ಬೆಂಗಳೂರು, (www.bengaluruwire.com) : ಮಳೆಗಾಲದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೌಂದರ್ಯವನ್ನು ವರ್ಣನೆ ಮಾಡಲು ಪದಗಳು ಸಾಲಲ್ಲ. ಈ ಹಸಿರ ಸಿರಿಯ ಮಧ್ಯೆ ನಿಸರ್ಗ ಪ್ರಿಯರನ್ನು ಭಗವತಿ ಪ್ರಕೃತಿ ಶಿಬಿರ ಕೈಬೀಸಿ ಕರೆಯುತ್ತೆ.
ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆ ಜಂಗಲ್ ಲಾಡ್ಜಸ್ ಎಂಡ್ ರೆಸಾರ್ಟ್ಸ್ (ಜೆಎಲ್ ಆರ್) ರಾಜ್ಯಾದ್ಯಂತ ಪ್ರವಾಸಿಗರಿಗಾಗಿ 22 ವಿವಿಧ ತಾಣಗಳಲ್ಲಿ ನಿಸರ್ಗದ ಮಧ್ಯೆ ರೆಸಾರ್ಟ್ಸ್, ಲಾಡ್ಜ್, ಪಾರಂಪರಿಕ ತಾಣ, ಟ್ರಕಿಂಗ್, ಸಾಹಸ- ಕ್ರೀಡೆಗಳು ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಿದೆ.
ನಗರದ ಶಬ್ದ, ವಾಯು ಮಾಲಿನ್ಯದ ಮಧ್ಯೆ ಬಿಡುವು ಮಾಡಿಕೊಂಡು ಕಾಡಿನ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್, ಜನಜಂಗುಳಿಯಿಂದ ದೂರವಿದ್ದು ಒಂದೆರಡು ದಿನಗಳ ಕಾಲ ಹಾಯಾಗಿ ಕಾಲ ಕಳೆಯಲು ಬಯಸುವವರು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದಟ್ಟ ಕಾನನದ ಮಧ್ಯೆ ಇರುವ ಭಗವತಿ ನೇಚರ್ ಕ್ಯಾಂಪ್ ಗೆ ಆದ್ಯತೆ ಕೊಡುತ್ತಾರೆ.
672 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಅನೇಕ ಜೈವಿಕ ವೈವಿಧ್ಯತೆಗಳ ತಾಣ. ಮಳೆಗಾಲದಲ್ಲಂತೂ ದಿನದ 24 ಗಂಟೆಗಳ ಬಹುತೇಕ ಸಮಯ ಜಿಟಿ ಜಿಟಿ ಮಳೆಯ ಮಧ್ಯೆ ಇಲ್ಲಿನ ಗಿರಿಕಾನನಗಳ ಮಧ್ಯೆ ಚಾರಣ ನಡೆಸುವುದೂ ಒಂದು ಸುಖಾನುಭವ. ಬೇಸಿಗೆ ಕಾಲದಲ್ಲಿ ಜೀವ ಕಳೆದುಕೊಂಡ ಸಣ್ಣಪುಟ್ಟ ತೊರೆಗಳು ಮಳೆಗಾಲದಲ್ಲಿ ಮೈತುಂಬಿ ಸಣ್ಣ ಜಲಪಾತಗಳಾಗಿ ಬದಲಾಗುತ್ತದೆ.
ಭೂತಾಯಿಯು ಹಸಿರುಟ್ಟ ಆ ಸಮಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಬಗು. ನಿಸರ್ಗ ಆರಾಧಕರಿಗೆ ಇದಕ್ಕಿಂತ ಒಳ್ಳೆಯ ಸುಸಮಯ ಮತ್ತಿನ್ನೇನಿದೆ. ಗುಯ್ಯೆಂದು ಜೀಗುಟ್ಟುವ ಕೀಟಗಳ ಲೋಕದಲ್ಲಿ ಕಾಡಿನ ನಿಶ್ಯಬ್ದತೆಯನ್ನು ಸೀಳುವ ಈ ನಿನಾದ ಒಮ್ಮೊಮ್ಮೆ ಭಯ, ಮಗದೊಮ್ಮೆ ಹಾಯನ್ನಿಸುವ ಭಾವ ಮನಸಿಗೆ ಮುದಕೊಡುತ್ತದೆ.
