ಬೆಂಗಳೂರು, (www.bengaluruwire.com) : ಕೋವಿಡ್ ಕುರಿತು ಮನೆ ಮನೆ ಸಮೀಕ್ಷೆ ನಡೆಸುವ ಉದ್ದೇಶದಿಂದ “ಪಾಲಿಕೆಯ ವೈದ್ಯರು ನಿಮ್ಮ ಮನೆ ಬಾಗಿಲಿಗೆ” ಎಂಬ ಧ್ಯೇಯದಿಂದ ದೇಶದಲ್ಲೇ ಪ್ರಥಮ ಬಾರಿಗೆ ಜಾರಿಯಾದ ಈ ಸಮೀಕ್ಷೆಗೆ ಸೋಮವಾರ ಕಂದಾಯ ಸಚಿವ ಆರ್. ಅಶೋಕ್ ಅವರು ಈ ಸಮೀಕ್ಷೆಗೆ ಚಾಲನೆ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡುತ್ತ ಅಶೋಕ್ ಅವರು ಈ ಅಭಿಯಾನದ ಅಡಿಯಲ್ಲಿ ನಗರದ 29 ಲಕ್ಷ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದರು.
ಮನೆ ಬಾಗಿಲಿಗೆ ತೆರಳಿ ಕೊರೊನಾ ಟೆಸ್ಟ್ ಮಾಡಲಿರುವ ವೈದ್ಯರು ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಇದಕ್ಕಾಗಿ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ(ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ಆಯುಷ್) ಮತ್ತು ಅರೆವೈದ್ಯಕೀಯ ಸಿಬ್ಬಂದಿ ಇರುತ್ತಾರೆ.
ಪ್ರತಿ ವಾರ್ಡ್ ನಲ್ಲಿಯೂ ವೈದ್ಯರ ನೇತೃತ್ವದ ಒಂದು ತಂಡ ಕನಿಷ್ಟ ಅಂದರು 50 ಮನೆಗಳಿಗೆ ಭೇಟಿ ಕೊಡಬೇಕು ಎಂದು ತಿಳಿಸಿದರು.
ಕೊರೊನಾ ರೋಗ ಲಕ್ಷಣ ಇರುವ ಮನೆಗಳಲ್ಲಿನ ಜನರ ಪರೀಕ್ಷೆ ಮತ್ತು ವ್ಯಾಕ್ಸಿನ್ ಬಗ್ಗೆಯೂ ಮಾಹಿತಿ ಪಡೆಯುವ ತಂಡ. ಮನೆ-ಮನೆ ಸಮೀಕ್ಷಾ ಕಾರ್ಯದ ಪ್ರಮುಖ ಅಂಶವೇನೆಂದರೆ, ಪ್ರತಿ ತಂಡವು ಪ್ರತಿ ನಿತ್ಯ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸುವುದು.
ಪ್ರತೀ ವಾರ್ಡ್ ಗೆ 5 ವೈದ್ಯರ ತಂಡವಿರಲಿದೆ. ಅಗತ್ಯಕ್ಕನುಗುಣವಾಗಿ ಹೆಚ್ಚಿನ ತಂಡಗಳನ್ನು ನಿಯೋಜನೆ ಮಾಡಲಾಗುವುದು. ಮನೆ-ಮನೆಗೆ ತಂಡಗಳು ಭೇಟಿ ನಿಡುವ ಸಲುವಾಗಿ ವಾಹನಗಳ ನಿಯೋಜನೆ ಮಾಡಲಾಗಿದೆ. ಹಾಲಿ 54 ವಾಹನಗಳ ವ್ಯವಸ್ಥೆ ಇದ್ದು ಒಂದು ತಿಂಗಳ ಅವಧಿಯಲ್ಲಿ ಇದನ್ನು 198 ವಾರ್ಡ್ ಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವ ಅಶೋಕ್ ಅವರು ಹೇಳಿದರು.
ಮನೆ ಭೇಟಿಯ ಸಮಯದಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದಲ್ಲಿ, ಸದರಿ ಸೋಂಕಿತರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಹೋಂ ಐಸೋಲೇಷನ್ ಕಿಟ್ ನೀಡಲಾಗುವುದು.
ಇದರಿಂದ ಸೋಂಕಿತರಿಗೆ ಧೈರ್ಯ ಹೇಳುವ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶವಾಗಿದೆ.
ಈ ಅಭಿಯಾನ ನನ್ನ ಕನಸಿನ ಕೂಸಾಗಿದ್ದು ಇದನ್ನು ಯಶಸ್ವಿಗೊಳಿಸಿ ಕೊರೊನವನ್ನು ಓಡಿಸಬೇಕಾಗಿದೆ.
ಅನೇಕರು ಬಡವರು, ಕೂಲಿ ಕಾರ್ಮಿಕರು ಇದ್ದಾರೆ ಮತ್ತು ಅವರು ಆಸ್ಪತ್ರೆಗೆ ತೆರಳಲು ಆರ್ಥಿಕವಾಗಿ ಶಕ್ತರಿರುವುದಿಲ್ಲ. ಅವರ ಮನೆ ಬಾಗಿಲಿಗೆ ಹೋಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ಪಾಲಿಕೆಯ ವಿಶೇಷ ತಂತ್ರಾಶದಲ್ಲಿ ವೈದ್ಯರ ತಂಡ ದಾಖಲಿಸಲಿದೆ.
ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ :
ಕಳೆದ 50 ದಿನಗಳಿಂದ 300-400 ಆಸುಪಾಸಿನಲ್ಲಿ ಕೇಸ್ ಇದೆ. ಹೆಚ್ಚು ಕೇಸ್ ಬಂದಿಲ್ಲ ಬಂದರೆ ಕಠಿಣ ಕ್ರಮ ಗ್ಯಾರಂಟಿ. ಪಾಸಿಟಿವಿಟಿ ರೇಟ್ ಹೆಚ್ಚಾದರೆ, ಕೊರೊನಾದಿಂದ ಜನರನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದರು.
ಕೇಸ್ ಜಾಸ್ತಿಯಾದರೆ ವೀಕೆಂಡ್ ಕರ್ಫ್ಯೂ ಚಿಂತನೆ ಮಾಡ್ತೀವಿ.
ಶಾಲೆ ಪ್ರಾರಂಭ ವಿಚಾರವಾಗಿ ತಿಳಿಸುತ್ತಾ ಶಿಕ್ಷಣ ಇಲಾಖೆಯವರು ತೀರ್ಮಾನ ಮಾಡ್ತಾರೆ. ಬೇರೆ ದೇಶಗಳಲ್ಲಿ ಶಾಲೆ ಪ್ರಾರಂಭ ಆಗುತ್ತಿದೆ. ನಮ್ಮಲ್ಲಿ ನಾವು ಸ್ವಲ್ಪ ಕಾಳಜಿವಹಿಸಿದ್ದೇವೆ. ಮುಂಬರುವ ದಿನಗಳಲ್ಲಿ ಹಬ್ಬಗಳು ಇರೋದ್ರಿಂದ ಕಠಿಣ ನಿಯಮಗಳ ಜಾರಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಹ ಹೇಳಿದರು.
ಅಪಾರ್ಟ್ಮೆಂಟ್ ಸೋಂಕು ನಿಯಂತ್ರಣಕ್ಕೆ ಕ್ರಮ : ಬಿಬಿಎಂಪಿ ಮುಖ್ಯ ಆಯುಕ್ತ
ವಸತಿ ಸಮುಚ್ಚಯಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 1 ಸಾವಿರಕ್ಕೊ ಅಧಿಕ ಅಪಾರ್ಟ್ಮೆಂಟ್ ಸಂಘದೊಂದಿಗೆ ಸಭೆ ನಡೆಸಿ ಅವರಿಗೆ ಮಾರ್ಗಸೂಚಿ ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
“ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ” ಎಂಬ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನಗರದಲ್ಲಿ 11 ಲಕ್ಷ ಜನ ಅಪಾರ್ಟ್ ಮೆಂಟ್ ನಲ್ಲಿದ್ದಾರೆ. ಕೆಲವು ಕಡೆ ಒಂಟಿ ಮನೆಗಳಲ್ಲಿ ಸೋಂಕು ಹೆಚ್ಚಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಭರವಸೆ ನೀಡಿದರು.
ನಮ್ಮಲ್ಲಿ ಕಂಟೈನ್ಮೆಂಟ್ ಸಂಖ್ಯೆ ಹೆಚ್ಚಾಗಿರುವುದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲೆಲ್ಲ ನಿಗಾ ವಹಿಸಲಾಗಿದೆ. ಶೇ.95ಕ್ಕಿಂತ ಅಧಿಕ ಜನರು ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲದೆ ಗುಣಮುಖ ಆಗುತ್ತಾರೆ.
ಹಾಗಾಗಿಯೇ ಕಂಟೈ ನ್ಮೆಂಟ್ ಜೋನ್ ಮಾಡಿ ಸೋಂಕು ಹರಡುವಿಕೆ ತಡೆಗಟ್ಟಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೆಲವು ಹಾಸ್ಟೆಲ್ ಗಳಲ್ಲಿ ಸೋಂಕು ಬಂದು ಕಂಟೈ ನ್ಮೆಂಟ್ ಮಾಡಿದ್ದೇವೆ. ನಗರದಲ್ಲಿ 180 ಜನರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಖಾಸಗಿಯಾಗಿ ಕ್ರಿಟಿಕಲ್ ಕೇರ್ ನಲ್ಲಿ ಇರುವವರ ಸಂಖ್ಯೆ 50ಕ್ಕಿಂತ ಕಡಿಮೆ ಇದೆ.
ಶಾಲೆ ಆರಂಭವಾಗುವ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಯಾವುದೇ ವಿಶೇಷ ಲಕ್ಷಣ ಇದ್ದರೆ ವಿಶೇಷ ಕ್ರಮವಹಿಸುತ್ತೇವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತ ರಂದೀಪ್ ಸೇರಿದಂತೆ ಹಲವು ಅಧಿಕಾರಿಗಳು, ವೈದ್ಯರು ಮತ್ತಿತರರು ಭಾಗಿಯಾಗಿದ್ದರು.