ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೊ ಹೊರವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ 2ಎ, 2ಬಿ ಮಾರ್ಗ ನಿರ್ಮಾಣ ಸಂಬಂಧ ನಮ್ಮ ಮೆಟ್ರೊ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಜೊತೆ 3,643 ಕೋಟಿ ರೂ. (500 ಮಿ.ಲಿಯನ್ ಡಾಲರ್) ಸಾಲ ಪಡೆಯಲು ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಔಟರ್ ರಿಂಗ್ ರಸ್ತೆ- ಏರ್ ಪೋರ್ಟ್ ನಡುವಿನ 58.19 ಕಿ.ಮೀ ನಡುವಿನ ಮಾರ್ಗ ನಿರ್ಮಾಣಕ್ಕೆ ಒಟ್ಟು 14,788 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ಭಾರತ ಸರ್ಕಾರ ಜೂನ್ ನಲ್ಲಿ ಅನುಮೋದನೆ ನೀಡಿತ್ತು. ಅದಕ್ಕು ಮೊದಲೇ ನಮ್ಮಮೆಟ್ರೋ ಇದೇ ವರ್ಷದ ಮಾರ್ಚ್ ನಲ್ಲಿ ಜೈಕಾ ಸಂಸ್ಥೆಯೊಂದಿಗೆ 2,317 ಕೋಟಿ ರೂ. (318 ಮಿಲಿಯನ್ ಡಾಲರ್) ಸಾಲ ಪಡೆದುಕೊಳ್ಳಲು ಪರಸ್ಪರ ಒಪ್ಪಂದ ಮಾಡಿಕೊಂಡಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಈಕ್ವಿಟಿ ಮತ್ತು ಅಧೀನ ಸಾಲ ರೂಪದಲ್ಲಿ ನಮ್ಮ ಮೆಟ್ರೋಗೆ 3,973 ಕೋಟಿ ರೂ. ಹಾಗೂ 2ಎ ಮತ್ತು 2ಬಿ ಮಾರ್ಗದ ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 2,762 ಕೋಟಿ ಭರಿಸಲಿದೆ. ಆ ಮೂಲಕ ಏರ್ ಪೋರ್ಟ್ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಆರಂಭಿಸಲು ಬಿಎಂಆರ್ ಸಿಎಲ್ ಬಹುತೇಕ ಆರ್ಥಿಕ ಸಂಪನ್ಮೂಲ ಹೊಂದಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುವತ್ತ ಹೆಜ್ಜೆಯಿರಿಸಿದೆ. ಉಳಿದ ಹಣವನ್ನು ಸಾಲದ ಮೂಲಕ ಪಡೆದು ನಮ್ಮ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲಿದೆ.