ಬೆಂಗಳೂರು, (www.bengaluruwire.com) : “ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಬಿಎಂಪಿ ಕಾಯ್ದೆ-2020” ಎಂಬ ಶೀರ್ಷಿಕೆ ಅಡಿಯಲ್ಲಿ “ಬೆಂಗಳೂರು ವೈರ್” ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ- 2020 ಜಾರಿಗೆ ಬಂದು ನಾಲ್ಕು ತಿಂಗಳ ಮೇಲಾದರೂ ವಿವಿಧ ಇಲಾಖೆಗಳಲ್ಲಿ ಅಧಿಕಾರ ಪ್ರತ್ಯಾಯೋಜನೆ (Delegation of Powers) ಆಗಿಲ್ಲ ಎಂದು ಆ.8 ರಂದು ವಿಸ್ತ್ರತ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತ ಪಾಲಿಕೆ ಆ.9ರಂದು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆದಷ್ಟು ಶೀಘ್ರವಾಗಿ ನೂತನ ಕಾಯ್ದೆಯಡಿ ವಿವಿಧ ಹಂತದ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಲು ನಿರ್ಧರಿಸಿದೆ. ಇದು “ಬೆಂಗಳೂರು ವೈರ್” ಇಂಪ್ಯಾಕ್ಟ್.
ನೂತನ ಬಿಬಿಎಂಪಿ ಕಾಯ್ದೆ-2020ರಂತೆ ಪಾಲಿಕೆಯ ವಿವಿಧ ಇಲಾಖೆಗಳಲ್ಲಿ ಹಲವು ಹಂತದ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಅಧಿಕಾರ ಹಂಚಿಕೆ ಮಾಡದಿದ್ದರೆ, ಹೇಗೆ ನಗರದ ಅಭಿವೃದ್ಧಿ ಹಾಗೂ ಪಾಲಿಕೆ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಕಾಯ್ದೆಯ ವಿವಿಧ ಸೆಕ್ಷನ್ ಗಳನ್ನು ಉಲ್ಲೇಖಿಸಿ ನಿಖರವಾಗಿ ಆ.8ರ ಭಾನುವಾರ ವರದಿ ಮಾಡಿತ್ತು.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸೋಮವಾರ ಮಧ್ಯಾಹ್ನ ನಂತರ ಕೇಂದ್ರ ಕಚೇರಿಯಲ್ಲಿ ತುರ್ತು ಸಭೆ ಕರೆದು, ಮುಖ್ಯ ಆಯುಕ್ತರು, ವಲಯ ಆಯುಕ್ತರಿಂದ ತಮ್ಮ ಕೆಳಹಂತದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯೋಯೋಚನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳುವಂತೆ ಕಟ್ಟಪ್ಪಣೆ ಮಾಡಿದರು.
ಆದ್ಯತೆ ಆಧಾರದ ಕೇಂದ್ರ ಕಚೇರಿಯಲ್ಲಿರುವ ಬೃಹತ್ ನೀರುಗಾಲುವೆ, ರಸ್ತೆ ಮತ್ತು ಮೂಲಭೂತ ಸೌಕರ್ಯ, ಘನತ್ಯಾಜ್ಯ ವಿಲೇವಾರಿ, ಆರೋಗ್ಯ, ನಗರ ಯೋಜನೆ ಮತ್ತಿತರ ಇಲಾಖೆಗಳು ಹಾಗೂ ವಲಯ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಅಧಿಕಾರ ಪ್ರತ್ಯಾಯೋಜನೆ ತುರ್ತಾಗಿ ನೀಡಬೇಕಾಗಿರುವ ಹುದ್ದೆಗಳನ್ನು ಪಟ್ಟಿ ಮಾಡಿ ಕೇಂದ್ರ ಕಚೇರಿಯ ಆಡಳಿತ ವಿಭಾಗಕ್ಕೆ ನೀಡುವಂತೆ ಮುಖ್ಯ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು “ಬೆಂಗಳೂರು ವೈರ್” ಖಚಿತಪಡಿಸಿವೆ.
ಇದನ್ನೂ ಓದಿ : BW SPECIAL | BBMP IMPACT-2020 | ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಬಿಎಂಪಿ ಕಾಯ್ದೆ- 2020…..!