ಭಗವತಿ ಪ್ರಕೃತಿ ಶಿಬಿರವನ್ನು 1994 ರಲ್ಲಿ ಅರಣ್ಯ ಇಲಾಖೆ ಪ್ರಾರಂಭಿಸಿತ್ತು. ಆಗೆಲ್ಲ ಕೇವಲ ಅರಣ್ಯ ಇಲಾಖೆಯ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. 1997ರಲ್ಲಿ ಕುದುರೆಮುಖವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. ಆನಂತರ 2005ರಲ್ಲಿ ಕುದುರೆಮುಖ ಪ್ರಕೃತಿ ಶಿಬಿರವನ್ನು ವಿವಿಧ ಆಯುರ್ವೇದಿಯ ಔಷಧಿ ಗಿಡಗಳು ಇದ್ದ ಕಾರಣ ಕುದುರೆಮುಖ ಹರ್ಬಲ್ ಕ್ಯಾಂಪ್ ಎಂದು ಕರೆಯಲಾಗುತ್ತಿತ್ತು.
2017 ರಲ್ಲಿ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಭಗವತಿ ಪ್ರಕೃತಿ ಶಿಬಿರವನ್ನು ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಆಗ ಹಿಂದಿನ ಭಗವತಿ ಪ್ರಕೃತಿ ಶಿಬಿರ ಎಂದು ಹಳೆಯ ಹೆಸರನ್ನೆ ಇಡಲಾಯಿತು. ಇದಾದ ಮೇಲೆ ಯಾತ್ರಿಕರ ಅನುಕೂಲಕ್ಕೆ ತಕ್ಕಂತೆ ಇಲ್ಲಿನ ಪರಿಸರಕ್ಕೆ ಹೊಂದುವಂತೆ ಆರು ಮರದ ಕಾಟೇಜ್, ನಾಲ್ಕು ಟೆಂಟ್ ಹೌಸ್ ಹಾಗೂ ಡಾರ್ಮಿಟರಿ (ಗುಂಪು ಮಲಗುವ ಸ್ಥಳ) ನಿರ್ಮಾಣ ಮಾಡಲಾಯಿತು.
“ಭಗವತಿ ಪ್ರಕೃತಿ ಶಿಬಿರವು, ಸುತ್ತಲೂ 50 ಕಿ.ಮೀ ವಿಸ್ತೀರ್ಣದ ದಟ್ಟ ಕಾಡಿನ ಮಧ್ಯೆ ಯಾವುದೇ ಮೊಬೈಲ್ ಸಂಪರ್ಕ ಇಲ್ಲದ ಜಾಗ. ಉತ್ತಮ ಪರಿಸರ, ವಾಹನಗಳ ಓಡಾಟವಿಲ್ಲದ ಪ್ರಶಾಂತ ವಾತಾವರಣ, ಜನವಸತಿ ಪ್ರದೇಶವಿಲ್ಲದ ಶಿಬಿರವಾಗಿದೆ. ಶುದ್ಧ ಗಾಳಿ ಸೇವನೆಗೆ ಸೂಕ್ತ ಸ್ಥಳ. ಇಲ್ಲಿ ಮನುಷ್ಯರ ಹಸ್ತಕ್ಷೇಪವಿಲ್ಲದ ಕಲ್ಮಶವಿಲ್ಲದ ನೀರು ಲಭ್ಯವಾಗುತ್ತೆ. ಒಂದೆರಡು ದಿನ ವಿಶ್ರಾಂತಿಗಾಗಿ, ಪ್ರಕೃತಿ ಸೌಂದರ್ಯ ಸವಿಯಲು ಹೇಳಿ ಮಾಡಿಸಿದ ತಾಣ ಭಗವತಿ ನೇಚರ್ ಕ್ಯಾಂಪ್. ಯಾತ್ರಿಗಳು ನಿಸರ್ಗದೊಂದಿಗೆ ಬೆರೆಯಲು ಅಗತ್ಯ ವ್ಯವಸ್ಥೆಯನ್ನು ಜೆಎಲ್ ಆರ್ ಸಂಸ್ಥೆ ಮಾಡಿದೆ.”
