ಬೆಂಗಳೂರು, (www.bengaluruwire.com): ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ಮಾಣಿಕ್ ಷಾ ಮೈದಾನದಲ್ಲಿ ಶುಕ್ರವಾರ ಪೂರ್ವ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.
ಇದೇ ವೇಳೆ ಕೆಎಸ್ ಆರ್ ಪಿ, ಬಿಎಸ್ ಎಫ್ ಮತ್ತಿತರ ತುಕಡಿಗಳು ನಡೆಸುತ್ತಿದ್ದ ಗೌರವ ರಕ್ಷೆ ಸ್ವೀಕಾರ ತಾಲೀಮಿನಲ್ಲಿ ಇಬ್ಬರು ಅಧಿಕಾರಿಗಳು ಭಾಗವಹಿಸಿದರು. ಇದೇ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡ ಭಾಗವಹಿಸಿದ್ದರು.
ತದನಂತರ ಏರ್ಪಡಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಹಿನ್ನಲೆಯಲ್ಲಿ ಈ ಬಾರಿ ಕೇವಲ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಧ್ವಜಾರೋಹಣ, ತೆರೆದ ಜೀಪ್ ನಲ್ಲಿ ಪರೇಡ್ ಪರಿವೀಕ್ಷಣೆ, ಗೌರವ ರಕ್ಷೆ ಸ್ವೀಕಾರ ಪಥಸಂಚಲನ ಕಾರ್ಯಕ್ರಮ ಹಾಗೂ ನಾಡಿನ ಜನತೆಗೆ ಮುಖ್ಯಮಂತ್ರಿಗಳು ಸ್ವಾತಂತ್ರ್ಯೋತ್ಸವ ಸಂದೇಶ ನೀಡುವ ಭಾಷಣಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇಂದು ಸೇರಿದಂತೆ ಕಳೆದ ಮೂರು ದಿನಗಳಿಂದ ಪಥಸಂಚಲನ ತಾಲೀಮು ನಡೆಸಲಾಗುತ್ತಿದೆ. ಆ.15 ಸ್ವಾತಂತ್ರ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಕೇವಲ ಅತಿಗಣ್ಯರು, ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಕೋವಿಡ್ ವಾರಿಯರ್ಸ್ ಹಾಗೂ ಕರೋನಾದಿಂದ ಗುಣಮುಖರಾದವರೂ ಸೇರಿದಂತೆ ಒಂದು ಸಾವಿರ ಜನಕ್ಕೆ ಮಾತ್ರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಅವಕಾಶ ಕಲ್ಪಿಸಲಾಗಿಲ್ಲ.
ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮರಾ, ಬ್ಯಾಗೇಜ್ ಸ್ಕ್ಯಾನರ್ ಮತ್ತಿತರ ಉಪಕರಣಗಳನ್ನು ಅಳವಡಿಲಾಗುತ್ತದೆ. ವೈದ್ಯಕೀಯ ತುರ್ತು ಅಗತ್ಯಕ್ಕಾಗಿ ವೈದ್ಯರು, ಆಂಬುಲೆನ್ಸ್ ಹಾಗೂ ಅಗ್ನಿ ಅನಾಹುತ ಸಂಭವಿಸಿದರೆ ನಿಯಂತ್ರಿಸಲು ಅಗ್ನಿಶಾಮಕ ವಾಹನವನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುವ ಮಾಣಿಕ್ ಷಾ ಪರೇಡ್ ಗ್ರೌಂಡ್ ಆಗಮಿಸುವ ಗಣ್ಯರ ವಾಹನ ಪಾರ್ಕಿಂಗ್, ಪ್ರವೇಶಕ್ಕೆ ಹಾಗೂ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.