ಬೆಂಗಳೂರು, (www.bengaluruwire.com): ಆಗಸ್ಟ್ ತಿಂಗಳಿನ 13ನೇ ತಾರೀಖಿನವರೆಗೆ 0-18 ವರ್ಷದ ಮಕ್ಕಳಲ್ಲಿ 511 ಪ್ರಕರಣಗಳು ಪತ್ತೆಯಾಗಿವೆ. ಇದು ಪ್ರತಿನಿತ್ಯ ಕಂಡುಬರುವ ಒಟ್ಟಾರೆ ಪ್ರಕರಣಗಳಲ್ಲಿ ಶೇ.11.5 ರಷ್ಟಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಕ್ಕಳ ತಜ್ಞರ ಸಮಿತಿ ಸ್ಪಷ್ಟಪಡಿಸಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 9 ರಿಂದ 19 ವರ್ಷದ ಮಕ್ಕಳಲ್ಲಿ ಹೆಚ್ಚು ಕೋವಿಡ್ ಸೋಂಕು ಕಂಡುಬರುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದನ್ನು ಗಮನಿಸಿದ ಪಾಲಿಕೆ ಮಕ್ಕಳ ತಜ್ಞರ ಸಮಿತಿ ಪತ್ರಿಕಾ ಪ್ರಕಟಣೆಯ ಮೂಲಕ ಸಮಜಾಯಿಷಿ ನೀಡಿದೆ.
ಬಿಬಿಎಂಪಿಯು ನಗರದಲ್ಲಿ ಪ್ರತಿನಿತ್ಯ ಕಂಡುಬರುವ ಕೋವಿಡ್ ಪ್ರಕರಣಗಳಲ್ಲಿ ವಯಸ್ಸಿನ ನಿರ್ದಿಷ್ಟ ಪ್ರಕರಣಗಳನ್ನು ಪತ್ತೆಮಾಡುತ್ತಿದ್ದು ಈ ಕೆಳಕಂಡ ಅಂಶಗಳನ್ನು ಪಟ್ಟಿ ಮಾಡಿದೆ :
- ಕಳೆದ 20 ದಿನಗಳಿಂದ ಒಟ್ಟಾರೆ ಕೋವಿಡ್ ಪ್ರಕರಣಗಳು ದಿನಕ್ಕೆ ಸರಾಸರಿ 388 ಕಂಡುಬರುತ್ತಿದ್ದು, ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ.
- ಮಕ್ಕಳ ಪ್ರಕರಣಗಳ ಮೌಲ್ಯಮಾಪನ ಮಾಡಿದ್ದು (0-18 ವರ್ಷಗಳು), ಕಳೆದ 4 ತಿಂಗಳಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಸರಾಸರಿ ಪ್ರಕರಣಗಳು ಸುಮಾರು ಶೇ. 11 ರಷ್ಟಿದೆ.
- ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೆ ಕೋವಿಡ್ ಸೋಂಕು ಅಲ್ಪ ಏರಿಕೆಯನ್ನು ಮಾತ್ರ ಗಮನಿಸಬಹುದಾಗಿದೆ. ಆದರೆ ಇನ್ನೂ ಒಟ್ಟು ಪ್ರತಿನಿತ್ಯದ ಸೋಂಕಿನಲ್ಲಿ ಶೇ. 11.5 ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಪಾಲಿಕೆಯು 0-12 ವಯೋಮಾನದ ಮಕ್ಕಳನ್ನು ಗಮನಿಸಿದರೆ, ಜೂನ್ ತಿಂಗಳಲ್ಲಿ 2,643 ಪ್ರಕರಣಗಳು, ಜುಲೈ ತಿಂಗಳಲ್ಲಿ 778 ಪ್ರಕರಣಗಳು ಮತ್ತು 2021ರ ಆಗಸ್ಟ್ 13 ರವರೆಗೆ 309 ಪ್ರಕರಣಗಳು ಕಂಡುಬಂದಿದೆ. ಒಟ್ಟಾರೆ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಹಂತ ಹಂತವಾಗಿ ಇಳಿಕೆಯಾಗಿದೆ.
- ಬಿಬಿಎಂಪಿಯಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಕಳೆದ 10 ದಿನಗಳಲ್ಲಿ ಕಂಡುಬಂದಿರುವ ಪಾಸಿಟಿವ್ ಕೇಸ್ಗಳಲ್ಲಿ ಕೇವಲ 5 ಮಕ್ಕಳು ಮಾತ್ರ ಸರ್ಕಾರಿ ಕೋಟಾದಡಿ ದಾಖಲಾಗಿದ್ದಾರೆ. 24 ಮಕ್ಕಳು ಖಾಸಗಿ ಕೋಟಾದಲ್ಲಿ ಚಿಕಿತ್ಸೆಪಡೆದಿದ್ದಾರೆ. ಒಟ್ಟಾರೆ ಶೇ. 5.7 ರಷ್ಟು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾತಿಯಾಗಿದ್ದು, ಬೇರೆ ವಯೋಮಾನದ ಪಾಸಿಟಿವ್ ರೋಗಿಗಳಿಗೆ ಹೋಲಿಸಿದರೆ ಇದು ಕಡಿಮೆಯಿದೆ.
