ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿಯಲ್ಲಿರುವ ಪ್ರತಿ ಮನೆಯವರು ಹಸಿಕಸ- ಒಣಕಸ, ಸ್ಯಾನಿಟರಿ ತ್ಯಾಜ್ಯ, ಎಲ್ಲವನ್ನು ವಿಂಗಡಿಸಿ ಕೊಡಿ ಅಂತ ಬಿಬಿಎಂಪಿ ಆಟೋಗಳಲ್ಲಿ ಪ್ರತಿದಿನ ಮೈಕ್ ನಲ್ಲಿ ಹೇಳಿದ್ದೇ ಬಂತು. ನಗರದ ನಾಗರೀಕರು ಕಸವನ್ನು ವಿಂಗಡಿಸಿ ಕೊಟ್ಟರೂ ಬಹುತೇಕ ವಿಗಂಡಿಸಿದ ಕಸ ಫೈನಲ್ಲಾಗಿ ಬಿಬಿಎಂಪಿ ಕಸದ ಗುತ್ತಿಗೆದಾರರು ಮಿಶ್ರಣ ಮಾಡಿ ಲ್ಯಾಂಡ್ ಫಿಲ್ ಗೆ ಸಾಗಿಸುತ್ತಿರೋದು ಬೆಳಕಿಗೆ ಬಂದಿದೆ.
ಬಿಬಿಎಂಪಿಯಲ್ಲಿ ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಲೆಂದು ನಗರದ ವಿವಿಧೆಡೆ 1 ಖಾಸಗಿ ಹಸಿತ್ಯಾಜ್ಯ ಸಂಸ್ಕರಣಾ ಘಟಕ ಎಂಎಸ್ ಜಿಪಿ ಸೇರಿದಂತೆ 8 ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಆ ಪೈಕಿ ಬಿಬಿಎಂಪಿಗೆ ಸೇರಿದ 7 ಘಟಕಗಳನ್ನು ಹಲವು ವರ್ಷಗಳ ಹಿಂದೆಯೇ ತೆರೆಯಲಾಗಿದೆ. ಇವೆಲ್ಲದರ ಒಟ್ಟಾರೆ ಸ್ಥಾಪಿತ ಕಸ ಸಂಸ್ಕರಣಾ ಸಾಮರ್ಥ್ಯ 2,020 ಮೆಟ್ರಿಕ್ ಟನ್ ಆಗಿದೆ. ಆದ್ರೆ ದುರದೃಷ್ಟವಶಾತ್ ಈ 8 ಘಟಕಗಳ ಪೈಕಿ 3 ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳು ಕಣ್ಮುಚ್ಚಿ ಎರಡೂವರೆ ವರ್ಷ ಆಗುತ್ತಾ ಬಂದಿದೆ. ಹೀಗಾಗಿ ಒಟ್ಟಾರೆ ಹಸಿ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯ 2,020 ಮೆಟ್ರಿಕ್ ಟನ್ ಆದರೂ ವಾಸ್ತವದಲ್ಲಿ ಹಸಿತ್ಯಾಜ್ಯ ಸಂಸ್ಕರಣೆ ಆಗುತ್ತಿರೋದು ಕೇವಲ ಅದರ ಅರ್ಧದಷ್ಟು ಅಂದರೆ 1,000 ಮೆ.ಟನ್ ನಷ್ಟು ಮಾತ್ರ. ಉಳಿದ 2,500 ಮೆ.ಟನ್ ನಿಂದ 3,000 ಮೆ.ಟನ್ ಮಿಕ್ಸೆಡ್ ವೇಸ್ಟ್ ಪ್ರತಿದಿನ ಮಿಟಗಾನಹಳ್ಳಿ ಕ್ವಾರಿಯ ಒಡಲು ಸೇರುತ್ತಿದೆ.
