ಬೆಂಗಳೂರು, (www.bengaluruwire.com) : ನಿಮ್ಮ ಹಾಗೂ ನಿಮ್ಮ ಕುಟುಂಬದ ಇತಿಹಾಸ ತಿಳಿದು ಬರುವುದು ವಂಶವೃಕ್ಷದಿಂದ. ಕೊಡವರ ಹಲವು ಕುಟುಂಬಗಳ 14 ತಲೆಮಾರುಗಳ ವಂಶವೃಕ್ಷದ ದತ್ತಾಂಶ (ಡೇಟಾ) ವನ್ನು ಕೊಡವಕ್ಲಾನ್.ಕೊ ಎಂಬ ವೆಬ್ ಪೋರ್ಟಲ್ ಮೂಲಕ ದಾಖಲಿಸಲಿದೆ.
ದೇಶದಲ್ಲೆ ಅತಿದೊಡ್ಡ ವಂಶವೃಕ್ಷ ದಾಖಲಿಸಿದ ವೆಬ್ ಪೋರ್ಟಲ್ ಎಂಬ ಕಾರಣಕ್ಕೆ “ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್” ಪ್ರಶಸ್ತಿಗೆ ಕೊಡವಕ್ಲಾನ್.ಕೊ ಪೋರ್ಟಲ್ ಪಾತ್ರವಾಗಿದೆ.
ಕೊಡವ ಸಮುದಾಯ ನಡುವೆ ಬಿಟ್ಟು ಹೋದ ಸಂಬಂಧಗಳನ್ನು ವಂಶವೃಕ್ಷದ ಮೂಲಕ ಮರುಸ್ಥಾಪಿಸುವ ಉದ್ದೇಶದಿಂದ ಆ ಸಮುದಾಯದವರು ತಮ್ಮ ತಮ್ಮ ಕುಟುಂಬದವರ ಹೆಸರು, ಹುಟ್ಟಿದ ಸ್ಥಳ, ದಿನ ಮತ್ತಿತರ ವಿವರಗಳನ್ನು ಕೊಡವ ಕ್ಲಾನ್ ಪೋರ್ಟಲ್ ನಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ಈಗಾಗಲೇ ಅದೇ ಕುಟುಂಬದವರು ತಮ್ಮ ಕುಟುಂಬದ ವಿವರ ದಾಖಲಿಸಿದ್ದರೆ, ಅವರ ನೆಂಟರಿಸ್ಟರು ಅದಿಕ್ಕೆ ತಮ್ಮ ಸಂಬಂಧಿಕರ ಮಾಹಿತಿಯನ್ನು ಸೇರಿಸಲು ಈ ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
“ತಲೆ ತಲಾಂತರದಿಂದ ತಮ್ಮ ಕುಟುಂಬ, ವಂಶಾವಳಿಯನ್ನು ಆಯಾ ಮನೆತನದ ಹಾಡಿನಲ್ಲಿ ಗೀತೆಯ ರೂಪದಲ್ಲಿ ಸಂರಕ್ಷಿಸಿಡುತ್ತಿದ್ದರು. ಇನ್ನು ಕೆಲವು ಕುಟುಂಬಗಳು ಪುಸ್ತಕದಲ್ಲಿ ಬರವಣಿಗೆ ಮೂಲಕ ದಾಖಲಿಸುತ್ತಿದ್ದರು. ದೇಶ- ವಿದೇಶಗಳಲ್ಲಿ ಹಂಚಿ ಹೋಗಿರುವ ಕೊಡವ ಕುಟುಂಬಗಳನ್ನು, ಸಂಬಂಧಗಳನ್ನು ಮರು ಸ್ಥಾಪಿಸುವ ಉದ್ದೇಶದಿಂದ ಕೊಡವಕ್ಲಾನ್ ಪೋರ್ಟಲ್ ರಚಿಸಲಾಗಿತ್ತು. ಇನ್ನು ಮೂರು- ನಾಲ್ಕು ವರ್ಷಗಳಲ್ಲಿ ಒಂದೂವರೆ ಲಕ್ಷ ಕೊಡವರನ್ನು ಡಿಜಿಟಲ್ ಸಂಪರ್ಕದಿಂದ ಬೃಹತ್ ವಂಶವೃಕ್ಷದಲ್ಲಿ ದಾಖಲಿಸುವ ಗುರಿಯಿದೆ.”