- ಇತರೆ ವಯೋಮಾನದವರಿಗೆ ಹೋಲಿಸಿದರೆ, ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ತುಂಬಾ ಅಲ್ಪ ಪ್ರಮಾಣದ್ದಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗುವ 29 ಪ್ರವೇಶಗಳಲ್ಲಿ 3 ಪ್ರವೇಶ ಎಚ್ಡಿಯು ವಾರ್ಡ್ ನಲ್ಲಿ ಮತ್ತು ಐಸಿಯುಗೆ ದಾಖಲಾಗುವ ಪ್ರಮಾಣ ಶೂನ್ಯವಾಗಿದೆ.
- ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟು, ಮರಣ ಹೊಂದಿರುವ ಸಂಖ್ಯೆಯನ್ನು ಗಮನಿಸಿದಾಗ ಏಪ್ರಿಲ್ ನಿಂದ ಜೂನ್ ವರೆಗೆ 14 ಮಕ್ಕಳ ಮೃತಪಟ್ಟಿರುವುದು ವರದಿಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಯಾರೂ ಮೃತರಾಗಿರುವುದಿಲ್ಲ (ಜುಲೈ ಮತ್ತು ಆಗಸ್ಟ್ 2021).
- ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಜಾಗತಿಕ ದತ್ತಾಂಶವನ್ನು ಪರಿಶೀಲಿಸಿದಾಗ, ಕರೋನಾ ಸೋಂಕು ಆರಂಭದಿಂದಲೂ ಒಟ್ಟಾರೆ ಪ್ರಕರಣದಲ್ಲಿ ಮಕ್ಕಳಿಗೆ ಸೋಂಕು ತಗುಲಿರುವ ಪ್ರಮಾಣ ಶೇ.14.3 ರಷ್ಟಿದೆ. ಈ ಪೈಕಿ ಕೇವಲ ಶೇ.0.1-1.9 ಮಕ್ಕಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೇ ಪ್ರಮಾಣ ಬೆಂಗಳೂರಿಗೂ ಅನ್ವಯವಾಗುವುದು.
- ಕೋವಿಡ್ ಸೋಂಕು ಲಕ್ಷಣಗಳು ಕಂಡುಬಂದರೆ, ಮಕ್ಕಳನ್ನು ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಬಿಬಿಎಂಪಿ ದೈಹಿಕ ಚಿಕಿತ್ಸಾ ಕೇಂದ್ರಗಳಿಗೆ (ಪಿಟಿಸಿ) ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್ಸಿ) ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಗೆ(ಸಿಎಚ್ಸಿಎ) ಕರೆದುಕೊಂಡು ಬರಬಹುದು.
- ಪ್ರಸ್ತುತ ಬೆಂಗಳೂರಿನಲ್ಲಿ ಮಕ್ಕಳ ಆರೈಕೆಗಾಗಿ 7 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯೂ ಸೇರಿದೆ. ಅಲ್ಲದೆ, ಬಿಬಿಎಂಪಿಯು ಮಕ್ಕಳ ಆರೈಕೆಗಾಗಿ ಶೀಘ್ರದಲ್ಲೇ 30 ಹಾಸಿಗೆಗಳ ಸಾಮರ್ಥ್ಯದ ವೈದ್ಯಕೀಯ ವ್ಯವಸ್ಥೆ ಮಾಡಲಿದೆ.
- ಮುನ್ನೆಚ್ಚರಿಕಾ ಕ್ರಮವಾಗಿ, 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು.(ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಹೆಚ್ಚು ಜನಸೇರುವ ಕಡೆ ಹೋಗದಿರುವುದು) ಮತ್ತು ಚಿಕ್ಕ ಮಕ್ಕಳು ಯಾವಾಗಲೂ ಪೋಷಕರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.
- ಒಟ್ಟಾರೆಯಾಗಿ ನಗರದ ನಾಗರೀಕರು ಭಯಪಡುವ ಅಗತ್ಯವಿಲ್ಲ. ಹಾಗೂ ಕೋವಿಡ್ ಪ್ರಕರಣ ಕಂಡುಬಂದ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಅಗತ್ಯವಿಲ್ಲ. ಕೋವಿಡ್ ಸೊಂಕು ಕಂಡುಬಂದ ಬಹುತೇಕ ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳು ಇರುತ್ತದೆ. ಆ ಮಕ್ಕಳು ತಮ್ಮಷ್ಟಕ್ಕೆ ತಾವೇ ಚೇತರಿಸಿಕೊಳ್ಳುತ್ತಾರೆ ಎಂದು ಬಿಬಿಎಂಪಿಯ ಮಕ್ಕಳ ತಜ್ಞರ ಸಮಿತಿಯು ಅಭಿಪ್ರಾಯಪಡುತ್ತದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ನೇತೃತ್ವದಲ್ಲಿ ಪಾಲಿಕೆ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಿ.ರಂದೀಪ್ ಹಾಗೂ 13 ವೈದ್ಯರು ಸೇರಿದಂತೆ 15 ಜನರ ಮಕ್ಕಳ ತಜ್ಞರ ಸಮಿತಿ ಸದಸ್ಯರಿದ್ದು ಕಾಲ ಕಾಲಕ್ಕೆ ಕರೋನಾ ಸೋಂಕು ಕುರಿತಂತೆ ನಿರಂತರ ವಿಶ್ಲೇಷಣೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಲಿದ್ದಾರೆ.