ನಗರದ ಶೇ.70 ರಿಂದ 75ರಷ್ಟು ಮಿಶ್ರಿತ ಕಸ ಮಿಟಗಾನಹಳ್ಳಿ ಕ್ವಾರಿಗೆ :
ನಗರದಲ್ಲಿ ಒಟ್ಟು 4,599 ಆಟೋ ಟಿಪ್ಪರ್ ಗಳು ಹಾಗೂ 562 ಕಾಂಪ್ಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಆಟೋ ಟಿಪ್ಪರ್ ಗಳು ಮನೆ ಮನೆಯಿಂದ ವಿಂಗಡಿಸಿದ ಹಸಿಕಸ- ಒಣಕಸವನ್ನು ಸಂಗ್ರಹಿಸುತ್ತಿವೆ. ಆದರೆ ಯಾವಾಗ ಹಸಿಕಸವನ್ನು ಟ್ರಾನ್ಸ್ ಫರ್ ಸ್ಟೇಷನ್ ಗೆ ತಂದು ಹಾಕುತ್ತವೋ ಅಲ್ಲಿ, ಕಾಂಪ್ಯಾಕ್ಟರ್ ಗೆ ಲೋಡ್ ಮಾಡುವಾಗ ಹಸಿಕಸವೂ, ವಿಂಗಡಿಸದ ಕಸದೊಂದಿಗೆ ಮಿಶ್ರಣ ಮಾಡಿ ಮಿಟಗಾನಹಳ್ಳಿ ಕ್ವಾರಿಗೆ ಕೊಂಡೊಯ್ದು ಸುರಿಯಾಲಾಗುತ್ತಿದೆ. ಏಕೆಂದರೆ ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ರೂಪದಲ್ಲಿ ಕಾರ್ಯನಿರ್ವಹಿಸದ ಕಾರಣ ಸಂಗ್ರಹಿಸಿದ ವಿಂಗಡನೆ ಮಾಡಿದ ಕಸವನ್ನು ಜೊತೆಗೆ ಸೇರಿಸಿ 350ಕ್ಕೂ ಹೆಚ್ಚು ಕಾಂಪ್ಯಾಕ್ಟರ್ ಗಳು ಮಿಟಗಾನಹಳ್ಳಿ ಕ್ವಾರಿಗೆ ಡಂಪ್ ಮಾಡುತ್ತಿದೆ. ಒಟ್ಟಾರೆ ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಶೇ.70 ರಿಂದ ಶೇ.75ರಷ್ಟು ಅಂದರೆ 2,500 ಮೆ.ಟನ್ ನಿಂದ 3,000 ಮೆ.ಟನ್ ನಷ್ಟು ಮಿಶ್ರಿತ ಕಸ ಮಿಟಗಾನಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರದಲ್ಲಿ ನೂರಾರು ಅಡಿ ಆಳದ ಗುಂಡಿಗೆ ತಂದು ಸುರಿಯಲಾಗುತ್ತಿದೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿದೆ.
ಹೀಗಾಗಿ ಮಿಟಗಾನಹಳ್ಳಿಯಲ್ಲೂ ಕಸದ ಬೆಟ್ಟ ಸೃಷ್ಟಿಯಾಗಿದೆ. ಸ್ಥಳೀಯರು ಅಗಾಧ ಪ್ರಮಾಣದಲ್ಲಿ ನಗರದ ಕಸ ಹಾಕುತ್ತಿರುವುದಕ್ಕೆ ಆಗಾಗ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ, ಬಿಬಿಎಂಪಿ ಅಧಿಕಾರಿಗಳು ಮಾತ್ರ ಪೂರ್ಣ ರೂಪದಲ್ಲಿ ಹಸಿತ್ಯಾಜ್ಯ ಸಂಸ್ಕರಣೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ.
