ಬೆಂಗಳೂರು, ಆ.15 (www.bengaluruwire.com): ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ವೇಳೆ ಕರೋನಾ ಸೋಂಕಿನಿಂದ ಒಟ್ಟಾರೆ ಮೃತಪಟ್ಟವರಲ್ಲಿ ಶೇ.60.78 ರಷ್ಟು ಮಂದಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆ (ಕೊಮಾರ್ಬಿಡಿಟಿಸ್)ಗಳಿಂದ ನರಳುತ್ತಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.
“ಬೆಂಗಳೂರು ವೈರ್” ಗೆ ಲಭಿಸಿರುವ ಆರೋಗ್ಯ ಇಲಾಖೆಯ ದಾಖಲೆಯ ಪ್ರಕಾರ 2021ರ ಏಪ್ರಿಲ್ ನಿಂದ ಜುಲೈ 11 ರ ತನಕ ಅಂದರೆ 102 ದಿನಗಳಲ್ಲಿ ರಾಜ್ಯ ವ್ಯಾಪಿ ಒಟ್ಟಾರೆ ಬರೋಬ್ಬರಿ 23,124 ಜನರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆ ಪೈಕಿ ಮಂದಿ ಕೊಮಾರ್ಬಿಡಿಟಿಸ್ ನಿಂದ ಬಳಲುತ್ತಿದ್ದ 14,055 ರೋಗಿಗಳು ಇಹಲೋಕ ತ್ಯಜಿಸಿದ್ದಾರೆ. ಯಾವುದೇ ಇತರ ಕಾಯಿಲೆಗಳಿಲ್ಲದ 9,069 (ಶೇ.39.22) ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ 2020 ರಿಂದ 2021 ರ ಜುಲೈ 11 ರವರೆಗೆ ಬರೋಬ್ಬರಿ 35,835 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಆದರೆ ಅವುಗಳ ಪೈಕಿ ಶೇ.64.52 ರಷ್ಟು (23,124) ರೋಗಿಗಳು 2021 ರ ಏಪ್ರಿಲ್ ನಿಂದ ಜು.11 ನಡುವಿನ 102 ದಿನದಲ್ಲಿ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
“ಆರೋಗ್ಯ ಇಲಾಖೆ ಕರೋನಾ ಸೋಂಕಿನ ಹರಡುವಿಕೆ, ಗುರುತಿಸುವಿಕೆ, ಚಿಕಿತ್ಸೆ ನೀಡುವುದು, ಕೋವಿಡ್ ಸಾವಿನ ಕುರಿತಂತೆ ನಿರಂತರವಾಗಿ ವಿಶ್ಲೇಷಣೆ ನಡೆಸುತ್ತಿದೆ. ಈ ವರದಿಗಳಿಂದಲೇ ಇಲಾಖೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರು ಕರೋನಾ ಸೋಂಕಿನ ಲಕ್ಷಣ ಗೋಚರಿಸಿದ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆಯವರು, ಅವುಗಳು ನಿಯಂತ್ರಣದಲ್ಲಿರುವಂತೆ ಜಾಗೃತೆವಹಿಸಬೇಕು. ಕೋವಿಡ್ ಸೋಂಕು ಉಲ್ಬಣವಾಗುವ ತನಕ ಕಾಯಬಾರದು. ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ಆಸ್ಪತ್ರೆ ಸೇರಿದರೆ ಪ್ರಯೋಜನವಾಗದು ಎಂದು ವರದಿಗಳಿಂದ ತಿಳಿದುಬರುತ್ತಿದೆ.”
– ಡಾ.ತ್ರಿಲೋಕಚಂದ್ರ, ಆಯುಕ್ತರು, ರಾಜ್ಯ ಆರೋಗ್ಯ ಇಲಾಖೆ
ರಾಜ್ಯದಲ್ಲಿ 102 ದಿನದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ.47.88 ರಷ್ಟು ಮಂದಿ ಅಂದರೆ 11,074 ರೋಗಿಗಳು ಬೆಂಗಳೂರಿನವರು ಎಂಬುದು ಗಮನಾರ್ಹ…!
