 ರಂದು ಕರೆದಿರುವ ಹಿಂದಿ ದಿವಸ್ ಆಚರಣೆಗೆ ರಾಜ್ಯದಲ್ಲಿ ಖಡು ವಿರೋಧ ವ್ಯಕ್ತವಾಗಿದೆ.
ಕನ್ನಡ ಪರ ಸಂಘಟನೆಗಳು ಒಕ್ಕೂಟ ಸರ್ಕಾರದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಸಲು ಹೊರಡಿರುವ ಹಿಂದಿ ದಿವಸ್ ಆಚರಣೆಯನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಅಲ್ಲದೆ ನಾನಾ ಸಂಘಟನೆಗಳು ಸೆ.14ರಂದು ಹಿಂದಿ ದಿವಸ್ ಆಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿವೆ.
“ಹಿಂದಿ ದಿವಸ್” ಹೆಸರಲ್ಲಿ ಒಕ್ಕೂಟ ಸರ್ಕಾರವು ಕೊಡುವ ಪ್ರಶಸ್ತಿಗಳನ್ನು ದಕ್ಷಿಣ ಭಾರತೀಯರು ನಿರಾಕರಿಸಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಹರೀಶ್ ಕುಮಾರ್ ಬಿ ಒತ್ತಾಯಿಸಿದ್ದಾರೆ. ಒಕ್ಕೂಟ ಸರ್ಕಾರ ನಡೆಸುತ್ತಿರುವ ಹಿಂದಿ ದಿವಸ್ ಕಾರ್ಯಕ್ರಮವೇ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದ್ದು, ಇದೊಂದು “ಅಕ್ರಮ ಹಿಂದಿ ದಿವಸ್” ಕಾರ್ಯಕ್ರಮ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿ ಭಾಷೆ ಮತ್ತು ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸಲು ಒಕ್ಕೂಟ ಸರ್ಕಾರವು ‘ರಾಜಭಾಷಾ ಕೀರ್ತಿ ಪುರಸ್ಕಾರ’ ಮತ್ತು ‘ರಾಜಭಾಷಾ ಗೌರವ್ ಪುರಸ್ಕಾರ’ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳನ್ನು ಉದ್ದೇಶಪೂರ್ವಕವಾಗಿ ದಕ್ಷಿಣ ಭಾರತದ ಬ್ಯಾಂಕುಗಳು, ಒಕ್ಕೂಟ ಸರ್ಕಾರದ ಸಂಸ್ಥೆಗಳಿಗೆ ನೀಡುವ ಮೂಲಕ ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸುವ ತಂತ್ರಗಾರಿಕೆ ನಡೆಸುತ್ತಿದೆ ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸೆ.14ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.
ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ. ಇದನ್ನು ಖಂಡಿಸಿ, ಎಲ್ಲ ಕನ್ನಡಿಗರು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲು ಕೋರುವುದಾಗಿ ಕರವೇ ರಾಜ್ಯಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಟಿ.ಎ.ನಾರಾಯಣಗೌಡ ನಾಡಿನ ಜನರಲ್ಲಿ ಮನವಿ ಮಾಡಿದ್ದಾರೆ.
ಬಹುಭಾಷೆಗಳನ್ನು ಆಡುವ ಜನರ ನಾಡಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಆದರೆ ಇಡೀ ದೇಶಕ್ಕೆ ಒಂದೇ ಭಾಷೆಯಿರಬೇಕು ಎಂಬ ಕುತ್ಸಿತ ಮನಸ್ಥಿತಿಯವರಿಂದಾಗಿ ಹಿಂದಿ ಭಾಷೆಯ ಹೇರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಸೆಪ್ಟೆಂಬರ್ 14ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಿದ್ದಾರೆ.
ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತಿದೆ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ.
ಸೆ.14ರಂದು “ಹಿಂದಿ ದಿವಸ್” ಆಚರಣೆ ವಿರೋಧಿಸಿ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನವನ್ನಾಗಿ ಆಚರಿಸಲು ಕರ್ನಾಟಕ ವಾಟಾಳ್ ಪಕ್ಷ ನಿರ್ಧರಿಸಿದೆ.