– ಜಿ.ಎಂ.ಕಿಶು ಉತ್ತಪ್ಪ, ಕೊಡವಕ್ಲಾನ್.ಕೊ ಸಂಸ್ಥಾಪಕರು
ಐದು ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಡವಕ್ಲಾನ್.ಕೊ ವೆಬ್ ಪೋರ್ಟಲ್ ನಲ್ಲಿ ಈತನಕ 734 ಕುಟುಂಬಗಳ 16,079 ಜನರ ವಿವರಗಳನ್ನು ಸೇರಿಸಿದೆ. ಕೆಲವು ಕುಟುಂಬಗಳಲ್ಲಿ 16 ಶತಮಾನದಿಂದ 14 ತಲೆಮಾರುಗಳ ವಂಶವೃಕ್ಷದ ಮಾಹಿತಿಯೂ ಈ ವೆಬ್ ಸೈಟ್ ನಲ್ಲಿದೆ. ಆ ಮೂಲಕ ದೇಶ ವಿದೇಶಗಳಲ್ಲಿರುವ ಅದೆಷ್ಟೋ ಸಾವಿರಾರು ಕೊಡವರು ಕೊಡವ ಕ್ಲಾನ್ ಮೂಲಕ ತಮ್ಮ ಸಂಬಂಧಿಕರನ್ನು ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಈ ವೆಬ್ ಸೈಟ್ ನಲ್ಲಿ ಸದ್ಯ 399 ಕ್ಕೂ ಹೆಚ್ಚು ವಂಶವೃಕ್ಷಗಳು ಲಭ್ಯವಾಗಿದೆ.
ಕೊಡಗಿನಲ್ಲಿ ಕೊಡವರು, ಅಮ್ಮಕೊಡವರು, ಮೇಧಾವಿ, ಕೆಂಬಟ್ಟಿ ಹಾಗೂ ಮಲೆಕುಡಿಯಾ ಎಂಬ ಒಟ್ಟು ಐದು ಬುಡುಕಟ್ಟು ಸಮುದಾಯಗಳಿವೆ. ಕೊಡವ ಬುಡಕಟ್ಟು ಸಮುದಾಯದಲ್ಲಿ ಈ ಹಿಂದೆ ಎರಡು ಸಾವಿರ ಕುಟುಂಬಗಳಿದ್ದವು. ಆದರೀಗ 700- 800 ಕುಟುಂಬಗಳು ಅಸ್ಥಿತ್ವದಲ್ಲಿದೆಯಂತೆ.
ಕೊಡವಕ್ಲಾನ್ ಪೋರ್ಟಲ್ ನಲ್ಲಿ ಕೊಡವ ಸಂಸ್ಕೃತಿ, ಹಳೆಯ ತಲೆಮಾರಿನ ಜೀವನವನ್ನು ಕಟ್ಟಿಕೊಡುವ ಕೊಡವ ವರ್ಚುವಲ್ ಮ್ಯೂಸಿಯಮ್ ಸೆಕ್ಷನ್ ಇದೆ. ಇಲ್ಲಿ ಕೊಡವರ ಪುರಾತನ ಮನೆ, ಮನೆ ಬಳಕೆಯ ವಸ್ತುಗಳ ಕುರಿತ ಮಾಹಿತಿ, ಫೊಟೊಗಳನ್ನು ಹಾಕಲಾಗಿದೆ. ಹಾಗೆಯೇ ಕೊಡವರ ಹಬ್ಬ, ತಿನಿಸು, ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಆಚರಣೆ ಹೀಗೆ ನಾನಾ ವಿಷಯಗಳ ಮಾಹಿತಿಯನ್ನು ಹಾಕಲಾಗಿದೆ.
ಒಟ್ಟಾರೆ ಅನೇಕ ಕೊಡವರು ತಮ್ಮ ಶ್ರೀಮಂತ ಪರಂಪರೆಯನ್ನು ಈ ಪೋರ್ಟಲ್ ನಲ್ಲಿ ದಾಖಲಿಸಿರುವುದನ್ನು ನೋಡುವುದು ಕೊಡವರಿಗೆ ಹೆಮ್ಮೆಯ ವಿಷಯವಾಗಿದೆ.