2016ರಲ್ಲಿ 22 ಎಕರೆ ವಿಸ್ತೀರ್ಣದ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ತಂದು ಸುರಿಯಲಾಗುತ್ತಿತ್ತು. ಆದರೆ 2019ರ ನವೆಂಬರ್ ನಿಂದ ಬಹುತೇಕ ಭರ್ತಿಯಾಗಿದ್ದ ಬೆಳ್ಳಳ್ಳಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸಿ, ಮಿಟಗಾನಹಳ್ಳಿಯಲ್ಲಿ ನಗರದ ಮಿಶ್ರಿತ ಕಸವನ್ನು ಹಾಕಲಾಗುತ್ತಿದೆ. ಪ್ರತಿದಿನ ಇಡೀ ಬೆಂಗಳೂರಿನಲ್ಲಿ ಪ್ರತಿದಿನ ಸಂಗ್ರಹವಾಗುವ ಕಸದಲ್ಲಿ ಶೇ.70 ರಿಂದ ಶೇ.75ರಷ್ಟು ಕಸ ಮಿಟಗಾನಹಳ್ಳಿ ಕ್ವಾರಿಗೆ ಡಂಪ್ ಆಗುತ್ತಿದೆ ಎಂದಾದರೆ ನಗರದಲ್ಲಿ ಮೂಲದಲ್ಲೇ ಹಸಿಕಸ- ಒಣಕಸ ವಿಂಗಡಿಸಿ ಎಂದು ಪಾಲಿಕೆಯು ನಾಗರೀಕರಿಗೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲದಂತೆ ತೋರುತ್ತದೆ. ಆದ್ದರಿಂದ ಬಿಬಿಎಂಪಿಯು ಜೂನ್ 2019ರಲ್ಲಿ ಜಾರಿಗೆ ತಂದ “ನಮ್ಮ ಕಸ ನಮ್ಮ ಜವಾಬ್ದಾರಿ” ಎಂಬ ಯೋಜನೆಯು ಅಟ್ಟರ್ ಫ್ಲಾಪ್ ಆಗಿರೋದು ಈ ಮೇಲಿನ ಅಂಶಗಳಿಂದ ಮನದಟ್ಟಾಗುತ್ತಿದೆ.
“ಸುಬ್ಬರಾಯನಪಾಳ್ಯ ಹಸಿತ್ಯಾಜ್ಯ ಸಂಸ್ಕರಣಾ ಘಟಕದ ವಿಚಾರ ನ್ಯಾಯಾಲಯದಲ್ಲಿದೆ. ಸೀಗೇಹಳ್ಳಿ ಹಾಗೂ ಲಿಂಗಧೀರನಹಳ್ಳಿ ಸಂಸ್ಕರಣಾ ಘಟಕಗಳನ್ನು ಪುನಃ ಪ್ರಾರಂಭಿಸಲು ಆಯಾ ವಲಯ ಜಂಟಿ ಆಯುಕ್ತರು ಪೊಲೀಸರ ಸಮ್ಮುಖದಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿ ಸ್ಥಳೀಯರ ಮನವೊಲಿಸಿದ್ದಾರೆ. ಆದಷ್ಟು ಶೀಘ್ರವಾಗಿ ಮುಚ್ಚಿರುವ ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಪುನಃ ಆರಂಭಿಸಲು ಪ್ರಯತ್ನಿಸುತ್ತೇವೆ. ಕೋವಿಡ್ ಕಾರಣದಿಂದ ನಿಂತಿದ್ದ ಕಸ ವಿಂಗಡಣೆ ಜಾಗೃತಿ ಕುರಿತ ನಾಗರೀಕರ ಪಾಲ್ಗೊಳ್ಳುವಿಕೆ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದೇವೆ. ”
– ಹರೀಶ್ ಕುಮಾರ್, ವಿಶೇಷ ಆಯುಕ್ತರು, ಬಿಬಿಎಂಪಿ ಘನತ್ಯಾಜ್ಯ ವಿಭಾಗ
ಕಣ್ಮುಚ್ಚಿದೆ ಪಾಲಿಕೆಯ ಈ 3 ಹಸಿತ್ಯಾಜ್ಯ ಸಂಸ್ಕರಣಾ ಘಟಕ :
ಲಿಂಗಧೀರನಹಳ್ಳಿ (150 ಮೆ.ಟನ್ ಸ್ಥಾಪಿತ ಕಸ ಸಂಸ್ಕರಣಾ ಸಾಮರ್ಥ್ಯ), ಸುಬ್ಬರಾಯನಪಾಳ್ಯ (150 ಮೆ.ಟನ್ ಸ್ಥಾಪಿತ ಕಸ ಸಂಸ್ಕರಣಾ ಸಾಮರ್ಥ್ಯ) ಹಾಗೂ ಸೀಗೇಹಳ್ಳಿ (120 ಮೆ.ಟನ್ ಸ್ಥಾಪಿತ ಕಸ ಸಂಸ್ಕರಣಾ ಸಾಮರ್ಥ್ಯ) ಮುಚ್ಚಿ ಎರಡೂವರೆ ವರ್ಷ ಆಗುತ್ತಾ ಬಂದಿದೆ.
ಇನ್ನು ಕನ್ನಹಳ್ಳಿ (350 ಮೆ.ಟನ್ ಸ್ಥಾಪಿತ ಸಾಮರ್ಥ್ಯ), ಕೆಸಿಡಿಸಿ (300 ಮೆ.ಟನ್ ಸ್ಥಾಪಿತ ಸಾಮರ್ಥ್ಯ) ಹಾಗೂ ದೊಡ್ಡ ಬಿದರಕಲ್ಲು (150 ಮೆ.ಟನ್ ಸ್ಥಾಪಿತ ಸಾಮರ್ಥ್ಯ) ಹಸಿಕಸ ಸಂಸ್ಕರಣಾ ಘಟಕದಲ್ಲಿ ಪ್ರತಿದಿನ ತಮ್ಮ ಸ್ಥಾಪಿತ ಸಾಮರ್ಥ್ಯಕ್ಕಿಂತ ಶೇಕಡ ಅರ್ಧಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಸಿಕಸವನ್ನು ಸಂಸ್ಕರಿಸಲಾಗುತ್ತಿದೆ. ಇನ್ನು ಪ್ರತಿದಿನ 300 ಮೆ.ಟನ್ ಹಸಿತ್ಯಾಜ್ಯ ಸಂಸ್ಕರಣೆ ಮಾಡುವ ಚಿಕ್ಕನಾಗಮಂಗಲದಲ್ಲಿ ಶೇ.80 ರಿಂದ 90ರಷ್ಟು ಹಸಿತ್ಯಾಜ್ಯವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಪ್ರತಿದಿನ 1,000 ಮೆ.ಟನ್ ಹಸಿತ್ಯಾಜ್ಯ ಸಂಸ್ಕರಣೆ ಪೈಕಿ ಶೇ.50ರಷ್ಟನ್ನು ಖಾಸಗಿ ಹಸಿ ತ್ಯಾಜ್ಯ ಸಂಸ್ಕರಣಾ ಘಟಕವಾದ ಎಂಎಸ್ ಜಿಪಿ (500 ಮೆ.ಟನ್ ಸ್ಥಾಪಿತ ಸಾಮರ್ಥ್ಯ)ಯಲ್ಲಿ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಅಂದರೆ ಶೇ.100ಕ್ಕಿಂತ ಅಧಿಕ ಅಂದರೆ 500 ರಿಂದ 600 ಮೆ.ಟನ್ ಹಸಿತ್ಯಾಜ್ಯವನ್ನು ಸಂಸ್ಕರಣೆ ಮಾಡುತ್ತಿದೆ.
ಮುಚ್ಚಿದ ಸಂಸ್ಕರಣಾ ಘಟಕಗಳ ನಿರ್ವಹಣೆ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿ? :
ಬಿಬಿಎಂಪಿ ಗೆ ಸೇರಿದ 7 ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಪ್ರತಿ ತಿಂಗಳು ನಿರ್ವಹಣೆಗಾಗಿ 1.50 ಕೋಟಿ ರೂ.ಗಳಷ್ಟು ಹಣವನ್ನು ಪಾಲಿಕೆಯು ಕರ್ಚು ಮಾಡುತ್ತಿದೆ. ಅಂದರೆ ಪ್ರತಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೂ ಪ್ರತಿ ತಿಂಗಳು 21.42 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಆ ಪೈಕಿ ಲಿಂಗಧೀರನಹಳ್ಳಿ, ಸೀಗೇಹಳ್ಳಿ ಹಾಗೂ ಸುಬ್ಬರಾಯನಪಾಳ್ಯ ಘಟಕಗಳು ಮುಚ್ಚಿ ಎರಡೂ ವರ್ಷ ಆಗುತ್ತಾ ಬಂದರೂ ಈ ಘಟಕಗಳ ನಿರ್ವಹಣೆಯ ಹೆಸರಿನಲ್ಲಿ ಬಿಡುಗಡೆಯಾದ ಸುಮಾರು 19.28 ಕೋಟಿ ರೂ. ಹಣ ಎಲ್ಲಿ ಹೋಯಿತು? ಯಾರ ಜೋಬು ತುಂಬಿತು ಅನ್ನೋದರ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.
