ಬೆಂಗಳೂರು, (www.bengaluruwire.com) :
ನಗರದಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಿಸುವ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಸುತ್ತೋಲೆ ಹೊರಡಿಸಿದೆ.
2021ನೇ ಸಾಲಿನ ಗಣೇಶ ಚತುರ್ಥಿ ಹಬ್ಬವು ಸೆ.10ರಂದು ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಇನ್ನಿತರೆ ಪೊಲೀಸ್ ಹಿರಿಯ ಅಧಿಕಾರಿಗಳೊಡನೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಚರ್ಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿ ಮತ್ತು ಕೋವಿಡ್-19 ಸಮುಚಿತ ವರ್ತನೆ ಪಾಲಿಸಿ ಆಚರಿಸಲು ಈ ಕೆಳಕಂಡ ಷರತ್ತುಗಳನ್ನು ಸಾರ್ವಜನಿಕರು ಪಾಲಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಜಂಟಿ ಆಯುಕ್ತರುಗಳು ಹಾಗೂ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಲು ಗೌರವ್ ಗುಪ್ತಾ ಸುತ್ತೋಲೆ ಹೊರಡಿಸಿದ್ದಾರೆ.
- ಗಣೇಶಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ನಾಗರೀಕರು ತಮ್ಮ ಮನೆ ಅಥವಾ ಸರ್ಕಾರಿ/ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸುವುದು.
- ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಗರಿಷ್ಠ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸುವುದು.
- ಪಾಲಿಕೆಯ 198 ವಾರ್ಡ್ ಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿದೆ. ಈ ಸಂಬಂಧ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಒಳಗೊಂಡ ಸಮಿತಿಯು ಸ್ಥಳ ನಿಗದಿಪಡಿಸಬೇಕು. ನಂತರ ವಿಭಾಗದ ಕಾರ್ಯಪಾಲಕ ಅಭಿಯಂತರರು ಅನುಮತಿ ಆದೇಶ ನೀಡಬೇಕು.
- ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪಿಸಬೇಕು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನ ಸ್ಥಳದಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸಬೇಕು. ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡಬೇಕು. ಪಾಲಿಕೆಯಿಂದ ಮಾರ್ಷಲ್ ಹಾಗೂ ಪೊಲೀಸ್ ಇಲಾಖೆಯಿಂದ ಹೋಂ ಗಾರ್ಡ್ ನಿಯೋಜಿಸಲು ಕ್ರಮ. ಕೋವಿಡ್ ನಿಯಮಾವಳಿ ಉಲ್ಲಂಘನೆ ಕಂಡುಬಂದಲ್ಲಿ ದಂಡ ವಿಧಿಸಲು ಕ್ರಮಕ್ಕೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
- ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಸಾಂಸ್ಕೃತಿಕ/ಸಂಗೀತ/ನೃತ್ಯ/ಡಿ.ಜೆ ಸೆಟ್ ಹಾಗೂ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಧ್ವನಿವರ್ಧಕಗಳಿಗೆ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
- ಆಯೋಜಕರು ಕೊವಿಡ್-19ರ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಕಾರ್ಯಕ್ರಮ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
- ಬೆಂಗಳೂರು ನಗರದಲ್ಲಿ ಗರಿಷ್ಠ 3 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲು ಅನುಮತಿಸಿಲಾಗಿದೆ. ಗಣೇಶ ಮೂರ್ತಿಗಳನ್ನು ತರುವಾಗ, ಬಿಡುವಾಗ ಮೆರವಣಿಗೆಗೆ ಅವಕಾಶವಿಲ್ಲ.
- ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ತಯಾರಿತ ಗಣೇಶ ಮೂರ್ತಿಗಳಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ವಸ್ತು ತಯಾರಿಸಿದ ಮೂರ್ತಿಗಳ ಮಾರಾಟ ಮತ್ತು ಬಳಕೆಗೆ ದಂಡ ವಿಧಿಸುವುವಂತೆ ಮುಖ್ಯ ಆಯುಕ್ತರು ತಮ್ಮ ಆದೇಶದಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ನಾಗರೀಕರು ತಮ್ಮ ಮನೆಗಳಲ್ಲಿ ಅಥವಾ ಪಾಲಿಕೆಯ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಕನಿಷ್ಟ ಜನರು ಬಿಬಿಎಂಪಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಯೋಜಿಸಲಾಗಿರುವ ಹತ್ತಿರದ ಹೊಂಡ ಅಥವಾ ಪಾಲಿಕೆಯ ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬೇಕು.
- ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ ಅಥವಾ ಇತರ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಭಕ್ತಾಧಿಗಳಿಗೆ ಸಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದ್ದಾರೆ. ಒಟ್ಟಾರೆ ಕೋವಿಡ್ ನಿಯಮಾವಳಿ ಪಾಲಿಸಬೇಕು, ಇಲ್ಲದಿದ್ದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕಾನೂನು ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಮತ್ತು ಪಾಲಿಕೆ ವಿಧಿಸಿದ ಷರತ್ತುಗಳಿಗೆ ಆಕ್ಷೇಪ

ಇನ್ನೊಂದೆಡೆ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪಾಲಿಕೆ ಮತ್ತು ಸರ್ಕಾರ ಗಣೇಶ ಪ್ರತಿಷ್ಠಾಪನೆ ವಿಷಯದಲ್ಲಿ ವಿಧಿಸಿರುವ ಷರತ್ತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ವಾರ್ಡ್ ಗೊಂದರ ಅವಕಾಶ ನೀಡಿಕೆ ಹಿಂಪಡೆಯಬೇಕು, ಮೂರ್ತಿ ಎತ್ತರ ನಿಗಧಿ ಸರಿಯಲ್ಲ, ಚೌತಿಯಿಂದ ಚತುರ್ದಶಿವರೆಗೆ ಆಚರಣೆಗೆ ಅವಕಾಶ ಕಲ್ಪಿಸಬೇಕು. ಗಣೇಶ ವಿಸರ್ಜನೆಗೆ ಎಲ್ಲಾ ಅವಕಾಶ ಕಲ್ಪಿಸಬೇಕು. ತಕ್ಷಣ ಏಕ ಗವಾಕ್ಷಿ ವ್ಯವಸ್ಥೆ ರೂಪಿಸುವಂತೆ ಸರ್ಕಾರ ಹಾಗೂ ಪಾಲಿಕೆಯನ್ನು ಆಗ್ರಹಿಸಿದ್ದಾರೆ.

ಗೋವನ್ನತಿ ಸಮಿತಿ ಸಂಸ್ಥೆ – ಪುಣ್ಯಕೋಟಿ ಗೋಶಾಲೆಯಿಂದ ಪರಿಸರ ಸ್ನೇಹಿ ಗೋಮಯ ಗಣಪತಿ :
ಬೆಂಗಳೂರಿನ ಗೋವನ್ನತಿ ಸಂಸ್ಥೆ ಹಾಗು ಪುಣ್ಯಕೋಟಿ ಗೋಶಾಲೆಯು ಜಂಟಿಯಾಗಿ, ಗಣಪತಿಯ ಮೂರ್ತಿಯನ್ನು ತಮ್ಮ ಗೋಶಾಲೆಯಲ್ಲಿನ ಹಸುಗಳ ಸಗಣಿಯನ್ನು ಬೆರಣಿಯಾಗಿಸಿ, ಅದರ ಪುಡಿ, ಗೋಂದು, ಗೋದಿ ಹಿಟ್ಟು, ಚಿಟಿಕೆ ಅರ್ಶಿನ ಮಿಶ್ರಣ ಬಳಸಿ ಪುಟ್ಟ ಪುಟ್ಟ ಗೌರಿ- ಗಣೇಶ ಮೂರ್ತಿ ತಯಾರಿಸಿದೆ.
ಗೋಮಯ ಗಣಪತಿಯನ್ನು ಪೂಜಿಸಿದ ನಂತರ ನಿಮ್ಮ ಮನೆಯಲ್ಲೇ ನೀರಿನಲ್ಲಿ ಕರಗಿಸಿ ಗೊಬ್ಬರದ ರೀತಿ ಉಪಯೋಗಿಸಿ ಬಹುದು. ಇದರಿಂದ ಕೇವಲ ಗಣಪನ ಕೃಪೆ ಅಷ್ಟೇ ಅಲ್ಲ ಗೋಮಾತೆಯ ಕೃಪೆಯು ಲಭಿಸುತ್ತದೆ. ಗೋಮಯದಿಂದ ಒಂದು ಗಣಪತಿಯ ಮೂರ್ತಿ ಮಾಡಲು ಒಟ್ಟಾರೆ 2 ಗಂಟೆ ಹಿಡಿಯುತ್ತೆ ಎಂದು ಹೇಳಿದ್ದಾರೆ ಗೋವನ್ನತಿ ಗೋಶಾಲೆ ಸಂಸ್ಥಾಪಕ ಚಂದ್ರಶೇಖರ್.