ಇನ್ನೊಂದೆಡೆ ಈತನಕ ಬಿಬಿಎಂಪಿಯಲ್ಲಿರುವ ಕಾನೂನು ವಿಭಾಗ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅಧಿಕಾರ ಪ್ರತ್ಯಾಯೋಜನೆ ವಿಚಾರದಲ್ಲಿ ತನ್ನ ಅಭಿಪ್ರಾಯ ನೀಡಲು ಹಿಂದೆ ಮುಂದೆ ನೋಡುತ್ತಾ ಕಡತವನ್ನು ಆಡಳಿತ ಶಾಖೆ ವರ್ಗಾಯಿಸಿ ಕೈತೊಳೆದುಕೊಂಡಿದ್ದನ್ನು “ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಬಿಎಂಪಿ ಕಾಯ್ದೆ-2020” ವಿಶೇಷ ವರದಿಯಲ್ಲಿ ತಿಳಿಸಿತ್ತು. ಅಲ್ಲದೆ ನೂತನ ಬಿಬಿಎಂಪಿ ಕಾಯ್ದೆ-2020ರಲ್ಲಿ ನೂತನ ಕಾಯ್ದೆ ಅನ್ವಯಿಸುವಿಕೆ, ಬೈಲಾ ರಚನೆ ಮತ್ತಿತರ ವಿಷಯಗಳಲ್ಲಿ ಪಾಲಿಕೆಗೆ ನೆರವಾಗುವ ಬಾದ್ಯತೆ ಬಗ್ಗೆ ವರದಿಯಲ್ಲಿ ಬಿಚ್ಚಿಟ್ಟಿತ್ತು. ಈ ಹಿನ್ನಲೆಯಲ್ಲಿ ಈ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ವಿವಿಧ ಹಂತದ ಅಧಿಕಾರ ಹಂಚಿಕೆ ಬಗ್ಗೆ ಕಾನೂನು ವಿಭಾಗದಿಂದಲೂ ಕರಡು ಸಿದ್ದಪಡಿಸಿ ಸಲ್ಲಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚಿಸಿದ್ದಾರೆ.
ಈ ಮಧ್ಯೆ “ಬೆಂಗಳೂರು ವೈರ್” ಆ.8ರಂದು ವರದಿ ಪ್ರಕಟಿಸಿದ ನಂತರ ಎಚ್ಚೆತ್ತುಕೊಂಡು ಆ.9ರಂದು ಪಾಲಿಕೆ ನೂತನ ಕಾಯ್ದೆಯಡಿ ಪ್ರದತ್ತವಾದ ಅಧಿಕಾರ ಬಳಸಿಕೊಂಡು ಎಂಟು ವಲಯಗಳ ಪೈಕಿ, ಬೆಂಗಳೂರು ದಕ್ಷಿಣ ವಲಯ ಆಯುಕ್ತರೂ ಆಗಿರುವ ಹಣಕಾಸು ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಬಿಬಿಎಂಪಿ ಆಕ್ಟ್-2020ರ ಕಲಂ 74(ಡಿ) ಅಡಿ ನಗರ ಯೋಜನೆ ವಿಭಾಗದಲ್ಲಿನ ಮೂವರು ನಗರ ಯೋಜನೆ ಸಹಾಯಕ ನಿರ್ದೇಶಕರಿಗೆ ಕಟ್ಟಡ ನಕ್ಷೆ ಮಂಜೂರಾತಿ, ನಕ್ಷೆ ಮಂಜೂರಾತಿ ತಿರಸ್ಕರಿಸುವ ಅಧಿಕಾರ, ಸಮಜಾಯುಷಿ ನೀಡುವಂತೆ ಕಾಲಮಿತಿ ನಿಗಧಿಪಡಿಸಿ ನೋಟಿಸ್ ನೀಡುವುದು ಹಾಗೂ ವಿಚಾರಣೆಯ ನಂತರ ಧೃಢೀಕೃತಗೊಳಿಸಲಾಗುವ ಆದೇಶ ಜಾರಿಗೊಳಿಸುವ ಅಧಿಕಾರವನ್ನು ಆ.9ರಿಂದಲೇ ಜಾರಿಗೆ ಬರುವಂತೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶ ಹೊರಡಿಸಿದ್ದಾರೆ.
ನಗರ ಸ್ಥಳೀಯ ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದ ಜಾರಿಗೆ ಬಂದ ಬಿಬಿಎಂಪಿ ಕಾಯ್ದೆ-2020 ಮೂಲ ಆಶಯದಂತೆ ಕಾರ್ಯನಿರ್ವಹಿಸಬೇಕು ಎನ್ನುವ ದೃಷ್ಟಿ ಹಾಗೂ ಸಾಮಾಜಿಕ ಕಳಕಳಿಯಿಂದ “ಬೆಂಗಳೂರು ವೈರ್” ಸ್ವತಂತ್ರ ಮತ್ತು ವಾಸ್ತವ ಸುದ್ದಿ ಉದ್ದೇಶ ಇಟ್ಟುಕೊಂಡು ಈ ವರದಿಯನ್ನು ಪ್ರಕಟ ಮಾಡಿತ್ತು. ಈ ವರದಿ ಪ್ರಕಟವಾದ ಬಳಿಕ ಮುಖ್ಯ ಆಯುಕ್ತರು ತುರ್ತು ಸಭೆಯ ನಡೆಸಿದರು. 8 ವಲಯಗಳ ಪೈಕಿ ದಕ್ಷಿಣ ವಲಯ ಆಯುಕ್ತರು ತಮ್ಮ ಅಧಿಕಾರ ಚಲಾಯಿಸಿ ಡೆಲಿಗೇಷನ್ ಆಫ್ ಪವರ್ ಹಂಚಿಕೆ ಮಾಡಿದರು. ಅದೇ ರೀತಿ ಉಳಿದ ವಲಯಗಳ ಆಯುಕ್ತರು ಶೀಘ್ರದಲ್ಲೇ ಅಧಿಕಾರ ಪ್ರತ್ಯಾಯೋಜನೆ ಮಾಡಲಿದ್ದಾರೆ ಎಂದು “ಬೆಂಗಳೂರು ವೈರ್” ಗೆ ಮಾಹಿತಿ ಲಭ್ಯವಾಗಿದೆ.