– ದೇವರಾಜ್, ವ್ಯವಸ್ಥಾಪಕ, ಭಗವತಿ ನೇಚರ್ ಕ್ಯಾಂಪ್
ಭಗವತಿ ಪ್ರಕೃತಿ ಶಿಬಿರದಲ್ಲಿ ಸಂಪೂರ್ಣವಾಗಿ ಸೌರ ವಿದ್ಯುತ್ ಬಳಸಲಾಗುತ್ತಿದೆ. ಕ್ಯಾಂಪ್ ಪಕ್ಕದಲ್ಲೆ ಭದ್ರಾ ನದಿ ಹರಿಯುತ್ತಿದ್ದು, ನದಿ ಹರಿಯುವಾಗ ಕೇಳಿಬರುವ ಝುಳು ಝುಳು ನಿನಾದ ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಕುದುರೆಮುಖ ಪ್ರಕೃತಿ ಶಿಬಿರಕ್ಕೆ ಜಾಸ್ತಿ ಟ್ರಕಿಂಗ್, ವಿಶ್ರಾಂತಿಗಾಗಿ, ಶೋಲಾ ಹುಲ್ಲುಗಾವಲನ್ನು ಹೊತ್ತು ನಿಂತ ಅಗಾಧ ಬೆಟ್ಟದ ವನಸಿರಿಯನ್ನು ಸವಿಯಲು ಪ್ರಕೃತಿ ಪ್ರಿಯರು ಬಂದು ಹೋಗುತ್ತಾರೆ. ಮಳೆಗಾಲದಲ್ಲಿ ಭಗವತಿ ನೇಚರ್ ಕ್ಯಾಂಪ್ ನ ಶೇ. 50 ರಷ್ಟು ಕೊಠಡಿಗಳು ತುಂಬಿದ್ದರೆ ಚಳಿಗಾಲದಲ್ಲಿ ಶೇ.80ರಷ್ಟು ಕೊಠಡಿಗಳನ್ನು ಪ್ರವಾಸಿಗರು ಬಳಸುತ್ತಾರೆ.
ಭಗವತಿ ನೇಚರ್ ಕ್ಯಾಂಪ್ ಗೆ ಯಾವಾಗ ಭೇಟಿ ಕೊಡಬಹುದು?
ಮಳೆಗಾಲದಲ್ಲಿ ಇತರೆಡೆಗಳಿಗಿಂತ ಈ ಭಾಗದಲ್ಲಿ ಮಳೆ ಹೆಚ್ಚಾಗಿರುತ್ತೆ. ಜೂನ್ ನಿಂದ ಆಗಸ್ಟ್ ತನಕ ಮಳೆಗಾಲದಲ್ಲಿ ಭೇಟಿ ಕೊಟ್ಟರೆ ಸುತ್ತಮುತ್ತಲ ಹಲವು ಝರಿಗಳು ರಸ್ತೆಬದಿಯಲ್ಲೇ ನಿಮಗೆ ದರ್ಶನ ಕೊಡುತ್ತದೆ. ಭಗವತಿ ಪ್ರಕೃತಿ ಶಿಬಿರಕ್ಕೆ ಸೆಪ್ಟೆಂಬರ್ ನಿಂದ ನವೆಂಬರ್ ಸಮಯದಲ್ಲಿ ಭೇಟಿ ನೀಡುವುದು ಸೂಕ್ತ. ಈ ಸಂದರ್ಭದಲ್ಲಿ ಮಳೆಗಾಲ ಮುಗಿದು ಪ್ರಕೃತಿಯೆಲ್ಲವೂ ಹಸಿರಿನಿಂದ ಕಂಗೊಳಿಸಿರುತ್ತೆ. ಆಗ ಫೊಟೊಗ್ರಫಿ, ನೇಚರ್ ವಾಕ್, ಟ್ರಕಿಂಗ್, ಜೆಎಲ್ ಆರ್ ನಿಂದ ಶೋಲಾ ಹುಲ್ಲುಗಾವಲನ್ನು ಹೊದ್ದ ಬೆಟ್ಟವನ್ನು ನೋಡಲು ಜೀಪ್ ಸಫಾರಿ ವ್ಯವಸ್ಥೆಯಿದೆ.
ಹತ್ತಿರದಲ್ಲೆ ಮೂರು ನದಿಗಳ ಉಗಮ ಸ್ಥಾನವಿದೆ :
ಭಗವತಿ ಕ್ಯಾಂಪ್‌ನಿಂದ ಐದು ಕಿ.ಮೀ ದೂರದಲ್ಲಿ ಗಂಗಾಮೂಲ ಅನ್ನುವ ಬೆಟ್ಟ ಪ್ರದೇಶದಲ್ಲಿ ತುಂಗ, ಭದ್ರ ಹಾಗೂ ನೇತ್ರಾವತಿ ನದಿಗಳು ಉಗಮವಾಗುತ್ತದೆ. ತುಂಗ- ಭದ್ರ ನದಿ ಒಂದೇ ಕಡೆ ಹುಟ್ಟಿ ಬೇರೆ ಬೇರೆ ಕಡೆ ಹರಿಯುತ್ತಾ ಮುಂದೆ ಶಿವಮೊಗ್ಗದ ಹೊಳೆಹೊನ್ನೂರಿನ ಕೂಡ್ಲಿಯಲ್ಲಿ ಸಂಗವಾಗುತ್ತೆ. ಇನ್ನು ನೇತ್ರಾವತಿ ನದಿ ಗಂಗಾಮೂಲದ ಪರ್ವತದಲ್ಲಿ ಹುಟ್ಟಿ ಧರ್ಮಸ್ಥಳ ದ ಕಡೆಗೆ ಹರಿದು ಕೊನೆಗೆ ಅರಬ್ಬೀಸಮುದ್ರ ಸೇರುತ್ತದೆ.
