ನವದೆಹಲಿ, (www.bengaluruwire.com) :
ಶತ್ರು ರಾಷ್ಟ್ರಗಳ ರಾಡಾರ್ ಮತ್ತು ಕ್ಷಿಪಣಿಗಳಿಂದ ದೇಶದ ಯುದ್ಧವಿಮಾನಗಳಿಗೆ ರಕ್ಷಣೆ ಒದಗಿಸುವ ಚಾಫ್ ಟೆಕ್ನಾಲಜಿ ಎಂಬ ಎಲೆಕ್ಟ್ರಾನಿಕ್ ಕೌಂಟರ್ ಮಿಸೈಲ್ ತಂತ್ರಜ್ಞಾನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಅಭಿವೃದ್ಧಿಪಡಿಸಿದೆ.
ಅಗಸದಲ್ಲಿ ಸಾಗುವ ವೇಳೆ ಶತ್ರು ಪಾಳೇಯದ ರಾಡಾರ್ ಗೆ ಹಲವು ದಿಕ್ಕಿನಲ್ಲಿ ವಿವಿಧ ಯುದ್ಧ ವಿಮಾನಗಳು ಇರುವ ರೀತಿ ಎಲೆಕ್ಟ್ರಾನಿಕ್ ರೇಡಿಯೋ ತರಂಗಾಂತರವನ್ನು ಪ್ರವಹಿಸಿ ಆ ರಾಡಾರ್ ನ ದಿಕ್ಕು ತಪ್ಪಿಸಿ, ಆ ಮೂಲಕ ಶತ್ರು ರಾಷ್ಟ್ರದ ಕ್ಷಿಪಣಿಗಳು ದೇಶದ ಯುದ್ಧ ವಿಮಾನಗಳಿಗೆ ಹಾನಿ ಮಾಡದಂತೆ ತಡೆಯಲು ಈ ತಂತ್ರಜ್ಞಾನವನ್ನು ಡಿಆರ್ ಡಿಒ ಸಂಶೋಧನೆ ನಡೆಸಿ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
ಈ ಚಾಫ್ ತಂತ್ರಜ್ಞಾನ ವನ್ನು ಭಾರತೀಯ ವಾಯುಸೇನೆ (ಐಎಎಫ್) ಗೆ ಅಗತ್ಯವಿರುವಂತೆ ಯುದ್ಧವಿಮಾನದ ಹಿಂಭಾಗದಲ್ಲಿ ಅಳವಡಿಸುವ ರೀತಿಯಲ್ಲಿ ತಯಾರಿಸಲಾಗಿದ್ದು, ವಾಯುಪಡೆಯ ಎಲ್ಲಾ ಯುದ್ಧ ವಿಮಾನಗಳಿಗೆ ಅಳವಡಿಸಲು ಅನುವಾಗುವಂತೆ ದೇಶದ ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸುವ ಕೈಗಾರಿಕೆಗಳಿಗೆ ಈ ತಂತ್ರಜ್ಞಾನವನ್ನು ನೀಡಲು ಡಿಆರ್ ಡಿಒ ನಿರ್ಧರಿಸಿದೆ.
ಡಿಆರ್ ಡಿಒ ಜೋಧ್ ಪುರದ ರಕ್ಷಣಾ ಪ್ರಯೋಗಾಲಯ, ಪೂನಾದ ಹೈ ಎನರ್ಜಿ ಮೆಟಿರಿಯಲ್ ರಿಸರ್ಚ್ ಲ್ಯಾಬೊರೇಟರಿ ( ಎಚ್ ಇಎಂಆರ್ ಎಲ್) ಜಂಟಿ ಸಹಯೋಗದಲ್ಲಿ ಚಾಫ್ ಮೆಟಿರಿಯಲ್ ಮತ್ತು ಚಾಫ್ ಕಾಟ್ರಿಡ್ಜ್ -118/1 ಎಂಬ ತಂತ್ರಜ್ಞಾನ ವನ್ನು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ರಕ್ಷಣೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಡೆವಲಪ್ ಮಾಡಿದೆ.
ಆಧುನಿಕ ಯುಗದಲ್ಲಿ ವಿದ್ಯುನ್ಮಾನ ಯುದ್ಧದಲ್ಲಿ ಗೆಲ್ಲುವಲ್ಲಿ ವೈರಿಗಳ ರಾಡಾರ್ ನ ಕಣ್ ತಪ್ಪಿಸಿ ಯುದ್ಧ ವಿಮಾನಗಳನ್ನು ರಕ್ಷಿಸಿ ಶತ್ರು ಪಾಳೇಯದ ಮೇಲೆ ದಾಳಿ ಮಾಡುವುದು ಬಹು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಡಿಆರ್ ಡಿ ಆರ್ ಒ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವನ್ನು ಭಾರತೀಯ ವಾಯುಪಡೆ ತನ್ನಲ್ಲಿ ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆತ್ಮ ನಿರ್ಭರ್ ಭಾರತ ನಿರ್ಮಾಣ ವಿಚಾರದಲ್ಲಿ ಡಿಆರ್ ಡಿಒ ಸೇನಾ ಕಾರ್ಯತಂತ್ರದ ತಂತ್ರಜ್ಞಾನ ವಿಚಾರದಲ್ಲಿ ಈ ಮೂಲಕ ಉತ್ತಮ ಹೆಜ್ಜೆಯಿಟ್ಟಿದೆ ಎಂದು ಬಣ್ಣಿಸಿದ್ದಾರೆ. ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯದರ್ಶಿ ಹಾಗೂ ಡಿಆರ್ ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಅವರು ಕೂಡ, ಈ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಂಡವನ್ನು ಅಭಿನಂದಿಸಿದ್ದಾರೆ.