ವರ್ಷಂಪ್ರತಿ ನಗರದ ಸ್ವಚ್ಛತೆಗೆ 882 ಕೋಟಿ ರೂ. – ಫಲಿತಾಂಶ ಅಷ್ಟಕಷ್ಟೆ:
ನಗರದಲ್ಲಿ ಕಸವನ್ನು ವಿಂಗಡಿಸಿ ನೀಡಿ ಎಂದು ಬಬ್ಬಿರಿಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡುತ್ತಿರುವುದೇನು? ವರ್ಷಂಪ್ರತಿ ನಗರದಲ್ಲಿನ ಸ್ವಚ್ಛತೆ, ಕಸ ಸಂಗ್ರಹ ಹಾಗೂ ಸಾಗಣೆಗಾಗಿ ತಿಂಗಳಿಗೆ 73.48 ಕೋಟಿ ರೂ.ಗಳಂತೆ ವರ್ಷಕ್ಕೆ 881.87 ಕೋಟಿ ರೂ.ಗೂ ಹೆಚ್ಚಿನ ಹಣ ಕರ್ಚು ಮಾಡುವ ಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನೂರಾರು ಕೋಟಿ ರೂಪಾಯಿ ಕರ್ಚು ಮಾಡಿದರೂ ನಗರದಲ್ಲಿ ಬ್ಲಾಕ್ ಸ್ಪಾಟ್ ಸಮಸ್ಯೆ ಮಾತ್ರ ಈತನಕ ಇತ್ಯರ್ಥವಾಗಿಲ್ಲ. 198 ವಾರ್ಡ್ ಗಳಲ್ಲಿ ಈಗಲೂ ರಸ್ತೆ ಬದಿ ಪ್ರತಿದಿನ ಕಸದ ರಾಶಿ ಬೀಳೋದು ನಿಂತಿಲ್ಲ. ಆದ್ದರಿಂದ ಬ್ಲಾಕ್ ಸ್ಪಾಟ್ ಮುಕ್ತ ಹಾಗೂ ಸ್ವಚ್ಛ ಬೆಂಗಳೂರು ಎಂಬುದು ನಗರದ ಪಾಲಿಗೆ ಇನ್ನೂ ಕನಸಾಗಿಯೇ ಉಳಿದಿದೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ ಯೋಜನೆಯಲ್ಲಿ ಬಿಬಿಎಂಪಿಯ ಎಂದಿನ ಕಳಪೆಯ ಸಾಧನೆಗೆ ಈ ಎಲ್ಲಾ ಕಾರಣಗಳೂ ಪ್ರಮುಖವಾಗಿದೆ. ಇನ್ನು ಮುಂದಾದರೂ ನಗರದ ಕಸ ಸಂಗ್ರಹ, ವಿಲೇವಾರಿಯಲ್ಲಿ ಪಾರದರ್ಶಕತೆ, ದಕ್ಷತೆಯನ್ನು ಪಾಲಿಕೆ ಕಾಯ್ದುಕೊಳ್ಳುತ್ತಾ ಅಥವಾ ಇದೇ ರೀತಿ ಆಡಳಿತ ಮುಂದುವರೆಸುತ್ತಾ ಅಂತ ಕಾದು ನೋಡಬೇಕು.