ಬೆಂಗಳೂರು, (www.bengaluruwire.com) : ಬಿಬಿಎಂಪಿಯ ಶಾಲಾ ಮಕ್ಕಳಿಗೆ ಸ್ವೆಟರ್ ಗಳನ್ನು ಹಂಚಿಕೆ ಮಾಡುವಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ಬಿಬುಎಂಪಿ ಅಧಿಕಾರಿಗಳ ವಿರುದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕಾಧ್ಯಕ್ಷ ಸಿ.ಎಸ್.ರಘು ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ
ತಮಟೆ ಚಳುವಳಿ ಮತ್ತು ಸಾಂಕೇತಿಕವಾಗಿ ಸ್ವೆಟರ್ ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಸ್ವೆಟರ್ ಮಾರಾಟ ಮಾಡಿ ಬಂದ ಹಣವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ರಘು, ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ದಲಿತ, ಹಿಂದುಳಿದ ಮತ್ತು ಕಡು ಬಡವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 2020-21ಸಾಲಿನಲ್ಲಿ ಬಿಬಿಎಂಪಿ ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಲು ಅನುದಾನ ಮೀಸಲು ಇಡಲಾಗಿತ್ತು. ಆದರೆ ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸೈಟರ್ ಗಳನ್ನು ಸರಬರಾಜು ಮಾಡಲು ಆದೇಶ ನೀಡಿದ್ದರು.
ಕಳೆದ ಸಾಲಿನಲ್ಲಿ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ ,ಕಾಲೇಜು ಮುಚ್ಚಲಾಗಿತ್ತು. ಸ್ವೆಟರ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು 1.76 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ವೆಟರ್ ಗಳನ್ನು ವಿತರಣೆ ಮಾಡದೇ ಸ್ವೆಟರ್ ವಿತರಣೆ ಯೋಜನೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಣವನ್ನು ಲೂಟಿ ಮಾಡಿದ್ದಾರೆ ಎಂದು ರಘು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಈ ಕೊಡಲೇ ಗಮನಹರಿಸಿ ಸೈಟರ್ ಖರೀದಿ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೂ ಶಾಲಾ ,ಕಾಲೇಜು ವಿಧ್ಯಾರ್ಥಿಗಳಿಗೆ ಸೈಟರ್ ಗಳನ್ನು ವಿತರಿಸುವ ವ್ಯವಸ್ಥೆ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ದಯಾನಂದ್ ಅವರಿಗೆ ಇದೇ ವೇಳೆ ಕ.ದ.ಸಂ.ಸ ರಘು ಮನವಿಪತ್ರ ನೀಡಿದರು.