ಕೊಮಾರ್ಬಿಡಿಟಿಸ್ ಮತ್ತು ಇತರ ಯಾವುದೇ ಕಾಯಿಲೆ ಇಲ್ಲದೆ ಕೋವಿಡ್ ಸೋಂಕು ಬಂದು 30 ಜಿಲ್ಲೆಗಳಲ್ಲಿ ಮೃತಪಟ್ಟವರ ಪೈಕಿ ಟಾಪ್-3 ನಗರಗಳ ಪೈಕಿ ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳು ಕ್ರಮವಾಗಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಅವುಗಳ ಮಾಹಿತಿ ಹೀಗಿದೆ :
ಜಿಲ್ಲೆ – ಕೊಮಾರ್ಬಿಡಿಟಿಸ್ – ಇತರ ಕಾಯಿಲೆ ಇಲ್ಲದವರು
• ಬೆಂಗಳೂರು 7,677(69.32%) – 3,397 (30.68%)
• ಮೈಸೂರು 723 (61.12%) – 460 (38.88%)
• ಬಳ್ಳಾರಿ 444. (41.19%) – 634 (58.81%)
ರಾಜ್ಯದಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಗೋಚರಿಸಿದ ಕೂಡಲೇ ಚಿಕಿತ್ಸೆ ಪಡೆಯುವುದಕ್ಕಿಂತ ಆ ರೋಗ ಉಲ್ಬಣಿಸಿ ಗಂಭೀರ ಸ್ಥಿತಿ ತಲುಪಿದ ಮೇಲೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದು ಆರೋಗ್ಯ ಇಲಾಖೆ ವರದಿಯ ಅಂಕಿ- ಅಂಶಗಳಿಂದ ತಿಳಿದುಬಂದಿದೆ. ಏಪ್ರಿಲ್ ನಿಂದ 102 ದಿನಗಳ ಅವಧಿಯಲ್ಲಿ ಒಟ್ಟಾರೆಯಾಗಿ 23,124 ರೋಗಿಗಳು ಕರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದರೆ,ಕೋವಿಡ್ ಸೋಂಕು ಬಂದು ಕೊನೆಹಂತದಲ್ಲಿ ಆಸ್ಪತ್ರೆ ಸೇರಿದ 21,055 ಮಂದಿ ಅಂದರೆ ಶೇ.91.06 ಮೃತಪಟ್ಟಿದ್ದರೆ, ಆಸ್ಪತ್ರೆ ಸೇರದೆ ಮನೆಯಲ್ಲಿ 2,069 ಮಂದಿ ಸಾವನ್ನಪ್ಪಿದ್ದಾರೆ.
ಏಪ್ರಿಲ್ ಎರಡನೇ ವಾರದ ಬಳಿಕ ಕರ್ನಾಟಕದಲ್ಲಿ ಕರೋನಾ ಸೋಂಕು ಎರಡನೇ ಅಲೆ ಒಂದೇ ಸಮನೆ ದಿನೇ ದಿನೇ ಹೆಚ್ಚಾಗುತ್ತಾ ಬಂದು ಮೇ ತಿಂಗಳಿನಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಇಲ್ಲದೆ, ಐಸಿಯು ಹಾಸಿಗೆ ಇಲ್ಲದೆ ಕೊನೆ ಹಂತದಲ್ಲಿ ಉಸಿರಾಟ ಮತ್ತಿತರ ತೊಂದರೆಯಾಗಿ ಪರಿಸ್ಥಿತಿ ಗಂಭೀರವಾದಾಗ ಆಸ್ಪತ್ರೆ ಸೇರಿ ತೊಂದರೆ ಅನುಭವಿಸಿದ್ದಾರೆ.
ಆರೋಗ್ಯ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ ಏಪ್ರಿಲ್ ನಿಂದ ಜು.11 ರ ಅವಧಿಯ ನಡುವೆ ಕೋವಿಡ್ ಆಸ್ಪತ್ರೆಗಳಲ್ಲಿ ವಿವಿಧ ಸಮಯಗಳಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದವರ ಅಂಕಿ-ಸಂಖ್ಯೆ ಹಾಗೂ ಅದರ ಶೇಕಡವಾರು ವಿವರ ಈ ಕೆಳಕಂಡಂತಿದೆ :
• ಆಸ್ಪತ್ರೆ ಸೇರಿ 24 ಗಂಟೆ ಒಳಗೆ ಮೃತಪಟ್ಟವರು : 4,884 (21.12%)
• ಆಸ್ಪತ್ರೆ ಸೇರಿ 48 ಗಂಟೆ ಒಳಗೆ ಮೃತಪಟ್ಟವರು : 2,395 (10.36%)
• ಆಸ್ಪತ್ರೆ ಸೇರಿ 72 ಗಂಟೆ ಒಳಗೆ ಮೃತಪಟ್ಟವರು : 2,171 (9.39%)
• ಆಸ್ಪತ್ರೆ ಸೇರಿ 72 ಗಂಟೆ ಮೀರಿದ ಮೇಲೆ ಮೃತಪಟ್ಟವರು : 11,605 (50.19%)
ಈ ಮೇಲಿನ ಅಂಕಿ- ಅಂಶದಿಂದ ತಿಳಿದು ಬರುವುದೇನೆಂದರೆ ಕೋವಿಡ್ ಸೋಂಕಿನಿಂದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಸೇರಿ 72 ಗಂಟೆ ಅಥವಾ 3 ದಿನ ಕಳೆದ ಮೇಲೆ ಮೃತಪಟ್ಟವರು ಅತಿಹೆಚ್ಚು ಪ್ರಮಾಣದಲ್ಲಿದ್ದಾರೆ. ಒಟ್ಟಾರೆಯಾಗಿ 24 ಗಂಟೆ, 48 ಗಂಟೆ ಹಾಗೂ 72 ಗಂಟೆ ಒಳಗೆ ಆಸ್ಪತ್ರೆ ಸೇರಿದವರ ಪ್ರಮಾಣಕ್ಕಿಂತ 72 ಗಂಟೆ ಮೀರಿದ ನಂತರ ಸಾವನ್ನಪ್ಪಿದವರ ಸಂಖ್ಯೆ ಶೇ.50.19 ರಷ್ಟಿದೆ. ಅಂದರೆ 11,605 ರೋಗಿಗಳ ಉಸಿರು ನಿಂತು ಹೋಗಿತ್ತು.