ಭಗವತಿ ನೇಚರ್ ಕ್ಯಾಂಪ್ ಸುತ್ತಮುತ್ತ ಏನೇನಿದೆ?
ಭಗವತಿ ಪ್ರಕೃತಿ ಶಿಬಿರದ ಸುತ್ತಮುತ್ತ ಚಾರಣ (ಟ್ರಕಿಂಗ್) ಮಾಡಲು ಕುದುರೆಮುಖ ಪರ್ವತ ( ನೆಲಮಟ್ಟದಿಂದ1892 ಮೀ. ಎತ್ತರ), ಕುರಿಂಜಾಲ್ ಪೀಕ್ ( ನೆಲಮಟ್ಟದಿಂದ 1,159 ಮೀ ಎತ್ತರ), ಗಂಗಡಿಕಲ್ ( ನೆಲಮಟ್ಟದಿಂದ 1,465 ಮೀ ಎತ್ತರ), ವಾಲಿಕುಂಜ ( ನೆಲಮಟ್ಟದಿಂದ 1,089 ಮೀ ಎತ್ತರ),
ನರಸಿಂಹಪರ್ವತ ( ನೆಲಮಟ್ಟದಿಂದ 1,159 ಮೀ ಎತ್ತರ) ಮುಂತಾದ ಪ್ರಮುಖ ಟ್ರಕಿಂಗ್ ಪಾಯಿಂಟ್ ಗಳಿವೆ.
ಈ ಎಲ್ಲಾ ಸ್ಥಳಗಳಿಗೆ ತೆರಳಲು ಅರಣ್ಯ ಇಲಾಖೆಯ ಪೂರ್ವಾನುಮತಿ ಅತ್ಯಗತ್ಯ. ಕ್ಯಾಂಪ್ ಪ್ರವೇಶದ್ವಾರದಿಂದ ಏಳೆಂಟು ಕಿ.ಮೀ ದೂರದಲ್ಲಿ ಹನುಮಾನ್ ಗುಂಡಿ ಹಾಗೂ ದಾರಿಯಲ್ಲಿ ಸಾಗುವಾಗ ರಸ್ತೆಬದಿಯಲ್ಲಿ ಕಡಾಂಬಿ ಜಲಾಪಾತ ಎದುರಾಗುತ್ತೆ.
ಯಾವೆಲ್ಲ ಕಾಡು ಪ್ರಾಣಿ, ಪಕ್ಷಿ, ಸರೀಸೃಪಗಳಿವೆ?
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಗವತಿ ಕ್ಯಾಂಪ್ ಪರಿಸರದಲ್ಲಿ ಅಳಿವಿನಂಚಿನ ಸಿಂಗಲೀಕ, ಕಾಡುಕೋಣ, ಕಡವೆ, ಕಾಡುನಾಯಿ ಮತ್ತಿತರ ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಹಸಿರು ಪಾರಿವಾಳ, ಹಳದಿ ಬಣ್ಣದ ಮಂಗಟೆಹಕ್ಕಿ, ಅಳವಿನಂಚಿನ ಮಲಬಾರ್ ವಿಶ್ಲಿಂಗ್ ಥ್ರುಶ್, ಮಲಬಾರ್ ಟ್ರೊಗೊನ್, ಬೂದು ಬಣ್ಣದ ಮಂಗಟೆ ಹಕ್ಕಿ, ಸರೀಸೃಪದಲ್ಲಿ ಕಾಳಿಂಗಸರ್ಪ ಸೇರಿದಂತೆ ಏಳು ಜಾತಿಯ ಹಾವುಗಳಿವೆ.
ಭಗವತಿ ನೇಚರ್ ಕ್ಯಾಂಪ್ ನಲ್ಲಿ ಬುಕಿಂಗ್ ಮಾಡಲು ಜಂಗಲ್ ಲಾಡ್ಜಸ್ ಎಂಡ್ ರೆಸಾರ್ಟ್ಸ್ ನ ವೆಬ್ ಸೈಟ್ ಮೂಲಕ ಆನ್ ಲೈನ್ ಬುಕಿಂಗ್ ಮಾಡಬಹುದು.